ಮಂಗನ ಕಾಯಿಲೆ: ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ
ಶಿವಮೊಗ್ಗ, ಡಿ.28: ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಕಾರ್ತಿಕ ಮಾಸದಲ್ಲೇ ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸುಮಾರು 7 ದಶಕಗಳಿಂದ ಮಲೆನಾಡು ಗ್ರಾಮೀಣ ಭಾಗದ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆ ಸೋಂಕಿಗೆ ಇನ್ನೂ ಯಾರೂ ಔಷಧಿ ಕಂಡುಹಿಡಿದಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಕಾಣಿಸಿಕೊಳ್ಳುವ ಮಂಗನ ಕಾಯಿಲೆಗೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದಾರೆ.
ಡಿ.1ರಿಂದ 17ರವರೆಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಮಂಗನ ಕಾಯಿಲೆ ಬಾಧಿಸಿದೆ. ಅಲ್ಲದೇ 36 ಮಂಗಗಳು ಸಾವನ್ನಪ್ಪಿವೆ. ಹೀಗಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.
1957ರಿಂದ 2024ರವರೆಗೆ ರಾಜ್ಯದಲ್ಲಿ 597 ಜನರು ಮಂಗನ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಮಂಗನ ಕಾಯಿಲೆ ಅಬ್ಬರ ಹೆಚ್ಚಿದೆ. 2019ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡುನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿತ್ತು. ಅದೇ ವರ್ಷ ಬರೋಬ್ಬರಿ 23 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.
ವ್ಯಾಕ್ಸಿನ್ ಪೂರೈಕೆ ಆಗಿಲ್ಲ:
ಕಳೆದ ಮೂರು ವರ್ಷಗಳಿಂದ ಮಂಗನ ಕಾಯಿಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ನೀಡಬೇಕಾದ ವ್ಯಾಕ್ಸಿನ್ ಅನ್ನು ಸರಕಾರ ಸಮರ್ಪಕವಾಗಿ ಪೂರೈಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಇನ್ನೂ ಕಂಡುಹಿಡಿದಿಲ್ಲ ಮದ್ದು: ಮಲೆನಾಡು ಭಾಗದಲ್ಲಿ ಹಲವು ದಶಕದಿಂದ ಮಂಗನ ಕಾಯಿಲೆ ಬಾಧಿಸುತ್ತಿದ್ದರೂ ಈವರೆಗೆ ಕಾಯಿಲೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ಮಂಗನ ಕಾಯಿಲೆ ವ್ಯಾಕ್ಸಿನೇಶನ್ ಹಾಕಲಾಗುತ್ತದೆ. ಜೊತೆಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್ ಅನ್ನು ನೀಡಲಾಗುತ್ತದೆ. ವ್ಯಾಕ್ಸಿನ್ ಹಾಕುವುದರಿಂದ ಕಾಯಿಲೆಯಿಂದ ಸ್ವಲ್ಪಮಟ್ಟಿನ ರಕ್ಷಣೆ ಸಿಗುತ್ತಿತ್ತು. ಹೀಗಾಗಿ, ಆರೋಗ್ಯ ಇಲಾಖೆ ನವಂಬರ್ ನಿಂದಲೇ ಕಾಡಂಚಿನ ಜನರಿಗೆ ವ್ಯಾಕ್ಸಿನ್ ನೀಡುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಬೂಸ್ಟರ್ ಡೋಸ್ ಕೂಡ ನೀಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
1957ರಲ್ಲಿ ಗುರುತಿಸಲಾದ ವೈರಾಣು: ಕಾಡಿನಲ್ಲಿ ಇರುವ ಉಣುಗು ಮಂಗನ ಕಾಯಿಲೆ ಹರಡಲು ಕಾರಣ. ಇದು ಮಂಗಗಳ ಮೂಲಕ ಜನರಿಗೆ ಹರಡುತ್ತದೆ. ಕಾಡಿಗೆ ಜನರು ಮತ್ತು ಜಾನುವಾರುಗಳು ತೆರಳಿದ ವೇಳೆ ಉಣುಗಿನ ಮೂಲಕ ದೇಹ ಪ್ರವೇಶಿಸಿ, ಮಾರಣಾಂತಿಕ ರೋಗ ಉಂಟು ಮಾಡುತ್ತದೆ. 1957ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಮೃತ ಮಂಗವೊಂದರ ಶರೀರದಲ್ಲಿ ಈ ವೈರಾಣು ಗುರುತಿಸಲಾಯಿತು. ಹೀಗಾಗಿ, ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ) ಎಂದು ಕರೆಯಲಾಗುತ್ತಿದೆ.
1957ರಿಂದ 73ರ ವರೆಗೆ ಅಂದರೆ 15 ವರ್ಷ ಶಿವಮೊಗ್ಗ ಜಿಲ್ಲೆಗೆ ಕೆಎಫ್‌ಡಿ ಸೀಮಿತವಾಗಿತ್ತು. 1980ರಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರವೇಶಿಸಿತ್ತು. ಕ್ರಮೇಣ ರಾಜ್ಯ ವಿಸ್ತರಿಸಿದ ಬಳಿಕ 2002ರಲ್ಲಿ ಮೊದಲಿಗೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು.
2012ರಲ್ಲಿ ಕೇರಳದ ವಯನಾಡಿನಲ್ಲಿ ಮೊದಲ ಮಂಗನ ಕಾಯಿಲೆ ಪ್ರಕರಣ ಕಂಡುಬಂದಿದ್ದು, ಬಳಿಕ ಆ ರಾಜ್ಯದ ವಿವಿಧೆಡೆ ಕಾಣಿಸಿಕೊಂಡಿದೆ. 2015ರಲ್ಲಿ ಗೋವಾದ ಸತ್ತಾರಿ ತಾಲೂಕು, 2016ರಲ್ಲಿ ಮಹಾರಾಷ್ಟ್ರದ ದೋಡಾಮಾರ್ಗ್, ಸಿಂಧುದುರ್ಗ್ ಹೀಗೆ ಕ್ರಮೇಣ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದೆ. ಕಾಯಿಲೆ ವ್ಯಾಪ್ತಿ ಕ್ರಮೇಣ ವಿಸ್ತಾರವಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಇದರ ಬಾಧೆ ಹೆಚ್ಚಾಗಿದೆ.
ಪ್ರಸಕ್ತ ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಬೆಳಗಾವಿ, ಕೇರಳದ ವಯನಾಡ್, ಮಲ್ಲಪ್ಪುರಂ, ಗೋವಾದ ಸತ್ತಾರಿ, ಪೆರ್ನಂ, ವಲ್ಪೊಯಿ, ಧರ್ಬೋಂದರ, ಮಹಾರಾಷ್ಟ್ರದ ಸಿಂಧುದುರ್ಗ್, ಸವಂತವಾಡಿ, ದೋಡಾಮಾರ್ಗ್, ತಮಿಳುನಾಡಿನ ನೀಲಗಿರಿಯಲ್ಲಿ ಕಾಯಿಲೆ ವಿಸ್ತಾರಗೊಂಡಿದೆ ಎಂದು ತಿಳಿದು ಬಂದಿದೆ.
ಮುಂಜಾಗ್ರತೆ ಅಗತ್ಯ
ಜಿಲ್ಲೆಯ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸಿರುವ ಮಂಗನ ಕಾಯಿಲೆ ಸೋಂಕಿಗೆ ಇನ್ನೂ ಸರಕಾರ ಮದ್ದು ಕಂಡು ಹಿಡಿಯದ ಪರಿಣಾಮ ಮುಂಜಾಗ್ರತೆಯೇ ಸೋಂಕು ನಿಯಂತ್ರಣಕ್ಕೆ ಸದ್ಯಕ್ಕಿರುವ ಮದ್ದಾಗಿದೆ. ಜ್ವರದಿಂದ ಬಳಲುತ್ತಿರುವವರು ಯಾವುದೇ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಜೊತೆಗೆ ಮಂಗಗಳು ಮೃತಪಟ್ಟಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಲು ತಿಳಿಸಲಾಗಿದೆ. ಈವರೆಗೆ ಕಾಯಿಲೆ ದೃಢ ಪಟ್ಟಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ರೋಗದ ಕುರಿತು ಭಯಪಡಬೇಕಿಲ್ಲ. ಆದರೆ, ಮುಂಜಾಗ್ರತೆ ಅಗತ್ಯ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ.
ರೋಗ ಲಕ್ಷಣಗಳು
ಹಠಾತ್ ಜ್ವರ, ತೀವ್ರ ತಲೆನೋವು, ಮೈ ಕೈ ನೋವು, ವಾಂತಿ, ನಿಶ್ಶಕ್ತಿ, ಕೆಲವೊಮ್ಮೆ ರಕ್ತಸ್ರಾವ