×
Ad

ಬಹುದಿನಗಳ 'ಪ್ರತ್ಯೇಕ ಕಲ್ಯಾಣ ಕರ್ನಾಟಕ'ಕ್ಕೆ ಸಚಿವಾಲಯ ಗ್ರೀನ್ ಸಿಗ್ನಲ್

ಹಲವು ವರ್ಷಗಳ ಹೋರಾಟಕ್ಕೆ ಜಯ, ಖಾಲಿ ಹುದ್ದೆಗಳೀಗ ನೆನಪಾಗುವುದೇ

Update: 2025-09-17 15:05 IST

ಕಲಬುರಗಿ, ಸೆ.16: ಬಹುದಿನಗಳಿಂದ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಬೇಡಿಕೆಯಾಗಿದ್ದ ‘ಪ್ರತ್ಯೇಕ ಸಚಿವಾಲಯ’ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಮಂಗಳವಾರ ಅನುಮೋದನೆ ದೊರಕಿದೆ.

ಕಲ್ಯಾಣ ಕರ್ನಾಟಕಕ್ಕೆ (ಆಗಿನ ಹೈದ್ರಾಬಾದ್ ಕರ್ನಾಟಕ) ವಿಶೇಷ ಮೀಸಲಾತಿ ನೀಡಬೇಕೆನ್ನುವ ಹೋರಾಟ 1980ರ ದಶಕದಿಂದ ಮಾಜಿ ಸಚಿವ ವೈಜನಾಥ್ ಪಾಟೀಲ್‌ರಿಂದ ಹಿಡಿದು ಈವರೆಗಿನ ಹಲವು ಹೋರಾಟಗಾರರ ಪ್ರತಿಫಲದಿಂದ ಡಾ.ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಮತ್ತಿತರರ ಇಚ್ಛಾಶಕ್ತಿಯಿಂದಾಗಿ 371 (ಜೆ) ಜಾರಿಯಾಯಿತು. ಅದಕ್ಕೂ ಮುನ್ನ ನಂಜುಂಡಪ್ಪ ವರದಿಯನ್ವಯ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದರೂ ಪ್ರಗತಿ ಭಾರೀ ಕುಂಠಿತವಾಗಿತ್ತು. ಕೇಂದ್ರೀಯ ವಿವಿ, ಇಎಸ್‌ಐ ಆಸ್ಪತ್ರೆ, ಗುಲ್ಬರ್ಗಾ ವಿವಿ, ಜಯದೇವ ಹೃದ್ರೋಗ ಆಸ್ಪತ್ರೆ, ಹಲವು ಕಾರ್ಖಾನೆ, ಮತ್ತಿತರ ಕೇಂದ್ರಗಳು ಸ್ಥಾಪಿತವಾದರೂ ಮುಖ್ಯವಾಗಿ ಅವುಗಳಿಗೆ ಬೇಕಿದ್ದ ಸಿಬ್ಬಂದಿ ವರ್ಗ, ಮೂಲಸೌಲಭ್ಯಗಳ ಕಾಯಕಲ್ಪ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ.

ಖಾಲಿ ಹುದ್ದೆಗಳೀಗ ನೆನಪಾಗುವುದೇ?: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ವಿವಿ, ಕಾಲೇಜು, ಶಾಲೆಗಳಲ್ಲಿ ಪ್ರಾಧ್ಯಾಪಕ, ಉಪನ್ಯಾಸಕ, ಶಿಕ್ಷಕರ ಹುದ್ದೆಗಳು ಸಹಸ್ರಾರು ಖಾಲಿ ಇದ್ದರೂ ಈವರೆಗೆ ಭರ್ತಿ ಮಾಡಿಕೊಳ್ಳದ ಕಾರಣದಿಂದ ಶೈಕ್ಷಣಿಕ ಫಲಿತಾಂಶಗಳು ನೆಲಕಚ್ಚಿರುವುದು ಜಗಜ್ಜಾಹೀರಾಗಿದೆ.

ಈ ಸಾಲಿನಲ್ಲಿ ಕೆಕೆಆರ್‌ಡಿಬಿಯಿಂದ ಅಕ್ಷರ, ಆರೋಗ್ಯ, ಕೃಷಿ ಆವಿಷ್ಕಾರದಂತಹ ಯೋಜನೆಗಳು ರೂಪಿಸುತ್ತಿದ್ದರೂ ಎಲ್ಲಿ ಎಡುವುತ್ತಿದ್ದೇವೆ ಎನ್ನುವುದೂ ತಜ್ಞರಿಗೂ ಸುಳಿವಿಲ್ಲ. ಈ ಭಾಗದಲ್ಲಿ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಕ್ಯಾರೇ ಎನ್ನುತ್ತಿಲ್ಲ. ಸಚಿವಾಲಯದ ಬಳಿಕವಾದರೂ ಈ ಹುದ್ದೆಗಳ ಭರ್ತಿಗೆ ನೆನಪಾಗುವುದೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ ಎನ್ನುತ್ತಾರೆ ಇಲ್ಲಿನ ಹೋರಾಟಗಾರರು.

ಕಳೆದ ವರ್ಷ ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 46 ನಿರ್ಣಯ ಘೋಷಿಸಿ 11,770 ಕೋಟಿ ರೂ. ಮೀಸಲಿಡಲಾಗಿದೆ. 13ರಿಂದ 15 ಘೋಷಣೆಗಳಿಗೆ ಮಾತ್ರ ಪ್ರಾಥಮಿಕವಾಗಿ ಕಾಯಕಲ್ಪ ದೊರಕಿದ್ದು, ಇನ್ನುಳಿದಿರುವುದಕ್ಕೆ ಸರಕಾರ ಕಣ್ಣು ಹಾಯಿಸಬೇಕಿದೆ.

ರಸ್ತೆ, ಚರಂಡಿ, ಮೂಲಸೌಲಭ್ಯಕ್ಕೆ ಆದ್ಯತೆ ಕೊಡಲಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕಾಣಬೇಕಾದರೆ ಕೇವಲ ಘೋಷಣೆಯಷ್ಟೇ ಆಗಬಾರದು, ಅವು ಕಾರ್ಯರೂಪಕ್ಕೆ ಬರಬೇಕಿದೆ. ಇಷ್ಟು ವರ್ಷಗಳು ಕಳೆದರೂ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ನಗರಗಳು ಸೇರಿದಂತೆ ಗ್ರಾಮಗಳಲ್ಲಿ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ಸೂರು(ಮನೆ) ಮತ್ತಿತರ ಸೌಲಭ್ಯಗಳು ಇಲ್ಲದಿರುವುದು ಖೇದಕರ. ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟರೆ ಚರಂಡಿಗಳು ನದಿಗಳಾಗಿ ಹರಿಯುತ್ತಿರುವುದು ಇಲ್ಲಿನ ನಿತ್ಯದ ಸಮಸ್ಯೆ. ಇನ್ನಾದರೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಿ ಎಂದು ತಜ್ಞರು ಒತ್ತಾಯಿಸುತ್ತಿದ್ದಾರೆ.

ವೈಜ್ಞಾನಿಕ ನೀತಿ ರೂಪಿಸಿ

ಈ ಪ್ರದೇಶದಲ್ಲಿ ಎಸೆಸೆಲ್ಸಿ, ಪಿಯುಸಿ ಫಲಿತಾಂಶ, ಖಾಲಿ ಹುದ್ದೆಗಳ ನೇಮಕಾತಿ, ರಚನಾತ್ಮಕ ಪ್ರಗತಿಗೆ ಬೇಕಾಗುವಂತಹ ಅಗತ್ಯ ಅಂಶಗಳನ್ನು ಕ್ರೋಢೀಕರಿಸಿ, ೫ ವರ್ಷಕ್ಕೆ ವೈಜ್ಞಾನಿಕ ನೀತಿ ರೂಪಿಸಿ ಕಾಲಮಿತಿಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಪ್ರತ್ಯೇಕ ಸಚಿವಾಲಯದಿಂದ ಇವೆಲ್ಲ ಆದರೆ ಮಾತ್ರ ನಾವು ಪ್ರಗತಿ ಹೊಂದಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಕೆಲಸಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಮಾಡಲು ಕಲ್ಯಾಣ ಕರ್ನಾಟಕ ಪ್ರದೇಶ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ಕೊಟ್ಟಿದೆ.

-ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ

ನೈಜ ಅಭಿವೃದ್ಧಿಗೆ ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳಬೇಕು, ಕೆಕೆಆರ್‌ಡಿಬಿ ಕ್ರಿಯಾಯೋಜನೆ ಮಾಡದೆ ೧೧ ವರ್ಷಗಳಿಂದ ಅನುದಾನವನ್ನು ಯೋಜನಾರಹಿತವಾಗಿ ಖರ್ಚು ಮಾಡುತ್ತಿದೆ. ಕಾರ್ಖಾನೆ ಸ್ಥಾಪನೆ, ಉದ್ಯೋಗ ನೀಡುವುದರ ಜೊತೆಗೆ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿಯಬೇಕು.

-ಕೆ. ನೀಲಾ, ಸಾಮಾಜಿಕ ಹೋರಾಟಗಾರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News