ಯಾದಗಿರಿಯಲ್ಲಿ ಒಣಗುತ್ತಿರುವ ಜ್ಞಾನದೆಲೆಗಳು!
ಯಾದಗಿರಿ ಜಿಲ್ಲೆಯಲ್ಲಿ ಅಭಿವೃದ್ಧಿ ಎನ್ನುವುದು ಊಹಿಸಲಾಗದ ಪದ. ಯಾದಗಿರಿ ಎಂದಾಕ್ಷಣ ಕಣ್ಣ ಮುಂದೆ ಬರುವ ದೃಶ್ಯ ಎಂದರೆ ಗಂಟು ಮೂಟೆ ತಲೆಮೇಲೆ ಹೊತ್ತು, ಮಕ್ಕಳನ್ನು ಕಂಕಳಲ್ಲಿ ಕಟ್ಟಿಕೊಂಡು ಹಿಂಡುಗಳಂತೆ ರೈಲ್ವೆ ಭೋಗಿಗಳ ಶೌಚಾಲಯದ ಬಳಿ ಜಾಗ ಸಿಕ್ಕರೂ ಸಾಕು ಎಂದು ಪರದಾಡುವ ದೃಶ್ಯ. ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ಹೋಗುವ ಒಂದು ದೊಡ್ಡ ಜನರ ಗುಂಪು. ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಯಾದಗಿರಿ ಜಿಲ್ಲೆ ಇನ್ನೂ ಗುಲಾಮಗಿರಿಯಲ್ಲೇ ಬಂಧಿಸಲ್ಪಟ್ಟಿದೆ. ಇಲ್ಲಿ ಮನುಷ್ಯ ಬದುಕುವ ಹಕ್ಕಿಗೂ ಹೋರಾಡಬೇಕೇನೋ ಎನ್ನುವಷ್ಟು ಕಿತ್ತು ತಿನ್ನುವ ಬಡತನ ಇದೆ.
ಒಂದು ಜಿಲ್ಲೆಯ ಅಭಿವೃದ್ಧಿ ಆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಅಭಿವ್ಯಕ್ತವಾಗುತ್ತದೆ. ಹೀಗಿರುವಾಗ ಯಾದಗಿರಿಯಲ್ಲಿರುವ ಜನರನ್ನು ದಾರಿದ್ರ್ಯದಿಂದ ಹೊರತರಲು, ಬಡ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಲು ಸರಕಾರಿ ಶಾಲೆ ಉಳಿಸಿ, ಬೆಳೆಸಲು ಹೆಚ್ಚಿನ ಅನುದಾನ ಮೀಸಲಿಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಯಾದಗಿರಿಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಕಾಣುವ 10ನೇ ತರಗತಿ ಹಾಗೂ ದ್ವಿತೀಯ ಪಿಯು ಫಲಿತಾಂಶ ಕುಸಿತವೇ ಸಾಕ್ಷಿಯಾಗಿದೆ. ಇದು ಹೆಚ್ಚು ಆತಂಕ ಉಂಟುಮಾಡಿದೆ. ಇದಕ್ಕೆ ಮೂಲಕಾರಣ ಮೂಲಭೂತ ಸೌಲಭ್ಯಗಳ ಕೊರತೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿರುವುದು ಯಾದಗಿರಿಯಲ್ಲಿಯೇ!. 21,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇವೆ. ನೂರಾರು ಶಾಲೆಗಳು ದುರಸ್ತಿ ಕಾಣದೆ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಅನೇಕ ಶಾಲೆಗಳಲ್ಲಿ ಶೌಚಾಲಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹೆದರುತ್ತಾರೆ. ಬಯಲು ಶೌಚಕ್ಕೆ ಹೋಗುವ ಎಷ್ಟೋ ವಿದ್ಯಾರ್ಥಿನಿ
ಯರು ದೌರ್ಜನ್ಯಕ್ಕೆ ತುತ್ತಾಗಿರುವ ಅನೇಕ ಉದಾಹರಣೆಗಳಿವೆ. ಅನೇಕ ಶಾಲೆಗಳಲ್ಲಿ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಈ ಎಲ್ಲ ಮೂಲಸೌಕರ್ಯ ಒದಗಿಸದಿದ್ದರೆ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ!
ಈಗ ಇದು ಸಾಲದು ಎಂಬಂತೆ ಕೆಪಿಎಸ್- ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರ ಕರ್ನಾಟಕದಲ್ಲಿ 40,000 ಸರಕಾರಿ ಶಾಲೆ ಮುಚ್ಚಲು ಮುಂದಾಗಿದೆ. ಇದರಿಂದ ಯಾದಗಿರಿ ಜಿಲ್ಲೆಯ 583 ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಈ ಯೋಜನೆ ಜಾರಿಯಾದಲ್ಲಿ ಶಾಲೆಗಳ ನಿರ್ವಹಣೆಯ ಹೊಣೆಯಿಂದ ಸರಕಾರ ನುಣುಚಿಕೊಳ್ಳಲಿದೆ. ಪೋಷಕರೇ ಮಕ್ಕಳ ಶಿಕ್ಷಣದ ಸಂಪೂರ್ಣ ಆರ್ಥಿಕ ಹೊರೆ ಹೊರಬೇಕಾಗುತ್ತದೆ. ಬಡತನದ ಬೇಗೆಯಲ್ಲಿರುವವರಿಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಗಾಯದ ಮೇಲೆ ಬರೆ ಎಳೆದಂತೆ ಪರಿಣಮಿಸಲಿದೆ.
ಇನ್ನೊಂದೆಡೆ ಜಿಲ್ಲೆಯ ಸಾರಿಗೆ ವ್ಯವಸ್ಥೆಯ ದುಸ್ಥಿತಿ ಹೇಳತೀರದು. ಹಳ್ಳಿಯಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಅನೇಕ ವೇಳೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಸುರಕ್ಷತೆ ಇಲ್ಲದ ಕಾರಣ ಅನೇಕ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿರಿಸುವ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತವೆ.
ಹೀಗಾಗಿ ಈ ಎಲ್ಲ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸಬೇಕಿದೆ. ಬಡಮಕ್ಕಳಿಂದ ಶಿಕ್ಷಣ ಕಸಿಯುವ ನೀತಿಗಳನ್ನು ಕೈಬಿಟ್ಟು ಅವರಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯ ಪ್ರಜ್ಞಾವಂತ ಜನತೆ ಧ್ವನಿ ಎತ್ತಬೇಕಿದೆ. ಇಲ್ಲವಾದಲ್ಲಿ ಹಿಂದುಳಿದ ಯಾದಗಿರಿಯ ಚಿತ್ರಣ ಇನ್ನೂ ಅನೇಕ ವರ್ಷಗಳು ಕಳೆದರೂ ಬದಲಾಗದು.