ಹೊಸ ಪರ್ವದತ್ತ ಬೆಂಗಳೂರು ವಿವಿ ಗ್ರಂಥಾಲಯ

Update: 2024-01-29 06:57 GMT

ಬೆಂಗಳೂರು, ಜ.28: ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯ ಮೇಲ್ದರ್ಜೆಗೇರಿಸಲು ಸಕಲ ಸಿದ್ಧತೆ ಶುರುವಾಗಿದೆ. ಸುಮಾರು 1ಕೋಟಿ ರೂ. ಅನುದಾನದಲ್ಲಿ ಗ್ರಂಥಾಲಯ ಹೊಸ ಸ್ಪರ್ಶ ಪಡೆದುಕೊಳ್ಳಲ್ಲಿದ್ದು, ಗ್ರಂಥಾಲಯದ ಸುತ್ತಲೂ 10 ಎಕರೆ ವ್ತಾಪ್ತಿಯಲ್ಲಿ 28 ಸಾವಿರ ಮಿಯಾವಾಕಿ ಗಿಡಗಳನ್ನು ನೆಡುವ ಮೂಲಕ ಹಸಿರು ಗ್ರಂಥಾಲಯಕ್ಕೆ ಮತ್ತಷ್ಟು ಒತ್ತು ನೀಡಲಾಗುತ್ತಿದೆ.

ಸಾಂಪ್ರದಾಯಿಕ ಗಿಡ, ಮರಗಳನ್ನು ನೆಡುವ ಮೂಲಕ ಸಂಪೂರ್ಣ ಗ್ರಂಥಾಲಯ ಸುತ್ತಲೂ ಹಸಿರುಮಯವಾಗಿಸಲು ಕ್ರಮ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಒತ್ತಡ ಮುಕ್ತರಾಗಿ ಅಧ್ಯಯನ ನಡೆಸಲು ವಿಶೇಷವಾಗಿ ಆಲದಮರದಲ್ಲಿ ಹ್ಯಾಂಗಿಂಗ್ ಲೈಬ್ರರಿ ನಿರ್ಮಿಸಲಾಗುವುದು. ಪ್ರತೀ ಮರದಲ್ಲೂ ವಿದ್ಯಾರ್ಥಿಗಳು ಯಾವುದೇ ಅಡಚಣೆಗಳಿಲ್ಲದೆ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುವುದು.

ಗ್ರಂಥಾಲಯವನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸಲು ಆದ್ಯತೆ ನೀಡಲಾಗುವುದು. ಗ್ರಂಥಾಲಯ ವ್ಯಾಪ್ತಿಯಲ್ಲಿ ಉಚಿತ ವೈಫೈ ಒದಗಿಸಲಾಗುವುದು. ವಿದ್ಯಾರ್ಥಿ ಮತ್ತು ಶಿಕ್ಷಕರ ಲಾಂಜ್ ನಿರ್ಮಿಸಲಾಗುವುದು. ವಿದ್ಯಾರ್ಥಿಗಳ ಮನೋ ಒತ್ತಡ ಕಡಿಮೆ ಮಾಡಲು ಮತ್ತು ಓದಿನ ನಡುವೆ ಮನೋವಿಕಾಸ ಹೆಚ್ಚಿಸಲು ಕ್ರೀಡಾ ವಲಯ, ಸಂಗೀತ ವಲಯ ನಿರ್ಮಿಸಲಾಗುವುದು.

ಚೆಸ್, ಕ್ಯಾರಮ್ ನಂತಹ ಸಣ್ಣ ಪುಟ್ಟ ಆಟಗಳು, ಸಂಗೀತ ಆಲಿಸುವುದರ ಮೂಲಕ ಮನಸ್ಸಿಗೆ ವಿಶ್ರಾಂತಿ ನೀಡುವ ಪ್ರಯತ್ನವನ್ನು ಗ್ರಂಥಾಲಯ ವಿಭಾಗ ಮಾಡಲಿದೆ. ಬಯಲು ರಂಗಮಂದಿರ ಕೂಡ ತೆಲೆ ಎತ್ತಲ್ಲಿದ್ದು, ಶಿಕ್ಷಣಕ್ಕೆ ಸಾಥ್ ನೀಡುವ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು.

ಬೆಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯ ಅಭಿವೃದ್ಧಿಗೆ ಗ್ರಂಥಪಾಲಕ ಡಾ.ಬಿ.ಆರ್.ರಾಧಾಕೃಷ್ಣ ಕಾಯಕಲ್ಪ ನಕ್ಷೆ ರೂಪಿಸಿದ್ದು, ಕುಲಪತಿ ಡಾ.ಜಯಕರ ಎಸ್.ಎಂ., ಕುಲಸಚಿವ ಶೇಕ್ ಲತೀಫ್ ಸಹಕಾರದಿಂದ 2023-24ನೇ ಸಾಲಿನಲ್ಲಿ ಗ್ರಂಥಾಲಯ ಹೊಸ ರೂಪ ಪಡೆದುಕೊಳ್ಳಲಿದೆ.

ಬೆಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯ ಅತಿಹೆಚ್ಚು ಪುಸ್ತಕ ಭಂಡಾರ ಹೊಂದಿರುವ ಸರಕಾರಿ ಗ್ರಂಥಾಲಯಗಳಲ್ಲಿ ಒಂದಾಗಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹ ಹೊಂದಿದ್ದು, 65 ಸಾವಿರಕ್ಕೂ ಹೆಚ್ಚು ಇ-ಬುಕ್ಸ್ ಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಂ ಲೈಬ್ರಿರಿ ಆಪ್ ಕೂಡ ನಿರ್ಮಿಸಿದ್ದು ಈ ಮೂಲಕ ವಿದ್ಯಾರ್ಥಿಗಳ ಗ್ರಂಥಾಲಯ ಲಾಭ ಪಡೆಯಬಹುದಾಗಿದೆ.

ವಿಶೇಷತೆಗಳು

► ಹಸಿರೀಕರಣ

► ಡಿಜಟಲೀಕರಣ

► ಹ್ಯಾಂಗಿಂಗ್ ಲೈಬ್ರರಿ

► ಉಚಿತ ವೈಫೈ

► ಬಯಲು ರಂಗಮಂದಿರ

► 4 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹ

► ಶೋಧ ಶುದ್ಧಿ ತಂತ್ರಜ್ಞಾನ

► ಪ್ರಶ್ನೆ ಪತ್ರಿಕೆಗಳ ಸಂಗ್ರಹ

► ಯುಜಿಸಿ-ಮಾಹಿತಿ ತಂತ್ರಜ್ಞಾನ ವ್ಯವಸ್ಥೆ

► ಧ್ವನಿ, ದೃಶ್ಯ, ಅಕ್ಷರ ರೂಪದ ಪುಸ್ತಕ

ವಿಜ್ಞಾನ, ಸಮಾಜಶಾಸ್ತ್ರ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯಕವಾಗಿರುವ ಪುಸ್ತಕ ಕೋಶವನ್ನು ಗ್ರಂಥಾಲಯ ಹೊಂದಿದೆ. ಹಸಿರೀಕರಣ, ಡಿಜೀಟಲಿಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಸ್ವರೂಪಕ್ಕೆ ಮುಂದಾಗಿದ್ದೇವೆ.

?ಡಾ.ಬಿ.ಆರ್.ರಾಧಾಕೃಷ್ಣ, ಬೆಂಗಳೂರು ವಿವಿ, ಗ್ರಂಥಪಾಲಕ

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಪ್ರಕಾಶ್ ಅವರಡ್ಡಿ

contributor

Similar News