ಅತಂತ್ರ ಸ್ಥಿತಿಯಲ್ಲಿ ಕೊಪ್ಪಳ ಪದವಿ ವಿದ್ಯಾರ್ಥಿಗಳು
ದೊರೆಯದ ಮೂಲ ಅಂಕ ಪಟ್ಟಿ
ಕೊಪ್ಪಳ ಜಿಲ್ಲೆಯ ಪದವಿ ಕಾಲೇಜುಗಳು ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಿಂದ ಬೇರೆಯಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಆದರೆ ವಿದ್ಯಾರ್ಥಿಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ, ಇದೀಗ ಇನ್ನೊಂದು ಸಮಸ್ಯೆ ಎದುರಾಗಿದ್ದು ಬಳ್ಳಾರಿ ವಿಶ್ವವಿದ್ಯಾಲಯವು ಮೂಲ ಅಂಕಪಟ್ಟಿ ನೀಡದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಬಳ್ಳಾರಿ ವಿಶ್ವವಿದ್ಯಾಲನಿಯವು ಒಂದಲ್ಲ ಒಂದು ಎಡವಟ್ಟಿನಿಂದ ಸುದ್ದಿಯಲ್ಲಿ ಇರುತ್ತದೆ. ಒಂದು ಸೆಮಿಸ್ಟರ್‌ನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಬದಲು ಇನ್ನಾವುದೋ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ನೀಡುವುದು, ಪ್ರವೇಶ ಪತ್ರಿಕೆಯಲ್ಲಿ ಪರೀಕ್ಷೆಯ ಸಮಯ ಒಂದು ರೀತಿ, ಪರೀಕ್ಷಾ ವೇಳಾಪಟ್ಟಿಯಲ್ಲಿ ಇನ್ನೊಂದು ರೀತಿ ಹೀಗೆ ಎಡವಟ್ಟಂತೂ ಸಾಮಾನ್ಯವಾಗಿತ್ತು. ಕಳೆದ ಒಂದು ವರ್ಷದಿಂದ ಯಾವುದೇ ಸಮಸ್ಯೆ ಮಾಡಿಕೊಳ್ಳದೇ ಸ್ವಲ್ಪ ಸುಧಾರಿಸಿದ್ದ ವಿವಿ ಇದೀಗ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮೂಲ ಅಂಕ ಪಟ್ಟಿ ನೀಡದೆ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ಅರೋಪಗಳು ಕೇಳಿಬರುತ್ತಿವೆ.
ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳನ್ನು ಕೊಪ್ಪಳ ವಿಶ್ವವಿದ್ಯಾನಿಲಯ ಸ್ಥಾಪನೆ ಆದ ನಂತರ ಬಳ್ಳಾರಿಯ ವಿಶ್ವ ವಿಶ್ವವಿದ್ಯಾನಿಲಯದಿಂದ ಕೊಪ್ಪಳ ವಿಶ್ವವಿದ್ಯಾನಿಲಯ ಅಧೀನಕ್ಕೆ ಒಳಪಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗದಂತೆ ಬಳ್ಳಾರಿ ವಿವಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಅದೇ ವಿಶ್ವವಿದ್ಯಾನಿಲಯದಲ್ಲೇ ಮುಂದುವರಿಸಿ, ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳನ್ನು ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಸೇರಿಸಲಾಗಿತ್ತು. ಆದರೆ ಬಳ್ಳಾರಿ ವಿಶ್ವವಿದ್ಯಾನಿಲಯದಲ್ಲಿ ಓದಿದ ಮಕ್ಕಳ ಭವಿಷ್ಯ ಈಗ ಆತಂಕದಲ್ಲಿದೆ.
ಬಳ್ಳಾರಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಳೆದ ವರ್ಷ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಎಲ್ಲ ಸೆಮಿಸ್ಟರ್‌ಗಳ ಮೂಲ ಅಂಕಪಟ್ಟಿಯನ್ನು ನೀಡಿ ಮೂರನೇ ಸೆಮಿಸ್ಟರ್‌ನ ಮೂಲ ಅಂಕಪಟ್ಟಿ ನೀಡದೆ ಉಳಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಪ್ರೆಂಟಿಸಗಳಾಗಿ ಕೆಲಸ ಮಾಡಲು ಇಚ್ಛಿಸುವ ವಿದಾರ್ಥಿಗಳಿಗೆ ತೊಡಕಾಗಿದೆ.
ಕೆಲವೊಂದು ವಿದ್ಯಾಸಂಸ್ಥೆಗಳು ಮತ್ತು ಉದ್ಯೋಗ ನೀಡುವ ಕಂಪನಿಗಳು ಹಾಗೂ ಸರ್ಕಾರದ ಇಲಾಖೆಗಳು ಅಪ್ರೆಂಟೀಸ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮೂಲ ಅಂಕಪಟ್ಟಿಯನ್ನು ಕಡ್ಡಾಯವಾಗಿ ಕೇಳುತ್ತವೆ. ಇನ್ನು ಕೆಲವೊಂದಿಷ್ಟು ಸಂಸ್ಥೆಗಳಿಗೆ ಕೇವಲ ಆನ್ಲೈನ್ ಅಂಕಪಟ್ಟಿಯನ್ನು ಪ್ರಾಂಶುಪಾಲರಿಂದ ದೃಢೀಕರಿಸಿ ನೀಡದರೆ ಸಾಕಾಗುತ್ತದೆ. ಮೂಲ ಅಂಕಪಟ್ಟಿಯನ್ನು ನೀಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಮೂಲ ಅಂಕ ಪಟ್ಟಿ ತಡವಾಗಲು ಕಾರಣ ಅಂಕ ಪಟ್ಟಿಗಳ ತಪ್ಪು ಮುದ್ರಣ. ಈ ಹಿಂದೆ ಮೂರನೇ ಸೆಮಿಸ್ಟರ್ ನ ಅಂಕ ಪಟ್ಟಿಗಳು ಎಲ್ಲಾ ಕಾಲೇಜುಗಳಿಗೆ ಬಂದಿದ್ದವು. ಆದರೆ ಒಂದು ವಿಷಯವು ಅದರಲ್ಲಿ ನಮೂದಿಸಿರಲಿಲ್ಲ ಎಂದು ಅಂಕ ಪಟ್ಟಿಗಳನ್ನು ಎಲ್ಲಾ ಕಾಲೇಜುಗಳಿಂದ ಹಿಂಪಡೆಯಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಹೀಗೆ ಎಲ್ಲಾ ಸೆಮಿಸ್ಟರ್‌ಗಳ ಅಂಕ ಪಟ್ಟಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಲ್ಲ. ಕೆಲವೊಬ್ಬರಿಗೆ
ಆರನೇ ಸೆಮಿಸ್ಟರ್, ಇನ್ನು ಕೆಲವರಿಗೆ ನಾಲ್ಕನೇ ಸೆಮಿಸ್ಟರಿನ ಅಂಕ ಪಟ್ಟಿ ದೊರೆತಿಲ್ಲ. ನೂರು-ನೂರೈವತ್ತರಂತೆ ಅಂಕ ಪಟ್ಟಿಗಳು ಅಂಚೆ ಮುಖಾಂತರ ಬಂದು ತಲುಪುತ್ತಿವೆ ಎಂದು ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ವಿದ್ಯಾರ್ಥಿಗಳ ಬದುಕು ಅತಂತ್ರದಲ್ಲಿದ್ದು, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈಗಲಾದರೂ ಬಳ್ಳಾರಿ ವಿವಿ ಸಮಯಕ್ಕೆ ಸರಿಯಾಗಿ ಮೂಲ ಅಂಕಪಟ್ಟಿಯನ್ನು ನೀಡಬೇಕು ಎನ್ನುವುದು ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯವಾಗಿದೆ.
ವಾರ್ತಾ ಇಲಾಖೆಯಲ್ಲಿ ಉಚಿತ ತರಬೇತಿ(ಅಪ್ರೆಂಟಿಸ್)ಗೆ ಅರ್ಜಿ ಕರೆಯಲಾಗಿದ್ದು ನಾನು ಇದಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈ ಅರ್ಜಿಗೆ ಮೂಲ ಅಂಕಪಟ್ಟಿ ಕಡ್ಡಾಯವಾಗಿ ಬೇಕು ಅಂತ ಹೇಳುತ್ತಾರೆ. ಆದರೆ ನನಗೆ ಅಂಪಟ್ಟಿಯನ್ನು ನೀಡಿಲ್ಲ, ಕಾಲೇಜಿನಲ್ಲಿ ಕೇಳಿದರೆ ಇನ್ನು ಬಂದಿಲ್ಲ ಅಂತ ಹೇಳುತ್ತಾರೆ. ಇವಾಗ ನಾನು ಏನು ಮಾಡಬೇಕು ಎಂದು ತೋಚುತ್ತಿಲ್ಲ.
-ಕಿರಣ್ ವಾಲ್ಮೀಕಿ, ವಿದ್ಯಾರ್ಥಿ
ನಾನು ದೆಹಲಿಯ ಜೆಎನ್ಯು ವಿಶ್ವ ವಿದ್ಯಾನಿಲಯದಲ್ಲಿ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಅರ್ಜಿ ಸಲ್ಲಿಸುವ ಪ್ರಯತ್ನ ಮಾಡುತ್ತಿದ್ದೇನೆ. ಜೆಎನ್ಯು ವಿವಿಗೆ ಪ್ರವೇಶ ಪಡೆಯಲು ಮೂಲ ಅಂಕ ಪಟ್ಟಿ ಕಡ್ಡಾಯ. ಆದರೆ ನಮಗೆ ಮೂಲ ಅಂಕಪಟ್ಟಿಯನ್ನು ನೀಡಲಾಗಿಲ್ಲ. ಅರ್ಜಿ ಸಲ್ಲಿಸಲು ಕೇವಲ 15 ದಿನಗಳು ಮಾತ್ರ ಉಳಿದಿವೆ, ಇದರಿಂದ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ.
- ಶಿವಮೂರ್ತಿ, ವಿದ್ಯಾರ್ಥಿ
ನಾವು ಈಗಾಗಲೆ ಎಲ್ಲಾ ಅಂಕಪಟ್ಟಿಗಳನ್ನು ಎಲ್ಲಾ ಕಾಲೇಜುಗಳಿಗೆ ಅಂಚೆ ಮೂಲಕ ಕಳುಹಿಸಿದ್ದೇವೆ. ಇಂತಹ ಯಾವುದೇ ಸಮಸ್ಯೆ ನಮ್ಮಿಂದ ಆಗಿಲ್ಲ, ಒಂದು ವೇಳೆ ಯಾವುದಾದರು ವಿದ್ಯಾರ್ಥಿಗೆ ಅಂಕ ಪಟ್ಟಿ ಸಿಕ್ಕಿಲ್ಲ ಎಂದರೆ ನಾವು ಅದನ್ನು ಎರಡು ಮೂರು ದಿನಗಳಲ್ಲಿ ಸರಿಪಡಿಸುತ್ತೇವೆ.
- ಡಾ. ಎನ್.ಎಂ ಸಾಲಿ, ಕುಲಸಚಿವರು (ಮೌಲ್ಯಮಾಪನ ) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ