ವ್ಯಾವಹಾರಿಕ ಜ್ಞಾನಕ್ಕೆ ವೇದಿಕೆಯಾದ ಮಠ್ಠಳ್ಳಿ ಸರಕಾರಿ ಶಾಲೆಯ ಮಕ್ಕಳ ಸಂತೆ
ಭಟ್ಕಳ: ಶಿಕ್ಷಣದ ಗಡಿಗಳನ್ನು ವಿಸ್ತರಿಸಿ ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು ಬೋಧಿಸುವ ನಿಟ್ಟಿನಲ್ಲಿ, ಮಠ್ಠಳ್ಳಿ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಜನಮನಸೂರೆಗೊಂಡು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತಂದ ಯಶಸ್ವಿ ಕಾರ್ಯಕ್ರಮವಾಗಿದೆ.
ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಶಿಕ್ಷಣ ಇಲಾಖೆ, ಶಾಲಾ ಆಡಳಿತ ಮಂಡಳಿ ಮತ್ತು ಸಮುದಾಯದ ಸಹಕಾರದೊಂದಿಗೆ ಈ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳಲ್ಲಿ ವ್ಯಾಪಾರ ನೈಪುಣ್ಯ, ಲಾಭ-ನಷ್ಟದ ತತ್ವ, ಸಂವಹನ ಕೌಶಲ್ಯ ಹಾಗೂ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲು ಈ ವಿನೂತನ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿತ್ತು.
ಮಕ್ಕಳ ವ್ಯಾಪಾರ ಕೌಶಲ್ಯ ಮತ್ತು ನೈಪುಣ್ಯ ಪ್ರದರ್ಶನ: ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹತ್ತಿರ ಸಿಗುವ ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಧಾನ್ಯಗಳು, ಮನೆಮದ್ದಿನ ತಿಂಡಿಗಳು, ಮಜ್ಜಿಗೆ ಮುಂತಾದವುಗಳನ್ನು ಮಾರಾಟ ಮಾಡಿದರು. ಸಾಮಾನ್ಯ ದಿನಬಳಕೆ ವಸ್ತುಗಳ ಮಾರಾಟದ ಮೂಲಕ ಲಾಭ-ನಷ್ಟದ ಪರಿಕಲ್ಪನೆ ಹಾಗೂ ಗ್ರಾಹಕರೊಂದಿಗೆ ಸಂವಹನ ಮಾಡುವುದರ ಮಹತ್ವವನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ನಡೆಯಿತು. ಜಂಕ್ ಫುಡ್ ಮಾರಾಟಕ್ಕೆ ಅವಕಾಶ ಇರದಂತೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲಾಗಿತ್ತು, ಇದರಿಂದ ಪರಿಸರ ಸ್ನೇಹಿ ಮನೋಭಾವವನ್ನೂ ಮಕ್ಕಳಿಗೆ ಬೆಳೆಸಲು ಪ್ರಯತ್ನಿಸಲಾಯಿತು.
ಈ ಸಂತೆಯು ಶಿಕ್ಷಕರು, ಪಾಲಕರು, ಊರ ನಾಗರಿಕರು, ಹಳೆ ವಿದ್ಯಾರ್ಥಿಗಳು, ಪಂಚಾಯತ್ ಸದಸ್ಯರು ಸೇರಿದಂತೆ ಸಮುದಾಯದ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅವರಿಂದ ವಸ್ತುಗಳನ್ನು ಖರೀದಿಸುವ ಮೂಲಕ ಪಾಲಕರು ಮತ್ತು ಊರ ನಾಗರಿಕರು ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಜಯಶ್ರೀ ಆಚಾರ್ಯ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ರವಿ ನಾಯ್ಕ, ವಿದ್ಯಾ ನಾಯ್ಕ, ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಅನಂತ ನಾಯ್ಕ, ಉಪಾಧ್ಯಕ್ಷೆ ಶೈಲಾ ನಾಯ್ಕ, ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಶಿಕ್ಷಕರಾದ ಗಂಗಾ ಮೊಗೇರ, ಗಜಾನ ನಾಯ್ಕ, ಲತಾ ನಾಯ್ಕ, ವಿಜಯ ಕುಮಾರ, ದೀಪಾ ದೇವಾಡಿಗ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಹೊಸ ಆಯಾಮ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಾಠ ಪುಸ್ತಕದ ಪಯಣಕ್ಕಿಂತಲೂ ನೈಜ ಜೀವನದಲ್ಲಿ ನೇರವಾಗಿ ಕಲಿಯುವ ಅನುಭವವನ್ನು ನೀಡುತ್ತವೆ. ಪಾಠ ಶಾಲೆಯಲ್ಲಿ ಕಲಿತ ಬುದ್ಧಿಯನ್ನು ಬದುಕಿನ ಪ್ರತಿಯೊಂದು ಹಂತದಲ್ಲಿ ಉಪಯೋಗಿಸುವ ಮಾರ್ಗವನ್ನು ಈ ಮಕ್ಕಳ ಸಂತೆ ನೀಡಿದ ಪರಿ ಮೆಚ್ಚುಗೆಗೆ ಪಾತ್ರವಾಗಿದೆ.
ಇಂತಹ ವಿದ್ಯಾ ಪ್ರಯೋಗಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಲ್ಲಿ ಜಾರಿಗೆ ಬಂದು, ಮಕ್ಕಳ ಬುದ್ಧಿವಂತಿಕೆ, ಸಂವಹನ ಕೌಶಲ್ಯ ಹಾಗೂ ಸ್ವಾವಲಂಬಿತ ಜೀವನ ಪದ್ಧತಿಗೆ ಪೂರಕವಾಗಲಿ ಎಂಬುದು ಸಮುದಾಯದ ಆಶಯವಾಗಿದೆ.