×
Ad

ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಗೋದಾಮು ಆಗಿ ಬದಲಾದ ಎಂ.ಪಿ.ಪ್ರಕಾಶ ಕಲಾಮಂದಿರ

Update: 2025-12-31 15:50 IST

ಹೊಸಪೇಟೆ ನಗರದ ಹೃದಯ ಭಾಗದಲ್ಲಿರುವ ಎಂಪಿ ಪ್ರಕಾಶ್ ಕಲಾಮಂದಿರವು ನಗರಸಭೆಯ ಗೋದಾಮಾಗಿ ಬದಲಾಗಿದೆ. ಹಂಪಿ ಉತ್ಸವಕ್ಕೆ ಬರುವ ಕಲಾವಿದರಿಗೆ ನಾಟಕ, ಪಾತ್ರಗಳ, ಅಭ್ಯಾಸಕ್ಕೆ ಕಲಾವಿದರಿಗಾಗಿ ಈ ಕಲಾಮಂದಿರ ಸ್ಥಾಪಿಸಲಾಗಿತ್ತು.

ಆದರೆ ನಗರಸಭೆಯವರು ಎಂಪಿ ಪ್ರಕಾಶ್ ಕಲಾಮಂದಿರವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿ, ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆ ಮೂಲಕ ಯಾವುದೇ ಆದೇಶ, ಅಧಿಸೂಚನೆ ಇಲ್ಲದೆೆ ಇಷ್ಟ ಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವ ಪ್ರಸಿದ್ಧಿಯಾದ ಹಂಪಿ ಉತ್ಸವಕ್ಕೆ ಬರುವ ಕಲಾವಿದರು ಈ ಕಲಾಮಂದಿರದಲ್ಲಿ ವಾಸ್ತವ್ಯ ಹೂಡಿ, ನಾಟಕ-ನೃತ್ಯ ಸೇರಿ ಕಾರ್ಯಕ್ರಮಗಳ ಅಭ್ಯಾಸ ಮಾಡುತ್ತಿದ್ದರು. ಆದರೆ, ಅದೀಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಜಿಲ್ಲೆಯ ಕಲಾವಿದರು ಹಲವಾರು ವರ್ಷಗಳಿಂದ ಮನವಿ ಮಾಡಿಕೊಂಡರೂ ಯಾವುದೇ ಅಧಿಕಾರಿಯು ಇತ್ತ ಕಡೆ ಗಮನ ಹರಿಸಿಲ್ಲ. ದಿವಂಗತ ಎಂ.ಪಿ. ಪ್ರಕಾಶ್ ರವರು ಅಧಿಕಾರ ಇದ್ದ ಸಂದರ್ಭದಲ್ಲಿ ಬಹಳಷ್ಟು ಜನಪರ ಕೆಲಸ ಮಾಡಿದ್ದರು. ಆದರೆ, ಅವರು ಕಲಾವಿದರಿಗಾಗಿ ನಿರ್ಮಿಸಿರುವ ಕಲಾಮಂದಿರವು ಇದೀಗ ಕಲಾವಿದರಿಗೆ ಅಲಭ್ಯವಾಗಿದೆ.

ರಾಜ್ಯ ಸರಕಾರ ಆದಷ್ಟು ಬೇಗ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮಾಜಿ ಸಚಿವರಾದ ದಿವಂಗತ, ಎಂಪಿ ಪ್ರಕಾಶ್ ಕಲಾಮಂದಿರ ಸ್ವಚ್ಛಗೊಳಿಸಿ ಮತ್ತು ಕಲಾವಿದರಿಗೆ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಲೆ ಮತ್ತು ಸಂಸ್ಕೃತಿಗೆ ಹೆಸರಾದ ನಾಡಿದು. ಸ್ವತಃ ಕಲಾವಿದರಾಗಿದ್ದ ಎಂಪಿ ಪ್ರಕಾಶ್ ರವರೇ ಕಲಾವಿದರಿಗೆ ಅನುಕೂಲವಾಗಲೆಂದು ಭವ್ಯವಾದ ಕಲಾಮಂದಿರ ಸ್ಥಾಪಿಸಿದ್ದರು. ಆದರೆ ಇವತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಪಾಳುಬಿದ್ದು ಹೋಗಿದ್ದು ಶೋಚನೀಯ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲಾವಿದರಿಗೆ ಅನುಕೂಲವಾಗುವ ರೀತಿಯಲ್ಲಿ ಕಲಾಮಂದಿರ ಮರು ನಿರ್ಮಾಣ ಮಾಡಬೇಕು.

-ಗುಂಡಿ ರಮೇಶ್, ಕಲಾವಿದ, ಹೊಸಪೇಟೆ

ಕಲಾ ಮಂದಿರ ನಿರ್ವಹಣೆ ಮಾಡುವುದಕ್ಕೆ ಅನುದಾನದ ಕೊರತೆ ಇದೆ. ಮುಂದಿನ ದಿನದಲ್ಲಿ ಅನುದಾನ ಬಂದರೆ ಕಲಾವಿದರಿಗೆ ಒಳ್ಳೆಯ ಕಲಾಮಂದಿರ ನಿರ್ಮಿಸಿ ಕೊಡುತ್ತೇವೆ.

-ಶಿವಕುಮಾರ್ ಎರಗುಡಿ, ಪೌರಾಯುಕ್ತ, ನಗರಸಭೆ ಹೊಸಪೇಟೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News