ಕೆರೆಗುಡಿಹಳ್ಳಿ ರಸ್ತೆ ಕೆಸರುಮಯ: ಸಂಚಾರಕ್ಕೆ ಪರದಾಟ
ವಿಜಯನಗರ, ಜು.2: ಹರಪನಹಳ್ಳಿ (ಕೆರೆಗುಡಿಹಳ್ಳಿ)ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಸಮೀಪದ ಕೆರೆಗುಡಿಹಳ್ಳಿ ಗ್ರಾಮದ ಜನರು ಮತ್ತು ಅಕ್ಕ ಪಕ್ಕದ ಊರಿನ ಜನತೆ ನಿತ್ಯ ಸಂಚಾರ ಮಾಡಲು ಸರಿಯಾದ ರಸ್ತೆ ಇಲ್ಲದೇ ಪರದಾಡುವಂತಾಗಿದೆ.
15 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಅರಸಿಕೆರೆ ಬಸವಣ್ಣ ಕೋಟೆ ಮುಖ್ಯರಸ್ತೆಯಿಂದ ಹೋಗುವ ಮಾರ್ಗ ಮಧ್ಯೆ ಸಿಗುವ ಕೋನಾಪುರದ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿದ್ದು ರೈತರು, ದ್ವಿಚಕ್ರ, ತ್ರಿಚಕ್ರ ಹಾಗೂ ಇತರ ವಾಹನಗಳ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ದಿನನಿತ್ಯ ಸಾವಿರಾರು ರೈತರು ತಮ್ಮ ಜಮೀನುಗಳಿಗೆ ಹೋಗುವಾಗ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಅಲ್ಲದೇ ಪ್ರಸಿದ್ಧ ದೇವಸ್ಥಾನ ಇಲ್ಲಿರುವುದರಿಂದ ಮಂಗಳವಾರ ಶುಕ್ರವಾರ ಸಾವಿರಾರು ಭಕ್ತರು ಹೋಗುವ ಸಂದರ್ಭದಲ್ಲಿ ಅನೇಕ ಅವಘಡಗಳು ಸಂಭವಿಸಿದ್ದು, ಇಲ್ಲಿನ ಅರ್ಚಕರು ರಸ್ತೆ ಸರಿಪಡಿಸುವಂತೆಒತ್ತಾಯಿಸಿದ್ದಾರೆ.
ಈಗಾಗಲೇ ಮುಂಗಾರು ಬಿತ್ತನೆಯ ಕಾರ್ಯ ಪ್ರಾರಂಭಗೊಂಡಿದ್ದು ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ. ಬಿತ್ತನೆಗಾಗಿ ಹೊಲ ಗದ್ದೆಗಳಿಗೆ ಗೊಬ್ಬರ ಬೀಜ ಬಿತ್ತುವ ಕೆಲಸಕ್ಕೆ ಬಂದ ಕೂಲಿಕಾರರನ್ನು ಕರೆದುಕೊಂಡು ಹೋಗಲು ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿನ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ತಮ್ಮ ಜಮೀನುಗಳಿಗೆ ಹೋಗುವುದಕ್ಕೂ ಹರಸಾಹಸ ಪಡಬೇಕಾಗಿದೆ. ಬಿತ್ತನೆ ಬೀಜ ರಸ ಗೊಬ್ಬರ ಸೇರಿ ಇತರ ವಸ್ತುಗಳನ್ನು ಸಾಗಿಸಲು ಸರಿಯಾದ ರಸ್ತೆ ಇಲ್ಲದೆ ರೈತರು ಮತ್ತು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರು ಸುಮಾರು 3 ಕಿಲೋಮೀಟರ್ ಉದ್ದದ ಕೆಸರುಗದ್ದೆಯಂತಹ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇನ್ನೂ ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು ದಿನ ನಿತ್ಯ ಕೂಲಿಕಾರರನ್ನು ಸಾಗಿಸುವಾಗ ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಕೂಡಲೇ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು.
-ಶಿವಣ್ಣ, ಕೆರೆಗುಡಿಹಳ್ಳಿ ಗ್ರಾಮದ ಮುಖಂಡ
ನಾವು ನಮ್ಮ ತಲೆ ಮಾರುಗಳಿಂದ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇತ್ತೀಚೆಗೆ ಈ ದಾರಿಯಲ್ಲಿ ವಾಹನ ಸವಾರರ ಸಂಖ್ಯೆ ಜಾಸ್ತಿಯಾಗಿದ್ದರಿಂದ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ನಾವು ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನಮಗೆ ರಸ್ತೆ ಸರಿಪಡಿಸಬೇಕು. ಇಲ್ಲವಾದ್ದಲ್ಲಿ ಭಾಗದ ರೈತರೆಲ್ಲರೂ ಸೇರಿ ಪ್ರತಿಭಟನೆ ಮಾಡುತ್ತೇವೆ.
-ಗುಂಡಗತ್ತಿ ನಾಗರಾಜ್, ಕೆರೆಗುಡಿಹಳ್ಳಿ ರೈತ