ಮೂಲ ಸೌಕರ್ಯ ವಂಚಿತ ಕೂಡ್ಲೂರು ಗ್ರಾಮ
ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸೈದಾಪುರ,ಡಿ.30: ತಾಲೂಕಿನ ಕಿಲ್ಲನಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಚರಂಡಿಗಳು ಗಬ್ಬು ವಾಸನೆಯಿಂದ ನಾರುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ರೋಗದ ಭೀತಿ ಎದುರಾಗಿದೆ.
ಗ್ರಾಮದ ಬಹುತೇಕ ಓಣಿಯಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಬಾರಿ ಪಂಚಾಯತ್ ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ಗಮನಕ್ಕೆ ತಂದು ಮನವಿ ಮಾಡಿಕೊಂಡರೂ ಸಮಸ್ಯೆ ಆಲಿಸಿ ಹೋಗುತ್ತಾರೆ ಹೊರತು ಪರಿಹಾರ ನೀಡುತ್ತಿಲ್ಲ ಎಂದು ಜನರ ದೂರಿದ್ದಾರೆ.
ಗ್ರಾಮದಲ್ಲಿ ಎರಡು ಫಿಲ್ಟರ್ ವಾಟರ್ ಟ್ಯಾಂಕ್ ಇದ್ದರೂ ನಿರ್ವಹಣೆಯಿಲ್ಲದೆ ಸುತ್ತಮುತ್ತ ಜಾಲಿ ಮರಗಳು ಬೆಳೆದು ಹಾಳಾಗಿವೆ. ಸರಿಯಾದ ಪೈಪ್‌ಲೈನ್ ಜೋಡಣೆ ಇಲ್ಲದ್ದರಿಂದ ಹೆಚ್ಚು ನೀರು ಪೋಲಾಗುತ್ತಿದೆ. ಜೆಜೆಎಂ ಕಾಮಗಾರಿ ನನೆಗುದಿಗೆ ಬಿದ್ದಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎನ್ನುವುದು ಜನರ ಕೂಗು.
ಗ್ರಾಮದ ಬಹುತೇಕ ಓಣಿಯಲ್ಲಿ ಚರಂಡಿಗಳ ವ್ಯವಸ್ಥೆಯಿಲ್ಲದಿರುವುದರಿಂದ ಸಮಸ್ಯೆಯಾಗಿದೆ. ನೀರು ನಿಂತ ಕಡೆಯೇ ನಿಂತು ದುರ್ವಾಸನೆ ಹೊಡೆದು ನಾನಾ ಖಾಯಿಲೆ ಉದ್ಭವಿಸುತ್ತಿರುವುದು ಕಂಡುಬರುತ್ತಿದೆ.
ಕೂಡ್ಲೂರು ಗ್ರಾಮದ ಮೂಲಸೌಕರ್ಯಗಳ ಸಮಸ್ಯೆಗಳನ್ನು ಗ್ರಾಮಸ್ಥರು ಗಮನಕ್ಕೆ ತಂದಿದ್ದು, ಕೂಡಲೇ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು.
-ಶೀಲಾ ಪಿಡಿಒ, ಗ್ರಾಮ ಪಂಚಾಯತ್ ಕಿಲ್ಲನಕೇರಾ
ನಮ್ಮೂರಿನಲ್ಲಿ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಹಲವು ಬಾರಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದರೂ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ನಮ್ಮ ಸಮಸ್ಯೆ ಬಗೆಹರಿಸಬೇಕು.
-ಸೀತಾರಾಮ್ ಕೂಡ್ಲೂರು, ಸ್ಥಳೀಯ ನಿವಾಸಿ