×
Ad

ಪಶ್ಚಿಮ ಘಟ್ಟ, ಕರಾವಳಿಯಲ್ಲಿ ಪಾತರಗಿತ್ತಿಗಳ ವಲಸೆ!

Update: 2025-05-16 12:36 IST

ಪಶ್ಚಿಮ ಘಟ್ಟದಿಂದ ವಲಸೆ ಹೊರಟ ಕ್ರೋ ಪ್ರಭೇದದ ಚಿಟ್ಟೆಗಳು ದಾರಿಮಧ್ಯೆ ಮರಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು.

ಚಿತ್ರ: ವಿಶ್ವಜೀತ್ ಕದಂ

ಉಡುಪಿ: ಕೆಲವು ದಿನಗಳಿಂದ ದಕ್ಷಿಣ ಭಾರತಾದ್ಯಂತ ವಿವಿಧ ಪ್ರಭೇದಗಳ ಚಿಟ್ಟೆಗಳ ವಲಸೆ ಪ್ರಕ್ರಿಯೆ ಆರಂಭಗೊಂಡಿದೆ. ಲಕ್ಷಾಂತರ ಸಂಖ್ಯೆಯ ಚಿಟ್ಟೆಗಳು ಕರ್ನಾಟಕದ ಕರಾವಳಿಯ ದಕ್ಷಿಣದಿಂದ ಉತ್ತರದ ದಿಕ್ಕಿಗೆ ಹಾಗೂ ಪಶ್ಚಿಮ ಘಟ್ಟದಿಂದ ಬಯಲು ಸೀಮೆಯ ಕಡೆ ಪ್ರಯಾಣ ಬೆಳೆಸಿವೆ.

ಕರ್ನಾಟಕ ಕರಾವಳಿಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ‘ಕಾಮನ್ ಎಮಿಗ್ರಾಂಟ್’ ಪ್ರಭೇದದ ಚಿಟ್ಟೆ ಹಾಗೂ ಬೆಂಗಳೂರು ಭಾಗದಲ್ಲಿ ಪಶ್ಚಿಮ ಘಟ್ಟದಿಂದ ಬಯಲು ಸೀಮೆ/ಪೂರ್ವಘಟ್ಟಕ್ಕೆ ‘ಕಾಮನ್ ಎಮಿಗ್ರಾಂಟ್’, ‘ಕಾಮನ್ ಕ್ರೋ’ ಹಾಗೂ ‘ಬ್ಲೂ ಟೈಗರ್ಸ್‌’ ಪ್ರಭೇದದ ಚಿಟ್ಟೆಗಳು ಮಿಶ್ರವಾಗಿ ವಲಸೆ ಹೊರಟಿರುವುದು ಕಂಡುಬಂದಿದೆ.

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವುದು ಈ ಪ್ರಭೇದದ ಚಿಟ್ಟೆಗಳ ಜೀವನದಲ್ಲಿ ಪ್ರತಿವರ್ಷ ನಡೆಯುವ ವಿದ್ಯಮಾನಗಳು. ಇವುಗಳು ವಲಸೆಯ ಮಧ್ಯೆ ಸಿಗುವ ಹೂವುಗಳ ಮಕರಂದ ಹಾಗೂ ತೇವಾಂಶವಿರುವ ಮಣ್ಣಿನಿಂದ ಲವಣಾಂಶವನ್ನು ಗುಂಪಾಗಿ ಹೀರಿಕೊಂಡು ಮುಂದೆ ಸಾಗುತ್ತವೆ. ಅಲ್ಲದೆ ಕೆಲವು ಕಡೆಗಳಲ್ಲಿ ಈ ಚಿಟ್ಟೆಯು ತನ್ನ ಆಹಾರ ಸಸ್ಯಗಳಲ್ಲಿ ಮೊಟ್ಟೆಗಳನ್ನು ಇಡುತ್ತಿರುವುದು ಕೂಡ ದಾಖಲಾಗಿದೆ. ಸಂಜೆ ನಂತರ ತನ್ನ ಪಯಣವನ್ನು ನಿಲ್ಲಿಸುವ ಚಿಟ್ಟೆಯು ಮರ, ಗಿಡಗಳ ಎಲೆಯಲ್ಲಿ ವಿಶ್ರಾಂತಿ ಪಡೆದು ಮರುದಿನ ಬೆಳಗ್ಗೆ ಸೂರ್ಯೋದಯದ ಬಳಿಕ ಮತ್ತೆ ತನ್ನ ಹಾರಾಟ ಮುಂದುವರಿಸುತ್ತವೆ.

ಬೆಂಗಳೂರಿನಲ್ಲಿ ಚಿಟ್ಟೆಗಳ ಹಿಂಡು: ಬ್ಲೂ ಟೈಗರ್ ಹಾಗೂ ಕಾಮನ್ ಕ್ರೋ ಪ್ರಭೇದದ ಚಿಟ್ಟೆಗಳು ಮುಂಗಾರು ಮಳೆಯಿಂದ ತಪ್ಪಿಸಿಕೊಳ್ಳಲು ಅಥವಾ ಹವಾಮಾನ ವೈಪರೀತ್ಯದಿಂದ ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟಗಳಿಗೆ ವಲಸೆ ಹೋಗಿ ಸಂತಾನೋತ್ಪತ್ತಿ ಮಾಡಿ ಮತ್ತೆ ಮಳೆ ಕಡಿಮೆಯಾದ ಬಳಿಕ ಅಕ್ಟೋಬರ್‌ನಲ್ಲಿ ಪಶ್ಚಿಮ ಘಟ್ಟಗಳಿಗೆ ಮರಳುತ್ತವೆ. ಇದು ಹೆಚ್ಚಾಗಿ ಪ್ರತೀ ವರ್ಷವೂ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನಡೆಯುತ್ತಿರುತ್ತವೆ.

ಅದೇ ರೀತಿ ಕಾಮನ್ ಎಮಿಗ್ರಾಂಟ್ ಚಿಟ್ಟೆ ಕೂಡ ವಲಸೆ ಹೋಗುತ್ತದೆ. ಇದೇ ಕಾರಣದಿಂದ ಅದಕ್ಕೆ ‘ಎಮಿಗ್ರೆಂಟ್’ ಎಂಬ ಹೆಸರು ಬಂದಿದೆ. ಈ ಮೂರು ಪ್ರಭೇದದ ಚಿಟ್ಟೆಗಳ ವಲಸೆ ಪ್ರಕ್ರಿಯೆ ಸದ್ಯ ಬೆಂಗಳೂರು ಭಾಗದಲ್ಲಿ ಕಂಡುಬರುತ್ತಿದೆ. ಒಂದು ನಿಮಿಷಕ್ಕೆ 150-300 ಚಿಟ್ಟೆಗಳು ಹಿಂಡು ಹಿಂಡು ಆಗಿ ಹಾರಾಡುತ್ತಿರುವುದು ಕಾಣಸಿಕ್ಕಿವೆ. ಈ ಚಿಟ್ಟೆಗಳು ಎತ್ತರದಲ್ಲಿ ಹಾರುತ್ತಿರುವುದರಿಂದ ಇವು ಪಶ್ಚಿಮ ಘಟ್ಟದಿಂದ ಬಯಲುಸೀಮೆ ಹಾಗೂ ಬೆಂಗಳೂರು ಮೂಲಕ ಪೂರ್ವ ಘಟ್ಟಕ್ಕೆ ಹೋಗುವುದು ದೃಢಪಡುತ್ತದೆ ಎಂದು ಚಿಟ್ಟೆ ತಜ್ಞರು ತಿಳಿಸಿದ್ದಾರೆ.

ಕರಾವಳಿಯ ವಲಸೆ ಕುತೂಹಲ: ಇತ್ತ ನಮ್ಮ ಕರಾವಳಿ ಭಾಗದಲ್ಲಿ ಕಳೆದ 20 ದಿನಗಳಿಂದ ಕಾಮನ್ ಎಮಿಗ್ರಾಂಟ್ ಚಿಟ್ಟೆಗಳು ತಂಡೋಪತಂಡವಾಗಿ ದಕ್ಷಿಣದಿಂದ ಉತ್ತರ ದಿಕ್ಕಿನ ಕಡೆಗೆ ವಲಸೆ ಹೊರಟಿರುವ ದೃಶ್ಯ ಕಂಡುಬಂದಿದೆ. ಕೆಲ ದಿನಗಳ ಹಿಂದೆ ಅಲ್ಲಲ್ಲಿ ಸುರಿದ ಮಳೆಯ ನಂತರ ಈ ಚಿಟ್ಟೆಗಳು ಪಯಣ ಹೊರಟಿದ್ದು, ಪಶ್ಚಿಮ ಘಟ್ಟ, ಅರಬೀ ಸಮುದ್ರ ತೀರ ಹಾಗೂ ನಗರ ಪ್ರದೇಶಗಳ ಮಧ್ಯೆ ಸಾಗುತ್ತಿವೆ. ಮುಂಗಾರು ಪೂರ್ವ ಮಳೆಯ ಬಳಿಕ ಇವು ಮುಂಗಾರು ಮಳೆ ಬರುವ ಮಾರ್ಗದಲ್ಲಿ ಸಾಗುತ್ತವೆ. ಇವು ಮುಂದೆ ಸಾಗುತ್ತಿದ್ದಂತೆ ಹಿಂದಿನಿಂದ ಮುಂಗಾರು ಮಳೆ ಪ್ರವೇಶವಾಗುತ್ತದೆ ಎಂಬುದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

ಚಿಟ್ಟೆಗಳ ವಲಸೆ ಕುರಿತು ಕೆಲವು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಕರಾವಳಿಯಲ್ಲಿ ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೋಗುವ ಕಾಮನ್ ಎಮಿಗ್ರಾಂಟ್ ಎಲ್ಲಿಗೆ ಸಾಗುತ್ತಿದೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಇವು ಪಶ್ಚಿಮ ಘಟ್ಟದಿಂದ ಪೂರ್ವಘಟ್ಟಕ್ಕೆ ಹೋಗುವ ಚಿಟ್ಟೆಗಳ ಹಾಗೆ ಎತ್ತರದಲ್ಲಿ ಹಾರಾಡುತ್ತಿಲ್ಲ. ಬದಲಿಗೆ ಇವು ಕೆಳಸ್ತರದಲ್ಲಿ ಹಾರಾಡುತ್ತ ವಲಸೆ ಹೋಗುತ್ತಿವೆ. ಆದುದರಿಂದ ಈ ಪಯಣ ಸಾಕಷ್ಟು ಕುತೂಹಲ ಹಾಗೂ ಅಧ್ಯಯನಕ್ಕೆ ಕಾರಣವಾಗಿದೆ.

‘ಕಾಮನ್ ಎಮಿಗ್ರಾಂಟ್’ ಚಿಟ್ಟೆ!

‘ಕಾಮನ್ ಎಮಿಗ್ರಾಂಟ್’ ಕನ್ನಡದಲ್ಲಿ ಇದನ್ನು ‘ಅಲೆಮಾರಿ’ ಎಂದು ಹೆಸರಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಕಟೋಪ್ಸಿಲಿಯಾ ಪೋಮೊನಾ. ಪೆರಿಡೆ ಕುಟುಂಬಕ್ಕೆ ಸೇರಿದ ಈ ಚಿಟ್ಟೆಯ ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿ ಅಥವಾ ಹಸುರು ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ ಇದು ವರ್ಷದ ಎಲ್ಲ ಋತುವಿನಲ್ಲೂ ಕಂಡುಬರುತ್ತವೆೆ. ಇದರ ರೆಕ್ಕೆಯ ಅಳತೆ 55-88 ಮೀ.ಮೀ. ಕಾಸಿಯಾ(ತಂಗಡಿ ಗಿಡ)ಜಾತಿಯ ಕಕ್ಕೆಮರ/ಕೊಂದೆಮರ(ವೈಜ್ಞಾನಿಕ ಹೆಸರು- ಕಾಸಿಯಾ ಫಿಸ್ತುಲಾ), ತಗಡೆ(ತುಳುವಿನಲ್ಲಿ ಆನೆ ತೊಜಂಕು), ಮುಟ್ಟುಗೆ ಇದರ ಆಹಾರ ಸಸ್ಯವಾಗಿದ್ದು, ಇವುಗಳಲ್ಲೇ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆೆ. ಇವು ಚಿತ್ರಾಂಗಿ ಗಿಡ, ಬುಗುಡಿ ಗಿಡ, ದಾಸ ವಾಳ ಹೂವುಗಳ ಮಕರಂದವನ್ನು ಹೀರುತ್ತವೆ

‘ಕಾಮನ್ ಎಮಿಗ್ರಾಂಟ್ ಚಿಟ್ಟೆ ಕರಾವಳಿಯಲ್ಲಿ ಪ್ರತಿವರ್ಷ ವಲಸೆ ಹೋಗುವುದು ಕಂಡುಬರುತ್ತದೆ. ಇದು ಪಶ್ಚಿಮಘಟ್ಟದ ಕಡೆಗೆ ಹೋಗದೆ ಕರಾವಳಿ ತೀರದಲ್ಲೇ ಸಾಗುತ್ತದೆ. ಮಹಾರಾಷ್ಟ್ರ ಅಥವಾ ಗುಜರಾತ್‌ನ ಕಡೆ ಇದು ಪ್ರಯಾಣ ಹೋಗಬಹುದು. ಮುಂಗಾರು ಪೂರ್ವದ ಮಳೆಯಿಂದ ಈ ಚಿಟ್ಟೆಯ ಆಹಾರ ಸಸ್ಯಗಳು ಉತ್ತಮವಾಗಿ ಬೆಳೆದಿರುತ್ತದೆ. ಆ ಕಾರಣಕ್ಕಾಗಿ ಇವು ಅತ್ತ ಹೋಗುತ್ತಿರಬಹುದು. ಇದರ ಬಗ್ಗೆ ನಿಖರ ಅಧ್ಯಯನ ನಡೆದಿಲ್ಲ. ಈ ಪಯಣ ಸಾಕಷ್ಟು ಕುತೂಹಲ ಮೂಡಿಸಿದೆ’

-ಸಮ್ಮಿಲನ್ ಶೆಟ್ಟಿ, ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್, ಬೆಳುವಾಯಿ

2017ರಲ್ಲೂ ವಲಸೆ ಹೊರಟಿತ್ತು!

ಇದೇ ರೀತಿ 2017ರ ಮೇ ತಿಂಗಳಲ್ಲೂ ಕಾಮನ್ ಎಮಿಗ್ರಾಂಟ್ ಚಿಟ್ಟೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ದಕ್ಷಿಣದಿಂದ ಉತ್ತರಕ್ಕೆ ದೊಡ್ಡ ಪ್ರಮಾಣದಲ್ಲಿ ವಲಸೆ ಹೊರಟಿರುವುದು ಕಂಡುಬಂದಿತ್ತು.

ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಮಿಗ್ರಾಂಟ್ ಚಿಟ್ಟೆಗಳು ಗುಳೆ ಹೊರಟಿದ್ದವು. ಇಷ್ಟು ಪ್ರಮಾಣದ ಚಿಟ್ಟೆಗಳ ವಲಸೆ ಚಿಟ್ಟೆ ತಜ್ಞರನ್ನು ಸಾಕಷ್ಟು ಕುತೂಹಲಕ್ಕೆ ಒಳಪಡಿಸಿತ್ತು. ಪಕ್ಷಿಗಳ ವಲಸೆಯನ್ನು ಕೇಳಿರುವ ಕರಾವಳಿ ಜನತೆಗೆ ಚಿಟ್ಟೆಗಳ ವಲಸೆ ಆಗ ಹೊಸ ವಿಷಯವಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೂಲ್ಯ

contributor

Similar News