×
Ad

ಫ್ರೆಂಚ್ ಸೈನಿಕರ ಸಮಾಧಿಗಳಿಗೆ ಸಂರಕ್ಷಣೆ ಕೊರತೆ

ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪು ಜತೆ ಕೈಜೋಡಿಸಿದ್ದ ಸೈನಿಕರು

Update: 2025-09-08 13:04 IST

ಮಂಡ್ಯ: ಬ್ರಿಟಿಷರ ವಿರುದ್ಧ ಯುದ್ಧ ಸಾರಿದ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಯುದ್ಧಭೂಮಿಯಲ್ಲಿ ಹುತಾತ್ಮನಾದ ಏಕೈಕ ಸುಲ್ತಾನ ಟಿಪ್ಪು ಸುಲ್ತಾನ್ ಅವರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಶ್ರೀರಂಗಪಟ್ಟಣಕ್ಕೆ ಐತಿಹಾಸಿವಾಗಿ ಭಾರತದ ಇತಿಹಾಸಲ್ಲಿ ದೊಡ್ಡ ಸ್ಥಾನ ಇದೆ. ಇದಕ್ಕೆ ಪೂರಕವಾಗಿ ಪಕ್ಕದ ಪಾಂಡವಪುರಕ್ಕೂ ಸಂಬಂಧವಿದೆ. ಆದರೆ, ಇದನ್ನು ಕಡೆಗಣಿಸಲಾಗಿದೆ.

ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕಾದರೆ ನೆಪೋಲಿಯನ್ ಸೇರಿದಂತೆ ಇತರ ಯೂರೋಪಿಯನ್ ರಾಜರ ಸಹಕಾರವನ್ನು ಪಡೆದಿದ್ದರು. ಅವರಲ್ಲಿ ಡಚ್ಚರು, ಫ್ರೆಂಚರು ಪ್ರಮುಖರು. ಈ ಬಗ್ಗೆ ಈಗಲೂ ಕುರುಹುಗಳು ಇವೆ, ಇತಿಹಾಸದಲ್ಲೂ ದಾಖಲಾಗಿವೆ.

ಮುಖ್ಯವಾಗಿ ಬ್ರಿಟಿಷರ ವಿರುದ್ಧ ಟಿಪ್ಪುಹೋರಾಟದಲ್ಲಿ ಫ್ರೆಂಚ್ ಸರಕಾರದ ಸೈನಿಕರು ಶ್ರೀರಂಗಪಟ್ಟಣಕ್ಕೆ ಬಂದು ಕೈಜೋಡಿಸಿದರು, ಅವರಲ್ಲಿ ಹಲವರು ಹುತಾತ್ಮರಾದರು. ಅವರ ಸ್ಮರಣಾರ್ಥ ಸ್ಮಾರಕಗಳು ಶ್ರೀರಂಗಪಟ್ಟಣ ಮತ್ತು ಪಕ್ಕದ ಪಾಂಡವಪುರದಲ್ಲಿ ಇವೆ. ಆದರೆ, ಈ ಪಾಂಡವಪುರದ ಸ್ಮಾರಕಗಳನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ಸುಮಾರು 200 ವರ್ಷಗಳಿಗೂ ಹೆಚ್ಚು ಹಳೆಯದಾದ ಫ್ರೆಂಚ್ ಸೈನಿಕರ ಮತ್ತು ಅಧಿಕಾರಿಗಳ ಸಮಾಧಿಗಳು ಹಾಗೂ ಮದ್ದಿನ ಮನೆ ಸಂರಕ್ಷಣೆಯಾಗದೆ ಅನಾಥವಾಗಿವೆ.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಹೊಡೆದೊಡಿಸಲು ಟಿಪ್ಪು ಸುಲ್ತಾನ್ ಫ್ರೆಂಚ್‌ರ ಸಹಾಯ ಪಡೆಯುತ್ತಾರೆ. ಫ್ರೆಂಚ್ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡಲು ಪಾಂಡವಪುರ ಸಮೀಪದ ಕುಂತಿಬೆಟ್ಟದಲ್ಲಿ ನೆಲೆಸಿರುತ್ತಾರೆ. ಹಾಗಾಗಿ ಈ ಬೆಟ್ಟಕ್ಕೆ ಫ್ರೆಂಚ್ ರಾಕ್ಸ್ ಎಂತಲೂ ಮತ್ತು ಪಾಂಡವಪುರದ ಪೂರ್ವ ಹೆಸರು ಫ್ರೆಂಚ್ ರಾಕ್ಸ್ ಎಂಬುದು ಇತಿಹಾದಲ್ಲಿ ದಾಖಲಾಗಿದೆ. ಈಗಲೂ ಪಾಂಡವಪುರದದಲ್ಲಿ ಫ್ರೆಂಚ್ ರಾಕ್ ಸರಕಾರಿ ಪ್ರಾಥಮಿಕ ಶಾಲೆ ಇದೆ.

ಬ್ರಿಟಿಷರ ವಿರುದ್ಧ ಟಿಪ್ಪುಸುಲ್ತಾನ್ ಜತೆ ಕೈಜೋಡಿಸಲು ಬಂದಿದ್ದ ಫ್ರೆಂಚ್ ಸೈನಿಕರು ಮತ್ತು ಅವರ ಕುಟುಂಬಕ್ಕೆ ಪಾಂಡವಪುರದ ಪುರಾಣ ಪ್ರಸಿದ್ಧವಾದ ಕುಂತಿಬೆಟ್ಟದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು ಟಿಪ್ಪುಸುಲ್ತಾನ್. ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಫ್ರೆಂಚ್ ಸೈನಿಕರು ಮತ್ತು ಅಧಿಕಾರಿಗಳ ಸುಮಾರು 25ಕ್ಕೂ ಸಮಾಧಿಗಳು ಪಾಂಡವಪುರ ಪಟ್ಟಣದ ಹಾರೋಹಳ್ಳಿ ಬಳಿ ಇವೆ. ಇಲ್ಲಿನ ಒಂದು ಸಮಾಧಿಯು ಶಾಸನದ ಪ್ರಕಾರ 24 ವರ್ಷದ ಒಬ್ಬ ಮಿಲಿಟರಿ ಅಧಿಕಾರಿಯ ಪತ್ನಿಯ ಸಮಾಧಿಯಾಗಿದ್ದು, ಆ ಮಹಿಳೆ ಮಗುವಿನ ಜನ್ಮಕೊಡುವ ಸಂದರ್ಭದಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಮಡಿದ ಫ್ರೆಂಚ್ ಸೈನಿಕರು ಸುಮಾರು 25 ಸಮಾಧಿಗಳ ಬಗ್ಗೆ ಯಾರೂ ಹೇಳುವವರೂ ಇಲ್ಲ. ಕೇಳುವವರೂ ಇಲ್ಲ. ಈ ಸಮಾಧಿಗಳಿಗೆ ಬಳಸಿರುವ ಕಲ್ಲುಗಳು, ಶಾಸನಗಳನ್ನು ಕೆಲವರು ಕಿತ್ತುಕೊಂಡು ಹೋಗಿದ್ದರೆ, ಮತ್ತೆ ಕೆಲವರು ಈ ಸಮಾಧಿಗಳನ್ನು ದನ ಕಟ್ಟುವ ಕೊಟ್ಟಿಗೆಗಾಗಿ ಮಾಡಿಕೊಂಡಿದ್ದಾರೆ. ಈ ಸಮಾಧಿಗಳನ್ನು ಗಿಡಗಂಟಿಗಳು ಸುತ್ತುಕೊಂಡಿವೆ. ವಿಪರ್ಯಾಸವೆಂದರೆ, ಇವು ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಗೆ ಸೇರಿಸಿಲ್ಲವೆಂಬುದು.

ಪಾಂಡವಪುರದ ಕೆಆರ್‌ಎಸ್ ಮುಖ್ಯ ರಸ್ತೆಯ ಬಿಇಒ ಕಚೇರಿ ಸಮೀಪ ಟಿಪ್ಪು ಸುಲ್ತಾನ್ ಕಾಲದ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ, ಕಬ್ಬಿಣವನ್ನು ಬಳಸದೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುವ ಮದ್ದುಗುಂಡು ಸಂಗ್ರಹಾಲಯ(ಮದ್ದಿನ ಮನೆ) ಇದೆ. ಈಗ ಇದು ಶಿಥಿಲಾವಸ್ಥೆಯಲ್ಲಿದ್ದು, ದನಕರು ಕಟ್ಟುವ, ಹುಲ್ಲಿನ ಬಣವೆಗಳ ಸ್ಥಳವಾಗಿದೆ. ಶ್ರೀರಂಗಪಟ್ಟಣದಲ್ಲಿರುವ ಇದೇ ರೀತಿಯ ಮದ್ದಿನ ಮನೆಗಳನ್ನು ಕೇಂದ್ರ ಪುರಾತತ್ವ ಸರ್ವೇಕ್ಷಣಾಲಯ ಸಂರಕ್ಷಿತ ಸ್ಮಾರಕವೆಂದು ಘೋಷಣೆ ಮಾಡಿ ಸಂರಕ್ಷಿಸಲಾಗಿದೆ. ಆದರೆ, ಪಾಂಡವಪುರದ ಮದ್ದುಗುಂಡು ಸಂಗ್ರಹಾಲಯ ಅನಾಥವಾಗಿ ಬಿದ್ದಿದೆ. ಮದ್ದಿನ ಮನೆ ಸಂರಕ್ಷಣೆ ಮತ್ತು ಸುರಕ್ಷತೆಯನ್ನು ಪುರಾತತ್ವ ಇಲಾಖೆಯ ಹೊಣೆಗಾರಿಕೆಯಾಗಿದೆ. ಅದನ್ನು ಸಂರಕ್ಷಿಸಬೇಕಾಗಿದೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೈಜೋಡಿಸಿ ಮಂಡಿದ ಫ್ರೆಂಚ್ ಸೈನಿಕರ, ಅಧಿಕಾರಿಗಳ, ಅವರ ಕುಟುಂಬದವರ ಸಮಾಧಿಗಳನ್ನು ಸಂರಕ್ಷಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕಾದ ರಾಜ್ಯದ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಈಗಲಾದರೂ ಈ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು.

ಯಾವುದೇ ಪ್ರಾಚೀನ ಸ್ಮಾರಕ ಅಥವಾ ಪಳೆಯುಳಿಕೆಗಳನ್ನು ಆಡಳಿತ ವ್ಯವಸ್ಥೆ ಸಂರಕ್ಷಿಸಬೇಕು. ನಮ್ಮ ಪಾಂಡವಪುರ ತಾಲೂಕಿಗೆ ಫ್ರೆಂಚ್ ರಾಕ್ಸ್ ಎಂಬ ಹೆಸರು ಬಂದಿರುವುದು ಫ್ರೆಂಚ್ ಸೈನಿಕರ ತ್ಯಾಗದಿಂದ. ಅವರ ನೆನಪಿಗೆ ಪಟ್ಟಣದ ಹಾರೋಹಳ್ಳಿ ಬಳಿ ಇರುವ ಫ್ರೆಂಚ್ ಸೈನಿಕರ ಸಮಾಧಿಯನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಜಿಲ್ಲಾಡಳಿತ, ಸರಕಾರ ಮಾಡಬೇಕಿದೆ.

-ಪ್ರೊ.ವೆಂಕಟಪ್ಪ,ಇತಿಹಾಸ ಪ್ರಾಧ್ಯಾಪಕರು, ಪಾಂಡವಪುರ

ಒಂದು ಸಾಮಾಜಿಕ ವ್ಯವಸ್ಥೆಯೊಳಗೆ ಬದುಕುವ ಜನಸಮೂಹ ತನ್ನ ಪರಂಪರೆ ಮತ್ತು ಸಂಸ್ಕೃತಿಯ ಅಂಗ ಮತ್ತು ಅಪೂರ್ವ ಸಾಕ್ಷ್ಯ ಎಂದು ತಿಳಿಯಬೇಕು. ನಮ್ಮಲ್ಲಿ ಇಂತಹ ತಿಳಿವಳಿಕೆಯ ಕೊರತೆ ಇರುವುದರಿಂದಲೇ ಅದೆಷ್ಟೋ ಪ್ರಾಚೀನ ಪಳೆಯುಳಿಕೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಕಾಪಾಡಿಕೊಂಡು ಹೋಗುವ ಕೆಲಸ ಆಗಿಲ್ಲ. ಪಟ್ಟಣದ ಬಳಿ ಇರುವ ಫ್ರೆಂಚ್ ಸೈನಿಕರ ಸಮಾಧಿಗಳು ಹಾಗೂ ಮದ್ದಿನ ಮನೆಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆ ಕ್ರಮವಹಿಸಬೇಕಿದೆ.

-ಪ್ರೊ.ಬೋರೇಗೌಡ ಚಿಕ್ಕಮರಳಿ, ಸಾಹಿತಿ, ಪಾಂಡವಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಕುಂಟನಹಳ್ಳಿ ಮಲ್ಲೇಶ್

contributor

Similar News