ಐತಿಹಾಸಿಕ ಚರಿತ್ರೆಯುಳ್ಳ ಕೊಪ್ಪಳ ಕೋಟೆ
ಕೊಪ್ಪಳ ಎಂದಾಕ್ಷಣ ನೆನಪಾಗುವುದೇ ಕೊಪ್ಪಳ ಕೋಟೆ. ನಗರದ ಹೃದಯ ಭಾಗದಲ್ಲಿ ಇರುವ ಕೊಪ್ಪಳ ಕೋಟೆಯು ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದೆ. ಪ್ರಾಚೀನ ಅಭೇದ್ಯ ಕೋಟೆಗಳಲ್ಲಿ ಒಂದಾದ ಕೊಪ್ಪಳದ ಕೋಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮಹಾನ್ ಸಾಮ್ರಾಜ್ಯಗಳ ಅಧೀನದಲ್ಲಿದ್ದ ಈ ಕೋಟೆಯು ಸ್ವಾತಂತ್ರ್ಯ ಹೋರಾಟಗಾರರ ಅಡಗುತಾಣವಾಗಿತ್ತು. 1857ರ ಸ್ವತಂತ್ರ ಸಂಗ್ರಾಮದ ನಂತರ ಸ್ವಾತಂತ್ರ್ಯದ ಕಿಚ್ಚು ದೇಶದ ಎಲ್ಲೆಡೆ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಹೋರಾಟಗಾರರು ಬ್ರಿಟಿಷರ ವಿರುದ್ಧ ಕಾರ್ಯಾಚರಣೆಗಾಗಿ ಈ ಕೋಟೆಯನ್ನು ಬಳಸಿಕೊಂಡಿದ್ದರು.
ಇತಿಹಾಸ: ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲೀಕೇಶಿಯು ಈ ಕೋಟೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿದನು ಎಂದು ಆತನ ಮಗ ವಿಕ್ರಮಾದಿತ್ಯ ನಿರ್ಮಿಸಿದ ಶಾಸನಗಳಲ್ಲಿ ಉಲ್ಲೇಖಸಲಾಗಿದೆ. ಈ ಕೋಟೆಯು ಕ್ರಮೇಣವಾಗಿ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಮರಾಠ, ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರ ವಶದಲ್ಲಿದ್ದ ಈ ಕೋಟೆಯನ್ನು ಟಿಪ್ಪು ಸುಲ್ತಾನ ಫ್ರೆಂಚ್ ಎಂಜಿನಿಯರ್‌ಗಳ ಸಹಾಯದಿಂದ ನವೀಕರಿಸಿದನೆಂದು ಕೋಟೆಯಲ್ಲಿರುವ ಪರ್ಶಿಯನ್ ಶಾಸನಗಳಿಂದ ತಿಳಿದು ಬರುತ್ತದೆ. ಅನಂತರ ಬ್ರೀಟಿಷರು ಮತ್ತು ನಿಜಾಮನರ ಕೈಸೇರಿದ್ದ ಈ ಕೋಟೆಯು ಭಾರತದ ಅಭೇದ್ಯ ಕೋಟೆಗಳಲ್ಲಿ ಒಂದಾಗಿತ್ತು. 1791ರಲ್ಲಿ ಕೋಟೆಯು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಗಾಯಿತು.
ಶಾಸನಗಳು: ಈ ಕೋಟೆಯಲ್ಲಿ ಅನೇಕ ಪರ್ಶಿಯನ್ ಶಾನಗಳಿದ್ದು, ಅದರಲ್ಲಿ ಕೋಟೆಯ ನಿರ್ಮಾಣದ ಬಗ್ಗೆ ತಿಳಿಸಲಾಗುತ್ತದೆ. ಅದರಂತೆ ಅಂದು ಬಿಜಾಪುರವನ್ನು ಆಳುತಿದ್ದ ಆದಿಲ್-ಶಾಹಿ ಮನೆತದ ದೊರೆ 2ನೆ ಇಬ್ರಾಹಿಂ ಆದಿಲ್-ಶಾಹನು 1603ರಲ್ಲಿ ಬಾಬ್-ಇ-ಅಲಿ ಮತ್ತು 1776ರಲ್ಲಿ ಮಸೀದಿಯನ್ನು ಕಟಿಸುತ್ತಾನೆ ಹಾಗೂ ಶಿವಾಜಿಯು 1774ರಲ್ಲಿ ಕೋಟೆಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಅನಂತರ ಮರಾಠರಿಂದ ಮೈಸೂರಿನ ಹೈದರಾಲಿಯು 1776ರಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡನು ಎಂದು ತಿಳಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ತಾಣವಾದ ಕೋಟೆ: ಮುಂಡರಿಗಿ ಭೀಮರಾಯರು ಮತ್ತು ಹಮ್ಮಿಗಿ ಕೆಂಚನಗೌಡರ ನೆತೃತ್ವದಲ್ಲಿ 1858ರಲ್ಲಿ ಬ್ರಿಟಿಷ್ ವಿರೋಧಿ ಹೋರಾಟ ನಡೆಯುತ್ತದೆ. ಈ ಸಂದರ್ಭದಲ್ಲಿ ಕೊಪ್ಪಳ ಕೋಟೆಯು ಸ್ವತಂತ್ರ ವೀರರಿಗೆ ಆಶ್ರಯ ತಾಣವಾಗಿತ್ತು. ಬ್ರಿಟಿಷರೊಂದಿಗಿನ ಹೋರಾಟದ ಸಂದರ್ಭದಲ್ಲಿ ಈ ಕೋಟೆಯಲ್ಲಿದ್ದ ಭೀಮರಾಯರು ಮತ್ತು ಕೆಂಚನಗೌಡರು ಸೇರಿ ನೂರಾರು ಜನ ಹೋರಾಟಗಾರು ಮಡಿಯುತ್ತಾರೆ. 77 ಜನರನ್ನು ಬ್ರೀಟಿಷ್ ಸೈನ್ಯ ಸೆರೆಹಿಡಿಯಿತು.ಅಂದಿನ ರಾಯಚೂರಿನ (ದೋಆಬ್) ಅಲ್ಟೇರ್ ಆರ್.ಎನ್.ಟೇಲರ್, ಕ್ಯಾಪ್ಟನ್ ರೇಮೀಂಗ್‌ಟನ್, ಲೆಪ್ಟನೆಂಟ್ ಟೇಲರ್ ಸಮ್ಮುಖದಲ್ಲಿ ಕೋರ್ಟ್ ಮಾರ್ಷಲ್ ನಡೆಸಿ 1819ರ ಜೂ.1ರಂದು ಸೆರೆ ಸಿಕ್ಕ 77 ಜನರನ್ನು ಸಾಲಾಗಿ ನಿಲ್ಲಿಸಿ ಎದೆಗೆ ಗುಂಡು ಹೊಡೆದು ಕೊಲ್ಲಲಾಯಿತು. ಮತ್ತು 65ಕ್ಕೂ ಹೆಚ್ಚು ಜನರಿಗೆ 14 ವರ್ಷದ ಕಠಿಣ ಶ್ರಮದ ಶಿಕ್ಷೆಗಳನ್ನು ನೀಡಲಾಯಿತು.
ಕೋಟೆಯ ಈಗಿನ ಪರಿಸ್ಥಿತಿ
ಚಾಲುಕ್ಯರಿಂದ ಹಿಡಿದು ಟಿಪ್ಪು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಜೊತೆಗಿದ್ದ ಈ ಕೋಟೆಯು ನಿರ್ಲಕ್ಷ್ಯಕ್ಕೆ ಒಳಗಾಗಿ ಜೂಜಾಟ ಮತ್ತು ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಜನರು ಈ ಕೋಟೆಯ ಆವರಣದಲ್ಲೇ ಬಹಿರ್ದೆಸೆಗೆ ಹೋಗುವುದು, ಕಸ ಹಾಕುವುದು, ಕುಡುಕರು ಇಲ್ಲೆ ಕುಡಿಯುವುದು ಮತ್ತು ಇಸ್ಪೀಟ್ ಆಡುತ್ತಿದ್ದಾರೆ.
ಕೋಟೆಯ ಹಿಂದೆಯೇ ಇರುವ ಹುಲಿಕೆರೆ ಮತ್ತು ಮರ್ದಾನ್ ಅಲಿ ದರ್ಗಾ ಈ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದೆ. ಕೆರೆಯನ್ನು ದೋಣಿ ವಿಹಾರ ಕೇಂದ್ರವಾಗಿ ಮಾಡಿದರೆ ಪ್ರವಾಸಿಗರು ಬರಬಹುದು. ಇದರಿಂದ ಸ್ಥಳೀಯರಿಗೆ ಉದ್ಯೋಗದ ಜೊತೆಗೆ ಕೋಟೆಯ ಸಂರಕ್ಷಣೆ ನಡೆಯಬಹುದು.
ಸ್ವಾತಂತ್ರ್ಯ ಹೋರಾಟದಲ್ಲಿ ಕೋಟೆ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಮರಣದ ನಂತರ ಭಾರತದಲ್ಲಿನ್ನು ಬ್ರಿಟಿಷರಿಗೆ ಪ್ರಬಲ ವಿರೋಧಿಗಳೇ ಇಲ್ಲದಂತಾಗಿತು. ಟಿಪ್ಪು ಮಡಿದ ನಂತರ ಅವನ ಸರದಾರ ದೋಂಢಿಯಾ ವಾಘನು ಈ ಭಾಗದಿಂದ ಬ್ರಿಟಿಷರ ವಿರುದ್ಧ ಸೈನ್ಯವನ್ನು ಒಗ್ಗೂಡಿಸಿದ್ದನು ಎಂದು ಹೇಳಲಾಗುತ್ತದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಪ್ಪಳ ಕೋಟೆಯು ಹೈದರಾಬಾದ್ ಸಂಸ್ಥಾನವನ್ನು ಆಳುತ್ತಿದ್ದ ನಿಜಾಮನ ಅಧಿನದಲ್ಲಿತ್ತು ಎಂದು ತಿಳಿದುಬಂದಿದೆ. ಅನಂತರ 1819ರಲ್ಲಿ ಈ ಭಾಗದ ಕಂದಾಯ ವಸೂಲಿ ಆಡಳಿತಗಾರನಾಗಿದ್ದ ವೀರಪ್ಪ ದೇಸಾಯಿ, ಕೊಪ್ಪಳ ಮತ್ತು ಬಹುದ್ದೂರು ಬಂಡಿ ಕೋಟೆಗಳನ್ನು ವಶಪಡಿಸಿಕೊಂಡಿದ್ದನು. ಆದರೆ 1819ರ ಮಾರ್ಚ್ 23ರಂದು ಹೈದರಾಬಾದ್‌ನಿಂದ ಬಂದ ಕ್ಯಾಪ್ಟನ್ ಜಾನ್ಸನ್, ಇದ್ರೂಸ್ ಖಾನ್ ಮತ್ತು ಕ್ಯಾಪ್ಟನ್ ಹಾರ್ಜನ್ ನೇತೃತ್ವದ ಸುಮಾರು 1200 ಜನರಿದ್ದ ನಿಜಾಮ್ ಮತ್ತು ಬ್ರಿಟಿಷರ ಜಂಟಿ ಸೈನ್ಯವು ಅಲ್ಪ ಕಾಲದಲ್ಲೇ ಮತ್ತೆ ಕೋಟೆಯನ್ನು ತಮ್ಮ ವಶಕ್ಕೆ ಪಡೆಯಿತು.