ದರ ನಿಗದಿಯಲ್ಲಿ ಕಲಬುರಗಿ ಕಬ್ಬು ಬೆಳೆಗಾರರಿಗೆ ಅನ್ಯಾಯ
ರೈತರ ಹೋರಾಟಗಳ ಮಧ್ಯೆಯೂ ಕಾರ್ಖಾನೆಗಳ ಪ್ರಾರಂಭ
ಕಲಬುರಗಿ, ನ.19: ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದರೂ ಇತ್ತ ಕಲಬುರಗಿ ಜಿಲ್ಲಾಡಳಿತ ಕಬ್ಬಿನ ದರ ನಿಗದಿಯಲ್ಲಿ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಹೌದು, ಬೆಳಗಾವಿಯ ಗುರ್ಲಾಪುರದಲ್ಲಿ ರೈತರ ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರ, ಪ್ರತಿ ಟನ್ ಕಬ್ಬಿಗೆ 3,300 ರೂ. ದರ ನಿಗದಿಗೆ ಒಪ್ಪಿಗೆ ಸೂಚಿಸಿದೆ. ಆದರೆ ಇದೇ ದರದಂತೆ ಕಲಬುರಗಿ ಜಿಲ್ಲೆಯ ರೈತರಿಗೆ ಬೆಲೆ ನಿಗದಿಪಡಿಸದೆ 2,950 ರೂ.ಗಷ್ಟೇ ಸೀಮಿತಗೊಳಿಸಿ ಅನ್ಯಾಯವೆಸಗಲಾಗುತ್ತಿದೆ.
ಅತಿವೃಷ್ಟಿ ಹಾಗೂ ನದಿ ಪ್ರವಾಹದಿಂದ ನಲುಗಿದ ಕಲಬುರಗಿ ವಿಭಾಗದ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ಶಕ್ತಿ ನೀಡಬೇಕಾಗಿತ್ತು. ಆದರೆ ರಾಜ್ಯ ಸರಕಾರ ಇದರಲ್ಲಿ ಎಡವಿದೆ. ಪ್ರವಾಹ ಬಳಿಕರೈತರ ಸಂಕಷ್ಟಗಳು ಹೆಚ್ಚಾಗಿವೆ. ದೀಪಾವಳಿಗೆ ಬರಬೇಕಿದ್ದ ಬೆಳೆ ಮತ್ತು ವಿಮೆ ಪರಿಹಾರ ಇನ್ನೂ ರೈತರ ಖಾತೆಗೆ ಬರದಿರುವುದು ಅವರನ್ನು ಮತ್ತಷ್ಟು ಕಷ್ಟಕ್ಕೀಡು ಮಾಡಿದೆ. ಈ ನಡುವೆ ಯಥಾವತ್ತಾಗಿ ಕಬ್ಬಿನ ಉತ್ಪಾದನೆ ಆದರೂ ಅದಕ್ಕೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ಇಲ್ಲಿನ ಕಬ್ಬು ಬೆಳೆಗಾರರಿಗೆ ಸಂಕಷ್ಟಕ್ಕೆ ದೂಡಿದಂತಾಗಿದೆ.
<ಕಬ್ಬು ಬೆಳೆಗಾರರೊಂದಿಗೆ ಜಿಲ್ಲಾಡಳಿತ ಚೆಲ್ಲಾಟ: ಪ್ರತಿ ಟನ್ ಕಬ್ಬಿಗೆ 3,500 ರೂ. ನಿಗದಿಪಡಿಸುವಂತೆ ಆಗ್ರಹಿಸಿ ಒಂದು ತಿಂಗಳಿನಿಂದ ಕಲಬುರಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಡಳಿತದ ಭರವಸೆ ಮೇರೆಗೆ ಹಲವು ಪ್ರತಿಭಟನೆಗಳನ್ನು ರೈತರು ಕೈಬಿಟ್ಟಿದ್ದಾರೆ. ಎರಡು ವಾರದ ಹಿಂದಷ್ಟೇ ಅಫಜಲಪುರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಸರಕಾರಿ ಅಧಿಕಾರಿಗಳು, ಸ್ಥಳೀಯ ಕಾರ್ಖಾನೆಗಳ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಿದ್ದರು. ಪ್ರತಿ ಟನ್ ಕಬ್ಬಿಗೆ 3,165 ರೂ. ನೀಡುವುದಾಗಿ ಕೆಪಿಆರ್ ಸಕ್ಕರೆ ಕಾರ್ಖಾನೆ ಒಪ್ಪಿದ ನಂತರ ರೈತರು ಧರಣಿಯನ್ನು ಕೈಬಿಟ್ಟಿದ್ದರು. ಇದಾದ ಒಂದು ವಾರ ಕಳೆಯುವಷ್ಟರಲ್ಲಿ ಉಸ್ತುವಾರಿ ಸಚಿವರು 2,950 ಜೊತೆಗೆ 50 ಸೇರಿಸಿ ಕೊಡುವುದಾಗಿ ಪ್ರಕಟಿಸಿದ್ದರು. ಹೀಗೆ ಒಂದು ಬಾರಿ ದರ ಒಪ್ಪಿಕೊಂಡ ಬಳಿಕ ಮತ್ತೊಮ್ಮೆ ಕಡಿಮೆ ಬೆಲೆ ನಿಗದಿಪಡಿಸುತ್ತಿರುವುದು ದೊಡ್ಡ ಅನ್ಯಾಯ ಎಂದು ರೈತ ಮುಖಂಡರು ಆರೋಪಿಸಿದ್ದು, ಮುಂದೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸಕ್ಕರೆ ಇಳುವರಿ ಹೊಸ ಲ್ಯಾಬ್ ಸ್ಥಾಪಿಸುವುದು, ಸರಕಾರದ ಆದೇಶದಂತೆ ದರ ನಿಗದಿಪಡಿಸುವುದು, ಕಬ್ಬಿನ ಉಪ ಉತ್ಪನ್ನಗಳಲ್ಲಿ ರೈತರಿಗೆ ಶೇ.50 ರಷ್ಟು ಪಾಲು ಕೊಡಬೇಕು, ಕಲಬುರಗಿಯಲ್ಲೂ ಏಕರೂಪದ ದರ ಜಾರಿಗೊಳಿಸಬೇಕು, ಕಾರ್ಖಾನೆಗಳ ಹೊರಗಡೆ ತೂಕದ ಯಂತ್ರ ಸ್ಥಾಪಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ರೈತರು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಿವೆ. ಕೂಡಲೇ ಸರಕಾರ ರೈತರ ನೆರವಿಗೆ ಧಾವಿಸಿ, ನಿಗದಿಪಡಿಸಿದ 2,950 ರೂ. ಪರಿಷ್ಕರಿಸಿ, 3,300 ನೀಡಬೇಕೆನ್ನುವುದೇ ಕಲಬುರಗಿ ರೈತರ ಆಗ್ರಹವಾಗಿದೆ.
ಅಧಿಕಾರಿಗೆ ನೋಟಿಸ್ ನೀಡಿದ ಜಿಲ್ಲಾಧಿಕಾರಿ
ಅಫಜಲಪುರ ಪಟ್ಟಣದ ರೈತರ ಪ್ರತಿಭಟನೆ ವೇಳೆ ಟನ್ ಕಬ್ಬಿಗೆ 3,165 ನೀಡುವುದಾಗಿ ಒಪ್ಪಿಗೆ ಸೂಚಿಸಿದ ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾವ್ ಅವರಿಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ನೋಟಿಸ್ ಕೊಟ್ಟಿದ್ದು, ಈ ಕುರಿತು ಕಾರಣ ನೀಡಿ ಉತ್ತರಿಸುವಂತೆ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ ರೈತರಿಗ್ಯಾಕೆ ಅನ್ಯಾಯ?
ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿಪಡಿಸಿದ ರಾಜ್ಯ ಸರಕಾರ, ಕಲಬುರಗಿ ಜಿಲ್ಲೆಯ ರೈತರಿಗೆ ಯಾಕೆ ಪ್ರತ್ಯೇಕ ದರ ನಿಗದಿಪಡಿಸುತ್ತಿದೆ ತಿಳಿಯುತ್ತಿಲ್ಲ. ರಿಕವರಿ ನೆಪದಲ್ಲಿ ಇಲ್ಲಿನ ಕಾರ್ಖಾನೆಗಳು ರೈತರನ್ನು ಅನ್ಯಾಯ ಮಾಡುತ್ತಿವೆ. ಈಗಲಾದರೂ ಎಚ್ಚೆತ್ತು ಸರಕಾರ ಏಕರೂಪ ದರ ಕಲಬುರಗಿಗೂ ಅನ್ವಯಿಸುವಂತೆ ಮಾಡಲಿ.
-ಶರಣಬಸಪ್ಪ ಮಮಶೆಟ್ಟಿ , ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
ಕಬ್ಬಿನ ಬೆಲೆ ಮರುನಿಗದಿ ಮಾಡಿ
ಕಾರ್ಖಾನೆಗಳ ಜೊತೆಗೆ ಮಾತನಾಡಿ ಉತ್ತಮ ಬೆಲೆ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರಿಂದ ಆಳಂದನ ಭೂಸನೂರ ಕಾರ್ಖಾನೆ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಹಿಂಪಡೆದೆವು. ಈಗಾಗಲೇ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿರುವ ಬೆಲೆಯನ್ನು ಜಿಲ್ಲಾಡಳಿತ ಪುನರ್ ಪರಿಶೀಲಿಸಿ, ಭರವಸೆ ನೀಡಿದಂತೆ ಪರಿಷ್ಕೃತ ದರ ನಿಗದಿಪಡಿಸಬೇಕು.
-ಚಂದ್ರಶೇಖರ್ ಹಿರೇಮಠ , ಶ್ರಮಜೀವಿಗಳ ವೇದಿಕೆಯ ಅಧ್ಯಕ್ಷ
ಕಲಬುರಗಿ ಜಿಲ್ಲೆಯ ಎಲ್ಲ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 2,950 ರೂ.ಯಂತೆ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ಪೂರ್ತಿ ಹಣ ಸಂದಾಯಕ್ಕೆ ಒಪ್ಪಿಗೆ ನೀಡಿವೆ, ಇದಕ್ಕೆ ಹಲವು ರೈತರು ಒಪ್ಪಿಕೊಂಡಿದ್ದಾರೆ.
-ಪ್ರಿಯಾಂಕ್ ಖರ್ಗೆ, ಕಲಬುರಗಿ ಉಸ್ತುವಾರಿ ಸಚಿವ