×
Ad

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಜೆಜೆಎಂ ಕಾಮಗಾರಿ

Update: 2025-12-29 13:07 IST

ಚಿಕ್ಕಮಗಳೂರು, ಡಿ.28: ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಹು ನಿರೀಕ್ಷಿತ ಯೋಜನೆ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಜಿಲ್ಲಾದ್ಯಂತ ಕುಂಟುತ್ತ ಸಾಗುತ್ತಿದೆ.

ಕಾಫಿನಾಡಿನಲ್ಲಿ 226 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 1,006 ಗ್ರಾಮಗಳಿವೆ. ಈ ಪೈಕಿ 3,719 ಜನವಸತಿ ಪ್ರದೇಶವಿದ್ದು, 2,40,307 ಕುಟುಂಬಗಳಿವೆ. ಒಂದಿಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಮತ್ತೊಂದಿಷ್ಟು ಕಾಮಗಾರಿಗಳು ಮುಗಿದಿವೆ ಎನ್ನಲಾಗುತ್ತಿದ್ದರೂ ಜೆಜೆಎಂ ಯೋಜನೆಯ ನೀರು ಮಾತ್ರ ಮರೀಚಿಕೆಯಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಜೀವ ಜಲವೇ ಮನೆಗಳನ್ನು ತಲುಪುತ್ತಿಲ್ಲ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 2,40,307 ಮನೆಗಳಿದ್ದು, ಇಲ್ಲಿಯವರೆಗೆ 1,96,867 ಕಾರ್ಯಾತ್ಮಕ ನಳ ನೀರು ಸಂಪರ್ಕ ನೀಡಲಾಗಿದೆ. 43,440 ನಳ ನೀರು ಸಂಪರ್ಕ ಕಲ್ಪಿಸಲು ಬಾಕಿ ಇದೆ. ನಾಲ್ಕು ಬ್ಯಾಚ್‌ಗಳಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಮೊದಲ ಬ್ಯಾಚ್‌ನಲ್ಲಿ 251 ಕಾಮಗಾರಿಗಳನ್ನು 103.57 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಎರಡನೇ ಬ್ಯಾಚ್‌ನಲ್ಲಿ 275 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 127.2 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಮೂರನೇ ಬ್ಯಾಚ್‌ನಲ್ಲಿ 129 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 52.56 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನಾಲ್ಕನೇ ಬ್ಯಾಚ್‌ನಲ್ಲಿ 1,130 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 476.83 ಕೋಟಿ ರೂ. ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,785 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 760.16 ಕೋಟಿ ರೂ. ವಿನಿಯೋಗಿಸಲಾಗಿದೆ.

ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗಿದೆ. ತರೀಕೆರೆ ಮತ್ತು ಅಜ್ಜಂಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಚಿಕ್ಕಮಗಳೂರು ತಾಲೂಕಿನಲ್ಲಿ 146 ಜನವಸತಿ ಪ್ರದೇಶ, ಕಡೂರು 434 ಜನವಸತಿ ಪ್ರದೇಶ, ತರೀಕೆರೆ ತಾಲೂಕಿನ 156 ಜನವಸತಿ ಪ್ರದೇಶ, ತರೀಕೆರೆ ಪಟ್ಟಣಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ನಬಾರ್ಡ್ ನೆರವಿನಿಂದ 1,265 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.

ತರೀಕೆರೆ ತಾಲೂಕಿನ 172 ಗ್ರಾಮೀಣ ಜನವಸತಿಗಳು ಮತ್ತು ಅಜ್ಜಂಪುರ ಪಟ್ಟಣ ಪ್ರದೇಶದ ಜನವಸತಿಗಳಿಗೆ ಜಲ್‌ಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್ ನೆರವಿನೊಂದಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ 249 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ.

ಇದುವರೆಗೆ ಶೇ.90ರಷ್ಟು ಜಲಜೀವನ್ ಮಿಷನ್ ಕಾಮಗಾರಿ ನಡೆಸಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಆದರೆ ಜಲಜೀವನ್ ಮಿಷನ್‌ನಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳು ಅನೇಕ ಲೋಪಗಳಿಂದ ಕೂಡಿದ್ದು, ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜಿಪಂ ಕೆಡಿಪಿ ಸಭೆಗಳಲ್ಲಿ ಜೆಜೆಎಂ ಕಳಪೆ ಕಾಮಗಾರಿ ಮತ್ತು ಕಾಮಗಾರಿಗಳ ವಿಳಂಬ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕುಗ್ರಾಮಗಳಿಗೆ ಈ ಯೋಜನೆಯಡಿ ನೀರು ತಲುಪಿಸಲು ಇನ್ನೂ ಸಾಧ್ಯವಾಗಿಲ್ಲ. ಮಲೆನಾಡಿನಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಅಂತರ ಹೆಚ್ಚಿರುವುದರಿಂದ ಯೋಜನೆ ಅನುಷ್ಠಾನಕ್ಕೆ ತೊಡಕುಂಟಾಗಿದೆ. ಯೋಜನೆಗೆ ಬೇಕಾದ ನೀರಿನ ಲಭ್ಯತೆ ಇಲ್ಲದಂತಾಗಿದೆ. ಕೊಳವೆ ಬಾವಿಗಳು ವಿಫಲವಾಗಿವೆ. ಕಾಮಗಾರಿ ನೀಲನಕ್ಷೆ ತಯಾರಿಕೆಯಲ್ಲಿನ ಎಡವಟ್ಟುಗಳಿಂದ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಗೆ ಮೂಲಕಾರಣವಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ಜಲಜೀವನ್ ಮಿಷನ್ ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಪೂರೈಸುವ ಕೋಟ್ಯಂತರ ರೂ. ವೆಚ್ಚದ ಯೋಜನೆ ಜಿಲ್ಲಾದ್ಯಂತ ಹಳ್ಳ ಹಿಡಿಯುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನೀರಿನ ಲಭ್ಯತೆಯ ಕೊರತೆ

ಅನೇಕ ಮನೆಗಳಿಗೆ ನಳ ಮತ್ತು ಮೀಟರ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ನೀರಿನ ಲಭ್ಯತೆಯ ಕೊರತೆಯಿಂದ ಕೆಲವು ಕಡೆಗಳಲ್ಲಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರೂ ಈ ಯೋಜನೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಝರಿನೀರಿನ ಲಭ್ಯತೆ ಅವಲಂಬಿಸಿ ಯೋಜನೆ ರೂಪಿಸಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ಶೇ.90ರಷ್ಟು ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಂಡಿದೆ. ಕೆಲವು ಕಡೆಗಳಲ್ಲಿ ಕೆಲ ಲೋಪದೋಷಗಳಿದ್ದು, ಸರಿಪಡಿಸಲಾಗುತ್ತಿದೆ. ಲೋಪದೋಷಗಳನ್ನು ಶೀಘ್ರವೇ ಸರಿಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.

-ಚಿದಾನಂದಪ್ಪ, ಕಾರ್ಯಪಾಲಕ ಇಂಜಿನಿಯರ್

ನಳಸಂಪರ್ಕ ಕಲ್ಪಿಸಿ ಅನೇಕ ತಿಂಗಳು ಕಳೆದಿದೆ. ನಳಕ್ಕೆ ಪೈಪ್ ಅಳವಡಿಕೆ ಮಾಡಿಲ್ಲ. ಸಿಮೆಂಟ್ ಕಟ್ಟೆ ಕಟ್ಟಿದ ನಳವನ್ನು ಮನೆಯ ಮುಂದೆ ಇಟ್ಟು ಹೋಗಿದ್ದಾರೆ. ನೀರು ಯಾವಾಗ ಬರುತ್ತದೆಯೋ ಗೊತ್ತಿಲ್ಲ.

-ನಾಗೇಂದ್ರ, ಜಯಪುರ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ. ಎಲ್ ಶಿವು

contributor

Similar News