ಪ.ಜಾತಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ‘ಮನ್ಸ’ ಉಪಜಾತಿ ನಿರ್ಲಕ್ಷ್ಯ
ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನ್ ದಾಸ್ ಇವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ಮೇ 5ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಸರಕಾರಕ್ಕೆ ನೀಡುವುದಾಗಿ ತಿಳಿಸಿದೆ.ಸದ್ರಿಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದ ಯಾವುದೇ ಜಾತಿಯ ಹೆಸರನ್ನು ಉಪಜಾತಿ ಕಾಲಂನಲ್ಲಿ ನಮೂದಿಸಲು ಆಸ್ಪದ ನೀಡಲಿಲ್ಲ. ನಮೂದಿಸದಿದ್ದಲ್ಲಿ ಸಮೀಕ್ಷೆಯು ಸಂಪೂರ್ಣವಾಗುವುದೂ ಇಲ್ಲ. ಹಾಗಂತ ಯಾರೂ ಆತಂಕಪಡುವ ಅಗತ್ಯವಿಲ್ಲ. ಸಮೀಕ್ಷಾ ನಮೂನೆಯ ಉಪಜಾತಿ ಕಾಲಂನಲ್ಲಿ ಮನ್ಸ ಎಂದು ನಮೂದಿಸಿ, ಆವರಣದ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಜಾತಿ ಎಂಬುದಾಗಿ ಬರೆಸಿ. ಆದರೆ ಯಾವುದೇ ಕಾರಣಕ್ಕೂ ಸಮೀಕ್ಷೆಗೆ ಬರುವ ಸಿಬ್ಬಂದಿಯ ಒತ್ತಡಕ್ಕೆ ಮಣಿದೋ ಅಥವಾ ಇನ್ಯಾರದ್ದೋ ಮಾತು ಕೇಳಿ ಮನ್ಸ ಹೊರತು ಯಾವುದೇ ಬೇರೆ ಹೆಸರನ್ನು ಬರೆಯಿಸಬೇಡಿ.
ಒಂದು ವೇಳೆ ತಮ್ಮದಲ್ಲದ ಇನ್ಯಾವುದೇ ಹೆಸರನ್ನು ಉಪಜಾತಿ ಎಂದು ಬರೆಸಿದಲ್ಲಿ, ಮುಂದೆ ಮನ್ಸ ಸಮುದಾಯದ ಜನರಿಗೆ ಜಾತಿ ದೃಢೀಕರಣ ಪತ್ರ ಪಡೆಯಲೂ ತೊಂದರೆ ಆಗುವುದಲ್ಲದೆ, ಸರಕಾರಿ ಉದ್ಯೋಗ ಪಡೆಯಲೂ ಅನನುಕೂಲ ಆಗುವುದು ಖಂಡಿತ. ಎಲ್ಲಕಿಂತ ಹೆಚ್ಚಾಗಿ ಉಪಜಾತಿ ಮನ್ಸ ಎಂಬುದಾಗಿ ನಮೂದಿಸಿದಲ್ಲಿ, ಅದು ಸಮೀಕ್ಷಾ ವರದಿಯಲ್ಲಿ ದಾಖಲಾಗಿ ಮುಂದೆ ಜಾತಿ ಹೆಸರು ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಬಹಳ ಜಾಗರೂಕರಾಗಿ, ಎಚ್ಚರದಿಂದ ಮಾಹಿತಿಗಳನ್ನು ದಾಖಲಿಸಬೇಕಿದೆ.
ಕರ್ನಾಟಕ ಸರಕಾರ ಮಾನ್ಯ ಸುಪ್ರೀಂ ಕೋರ್ಟಿನ ಆದೇಶದ ಅನುಸಾರ ಪರಿಶಿಷ್ಟ ಜಾತಿಗಳ ಒಳಗೆ ಒಳಮೀಸಲಾತಿ ಜಾರಿ ಮಾಡುವ ಉದ್ದೇಶದಿಂದ ಈಗಾಗಲೇ ಪ್ರಕಟಣೆ ನೀಡಿ ಸಮೀಕ್ಷೆಗಾಗಿ ನಮೂನೆಯನ್ನು ರಚಿಸಿದ್ದು, ಆ ಸಮೀಕ್ಷಾ ನಮೂನೆಯ ಪ್ರತಿಯು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿದ್ದು ಸರಕಾರದ ಕಚೇರಿಗಳಿಗೂ ಬಂದಿರುತ್ತದೆ.
ಈ ಸಮೀಕ್ಷಾ ನಮೂನೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿದ್ದು, ಮೊಬೈಲ್ ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಆನಂತರ ಸಮೀಕ್ಷೆಗೆ ಬರುವ ಸಿಬ್ಬಂದಿ ಪರಿಶಿಷ್ಟ ಜಾತಿಗಳ ಮನೆ ಮನೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹ ಮಾಡುತ್ತಾರೆ. ಈ ಮೊಬೈಲ್ ಆ್ಯಪ್‌ನಲ್ಲಿ ಒಂದು ಸಾರಿ ದಾಖಲಿಸಲಾದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.
ಈಗ ಈ ಸಮೀಕ್ಷಾ ನಮೂನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಅದರ ಉಪಜಾತಿ ಕಾಲಂನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಪರಿಶಿಷ್ಟ ಜಾತಿಗಳವರು ಪಡೆದುಕೊಂಡಿರುವ ಜಾತಿ ದೃಢೀಕರಣ ಪತ್ರದಲ್ಲಿ ನಮೂದಿಸಲಾಗಿರುವ ಜಾತಿ ಹೆಸರನ್ನು ಜಾತಿ ಕಾಲಂನಲ್ಲೂ, ಉಪಜಾತಿ ಕಾಲಂನಲ್ಲಿ ತಮ್ಮ ಮೂಲಜಾತಿ/ಉಪಜಾತಿ ಹೆಸರನ್ನು ನಮೂದಿಸತಕ್ಕದ್ದು ಎಂಬುದಾಗಿದೆ. ಉದಾಹರಣೆಗೆ: ಯಾವುದೇ ಪರಿಶಿಷ್ಟ ಜಾತಿಯ ಜನರು ತಾವು ಆದಿದ್ರಾವಿಡ, ಆದಿಕರ್ನಾಟಕ ಅಥವಾ ಆದಿ ಆಂಧ್ರ ಎಂಬ ಹೆಸರುಗಳಲ್ಲಿ ಜಾತಿ ದೃಢೀಕರಣ ಪತ್ರ ಪಡೆದುಕೊಂಡಿದ್ದಲ್ಲಿ, ಅಂಥವರು ಜಾತಿ ಕಾಲಂನಲ್ಲಿ ಅವರು ಪಡೆದುಕೊಂಡಿರುವ ಜಾತಿ ದೃಢೀಕರಣ ಪತ್ರದಲ್ಲಿರುವ ಜಾತಿ ಹೆಸರನ್ನು ನಮೂದಿಸಿ, ಉಪಜಾತಿ ಕಾಲಂನಲ್ಲಿ ತಮ್ಮ ನಿಜವಾದ ಮೂಲಜಾತಿ/ಉಪಜಾತಿ ಹೆಸರನ್ನು ನಮೂದಿಸತಕ್ಕದ್ದು. ಇಲ್ಲಿ ‘ಉಪಜಾತಿ’ ಹೆಸರು ಎಂದರೆ, ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳ ಪೈಕಿ ಆದಿದ್ರಾವಿಡ, ಆದಿಕರ್ನಾಟಕ ಹಾಗೂ ಆದಿಆಂಧ್ರ ಈ ಮೂರು ಹೆಸರುಗಳನ್ನು ಹೊರತುಪಡಿಸಿ ಉಳಿದ 98 ಜಾತಿ ಹೆಸರುಗಳಲ್ಲಿ ತಮ್ಮದು ಯಾವುದೆಂದು ಗುರುತಿಸಿ, ಸದ್ರಿ ನಮೂನೆಯಲ್ಲಿ ನಮೂದಿಸತಕ್ಕದ್ದು ಎಂದಿದೆ (ಉದಾ: ಹೊಲೆಯ, ಮಾದಿಗ, ಮುಂಡಾಲ, ಮೇರ, ನಲಿಕೆ, ಪಂಬದ, ಮಾದರ್, ಚಾಂಡಾಲ..... ಇತ್ಯಾದಿಯಾಗಿ). ಒಂದು ವೇಳೆ ಈ ಮೇಲೆ ತಿಳಿಸಿದಂತೆ ಆದಿದ್ರಾವಿಡ, ಆದಿಕರ್ನಾಟಕ, ಅಥವಾ ಆದಿ ಆಂಧ್ರ ಜಾತಿ ಎಂಬುದಾಗಿ ನಮೂದಿಸಿದವರು ತಮ್ಮ ಉಪಜಾತಿ ಹೆಸರನ್ನು ಈ 98 ಜಾತಿಗಳಲ್ಲಿ ಇರುವುದನ್ನು ಬಿಟ್ಟು ಈಗ ಇಲ್ಲಿ ಸಮಸ್ಯೆಯಾಗಿರುವುದು ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಇರುವ ಜಾತಿಗಳವರಿಗೆ. ಅದೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಇತರ ಮಲೆನಾಡು ಜಿಲ್ಲೆಗಳಲ್ಲಿ ವಾಸವಾಗಿರುವ ಮನ್ಸ ಎಂಬ ಜಾತಿಯ ಜನರಿಗೆ ಆಯೋಗದ ತಪ್ಪು ನಿರ್ಧಾರದಿಂದ ಬಹಳ ದೊಡ್ಡ ಅನ್ಯಾಯವಾಗುತ್ತದೆ. ಈ ತುಲುನಾಡಿನ ಮೂಲದ ಹಾಗೂ ತಮ್ಮ ಜಾತಿಯ ಸಾಂಸ್ಕೃತಿಕ ನಾಯಕರಾದ ಕಾನದ-ಕಟದ ಇವರನ್ನು ಸತ್ಯಸಾರಮಾನಿ ದೈವಗಳು ಎಂದು ಆರಾಧಿಸಿಕೊಂಡು ಬರುತ್ತಿರುವ ಈ ಮನ್ಸ ಜಾತಿಯ ಜನರು ತುಲುನಾಡಿನಲ್ಲಿ ತಮ್ಮ ಮೂಲಜಾತಿ ಹೆಸರು ಮನ್ಸ ಎಂದರೆ ಕೀಳು, ಆದಿದ್ರಾವಿಡ ಎಂದರೆ ಮೇಲು ಎಂಬ ಭ್ರಮೆಯಿಂದ ತಮ್ಮ ಮೂಲ ಅಸ್ಮಿತೆಯನ್ನು ಮರೆಮಾಚಿ, ತಮ್ಮದಲ್ಲದ ಆದಿದ್ರಾವಿಡ ಎಂಬುದಾಗಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಾಸವಾಗಿರುವ ಮನ್ಸ ಜನರು ಆದಿಕರ್ನಾಟಕ ಎಂಬ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ಪಡೆದುಕೊಂಡಿರುವುದೇ ಇವತ್ತಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ. ಮನ್ಸ ಎಂಬ ಜಾತಿ ಹೆಸರು ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಇರುವುದರಿಂದ ಈ ಮನ್ಸ ಜಾತಿ ಜನರು ಅನಿವಾರ್ಯವಾಗಿ ತಮ್ಮದಲ್ಲದ ಬೇರೆ ಬೇರೆ ಹೆಸರುಗಳಿಂದ ಜಾತಿ ದೃಢೀಕರಣ ಪತ್ರ ಪಡೆಯಲೂ ಒಂದು ಕಾರಣ.
ಒಂದಲ್ಲ ಒಂದು ದಿನ ಈ ಆದಿದ್ರಾವಿಡ ಅಥವಾ ಆದಿಕರ್ನಾಟಕ ಎಂಬುದಾಗಿ ಜಾತಿ ದೃಢೀಕರಣ ಪತ್ರ ಪಡೆಯುತ್ತಿರುವ ಮನ್ಸ ಜಾತಿ ಜನರಿಗೆ ಒಳಮೀಸಲಾತಿ/ಮೀಸಲಾತಿ ಪಡೆದುಕೊಳ್ಳುವಲ್ಲಿ ಗಂಭೀರ ಸಮಸ್ಯೆ ಎದುರಾಗಲಿದೆ ಎಂಬ ಅಪಾಯದ ಮುನ್ಸೂಚನೆಯನ್ನು 30 ವರ್ಷಗಳ ಹಿಂದೆಯೇ ನಿರೀಕ್ಷಿಸಿ ಸಮಾಜಮುಖಿ ಚಿಂತನೆ ಇರುವ ಪಿ.ಡೀಕಯ್ಯ ಹಾಗೂ ನಾವು ಒಂದೆಡೆ ಕಲೆತು ಒಂದಷ್ಟು ಸಮಾಲೋಚನೆಗಳನ್ನು ಮಾಡಿ, ಸಮಾಜದ ಹಿರಿಯರ ಮಾರ್ಗದರ್ಶನಗಳನ್ನು ಪಡೆದು ಸುಮಾರು 5-6 ವರ್ಷಗಳ ಕಾಲ ಕ್ಷೇತ್ರ ಕಾರ್ಯ ನಡೆಸಿ, ನಮ್ಮ ಸಮುದಾಯಕ್ಕೆ ಮುಂದೆ ಬರಲಿರುವ ಸಮಸ್ಯೆಗಳ ಗಂಭೀರತೆಯನ್ನು ಜಾತಿ ಜನರಿಗೆ ಮನವರಿಕೆ ಮಾಡಿ ಮನ್ಸ ಜಾತಿಯ ಅಸ್ತಿತ್ವದ ಬಗ್ಗೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ, ಈ ನಮ್ಮ ಮೂಲ ಜಾತಿ ಹೆಸರನ್ನು ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುತ್ತೇವೆ. ನಮ್ಮ ಪ್ರಯತ್ನಗಳಿಗೆ ಹಲವಾರು ಪ್ರತಿರೋಧಗಳನ್ನು ಅಂದಿನಿಂದಲೂ ಇಂದಿನವರೆಗೂ ಎದುರಿಸುತ್ತಲೇ ಬಂದಿರುತ್ತೇವೆ. ನಮ್ಮ 30 ವರ್ಷಗಳ ಹಿಂದಿನ ನಿರೀಕ್ಷೆಯಂತೆ ಈಗ ಆದಿದ್ರಾವಿಡ ಮತ್ತು ಆದಿಕರ್ನಾಟಕ ಹೆಸರಲ್ಲಿ ಜಾತಿ ದೃಢೀಕರಣ ಪತ್ರ ಪಡೆಯುತ್ತಿರುವ ನಮ್ಮ ಮನ್ಸ ಜಾತಿಯ ಜನರಿಗೆ ತಮ್ಮ ಮೂಲಜಾತಿ ಹೆಸರನ್ನು ವಿಧಿಯಿಲ್ಲದೆ ನಮೂದಿಸುವ ಸನ್ನಿವೇಶ ಸೃಷ್ಟಿಯಾಗಿದೆ...! ಅದೂ ನಮ್ಮ ನಿರೀಕ್ಷೆಯಂತೆ ಒಳಮೀಸಲಾತಿ ಜಾರಿಗಾಗಿ..!! ಏಕೆಂದರೆ ಆದಿದ್ರಾವಿಡ, ಆದಿಕರ್ನಾಟಕ ಹಾಗೂ ಆದಿಆಂಧ್ರ ಇವು ಯಾವುವೂ ಪರಿಶಿಷ್ಟ ಜಾತಿಗಳ ಪರಿವ್ಯಾಪ್ತಿಗೆ ಬರುವುದೇ ಇಲ್ಲ. ಈ ಮೂರೂ ಹೆಸರುಗಳು ಬೇರೆ ಬೇರೆ ಉಪಜಾತಿಗಳ ಒಂದೊಂದು ಗುಂಪು ಎಂಬ ಪರಿಜ್ಞಾನ ನಮಗೆ ಮೊದಲೇ ಇತ್ತು. ಅಂದು (1950ರ ಸಂದರ್ಭ) ಪರಿಶಿಷ್ಟ ಜಾತಿಗಳ ಬಗ್ಗೆ ಕ್ಷೇತ್ರ ಕಾರ್ಯ ನಡೆಸಿರುವವರ ತಪ್ಪು ಗ್ರಹಿಕೆಯಿಂದಾಗಿ ಅಥವಾ ಇನ್ಯಾರದ್ದೋ ಒತ್ತಡಕ್ಕೆ ಮಣಿದೋ ಈ ಮೇಲೆ ಹೇಳಿದಂತೆ ಆದಿದ್ರಾವಿಡ, ಆದಿಕರ್ನಾಟಕ ಹಾಗೂ ಆದಿಆಂಧ್ರ ಇವುಗಳು ಜಾತಿ ಹೆಸರಾಗಿ ಆಕಸ್ಮಿಕವಾಗಿ ಸೇರ್ಪಡೆಗೊಂಡಿದ್ದಾವೆ. ಆದರೆ ಈ ಸತ್ಯದ ಅರಿವಾಗಲು ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಜನರಿಗೆ 75 ವರ್ಷಗಳೇ ಬೇಕಾಯಿತು.
ಈ ಒಳಮೀಸಲಾತಿ ಜಾರಿಗಾಗಿ ಸಮೀಕ್ಷಾ ನಮೂನೆ ತಯಾರು ಮಾಡುವ ಮೊದಲೇ ನಮ್ಮ ಸಂಘಟನೆಯು ಆಯೋಗದ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಸಮೀಕ್ಷೆ ಸಂದರ್ಭದಲ್ಲಿ ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೇ ಇರುವ ಜಾತಿ ಹೆಸರನ್ನೂ ನಮೂದಿಸಲು ಆಸ್ಪದ ನೀಡಬೇಕೆಂದು ಮನವಿ ಮಾಡಿದ್ದಾಗ, ಆಗಬಹುದೆಂಬ ಭರವಸೆಯನ್ನು ನೀಡಿದ್ದರೂ, ನಮ್ಮ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಸಮೀಕ್ಷಾ ನಮೂನೆಯಲ್ಲಿ ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೆ ಬಿಟ್ಟು ಹೋಗಿರುವ ಜಾತಿಗಳ ಹೆಸರನ್ನು ನಮೂದಿಸಲು ಅವಕಾಶವೇ ಕಲ್ಪಿಸದೆ ನಿರ್ಲಕ್ಷ್ಯ ಮಾಡಲಾಗಿದೆ.
ನೂರಾರು ವರ್ಷಗಳಿಂದ ತಮ್ಮದೇ ಆದ ಸಾಂಸ್ಕೃತಿಕ ಅನನ್ಯತೆ ಮತ್ತು ಸಾಮಾಜಿಕ ಆಚರಣೆಗಳಿಂದ ಗುರುತಿಸಿಕೊಂಡು ಬದುಕಿ ಬಾಳಿದ ಒಂದು ಜಾತಿಯನ್ನು ಸರಕಾರದ ಪಟ್ಟಿಯಲ್ಲಿ ಇಲ್ಲ ಎಂಬ ಒಂದೇ ಕಾರಣಕ್ಕೆ ಹೊರಗಿಡುವುದು, ಶತಮಾನಗಳಿಂದ ತನ್ನದೇ ಅಸ್ಮಿತೆ ಇರುವ ಒಂದು ಜಾತಿಯನ್ನು ಸಂಪೂರ್ಣವಾಗಿ ಸಮಾಜದ ಮುಖ್ಯವಾಹಿನಿಗೆ ಬರದಂತೆ ತಡೆದು ಈ ಜಾತಿಗೆ ಕಾನೂನುಬದ್ಧವಾಗಿ ಹಾಗೂ ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲಾ ಹಕ್ಕು ಮತ್ತು ಅಧಿಕಾರಗಳನ್ನು ಕಸಿದುಕೊಂಡು ಈ ಜಾತಿಯನ್ನೇ ನಾಶಮಾಡಿ ಇಡೀ ಜನಾಂಗವನ್ನೇ ಅತಂತ್ರದ ಸ್ಥಿತಿಗೆ ತರುವುದೇ ಈ ಒಳಮೀಸಲಾತಿ ಆಯೋಗದ ಉದ್ದೇಶವೋ ಏನೋ ಎಂಬ ಅನುಮಾನ ಬರುತ್ತಿದೆ. ಈಗಾಗಲೇ ಈ ವಿಷಯವನ್ನು ಸರಕಾರದ ಗಮನಕ್ಕೂ ತರುವ ಎಲ್ಲಾ ಪ್ರಯತ್ನಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಾ ಇದೆ. ಸಮೀಕ್ಷಾ ನಮೂನೆಯಲ್ಲಿ ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಜಾತಿ ಹೆಸರನ್ನು ನಮೂದಿಸಲು ಒಂದು ಪ್ರತ್ಯೇಕ ಸಂಕೇತ ಸೂಚಕ ಸಂಖ್ಯೆಯನ್ನು (ಕೋಡ್) ನೀಡಿ ಎಲ್ಲರಿಗೂ ಒಳಮೀಸಲಾತಿಯ ಲಾಭ ಪಡೆಯುವಂತಾದರೆ ಈ ಸಮೀಕ್ಷೆಯನ್ನು ನಮ್ಮ ಸಂಘಟನೆಯು ಸ್ವಾಗತಿಸುತ್ತದೆ. ಇಲ್ಲದಿದ್ದಲ್ಲಿ ಇಡೀ ಸಮೀಕ್ಷೆಯನ್ನು ನಾವು ವಿರೋಧಿಸುತ್ತೇವೆ ಮತ್ತು ಖಂಡಿಸುತ್ತೇವೆ. ಆಯೋಗ ಹಾಗೂ ಸರಕಾರ ನಮ್ಮ ಬೇಡಿಕೆಯನ್ನು ಮನ್ನಣೆ ಮಾಡುತ್ತದೆ ಎಂಬ ಭರವಸೆಯನ್ನು ನಾವು ಇನ್ನೂ ಇಟ್ಟುಕೊಂಡಿದ್ದೇವೆ. ಹಾಗಾಗಿ ಸಮೀಕ್ಷೆ ಸಂದರ್ಭದಲ್ಲಿ ಯಾವುದೇ ಅನುಮಾನಗಳು ಬಂದಲ್ಲಿ ಅಥವಾ ಸಮೀಕ್ಷೆಗೆ ಬಂದ ಸಿಬ್ಬಂದಿ ತಾವುಗಳು ಹೇಳಿದ ದಾಖಲೆಗಳನ್ನು ನಮೂದಿಸಲು ನಿರಾಕರಿಸಿದಲ್ಲಿ ತಕ್ಷಣ ಈ ಕೆಳಗೆ ನೀಡಿರುವ ಮನ್ಸ ಸಂಘಟನೆಯ ನಾಯಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.
ತುಲುನಾಡ್ ಮನ್ಸ ಸಮಾಜ ಸೇವಾ ಸಂಘ(ರಿ.)
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:
ಅಚ್ಯುತ ಸಂಪಿಗೆ:8861531789; ಎಂ.ಶಾಂತಾರಾಮ್: 9964397424;
ವೆಂಕಣ್ಣ ಕೊಯ್ಯೂರು:9686593688;
ರಮೇಶ್ ಬೋಧಿ:9448255062;
ಸಂಜೀವ ಆರ್.:9880039158;
ಹರಿಯಪ್ಪ ಮುತ್ತೂರು:6361387985;
ಉದಯ ಗೋಳಿಯಂಗಡಿ :9686474660; ಆನಂದ ಕೊಪ್ಪ:8073988783.