ಕೈ ತಪ್ಪಿದ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್: ವಿವಾದಾತ್ಮಕ ಹೇಳಿಕೆಗಳೇ ಪ್ರತಾಪ ಸಿಂಹಗೆ ಮುಳುವಾಯಿತೇ?

Update: 2024-03-14 05:02 GMT

ಮೈಸೂರು : ಮೈಸೂರು-ಕೊಡಗು ಲೋಕಸಭೆ ಸಂಸದ ಪ್ರತಾಪಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಣೆ ಹಾಕಲಾಗಿದೆ.

ಮಹತ್ತರ ಬೆಳವಣಿಗೆಯಲ್ಲಿ ಸಂಸದ ಪ್ರತಾಪಸಿಂಹ ಅವರಿಗೆ ಈ ಬಾರಿ ಉದ್ದೇಶಪೂರ್ವಕವಾಗಿಯೇ ಬಿಜೆಪಿ ಟಿಕೆಟ್ ತಪ್ಪಿಸಲಾಗಿದೆ. ಸಂಸತ್ ಒಳಗೆ ಹೊಗೆ ಬಾಂಬ್ ಸಿಡಿಸಿದವರಿಗೆ ಪಾಸ್ ನೀಡಿದ್ದ ಪ್ರತಾಪಸಿಂಹ, ಬಿಜೆಪಿ ಪಕ್ಷವೇ ದೇಶದಲ್ಲಿ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅಂತಹದರಲ್ಲಿ ಆತನಿಗೆ ಟಿಕೆಟ್ ಕೊಡುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಲಿದೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲೇ ಕೇಳಿ ಬಂದಿದೆ ಎನ್ನಲಾಗಿದೆ.

ಪ್ರತಾಪಸಿಂಹ ಅಭಿವೃದ್ಧಿಗಿಂತ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲೇ ಹೆಚ್ಚು ಪ್ರಚಾರದಲ್ಲಿದ್ದರು. ಮೈಸೂರಿಗೂ ಸಂಸದ ಪ್ರತಾಪಸಿಂಹಗೂ ಯಾವುದೇ ಸಂಬಂಧವೂ ಇರಲಿಲ್ಲ, 2014ರಲ್ಲಿ ಅಚಾನಕ್ ಆಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಸ್ವಂತ ವರ್ಚಸು ಇಲ್ಲದಿದ್ದರೂ ಬಿಜೆಪಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರ ಕೃಪಾಕಟಾಕ್ಷದಿಂದ ಗೆದ್ದು ಬಂದಿದ್ದರು.

ನಂತರ ಅವರು ಕ್ಷೇತ್ರದ ಅಭಿವೃದ್ಧಿಗಿಂತಲೂ ವಿವಾದಾತ್ಮಕ ಹೇಳಿಕೆ, ಗಲಾಟೆಗಳಲ್ಲೇ ಹೆಚ್ಚು ಪ್ರಚಾರಕ್ಕೆ ಬಂದರು. ಮೈಸೂರು ನಗರದ ಖ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಸಂಸದ ಪ್ರತಾಪಸಿಂಹ ಕಾರಣರಾಗಿದ್ದರು. ಹುಣಸೂರಿನಲ್ಲಿ ನಡೆದ ಹನುಮಜಯಂತಿ ಆಚರಣೆ ವೇಳೆ ರಾಮಭಕ್ತರನ್ನು ಪ್ರಚೋದಿಸಿ ಗಲಾಟೆಗೆ ಕಾರಣರಾಗಿದ್ದರು.

ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪಸಿಂಹ ಅವರ ಪ್ರಚೋದನಕಾರಿ ಹೇಳಿಕೆ ಕಾರಣವಾಗಿತ್ತು. ಕಳೆದ ಹಲವು ವರ್ಷಗಳಿಂದ ಬಹುಜನರು ಆಚರಣೆ ಮಾಡಿಕೊಂಡು ಬರುತ್ತಿದ್ದ ಮಹಿಷ ದಸರಾ ಅಚರಣೆಗೆ ಅಡ್ಡಿ ಪಡಿಸುವ ಮೂಲಕ ಈ ಭಾಗದ ದಲಿತರನ್ನು ವಿರೋಧ ಕಟ್ಟಿಕೊಂಡರು.

ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ವಿರುದ್ಧ ನಾಲಿಗೆಯನ್ನು ಹರಿಬಿಟ್ಟು ಆ ಸಮುದಾಯಗಳ ಕೋಪಕ್ಕೂ ಗುರಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವಿ.ಸೋಮಣ್ಣ ಪರ ಮಾತ್ರ ಪ್ರಚಾರ ಮಾಡಿ ಇನ್ನುಳಿದ ಯಾವುದೇ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿಲ್ಲ ಎಂಬ ಆರೋಪವು ಸಂಸದ ಪ್ರತಾಪಸಿಂಹ ಅವರ ಮೇಲಿತ್ತು.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಬಿಜೆಪಿ ವರಿಷ್ಠರು ಸಂಸದ ಪ್ರತಾಪ ಸಿಂಹ ಅವರ ಪರ ಅಭಿಪ್ರಾಯ ಸಂಗ್ರಹಿಸಲು ಇತ್ತೀಚೆಗೆ ಒಂದು ತಂಡವನ್ನು ಕಳುಹಿಸಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪ್ರತಾಪಸಿಂಹ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಯಿಂದ ಸಂಸದ ಪ್ರತಾಪಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನೇರಳೆ ಸತೀಶ್‍ ಕುಮಾರ್

contributor

Similar News