ಕೃಷಿ ವಿಜ್ಞಾನಿಯಾಗಿ ಆಯ್ಕೆಯಾದ ಮಂಡ್ಯದ ರೈತನ ಮಗ
ಮಂಡ್ಯ, ಆ.10: ಜಿಲ್ಲೆಯ ಸಾಮಾನ್ಯ ರೈತನ ಮಗ ಸರಕಾರಿ ಶಾಲೆಯಲ್ಲಿ ಕಲಿತು ದೇಶದ ಪ್ರತಿಷ್ಠಿತ ಸರಕಾರಿ ಸಂಸ್ಥೆಯಲ್ಲಿ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂಬ ಭ್ರಮೆಯಲ್ಲಿರುವ ಪೋಷಕರಿಗೆ ಈ ಯುವಕನ ಸಾಧನೆ ಮಾದರಿಯಾಗಿದೆ.
ಮಳವಳ್ಳಿ ತಾಲೂಕು ಯತ್ತಂಬಾಡಿ ಗ್ರಾಮದ ರೈತ ಹೊನ್ನೇಗೌಡ ಮತ್ತು ಪ್ರೇಮ ದಂಪತಿ ಪುತ್ರ ಡಾ.ಎಚ್.ಗುಣಶೇಖರ್, ಕೇಂದ್ರ ರೇಷ್ಮೆ ಮಂಡಳಿಯಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಡೆಸಿದ ಲಿಖಿತ ಪರೀಕ್ಷೆ ಮತ್ತು ಅಂತಿಮ ಆಯ್ಕೆ ಪಟ್ಟಿ ಎರಡರಲ್ಲೂ ಅಖಿಲ ಭಾರತ 1ನೇ ರ್ಯಾಂಕ್ ಗಳಿಸಿ ಪ್ರತಿಷ್ಠಿತ ಹುದ್ದೆ ಅಲಂಕರಿಸುತ್ತಿದ್ದಾರೆ.
ಗುಣಶೇಖರ್ ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತನ್ನ ಹುಟ್ಟೂರು ಯತ್ತಂಬಾಡಿ ಸರಕಾರಿ ಶಾಲೆಯಲ್ಲಿ ಕಲಿತಿದ್ದು, ಸಮೀಪದ ಕೆ.ಎಂ.ದೊಡ್ಡಿಯ ಭಾರತಿ ಕಾಲೇಜಿನಲ್ಲಿ ಪಿಯು ಕಲಿತಿದ್ದಾರೆ. ನಂತರ, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಹೈದರಾಬಾದ್‌ನ ಪ್ರೊ.ಜಯಶಂಕರ್ ತೆಲಂಗಾಣ ಕೃಷಿ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ(ಎನ್‌ಡಿಆರ್‌ಐ)ನಿಂದ ಪಿಎಚ್‌ಡಿ ಪದವಿ ಗಳಿಸಿದ್ದಾರೆ.
ಗುಣಶೇಖರ್ ಐಸಿಎಆರ್, ಯುಜಿಸಿನಿಂದ ಜೂನಿಯರ್, ಸೀನಿಯರ್ ರೀಸರ್ಚ್ ಫೆೆಲೋಶಿಪ್ ಸೇರಿದಂತೆ ಹಲವಾರು ಪ್ರತಿಷ್ಠಿತ ಫೆೆಲೋಶಿಪ್‌ಗಳನ್ನು ಪಡೆದಿದ್ದಾರೆ. ಅವರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದು, ವಿವಿಧ ಶೈಕ್ಷಣಿಕ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನೆ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅತ್ಯುತ್ತಮ ಮೌಖಿಕ ಮತ್ತು ಪೋಸ್ಟರ್ ಪ್ರಸ್ತುತಿಗಳಿಗಾಗಿ ಹಲವು ಬಹು ಪುರಸ್ಕಾರಗಳು ಇವರಿಗೆ ಸಂದಿವೆ.
ರೈತ ಕುಟುಂಬದ ಹಿನ್ನೆಲೆಯಲ್ಲಿ ಬಂದ ನಾನು ಕೃಷಿಗೆ ಸಂಬಂಧಿಸಿದ ವಿಭಾಗದಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ಎನಿಸಿದೆ. ಕೃಷಿ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸುವ ಕಾರ್ಯವನ್ನು ಮಾಡುತ್ತೇನೆ ಎನ್ನುತ್ತಾರೆ ಗುಣಶೇಖರ್.
ಮಣ್ಣಿನಿಂದ ಮಾರ್ಕೆಟ್‌ವರೆಗೆ ಅಪ್ಡೇಟ್ ಮಾಡುತ್ತಾ ಹೋಗಬೇಕು. ಬೆಳೆದಂತಹ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದರೆ, ರೈತರು ನಿಜವಾಗಿಯೂ ಕೃಷಿ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸರಕಾರಗಳು ಕಾರ್ಯೋನ್ಮುಖವಾಗಬೇಕು. ಯಾವ ಕಾಲಕ್ಕೆ ಯಾವ ಬೆಳೆ ಹಾಕಬೇಕು? ಯಾವ ಭೂಮಿಗೆ ಯಾವ ಬೆಳೆ ಹೊಂದಿಕೆಯಾಗುತ್ತದೆ? ಎಂಬ ಬಗ್ಗೆ ಮಾಹಿತಿ ನೀಡಬೇಕು. ಎಲ್ಲ ರೈತರೂ ಒಂದೇ ಬೆಳೆ ಬೆಳೆಯುವುದು ಸರಿಯಲ್ಲ ಎಂದು ಗುಣಶೇಖರ್ ಸಲಹೆ ನೀಡುತ್ತಾರೆ.
ಸರಕಾರಿ ಶಾಲೆಗಳನ್ನು ಅಳಿಯುವುದು ಸರಿಯಲ್ಲ. ಏಕೆಂದರೆ, ಸೂಕ್ತ ಶಿಕ್ಷಣ, ತರಬೇತಿ ಹೊಂದಿದ ಶಿಕ್ಷಕರು ಸರಕಾರಿ ಶಾಲೆಗಳಲ್ಲಿ ಇದ್ದಾರೆ. ಸರಕಾರಿ ಶಾಲೆ ಶಿಕ್ಷಕರು ಹೆಚ್ಚು ಜ್ಞಾನವಂತರಿದ್ದಾರೆ. ಆದರೆ, ಸರಕಾರ ಎಲ್ಲ ಶಾಲೆಗಳಿಗೂ ಅಗತ್ಯವಿರುವ ಶಿಕ್ಷಕರ ನೇಮಕ ಮತ್ತು ಮೂಲಸೌಕರ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳು ಮೊಬೈಲ್, ಡಿಜಿಟಲ್‌ನಿಂದ ದೂರವಿದ್ದು, ಅಗತ್ಯವಿದ್ದಾಗ ಮಾತ್ರ ಬಳಸಿಕೊಳ್ಳಬೇಕು. ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ಇದು ನನ್ನ ಯಶಸ್ಸಿಗೆ ಕಾರಣವಾಯಿತು.
-ಡಾ.ಎಚ್.ಗುಣಶೇಖರ್, ಕೃಷಿ ವಿಜ್ಞಾನಿ
ನಮ್ಮ ಗ್ರಾಮೀಣ ಶಾಲೆಯಲ್ಲಿ ಓದಿದ ಯುವಕ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಪಡುವ ವಿಚಾರ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇರುವುದಿಲ್ಲ ಎಂಬ ಭಾವನೆ ಪೋಷಕರಲ್ಲಿ ದೂರವಾಗಬೇಕು. ಏಕೆಂದರೆ, ಮೆರಿಟ್ ಆಧಾರದಲ್ಲಿ ನೇಮಕವಾಗುವ ಸರಕಾರಿ ಶಿಕ್ಷಕರು ಉತ್ತಮ ಜ್ಞಾನವುಳ್ಳವರಾಗಿರುತ್ತಾರೆ.
-ಮಹೇಶ, ಅತಿಥಿ ಶಿಕ್ಷಕ, ಸರಕಾರಿ ಪ್ರೌಢಶಾಲೆ, ಯತ್ತಂಬಾಡಿ