ಸರಕಾರಿ ಶಾಲೆಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಲಿ
ಭಾಗ - 2
ಕೆಪಿಎಸ್-ಮೊದಲ ಹಂತದ ಅನುಭವ
ಮೊದಲ ಹಂತದಲ್ಲಿ 2018 ರಿಂದ 2024 ರ ಅವಧಿಯಲ್ಲಿ ಆರಂಭಗೊಂಡ 308 ಕೆಪಿಎಸ್ ಶಾಲೆಗಳ ಪ್ರಗತಿ ಆಶಾದಾಯಕವಾಗಿರುವುದನ್ನು ಇಲಾಖೆಯ ಅಂಕಿ ಅಂಶಗಳು ದೃಢಪಡಿಸುತ್ತವೆ.
* ಈ ಕೆಪಿಎಸ್ ಶಾಲೆಗಳಲ್ಲಿ ಮಕ್ಕಳ ಸರಾಸರಿ ದಾಖಲಾತಿ 785ರಿಂದ 2025- 2026 ನೇ ಸಾಲಿನಲ್ಲಿ 819 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ.
* 10ನೇ ತರಗತಿಯ ಪರೀಕ್ಷಾ ಫಲಿತಾಂಶ 79.97ರಷ್ಟಿದೆ.
* ಈ ಶಾಲೆಗಳಿಗೆ ಭೌತಿಕ ಮತ್ತು ಬೌದ್ಧಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
* ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಆಗಿರುವುದನ್ನು 10ನೇ ತರಗತಿಯ ಪರೀಕ್ಷಾ ಫಲಿತಾಂಶ ದೃಢ ಪಡಿಸುತ್ತದೆ.
* ಕೆಪಿಎಸ್ ಯೋಜನೆಯ ಕುರಿತು ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ.
* 308 ಕೆಪಿಎಸ್‌ಗಳು ಆರಂಭಗೊಂಡ ಕಾರಣದಿಂದ ನೂರಾರು ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಎನ್ನುವ ದೂರುಗಳು ಸಾರ್ವಜನಿಕವಾಗಿ ಈವರೆಗೆ ಕೇಳಿ ಬಂದಿಲ್ಲ.
ಈಗಿನ ಪರಿಸ್ಥಿತಿ ಮತ್ತು ಗೊಂದಲಗಳು
ಪ್ರಸ್ತುತ ರಾಜ್ಯ ಸರಕಾರ ರಾಜ್ಯದಲ್ಲಿ ಒಟ್ಟು 700+200 ಶಾಲೆಗಳನ್ನು ಕೆಪಿಎಸ್ ಯೋಜನೆಯಡಿಯಲ್ಲಿ ಉನ್ನತೀಕರಿಸುವ ನಿಟ್ಟಿನಲ್ಲಿ ಆದೇಶವನ್ನು ಮಾಡಿದೆ. 2026-27ನೇ ಸಾಲಿನಿಂದ ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ ಮತ್ತು ಯುಕೆಜಿ) ಹಂತದಿಂದ ಪದವಿ ಪೂರ್ವ ಕಾಲೇಜಿನ ವರೆಗಿನ ಸಂಯುಕ್ತ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ.
ಕೆಪಿಎಸ್ ಯೋಜನೆಯಡಿಯಲ್ಲಿ ಉನ್ನತೀಕರಿಸಲಾಗುವ ಶಾಲೆಗಳ ಅಭಿವೃದ್ಧಿಗೆ ಸರಕಾರ ಕನಿಷ್ಠ 2ರಿಂದ ಗರಿಷ್ಠ 4 ಕೋಟಿ ರೂ. ಅನುದಾನವನ್ನು ಒದಗಿಸುವ ಭರವಸೆ ನೀಡಿದೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಇದೆ.
ಉನ್ನತೀಕರಿಸುವ ಶಾಲೆಯ 5 ಕಿ.ಮೀ. ವ್ಯಾಪ್ತಿಯ ಒಳಗಡೆ ಬರುವ 50 ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಸಣ್ಣ ಶಾಲೆಗಳನ್ನು ಕೆಪಿಎಸ್ ಶಾಲೆಯ ಜೊತೆಗೆ ವಿಲೀನಗೊಳಿಸುವುದಾಗಿ ಸರಕಾರದ ಆದೇಶದಲ್ಲಿ ಹೇಳಲಾಗಿದೆ. ಸರಕಾರದ ಶಿಕ್ಷಣ ಇಲಾಖೆಯೇ ಹೊರಡಿಸಿದ ಆದೇಶವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಯೋಜನೆಯ ಕುರಿತು ಗೊಂದಲ ಹೆಚ್ಚಾಗುತ್ತಿದೆ.
ಇನ್ನು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಸರಕಾರವು ಹೊರಡಿಸಿರುವ ಆದೇಶದಲ್ಲಿ ಹಲವು ಭರವಸೆಗಳನ್ನು ನೀಡಲಾಗಿದೆ.
ಸರಕಾರದ ಮೇಲೆ ಇರುವ ಆರೋಪಗಳು
ಯೋಜನೆಯನ್ನು ವಿರೋಧಿಸುವವರು ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳು ಹೀಗಿವೆ.
1. ಸರಕಾರ ವಿಲೀನದ ಹೆಸರಿನಲ್ಲಿ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ..!! (ರಾಜ್ಯದಲ್ಲಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು - 19,603, ಹಿರಿಯ ಪ್ರಾಥಮಿಕ ಶಾಲೆಗಳು- 21,676)
2. ಸರಕಾರ ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಶಾಮೀಲಾಗಿ ಮುಚ್ಚಲ್ಪಡುವ ಸರಕಾರಿ ಶಾಲೆಗಳ ಹೆಸರಿನಲ್ಲಿರುವ ಬೆಲೆ ಬಾಳುವ ಜಮೀನನ್ನು ನುಂಗಲು ಹುನ್ನಾರ ನಡೆಸಿದೆ.
3. ಕಡಿಮೆ ವಿದ್ಯಾರ್ಥಿಗಳು ಇರುವ ಸಣ್ಣ ಶಾಲೆಗಳನ್ನು ಮುಚ್ಚುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡುವ ನೀತಿಯನ್ನು ಸರಕಾರ ಅನುಸರಿಸುತ್ತಿದೆ.
4. ಸಣ್ಣ ಸರಕಾರಿ ಶಾಲೆಗಳನ್ನು ಕೆಪಿಎಸ್ ಜೊತೆಗೆ ವಿಲೀನ ಗೊಳಿಸುವುದರಿಂದ ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.
5. ರಾಜ್ಯ ಸರಕಾರದ ಈ ನಿರ್ಧಾರ ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಇನ್ನೊಂದು ರೂಪದಲ್ಲಿ ಜಾರಿಗೆ ತರುವ ಹುನ್ನಾರವಾಗಿದೆ.
ಸೂಚಿಸುತ್ತಿರುವ ಪರಿಹಾರಗಳು
1. ಒಂದೇ ಒಂದು ಮಗು ಶಾಲೆಗೆ ದಾಖಲಾಗಿದ್ದರೂ ಆ ಶಾಲೆಯನ್ನು ಮುಚ್ಚಬಾರದು.
2. ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತ (ಎಲ್‌ಕೆಜಿ ಮತ್ತು ಯುಕೆಜಿ) ದ ವ್ಯವಸ್ಥೆಯನ್ನು ಆರಂಭಿಸಬೇಕು.
3. ಪೂರ್ವ ಪ್ರಾಥಮಿಕ ಹಂತದಿಂದಲೇ ಕನ್ನಡ ಮತ್ತು ಆಂಗ್ಲ ಭಾಷಾ ಮಧ್ಯಮದಲ್ಲಿ ಕಲಿಕೆಗೆ ಅವಕಾಶ ಇರಬೇಕು.
4. ಶಿಕ್ಷಣದ ಗುಣಮಟ್ಟವನ್ನು ಖಾತರಿ ಪಡಿಸುವ ಸಲುವಾಗಿ ಎಲ್ಲ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ಸೇವೆಗೆ ನಿಯೋಜಿಸಬೇಕು.
5. ಸರಕಾರಕ್ಕೆ ಮೇಲಿನ ಪರಿಹಾರೋಪಾಯಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದಾದರೆ ಸರಕಾರಿ ಶಾಲೆಗಳನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)ಗಳಿಗೆ ವಹಿಸಿಕೊಡಬೇಕು. ಈ ಸಮಿತಿಗಳು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮಾದರಿಯಲ್ಲಿ ಸರಕಾರಿ ಶಾಲೆಗಳನ್ನು ನಿರ್ವಹಿಸಲು ಶಕ್ತರಿದ್ದಾರೆ.
ಮೇಲಿನ ಸಲಹೆಗಳು ಅಥವಾ ಪರಿಹಾರೋಪಾಯಗಳು ಎಷ್ಟು ಸಮಂಜಸವಾಗಿವೆ ಎನ್ನುವ ಚರ್ಚೆಗೆ ಹೋಗುವುದಿಲ್ಲ. ಅದು ಹೋರಾಟಗಾರರು ಮತ್ತು ಸರಕಾರದ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿದೆ. ಆದರೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನನ್ನ ಅನುಭವಕ್ಕೆ ಬಂದ ಒಂದು ಉದಾಹರಣೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಸರಕಾರಿ ಶಾಲೆಯ ಸಾಧನೆ
ಪ್ರಸ್ತುತ ಈ ಬಾರಿ ಕೆಪಿಎಸ್ ಯೋಜನೆ ಮಂಜೂರಾಗಿರುವ ದ.ಕ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ವಳಾಲು, ಬಜತ್ತೂರು 113 ವರ್ಷಗಳಷ್ಟು ಹಳೆಯ ಶಾಲೆಯಾಗಿದೆ. ಹಲವು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಪ್ರತೀ ವರ್ಷ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಕಾಲ ಕ್ರಮೇಣ ಮಕ್ಕಳ ದಾಖಲಾತಿ ಪ್ರಮಾಣ ಇಳಿಮುಖವಾಗುತ್ತಾ ಬಂದು 2015-16ನೇ ಸಾಲಿನಲ್ಲಿ ಮಕ್ಕಳ ಸಂಖ್ಯೆ 100ಕ್ಕೂ ಕಡಿಮೆಯಾಯಿತು. ಖಾಸಗಿ ಶಾಲೆಗಳ 10 ಬಸ್‌ಗಳು ಈ ಗ್ರಾಮದ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದವು. ಏನು ಬೇಕಾದರೂ ಆಗಲಿ ಎಂದು ತಣ್ಣಗೆ ಕುಳಿತಿದ್ದರೆ ಈ ಶಾಲೆ ಕೊಡ ಈಗ ಮುಚ್ಚುವ ಸ್ಥಿತಿ ಎದುರಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಬದಲಾಗಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಒಳಗೊಂಡಂತೆ ಈಗ 250 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಈ ಸಾಧನೆ ಮತ್ತು ಊರಿನ ಶಿಕ್ಷಣಾಭಿಮಾನಿಗಳ ಹೋರಾಟಕ್ಕೆ ಈಗ ಕೆಪಿಎಸ್ ಯೋಜನೆಯ ಸೌಲಭ್ಯ ಒಲಿದು ಬಂದಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಸಂಕ್ಷಿಪ್ತ ವಾಗಿ ವಿವರಿಸಲಾಗಿದೆ.
* 6 ವರ್ಷಗಳ ಹಿಂದೆ ಈ ಶಾಲೆಯ ಹಳೇ ವಿದ್ಯಾರ್ಥಿಗಳು ಸಮಾಲೋಚನೆ ನಡೆಸಿ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸುವ ತೀರ್ಮಾನ ಮಾಡಿದರು.
* ಆಸಕ್ತ ಹಳೇ ವಿದ್ಯಾರ್ಥಿಗಳ ಸಹಾಯದಿಂದ ಸುಮಾರು 5 ಲಕ್ಷ ರೂ. ಸಂಗ್ರಹಿಸಿ ಅದೇ ವರ್ಷ ಯುಕೆಜಿ ತರಗತಿಯನ್ನು ಆರಂಭಿಸಲಾಯಿತು. ಮೊದಲ ವರ್ಷವೇ 29 ಮಕ್ಕಳು ಯುಕೆಜಿಗೆ ದಾಖಲಾದರು.
* ಶಾಲೆಗೆ ಸುಣ್ಣ ಬಣ್ಣ ಹಚ್ಚಿ, ಚಿತ್ರಗಳು, ಗೋಡೆ ಬರಹ ಬರೆಸಿ ಸುಂದರಗೊಳಿಸಲಾಯಿತು.
* ಯುಕೆಜಿ ತರಗತಿಯ ಶಿಕ್ಷಕಿ ಮತ್ತು ಸಹಾಯಕಿಯ ವೇತನವನ್ನು ಹಳೇ ವಿದ್ಯಾರ್ಥಿಗಳ ಸಂಘವೇ ಪಾವತಿಸುತ್ತಾ ಬಂದಿದೆ.
* ಮುಂದಿನ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆಗೆ ಅನುಮತಿ ಪಡೆಯಲಾಯಿತು.
* 2025-26ನೇ ಸಾಲಿನಲ್ಲಿ ಎಲ್‌ಕೆಜಿ ತರಗತಿಯನ್ನು ಕೂಡ ಆರಂಭಿಸಲಾಗಿದೆ.
* ಗ್ರಾಮದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ‘ಶಿಕ್ಷಣ ಸಮನ್ವಯ ಟ್ರಸ್ಟ್ ’ ಆರಂಭಿಸಲಾಗಿದೆ.
* ಟ್ರಸ್ಟ್‌ನ ಪ್ರಯತ್ನದ ಮೂಲಕ ಶಾಲಾ ಮಕ್ಕಳ ಸುಗಮ ಸಂಚಾರಕ್ಕಾಗಿ ಬಸ್ ಖರೀದಿಸಿ ನೀಡಲಾಗಿದೆ. 100ಕ್ಕೂ ಹೆಚ್ಚು ಮಕ್ಕಳು ಪ್ರತೀ ದಿನ ಈ ಬಸ್ ಮೂಲಕ ಶಾಲೆಗೆ ಬರುತ್ತಿದ್ದಾರೆ.
* 2025- 2026 ನೇ ಸಾಲಿನಲ್ಲಿ 251 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
* ಶಾಲೆಯ ಆವರಣದಲ್ಲೇ ಇರುವ ಸರಕಾರಿ ಪ್ರೌಢಶಾಲೆಯು ಕಳೆದ 2 ವರ್ಷಗಳಿಂದ 10ನೇ ತರಗತಿಯಲ್ಲಿ ಶೇ. 100 ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
* ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಮಕ್ಕಳ ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಕೈ ಜೋಡಿಸಿ ಶ್ರಮ ಪಡುವ ಮೂಲಕ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ.
ಈ ಶಾಲೆ ಕೆಪಿಎಸ್ ಆಗುವುದರಿಂದ ಇದರ 1-3 ಕಿ.ಮೀ. ವ್ಯಾಪ್ತಿಯ ಒಳಗೆ ಇರುವ 3 ಶಾಲೆಗಳು ಜೊತೆಗೆ ವಿಲೀನಗೊಳ್ಳುವ ಸಾಧ್ಯತೆ ಇದೆ. ವಿಲೀನಗೊಳ್ಳುವ ಒಂದು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ 34. ಇನ್ನೂ ಎರಡು ಕಿ. ಪ್ರಾ. ಶಾಲೆಗಳಲ್ಲಿ ಕ್ರಮವಾಗಿ ಇರುವ ಒಟ್ಟು ವಿದ್ಯಾರ್ಥಿಗಳು 13 ಮತ್ತು 25 ಮಾತ್ರ. ಈ ಮೂರೂ ಶಾಲೆಗಳು ಇರುವ ಪ್ರದೇಶಕ್ಕೆ ಟ್ರಸ್ಟ್‌ನ ಮೂಲಕ ಒದಗಿಸಿರುವ ಶಾಲಾ ವಾಹನ ಪ್ರತಿನಿತ್ಯ ಹೋಗುತ್ತಿರುವುದರಿಂದ ಎಲ್ಲಾ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕರೆ ತರಲು ಯಾವುದೇ ಕಷ್ಟ ಆಗುವುದಿಲ್ಲ.
ಕೊನೆಯ ಮಾತು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವ ಹೊಣೆಗಾರಿಕೆಯನ್ನು ಸರಕಾರ ಪ್ರಾಮಾಣಿಕವಾಗಿ ನಿಭಾಯಿಸಬೇಕು. 50ಕ್ಕೂ ಹೆಚ್ಚು ಮಕ್ಕಳು ಇರುವ ಯಾವುದೇ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳ ಜೊತೆಗೆ ವಿಲೀನಗೊಳಿಸಬಾರದು. ಈ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಈ ಶಾಲೆಗಳಲ್ಲಿ ಕಲಿತ ಮಕ್ಕಳನ್ನು 5ನೇ ತರಗತಿ ಮತ್ತು 7ನೇ ತರಗತಿಯ ನಂತರ ಹತ್ತಿರದ ಕೆಪಿಎಸ್ ಶಾಲೆಗೆ ದಾಖಲಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಎಲ್ಲ ಸರಕಾರಿ ಶಾಲೆಗಳಿಗೆ ಅಗತ್ಯದಷ್ಟು ಶಿಕ್ಷಕರನ್ನು ನೇಮಿಸಲು ಕ್ರಮವಹಿಸಬೇಕು. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಬಿಸಲು ಅನುಮತಿ ನೀಡಬಾರದು. ಸರಕಾರವು ಕೆಪಿಎಸ್ ಯೋಜನೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಸಂಘಟನೆಗಳು ಮತ್ತು ಗುಂಪುಗಳ ಜೊತೆಗೆ ಮಾತುಕತೆ ನಡೆಸಿ ಸರಕಾರದ ನಿರ್ಧಾರದ ಹಿಂದೆ ಇರುವ ಉದ್ದೇಶವನ್ನು ಮನವರಿಕೆ ಮಾಡಬೇಕು.