ಅಂತರ್‌ರಾಷ್ಟ್ರೀಯ ಬೌದ್ಧ ಸಮ್ಮೇಳನ : 500ಕ್ಕೂ ಹೆಚ್ಚು ಮಂದಿ ಬೌದ್ಧ ದಮ್ಮ ಸ್ವೀಕಾರ
ಮೈಸೂರು : ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ದಮ್ಮ ಸ್ವೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಮಾನವ ಮೈತ್ರಿಗಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಅಂತರ್‌ರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ-2025 ನಡೆಯಿತು.
ಕಾರ್ಯಕ್ರಮವನ್ನು ಮಯಾನ್ಮಾರ್‌ನ ಸಾಸನ ವಿಪುಲಾಮ ಬುದ್ಧ ತರಬೇತಿ ಕೇಂದ್ರದ ಪನಿಂದ ಸಯಡೋ ಬಂತೇಜಿ ಉದ್ಘಾಟಿಸಿದರು. ವಿಯೇಟ್ನಾಂನ ಗೊಕ್ ಹೋನ್ ಬುದ್ಧ ವಿಹಾರದ ತಿಚ್‌ಮಿನ್‌ಹಾನ್ ಬಂತೇಜಿ ಧ್ವಜಾರೋಹಣ ನೆರವೇರಿಸಿದರು. ಬೈಲುಕುಪ್ಪೆಯ ದಮ್ಮಗುರು ನಳಂದ ವಿಶ್ವವಿದ್ಯಾನಿಕಯದ ಕರ್ಮ ರಾನ್ರಿಯನ್ ಪುಂಚೆ ತ್ರಿಪಿಠಕ ಅನಾವರಣ ಮಾಡಿದರು. ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಬಂತೇ ಮನೋರಖ್ಖಿತ ಅವರು ಬುದ್ಧ ಮತ್ತು ಆತನ ದಮ್ಮದ ಪ್ರತಿಕೃತಿ ಅನಾವರಣ ಮಾಡಿದರು.
ಈ ವೇಳೆ ಅಸ್ಸಾಂನ ಬುದ್ಧ ವಿಹಾರದ ಬಿಕ್ಕು ಸೋಬಾನ ಬಂತೆ, ತ್ರಿಪುರ ಬುದ್ಧ ವಿಹಾರದ ಬಿಕ್ಕು ಪಾನ್ಯಬೋಧಿ ಬಂತೆ, ಅರುಣಾಚಲ ಪ್ರದೇಶ ಬುದ್ಧ ವಿಹಾರದ ಬಂತೇ ವಿಸುದ್ಧಶೀಲ ಸೇರಿದಂತೆ ನಾಡಿನ ಹಲವಾರು ಬಂತೇಜಿಗಳ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ಬೌದ್ಧ ದಮ್ಮ ಸ್ವೀಕರಿಸಿದವು.
ಇದೇ ವೇಳೆ ಮಾತನಾಡಿದ ಬಂತೇಜಿಗಳು, ವಿಶ್ವವೇ ಬುದ್ಧರ ಕಡೆ ಮುಖ ಮಾಡುತ್ತಿದೆ. ಸಂಘರ್ಷದ ಹಾದಿ ಇರಬಾರದು. ಸಂವೇದನೆ ಇರಬೇಕು ಎಂದು ಬುದ್ಧ ಹೇಳಿದ್ದಾರೆ. ಕರುಣೆ, ಮೈತ್ರಿ ವರ್ತಮಾನ ಬದುಕಿಗೆ ಅಗತ್ಯವಾಗಿದೆ. ನಮ್ಮ ನಡೆ ಬುದ್ಧರ ಕಡೆ ಎಂಬ ಆಶಯದಲ್ಲಿ ಈ ಮಹಾ ಸಮ್ಮೇಳನ ಸಂಯೋಜನೆ ಮಾಡಲಾಗಿದೆ. ಇದು ಚಾರಿತ್ರಿಕವಾದ ಕಾರ್ಯಕ್ರಮವೂ ಹೌದು ಎಂದರು.
ಇದೇ ವೇಳೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಖಂಡಿಸಿದರು. ಎಲ್ಲರೂ ಶಾಂತಿಯಿಂದ ಇರಬೇಕು. ನಮಗೆ ಸಂಘರ್ಷ ಬೇಡ, ಶಾಂತಿ ಬೇಕು. ಎಲ್ಲ ಬಂಧುಗಳು ಸಂಯಮದಿಂದ ಶಾಂತಿಯಿಂದ ನಡೆದಾಗ ಮಾತ್ರ ನಾವು ವಿಶ್ವಮಾನವರಾಗಬಹುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ 8 ಗಂಟೆಗೆ ನಗರದ ಟೌನ್ ಹಾಲ್ ನಲ್ಲಿ ಸಮಾನಗೊಂಡ ಬೌದ್ಧ ಅನುಯಾಯಿಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ನೂರಡಿ ರಸ್ತೆ ಮಾರ್ಗವಾಗಿ ಮಹರಾಜ ಕಾಲೇಜು ಮಾರ್ಗವಾಗಿ ಮಹರಾಜ ಕಾಲೇಜು ಮೈದಾನದವರಗೆ ಬುದ್ಧನಡೆಗೆ ಒಂದು ಸಾರ್ಥಕ ನಡಿಗೆ ಧ್ಯೇಯದಡಿ ಸಹಸ್ರಾರು ಜನರು ಹೆಜ್ಜೆಹಾಕಿದರು.
ಮಂಗಳವಾದ್ಯ, ನಾದಸ್ವರ, ಡೋಲು ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಬೆಳ್ಳಿಯ ಸಾರೋಟಿನಲ್ಲಿ ಬುದ್ಧರ ವಿಗ್ರಹವನ್ನು ಇಟ್ಟು ಮೆರವಣಿಗೆ ಮೂಲಕ ತರಲಾಯಿತು. ಅಂಬೇಡ್ಕರ್ ಭಾವಚಿತ್ರ ಇರುವ ರಥವೂ ಗಮನ ಸೆಳೆಯಿತು. ಎಲ್ಲರೂ ಶ್ವೇತವರ್ಣ ವಸ್ತ್ರವನ್ನು ತೊಟ್ಟಿದ್ದರು. ರಸ್ತೆಯುದ್ದಕ್ಕೂ ಕೆಂಪು, ಹಳದಿ, ಕೇಸರಿ ಮತ್ತು ಬಿಳಿ ಬಣ್ಣಗಳನ್ನು ಒಳಗೊಂಡ ಪಂಚಶೀಲ ಬಾವುಟಗಳು ರಾರಾಜಿಸಿದವು.
ಸಾಮ್ರಾಟ್ ಅಶೋಕ ವೇದಿಕೆ, ನಳಂದ, ರಾಜ ಕಾನಿಷ್ಕ, ರಾಜ ಹರ್ಷವರ್ಧನ, ಬಾಬಾಸಾಹೇಬ್ ಅಂಬೇಡ್ಕರ್, ಲಾಫಿಂಗ್, ಬುದ್ದಂ ನಮಾಮಿ ಸೇರಿದಂತೆ ಹಲವು ಮಹನೀಯರ ಹೆಸರುಗಳನ್ನೊಳಗೊಂಡ ವೇದಿಕೆ ಹಾಕಲಾಗಿದ್ದು, ಒಂದೊಂದು ವೇದಿಕೆಯಲ್ಲೂ ವಿವಿಧ ಗಣ್ಯರಿಂದ ವಿಚಾರ ಸಂಕಿರಣ, ಗೋಷ್ಠಿಗಳು ನಡೆದವು. ನಾನಾ ಮಳಿಗೆಗಳಲ್ಲಿ ಬುದ್ಧನ ವಿಚಾರಗಳಿರುವ ಪುಸ್ತಕಗಳ ಮಾರಾಟ ಐದು ವೇದಿಕೆಗಳಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಿದವು.
ಸಮ್ಮೇಳನದ ಗೌರವಾಧ್ಯಕ್ಷ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸರ್ವಾಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ್ ಸಮ್ಮೇಳನದ ಉಸ್ತುವಾರಿಯನ್ನು ವಹಿಸಿದ್ದರು.
ಸಮ್ಮೇಳನದಲ್ಲಿ ವಿಯೆಟ್ನಾಂನ ಗೋಕ್‌ಹೋನ್ ಬುದ್ಧ ವಿಹಾರದ ತಿಚ್‌ಮಿನ್ ಹಾನ್, ಅರುಣಾಚಲ ಪ್ರದೇಶ ಬುದ್ಧವಿಹಾರದ ಭಂತೇ ವಿಸುದ್ಧಶೀಲ, ಕಲಬುರಗಿಯ ಬುದ್ಧವಿಹಾರದ ಭಂತೆ ವರಜ್ಯೋತಿ, ಲಾವೋಸ್ ಬುದ್ಧ ವಿಹಾರದ ರಾಂಡಿಸೋಟ್, ಬೈಲುಕುಪ್ಪೆನಳಂದ ವಿಶ್ವವಿದ್ಯಾನಿಲಯದ ದಮ್ಮ ಗುರು ರಾನ್ರಿಂನ್ ಪುಂಚೆ, ಕಾಮಗೆರೆ ಬುದ್ಧವಿಹಾರದ ಭಂತೆ ದಮ್ಮಪಾಲ, ಕೊಳ್ಳೇಗಾಲದ ಭಂತೆ ದಮ್ಮ ತಿಸ್ಸಾ, ಕಲಬುರಗಿಯ ಭಂತೆ ಅಮರಜ್ಯೋತಿ, ಭಂತೆ ಬೋಪ್ರ, ಇತರರು ಹಾಜರಿದ್ದರು.
ದಮ್ಮದ ಸಾರವನ್ನು ಪ್ರತಿಯೊಬ್ಬರೂ ಅರಿಯಬೇಕು
ಸರ್ವರನ್ನೂ ಸಮಾನರನ್ನಾಗಿ ಕಾಣುವ ಸರ್ವರನ್ನೂ ಸದಾಚಾರ ಸಂಪನ್ನರಾಗಿಸಿ ಪಂಚ ಶೀಲ ತತ್ವಗಳನ್ನು ಒಳಗೊಂಡ ಬೌದ್ಧ ದಮ್ಮದ ಸಾರವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಮಯಾನ್ಮಾರ್‌ನ ಸಾಸನ ವಿಪುಲಾಮ ಬುದ್ಧ ತರಬೇತಿ ಕೇಂದ್ರದ ಪನಿಂದ ಸುಂಡೋ ಹೇಳಿದ್ದಾರೆ.
ಬೌದ್ಧ ದಮ್ಮ ದ ತತ್ವಗಳು ಹೇಳುವಂತೆ ಪ್ರಾಣ ಹತ್ಯೆ ಮಾಡದೇ ಜೀವರಕ್ಷಣೆ ಮಾಡಬೇಕು. ಕಳ್ಳತನ ಮಾಡದೇ ಶೀಲವಂತರಾಗಿ ಬದುಕುವುದು, ದಾನ ಮಾಡುವುದು, ದುಶ್ಚಟಗಳಿಂದ ದೂರವಿರುವುದನ್ನು ಜಾಗೃತಿಯತ್ತ ಎಚ್ಚರದಿಂದ ಪಾಲನೆ ಮಾಡಬೇಕೆಂದು.
- ಭಂತೆ ಮನೋರಕ್ಖಿತ, ಕೊಳ್ಳೇಗಾಲದ ಜೇತವನ ಬುದ್ಧವಿಹಾರ