ಭಾರತದ ಮುಂದಿವೆ ಯುವಜನರ ಸಮಸ್ಯೆಗಳು!
ಭಾರತದ ಯುವಜನ ನೀತಿ 2014ರ ಪ್ರಕಾರ 15ರಿಂದ 29 ವರ್ಷದ ವಯೋಮಾನದವರನ್ನು ಯುವಜನರು ಎಂದು ಕರೆಯಲಾಗುತ್ತದೆ. ಯೂತ್ ಇನ್ ಇಂಡಿಯಾ 2022 (ಭಾರತ ಸರಕಾರ) ವರದಿಯ ಪ್ರಕಾರ ಕರ್ನಾಟಕದಲ್ಲಿರುವ 15 ರಿಂದ 29 ವರ್ಷ ವಯಸ್ಸಿನವರ ಸಂಖ್ಯೆ ಸುಮಾರು 1.69 ಕೋಟಿ. ಭಾರತದಲ್ಲಿ 36 ಕೋಟಿಗೂ ಹೆಚ್ಚು. 2025 ಪ್ರಕಾರ ಅಂದಾಜಿಸಿದರೆ ಕರ್ನಾಟಕದಲ್ಲಿ ಎರಡೂವರೆ ಕೋಟಿ ಮತ್ತು ಭಾರತದಲ್ಲಿ 45 ಕೋಟಿ ಯುವಜನರಿದ್ದಾರೆ. ಹೀಗಾಗಿ ನಮ್ಮದು ಪ್ರಪಂಚದಲ್ಲಿ ಯುವ ಭಾರತ ಎನಿಸಿಕೊಳ್ಳುತ್ತಿದೆ.
ಭಾರತದ ಬಹುಸಂಖ್ಯಾತ ಯುವಜನರ ಗುಂಪೊಂದು ಈಗ ಹಲವು ಸಮಸ್ಯೆಗಳ ಸಾಗರದಲ್ಲಿ ಈಜುತ್ತಿದೆ. ಹೆಸರಿಗೆ ಮಾತ್ರವೇ ಯುವಜನರು ಈ ದೇಶದ ಆಸ್ತಿ, ಶಕ್ತಿ ಎನ್ನುತ್ತಿರುವ ರಾಜಕೀಯ ಪರಿಭಾಷೆಯು ಯುವಜನರ ಬದುಕನ್ನು ಸುಧಾರಿಸುವಲ್ಲಿ ಮಹತ್ವದ ನಿರ್ಧಾರಗಳನ್ನೇನೂ ತೆಗೆದುಕೊಂಡಿಲ್ಲ. ಈಗಾಗಲೇ ಧರ್ಮ, ಜಾತಿ, ಮತ, ಪಂಥ, ವರ್ಗ ಹಾಗೂ ಲಿಂಗ ತಾರತಮ್ಯದಲ್ಲಿ ಮುಳುಗುತ್ತಿರುವ ಯುವಜನರು ಈಗ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಶೈಕ್ಷಣಿಕ ಒತ್ತಡ, ಅತಿಯಾದ ನಿರೀಕ್ಷೆ, ಆತ್ಮ ವಿಶ್ವಾಸದ ಕೊರತೆ, ಜಾತಿ ತಾರತಮ್ಯ, ದೌರ್ಜನ್ಯ, ದೈಹಿಕ ಮತ್ತು ಮಾನಸಿಕ ಲೈಂಗಿಕ ಕಿರುಕುಳ, ಕುಟುಂಬದ ನಿರೀಕ್ಷೆಗಳು ಹಾಗೂ ಮದ್ಯ, ಮಾದಕ ವಸ್ತುಗಳ ಬಳಕೆ. ಪ್ರತಿದಿನ ನೂರಾರು ಯುವಜನರು ಒಂದಲ್ಲಾ ಒಂದು ಕಾರಣಕ್ಕೆ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಬದುಕು ಕಟ್ಟುವ ಹತ್ತಾರು ದಾರಿಗಳ ನಡುವೆ ನಿಂತು ಯೋಚಿಸುತ್ತಿರುವ ಯುವಜನರಿಗೆ ಹಲವಾರು ಸವಾಲುಗಳು, ನಿರೀಕ್ಷೆಗಳು, ಕಷ್ಟಗಳು, ಒತ್ತಡಗಳು, ಗೊಂದಲ, ಆತಂಕಗಳು ಎದುರಾಗುತ್ತಲಿವೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಯುವಜನರ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಆತ್ಮಹತ್ಯೆ ಮಾಡಿಕೊಂಡಿರುವ ಜನರಲ್ಲಿ ಸುಮಾರು ಶೇ. 40 ಜನರು 15ರಿಂದ 29 ವರ್ಷ ವಯಸ್ಸಿನವರು. 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 34.5 ಜನರು 15ರಿಂದ 30 ವಯಸ್ಸಿನವರು. 2021ರಲ್ಲಿ ಭಾರತದಲ್ಲಿ ಒಟ್ಟು 13,069 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ರಲ್ಲಿ ಅತ್ಯಾಚಾರಕ್ಕೆ ಗುರಿಯಾದ 12-30 ವರ್ಷದವರೆಗಿನ ಯುವತಿಯರ ಸಂಖ್ಯೆ 28,153 (ಕೇಸ್ ಆಗಿದ್ದು ಮಾತ್ರ. ಆಗದೇ ಇರುವುದು?) 2020ರಲ್ಲಿ ಕೊಲೆಗೀಡಾದ 12ರಿಂದ 30 ವರ್ಷ ವಯಸ್ಸಿನ ಯುವಜನರ ಸಂಖ್ಯೆ 30,183 ಎಂದು ನ್ಯಾಷನಲ್ ಕ್ರೈಂ ಬ್ಯೂರೋ ವರದಿ ಹೇಳುತ್ತಿದೆ. ಇದು ಕೇವಲ ಒಂದೊಂದು ವರ್ಷದ ಅಂಕಿಅಂಶಗಳು ಮಾತ್ರ. ಪ್ರತೀ ವರ್ಷದ ಅಂಕಿಅಂಶಗಳನ್ನು ನೋಡಿದರೆ ನಮ್ಮ ಭಾರತದ ಯುವಜನರ ಬದುಕಿನ ಚಿತ್ರಣವನ್ನೇ ಮುಂದಿಡುತ್ತದೆ.
ಇತ್ತೀಚೆಗೆ ನೀಟ್ ಪರೀಕ್ಷೆಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಯಾರಾಗುವ ರಾಜಸ್ಥಾನದ ಕೋಟದಲ್ಲಿ ಸರಣಿ ಆತ್ಮಹತ್ಯೆಗಳಾಗುತ್ತಿವೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಹಾಸ್ಟೆಲ್‌ನ ಬಾಲ್ಕನಿಗಳಿಂದ ವಿದ್ಯಾರ್ಥಿಗಳು ಜಿಗಿಯದಂತೆ ಬಲೆಗಳನ್ನು ಹಾಕಲಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ 2020 ಜನವರಿ 11ರ ಸಂಚಿಕೆಯಲ್ಲಿನ ವರದಿಯಂತೆ 2018ರಲ್ಲಿ ಭಾರತದಲ್ಲಿ ಪ್ರತೀ ಗಂಟೆಗೆ 28 ವಿದ್ಯಾರ್ಥಿ/ನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ತಿಳಿಯುತ್ತದೆ. ಆ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆ ಒಟ್ಟು 82,000. ಟೈಮ್ಸ್ ಆಫ್ ಇಂಡಿಯಾ 2021 ಜನವರಿ 31ರ ವರದಿ ಹೇಳುವಂತೆ, ಕೋವಿಡ್ ಸಾಂಕ್ರಾಮಿಕ ಬಂದಿರುವ 2020ರಲ್ಲಿ ಬೆಂಗಳೂರಿನಲ್ಲಿ ಕಳೆದ 11 ವರ್ಷಗಳಲ್ಲಿಯೇ ಅಧಿಕ ಪ್ರಮಾಣದ ಆತ್ಮಹತ್ಯೆಗಳು ನಡೆದಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಯುವಜನರ ಬದುಕನ್ನು ಉತ್ತಮಗೊಳಿಸಲು ಯುವಜನ ಹಕ್ಕುಗಳು ಮತ್ತು ಅದರ ರಕ್ಷಣೆಗಾಗಿ ಯುವಜನ ಆಯೋಗದ ಅಗತ್ಯವಿದೆ.
ಕರ್ನಾಟಕದಲ್ಲಿ ಯುವಜನ ಆಯೋಗಕ್ಕಾಗಿ ಸುಮಾರು ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಅದಕ್ಕಾಗಿ ಕರ್ನಾಟಕ ಯುವ ಮುನ್ನಡೆಯ ಮುಂದಾಳುಗಳು ಹಲವು ಅಭಿಯಾನಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕೆಲವು ಪ್ರಾದೇಶಿಕವಾಗಿ ಯುವಜನರ ಕುರಿತಾದ ಸತ್ಯಶೋಧನೆಗಳು ಕೂಡ ನಡೆಯುತ್ತಿದೆ. ಇವುಗಳು ನೀಡುತ್ತಿರುವ ಅಂಕಿಅಂಶಗಳು ಕೂಡ ಯುವಜನ ಪ್ರಸ್ತುತ ಸ್ಥಿತಿಗತಿ ಹೇಗಿದೆ ಕರ್ನಾಟಕದಲ್ಲಿ ಎಂಬುವುದನ್ನು ತೋರಿಸುತ್ತದೆ.
ಕಳೆದ ಸರಕಾರವು ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಯುವಜನ ಗ್ರಾಮಸಭೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ ಗ್ರಾಮೀಣ ಭಾಗದಲ್ಲಿ ಈ ಸಭೆಗಳು ನಡೆಯಲಿಲ್ಲ. ಪ್ರತೀ ಕಾಲೇಜಿಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಇರಬೇಕು ಎಂಬ ನಿಯಮವಿದೆ. ಆದರೆ ಯಾವ ಕಾಲೇಜುಗಳೂ ಇದನ್ನು ಪಾಲಿಸುತ್ತಿಲ್ಲ. ವಿದ್ಯಾರ್ಥಿ ಯುವಜನರಿಗೆ ಕಲಿಕೆ ವಾತಾವರಣದಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಹಾಗೆಯೇ ಬಳಕೆಗೆ ಶೌಚಾಲಯಗಳ ಸಮಸ್ಯೆಗಳೂ ಇವೆ. ಈ ಸಮಸ್ಯೆಗಳ ಜೊತೆಗೆ ಬೆಳಗ್ಗೆ ಬೇಗ ಎದ್ದು ಕಾಲೇಜುಗಳಿಗೆ ಹೋಗಬೇಕಿದೆ. ಮಧ್ಯಾಹ್ನದ ಊಟವಿಲ್ಲದೆ ಕಾಲೇಜುಗಳಲ್ಲಿ ಉಪವಾಸ ಕೂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ವರದಿಗಳು.
ಈ ಎಲ್ಲಾ ಸಮಸ್ಯೆಗಳಿಗೆ ಆಯೋಗ ಪರಿಹಾರದ ಕೊಂಡಿಯಾಗಬಲ್ಲದು ಎಂಬ ನಿರೀಕ್ಷೆ ಯುವಜನರದ್ದು. ಯುವಜನ ಆಯೋಗವು ಸ್ಥಾಪನೆಯಾದರೆ ಯುವಜನ ಹಕ್ಕಿಗಾಗಿ ಕೆಲಸ ಮಾಡಬಲ್ಲದು. ಯುವಜನ ಸಬಲೀಕರಣ ನಿಗಮ ಮುಂತಾದ ಸಾಂಸ್ಥಿಕ ವ್ಯವಸ್ಥೆಗಳಾದರೆ ಅದರಿಂದ ಯುವಜನರ ಸಬಲೀಕರಣದ ಕಾರ್ಯವು ಚುರುಕುಗೊಳ್ಳುವುದು. ಇವೆಲ್ಲ ಆಗುತ್ತಲೇ ಯುವಜನ ಹಕ್ಕುಗಳು ಅಂದರೆ ಏನು ಎಂಬ ಅರಿವು ಎಲ್ಲೆಡೆ ಉಂಟಾಗುವುದು. ಮುಂದೆ ರಾಷ್ಟ್ರಮಟ್ಟದಲ್ಲಿ ಯುವಜನ ಹಕ್ಕುಗಳ ಚರ್ಚೆ ನಡೆಯಬೇಕು, ರಾಷ್ಟ್ರೀಯ ಯುವಜನ ಆಯೋಗ ಸ್ಥಾಪನೆಯಾಗಬೇಕು. ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಯುವಜನ ಹಕ್ಕುಗಳ ಘೋಷಣೆಯಾಗಬೇಕೆಂಬುದು ಅನೇಕ ಯುವಜನರ ಆಸೆ ಮತ್ತು ಯುವಜನರೊಂದಿಗೆ ಕೆಲಸ ಮಾಡುವ ಕಾರ್ಯಕರ್ತರ ನಿರೀಕ್ಷೆಯಾಗಿದೆ.