×
Ad

ಇಬ್ರಾಹೀಂ ಸಈದ್: ಮಾತು-ಕೃತಿಗಳಲ್ಲಿ ಜೀವಂತವಿರುವ ಅಬ್ಬನನ್ನು ನೆನೆಯುತ್ತಾ…

Update: 2025-05-27 13:47 IST

ಸನ್ಮಾರ್ಗ ವಾರಪತ್ರಿಕೆಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಇಬ್ರಾಹೀಂ ಸಈದ್ ಭಾಷಣ.

“ನನ್ನ ಕಾಯಿಲೆ ಇಲ್ಲಿನ ವೈದ್ಯರಿಗೆ ಗೊತ್ತು ತಾನೆ?” – ಎಂದು ಅಬ್ಬ ನನ್ನಲ್ಲಿ ವಿಚಾರಿಸಿಕೊಂಡು, ಗಾಲಿಕುರ್ಚಿಯ ಸಹಾಯದಿಂದ ಐಸಿಯು ಸೇರಿ ಪ್ರಾಯಶಃ ಅರ್ಧ ಗಂಟೆಯಷ್ಟೆ ಕಳೆದಿತ್ತು. ಅವರನ್ನು ನೋಡಿಕೊಳ್ಳುತ್ತಿದ್ದ ಸಹಾಯಕ ಡಾಕ್ಟರ್ ಬಂದು ನನ್ನ ಮುಂದೆ ಎಕ್ಸ್ ರೇ ತೋರಿಸುತ್ತಾ “ನೋಡಿ ಶ್ವಾಸಕೋಶದ ಹೆಚ್ಚಿನ ಭಾಗಕ್ಕೆ ಸೋಂಕು ವ್ಯಾಪಿಸಿದ್ದು, ಉಸಿರಾಟ ಕಷ್ಟವಾಗುತ್ತಿದೆ. ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ,” ಎಂದರು.

ಇಬ್ರಾಹೀಂ ಸಈದ್ ಸುಮಾರು ಮೂರು ದಶಕಗಳ ಕಾಲ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದರು.  

 ಅಬ್ಬನನ್ನು ಕಳೆದ ಆರು ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್ ಇಂಚಿಂಚಾಗಿ ಬಲಿತೆಗೆದುಕೊಳ್ಳುತ್ತಿದೆಯೆಂದು ಗೊತ್ತಿದ್ದರೂ ಇಷ್ಟು ಬೇಗ ಅವರು ನಮ್ಮಿಂದ ಅಗಲುವರೆಂಬುದನ್ನು ಮನಸ್ಸು ಒಪ್ಪಲು ಸಿದ್ದವಿರಲಿಲ್ಲ. ಭಾರವಾದ ಹೃದಯದೊಂದಿಗೆ ಐಸಿಯು ಒಳಗೆ ಕಾಲಿಟ್ಟರೆ ಅಸಹನೀಯ ಮೌನವೊಂದು ಅಲ್ಲಿ ಮನೆಮಾಡಿತ್ತು. ಸ್ಕ್ರೀನ್ ಸರಿಸಿ ನೋಡಿದರೆ ಅಬ್ಬ ಆಮ್ಲಜನಕದ ಮಾಸ್ಕ್ ತೊಟ್ಟು ಸಾವು-ಬದುಕಿನ ಹೋರಾಟದಲ್ಲಿ ತೊಡಗಿದ್ದರು.

ಕೇವಲ ನಿಮಿಷಗಳ ಹಿಂದೆ ನನ್ನೊಂದಿಗೆ ಸಹಜವಾಗಿ ಮಾತನಾಡಿದ್ದ, ಕಾಲ್ನಡಿಗೆಯಲ್ಲೇ ಬಂದು ಕಾರನ್ನೇರಿದ್ದ, ಗಂಟೆಯ ಹಿಂದೆಯಷ್ಟೆ ತಮ್ಮ ಪ್ರೀತಿಯ ಆಡಿನ ಪಾಯವನ್ನು ಸೇವಿಸಿ ರಾತ್ರಿಯೂಟ ಮುಗಿಸಿದ್ದ ಅಬ್ಬ ದೇವನೆಡೆಗೆ ಹೊರಟು ನಿಂತಿರುವುದು ಖಚಿತವಾಗಿತ್ತು. ಹಾಗೆ ನೋಡಿದರೆ ಅವರು ತಮ್ಮ ಜೀವಮಾನದಲ್ಲೇ ಮರಣಕ್ಕೆ ಅಂಜಿದವರಲ್ಲ. "ಈ ಲೋಕದೊಂದಿಗೆ ನನಗೇನು ಸಂಬಂಧ? ನಾನು ಈ ಜಗತ್ತಿನಲ್ಲಿ ಒಬ್ಬ ಪ್ರಯಾಣಿಕನಂತಿದ್ದೇನೆ; ಒಂದು ಮರದ ನೆರಳಿನಲ್ಲಿ ಸ್ವಲ್ಪ ನಿಲ್ಲುತ್ತೇನೆ, ಬಳಿಕ ಅಲ್ಲಿಂದ ಹೊರಟು ಹೋಗುತ್ತೇನೆ” ಎಂಬ ಪ್ರವಾದಿವಚನಕ್ಕೆ ಅನ್ವರ್ಥವಾಗಿತ್ತು ಅವರ ಬದುಕು. ಅವರಿಗೆ ತಗುಲಿರುವ ಕಾಯಿಲೆ 'ಲಂಗ್ ಕ್ಯಾನ್ಸರ್ ಫೋರ್ತ್ ಸ್ಟೇಜ್' ಎಂಬ ಸುದ್ದಿಯನ್ನು ತಲುಪಿಸಲು ವೈದ್ಯರು ಕೆಲವು ದಿನ ಹಿಂಜರಿದಿದ್ದರು. ಕೊನೆಗೂ ಸುದ್ದಿಯನ್ನು ತಲುಪಿಸಿದಾಗ ಅಬ್ಬ ಅದನ್ನು ಮೊದಲೇ ಅರಿತಿದ್ದವರಂತೆ “ಅಲ್ ಹಮ್ದುಲಿಲ್ಲಾಹ್” ಎಂದು ಪ್ರತಿಕ್ರಿಯಿಸಿ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದ್ದರು.

ಮುಂದಿನ ಆರು ತಿಂಗಳ ಅವಧಿಯಲ್ಲಿ ಪ್ರತಿಯೊಂದು ನಿಮಿಷವನ್ನೂ ಇದೇ ತನ್ನ ಕೊನೆಯ ಕ್ಷಣವೇನೋ ಎಂಬಂತೆ ಅತ್ಯಂತ ಉತ್ಕಟವಾಗಿ ಬದುಕಿದ್ದ ಅವರು ತಮಗೆ ಸಾಧ್ಯವಾದಷ್ಟು ಕಾಲ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಆರೋಗ್ಯ ಸಹಕರಿಸಿದಷ್ಟು ಕಾಲ ಭಾಷಣ, ಪ್ರವಚನ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ತಮ್ಮ ಮೇಲಿದ್ದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ರಾಜ್ಯ ಹೊಣೆಗಾರಿಕೆಯನ್ನು ಚುನಾಯಿತ ಉತ್ತರಾಧಿಕಾರಿಗೆ ಹಸ್ತಾಂತರಿಸಲು ಬೆಂಗಳೂರಿಗೆ ತೆರಳಿದ್ದರು. ಅನಾರೋಗ್ಯದ ನಡುವೆಯೂ ದಿಲ್ಲಿಯಲ್ಲಿ ಸಂಘಟನೆಯ ಕೇಂದ್ರ ಪ್ರತಿನಿಧಿ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಸುಮಾರು 200 ಮಂದಿ ರಾಷ್ಟ್ರ ಮಟ್ಟದ ನಾಯಕರೊಂದಿಗೆ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ತದನಂತರ ಉಪ್ಪಿನಂಗಡಿಯಲ್ಲಿ ನಡೆದ ಸರಣಿ ಕುರ್ ಆನ್ ಪ್ರವಚನ ಪ್ರಾಯಶಃ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತೇನೋ.

ಅಬ್ಬ ಹಜ್ಜ್ ನಿರ್ವಹಿಸಿದ್ದು 1981ರಲ್ಲಿ, ತಮ್ಮ 36ರ ಹರೆಯದಲ್ಲಿ. ಪ್ರಾಯಶಃ ಭಾರತದಿಂದ ಹಡಗಿನ ಮೂಲಕ ಪ್ರಯಾಣಿಸುವ ವ್ಯವಸ್ಥೆ ಕೊನೆಗೊಂಡು ವಿಮಾನದ ಮೂಲಕ ಯಾತ್ರೆಯ ಪರಿಪಾಠ ಆರಂಭಗೊಂಡ ಒಂದೆರಡು ವರ್ಷದಲ್ಲೇ ಅವರು ಹಜ್ಜ್ ಗೆ ತೆರಳಿದ್ದರು. ಆದರೆ ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಅವರಿಗೆ ಮತ್ತೊಮ್ಮೆ ಹಜ್ಜ್ ನೆರವೇರಿಸಬೇಕೆಂಬ ಅತೀವ ಆಸೆ ಮೂಡಿತ್ತು. ಅದನ್ನು ಅವರು ತಮ್ಮ ಕುಟುಂಬಿಕರು ಮತ್ತು ಆತ್ಮೀಯರ ಬಳಿ ಹೇಳಿಕೊಂಡಿದ್ದರು. ತಮ್ಮ ಮರಣಕ್ಕೆ ಮುಂಚೆ ಅವರ ಈ ಆಸೆಯೂ ನೆರವೇರಿತ್ತು. ಅವರ ಆತ್ಮೀಯರೊಬ್ಬರು ತಮ್ಮ ದಿವಂಗತ ತಂದೆಯ ಪರವಾಗಿ ಹಜ್ ನಿರ್ವಹಿಸಬೇಕೆಂಬ ಪ್ರಸ್ತಾಪ ಮುಂದಿಟ್ಟಾಗ ಅಬ್ಬ ಅದನ್ನು ಕೂಡಲೇ ಒಪ್ಪಿಕೊಂಡಿದ್ದರು.

ಗುರುಗಳಾದ ಮೌಲಾನ ಸಯ್ಯದ್ ಯೂಸುಫ್ ಅವರೊಂದಿಗೆ

 ತಮ್ಮ ಯೌವನದ ದಿನಗಳಲ್ಲಿ ಅಬ್ಬ ತಪ್ಪದೇ ರಮಝಾನ್ ನ ಕೊನೆಯ ಹತ್ತು ದಿನಗಳ ಇಅತಿಕಾಫ್ ಆಚರಿಸುತ್ತಿದ್ದರು. ಮಂಗಳೂರಿನ ಕುದ್ರೋಳಿ ಮೂಮಿನ್ ಮಸ್ಜಿದ್, ಕೋಟೆಕಾರ್ ಬೀರಿಯ ಮಸೀದಿ, ಕಚ್ಚೀ ಮೇಮನ್ ಮಸೀದಿ – ಹೀಗೆ ಹಲವು ಮಸೀದಿಗಳಲ್ಲಿ ಅವರು ಇಅತಿಕಾಫ್ಗೆ ಕುಳಿತುಕೊಂಡಿದ್ದರು. ಆದರೆ ಅನಂತರದ ವರ್ಷಗಳಲ್ಲಿ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ತಮ್ಮ ಜೀವನದ ಕೊನೆಯ ವರ್ಷ ಮತ್ತೆ ಅವರು ಕಚ್ಚೀ ಮೇಮನ್ ಮಸೀದಿಯಲ್ಲಿ ಇಅತಿಕಾಫ್ ಕುಳಿತರು. ಹೀಗೆ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ತಮ್ಮನ್ನು ಬಹಳ ಕಾಲದಿಂದ ಕಾಡುತ್ತಿದ್ದ ಮನೋಭಿಲಾಷೆಯೊಂದನ್ನು ಈಡೇರಿಸಿಕೊಂಡಿದ್ದು ನಿಜಕ್ಕೂ ಅಲ್ಲಾಹನು ಅವರಿಗೆ ತೋರಿದ ದೊಡ್ಡ ಅನುಗ್ರಹ ಎಂದೇ ಹೇಳಬೇಕು.

ಇಬ್ರಾಹೀಂ ಸಈದ್ 2007ರಲ್ಲಿ ತಮ್ಮ 62ರ ಪ್ರಾಯದಲ್ಲಿ ನಿಧನರಾದರು.

 ದೇವನ ಮೇಲಿನ ಅಚಲ ನಂಬಿಕೆ ಮತ್ತು ಪರಲೋಕದ ಮೇಲಿನ ದೃಢ ವಿಶ್ವಾಸದ ಮೂಲಕ ತಾವು ಪಡೆದಿದ್ದ ಲೋಕದೃಷ್ಟಿಯ ಬಲದಿಂದ ಅವರು ಮರಣಕ್ಕೆ ಮುಖಾಮುಖಿಯಾದ ರೀತಿಯು ನಮ್ಮ ಮಟ್ಟಿಗೆ ಅಂತಹ ಅಚ್ಚರಿಯ ಸಂಗತಿಯೇನಲ್ಲ. ತಮ್ಮ ಕಾಯಿಲೆಯ ಕಾರಣ ದಿನೇ ದಿನೇ ಉಸಿರಾಟಕ್ಕೆ ತೊಂದರೆಯಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಅವರ ಮಾತಿನಲ್ಲಿ ಅಸಹನೆಯಾಗಲೀ ನಿರಾಸೆಯಾಗಲೀ ಕಂಡು ಬರುತ್ತಿರಲಿಲ್ಲ. ಅಪಾರ ತಾಳ್ಮೆ ಮತ್ತು ಧೈರ್ಯದಿಂದ ಅವರು ಪ್ರತಿಯೊಂದು ಗಳಿಗೆಯನ್ನೂ ಎದುರಿಸಿದ್ದರು. ವೈದ್ಯರ ಸಲಹೆಯಂತೆ ಉಸಿರಾಟದ ಸಮಸ್ಯೆ ಬಿಗಡಾಯಿಸದಿರಲು ವಾಯುಮಾಲಿನ್ಯದ ಸಾಧ್ಯತೆ ಹೆಚ್ಚಿರುವ ಹಳೆಬಂದರು ಪ್ರದೇಶದಲ್ಲಿ ಎರಡು ದಶಕಗಳ ಕಾಲ ವಾಸವಿದ್ದ ಬಾಡಿಗೆ ಮನೆಯಿಂದ ಕಂಕನಾಡಿಯ ಇನ್ನೊಂದು ಬಿಡಾರಕ್ಕೆ ನಾವು ವಲಸೆ ಬಂದಿದ್ದೆವು. ಅಲ್ಲಿಯೂ ಅವರು ದೇಹದಲ್ಲಿ ಶಕ್ತಿಯಿರುವವರೆಗೆ ಸಮೀಪದ ಮಸೀದಿಗೆ ದೈನಂದಿನ ನಮಾಝ್ ನಿರ್ವಹಿಸಲು ತೆರಳುತ್ತಿದ್ದರು. ಕುರ್ಚಿಯಲ್ಲಿ ಕುಳಿತು ನಮಾಝ್ ಮಾಡುತ್ತಿದ್ದುದ್ದನ್ನು ಗಮನಿಸಿದ್ದ ಕೆಲವು ಮಂದಿ ನಮ್ಮಲ್ಲಿ ಆ ಬಗ್ಗೆ ವಿಚಾರಿಸಿದ್ದರಾದರೂ ಅವರನ್ನು ಕಾಡುತ್ತಿದ್ದ ಮಾರಣಾಂತಿಕ ಕಾಯಿಲೆಯ ಬಗ್ಗೆ ಹೊರಗಿನವರಿಗೆ ಯಾವುದೇ ಸುಳಿವು ಇರಲಿಲ್ಲ.

ಕ್ಯಾನ್ಸರ್ ಪತ್ತೆಯಾದ ನಂತರ ಚಿಕಿತ್ಸೆಯ ಬಗ್ಗೆ ನಾವು ಕುಟುಂಬಿಕರು ಚರ್ಚಿಸಿದಾಗ ಯಾವುದೇ ಬಗೆಯ ಆಲೋಪತಿಕ್ ಚಿಕಿತ್ಸೆಗೆ ಅವರು ಸಿದ್ಧರಿರಲಿಲ್ಲ. ಕಾಯಿಲೆ ನಾಲ್ಕನೇ ಹಂತದಲ್ಲಿರುವಾಗ ಅದು ಕಾರ್ಯಸಾಧುವೂ ಆಗಿರಲಿಲ್ಲ. “ಚಿಕಿತ್ಸೆಯೇ ಕಾಯಿಲೆಗಿಂತ ಭೀಕರ” ಎಂಬುದು ಆಗ ಅವರ ನಿಲುವಾಗಿತ್ತು. ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಕೂಡಾ 'ಪ್ಯಾಲಿಯೇಟಿವ್ ಕೇರ್'ನ ಸಲಹೆ ನೀಡಿದ್ದರು. ಕಾಯಿಲೆ ಪತ್ತೆಯಾದಂದಿನಿಂದ ಮರಣದವರೆಗಿನ ಆರು ತಿಂಗಳ ಅವಧಿಯಲ್ಲಿ ಅವರು ಆಸ್ಪತ್ರೆಗೆ ದಾಖಲಾದದ್ದು ಒಂದೆರಡು ಸಲ ಮಾತ್ರ. ಅಬ್ಬನವರ ಅನಾರೋಗ್ಯದ ಸುದ್ದಿ ತಿಳಿದು ಅವರನ್ನು ನೋಡಲು ಸಾಕಷ್ಟು ಜನ ಆಸ್ಪತ್ರೆಗೂ ಮನೆಗೂ ಬರತೊಡಗಿದ್ದರು. ಎಲ್ಲರನ್ನೂ ನಗುಮುಖದಿಂದ ಎದುರುಗೊಳ್ಳುತ್ತಿದ್ದ ಅವರು ಸಂದರ್ಶಕರಿಗೂ ತಮ್ಮ ನೋವಿನ ಸುಳಿವು ಸಿಗದಂತೆ ನೋಡಿಕೊಳ್ಳುತ್ತಿದ್ದರು. ಮಾಜಿ ಶಾಸಕ, ಆತ್ಮೀಯ ಹಿತೈಷಿ ಜನಾಬ್ ಬಿ.ಎಂ.ಇದಿನಬ್ಬ ತಮ್ಮ ಇಳಿವಯಸ್ಸಿನ ಹೊರತಾಗಿಯೂ ಅಬ್ಬನನ್ನು ನೋಡಲು ಆಸ್ಪತ್ರೆಗೆ ಬಂದಾಗ ಹಾಸ್ಯ ಚಟಾಕಿಯ ಮೂಲಕ ಅವರನ್ನು ನಗಿಸಿದ್ದರು.

ಜಮಾಅತ್ ಮುಖಂಡ ಮೌಲಾನ ಸಿರಾಜುಲ್ ಹಸನ್ ಅವರೊಂದಿಗೆ

ಅವರಿಗೆ ತಮ್ಮ ಮಿತ್ರರೂ ವೈದ್ಯರೂ ಆದ ಡಾ. ಮುಹಮ್ಮದ್ ಇಸ್ಮಾಯೀಲ್ ಜತೆ ವಿಶೇಷ ಸಲಿಗೆಯಿತ್ತು. ಒಮ್ಮೆ ಅವರು ಅಬ್ಬನನ್ನು ಪರೀಕ್ಷಿಸುತ್ತಾ, ಬೆನ್ನಿಗೆ ಸ್ಟೆತಸ್ಕೋಪ್ ಹಿಡಿದು ಪದೇ ಪದೇ “ಜೋರಾಗಿ ಶ್ವಾಸ ತೆಗೆದುಕೊಳ್ಳಿ ಮತ್ತು ಶ್ವಾಸ ಬಿಡಿ” ಎಂದು ಹೇಳುತ್ತಿದ್ದರು. ಆ ಕಠಿಣ ಸ್ಥಿತಿಯಲ್ಲೂ ಅಬ್ಬನ ಹಾಸ್ಯಪ್ರಜ್ಞೆ ಜಾಗೃತವಾಗಿತ್ತು. “ಅದೆಲ್ಲ ಸರಿ ಡಾಕ್ಟ್ರೇ... ನೀವು ಸ್ಟೆತಸ್ಕೋಪ್ ನ ಮತ್ತೊಂದು ತುದಿಯನ್ನು ನಿಮ್ಮ ಕಿವಿಗೆ ಸಿಕ್ಕಿಸಿದ್ದೀರಿ ತಾನೇ?” ಎಂದು ಅಬ್ಬ ಉತ್ತರಿಸಿದಾಗ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ತಮ್ಮನ್ನು ಬಾಧಿಸುತ್ತಿದ್ದ ಮಾರಕ ಕಾಯಿಲೆಯ ಹೊರತಾಗಿಯೂ ಅಬ್ಬ ತೋರಿದ ಆತ್ಮಸ್ಥೈರ್ಯ ಮತ್ತು ಸಮಚಿತ್ತತೆ ಅಮೋಘವಾದುದು. ಪರ್ಯಾಯ ಚಿಕಿತ್ಸಾ ಕ್ರಮದ ಮೂಲಕ ತಮ್ಮ ಕಾಯಿಲೆಗೆ ಮದ್ದು ಕಂಡುಕೊಳ್ಳುವ ಎಲ್ಲ ಸಾಧ್ಯತೆಗಳನ್ನೂ ಅವರು ಪರಿಶೀಲಿಸಿದ್ದರು. ಅನಾರೋಗ್ಯದ ಮಧೆಯೂ ಆ ಉದ್ದೇಶಕ್ಕಾಗಿ ಪ್ರಯಾಣ ಮಾಡಬೇಕಾಗಿ ಬಂದಾಗ ಅದಕ್ಕೂ ಸಿದ್ಧರಾಗಿದ್ದರು. ಆರೋಗ್ಯದಲ್ಲಿ ತುಸು ಸುಧಾರಣೆ ಕಂಡ ಕೂಡಲೇ ಮತ್ತೆ ತಮ್ಮ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತಲ್ಲೀನರಾದರು. ಆ ಸಂದರ್ಭದಲ್ಲೂ ಹಲವು ಜಮಾಅತ್ ನಾಯಕರು ಅವರನ್ನು ಭೇಟಿಯಾಗಿ ನಾನಾ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ತಮ್ಮ ಓದು, ಬರವಣಿಗೆಯನ್ನು ಕೊನೆಯ ದಿನದವರೆಗೂ ಮುಂದುವರಿಸಿದ್ದ ಅವರು ಸಮಕಾಲೀನ ವಿಷಯಗಳ ಬಗ್ಗೆ ಸದಾ ಅಪ್-ಟು-ಡೇಟ್ ಆಗಿರುತ್ತಿದ್ದರು. ಅವರ ಧೈರ್ಯ ಮತ್ತು ಧನಾತ್ಮಕ ಮನಸ್ಥಿತಿಯನ್ನು ಕಂಡು ಆ ಕಠಿಣ ಪರಿಸ್ಥಿತಿಯಲ್ಲೂ ನಾವು ಹೊಸ ಮುಂಜಾವಿನ ನಿರೀಕ್ಷೆಯಲ್ಲಿದ್ದೆವು.

2007ರ ಮೇ 26-27ರ ಮಧ್ಯರಾತ್ರಿ ಕಳೆದು ಕೆಲವು ನಿಮಿಷಗಳಾಗಿರಬಹುದು. ನಾನು, ಅಣ್ಣ, ಅಮ್ಮ ಮತ್ತು ಸೋದರಿಯರು ಮುಖ ಮುಖ ನೋಡುತ್ತಿದ್ದಂತೆಯೇ ಆ ಗಳಿಗೆ ಬಂದು ಬಿಟ್ಟಿತ್ತು. ಅಬ್ಬ ಮಲಗಿದ್ದ ಆಸ್ಪತ್ರೆಯ ಮಂಚದ ಪಕ್ಕದ ಮಾನಿಟರ್ ಫ್ಲ್ಯಾಟ್ ಲೈನ್ ತೋರಿಸತೊಡಗಿತ್ತು. ದಶಕಗಳ ಕಾಲ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದ, 62 ಅರ್ಥಪೂರ್ಣ ವರ್ಷಗಳನ್ನು ಬಾಳಿದ ವ್ಯಕ್ತಿತ್ವವೊಂದು ಇಹಯಾತ್ರೆ ಕೊನೆಗೊಳಿಸಿತ್ತು. 'ಸನ್ಮಾರ್ಗ'ದ ಬೆಳಕು ಮತ್ತು 'ಶಾಂತಿ'ಯ ಕಂಪನ್ನು ಕನ್ನಡ ನಾಡಿನಾದ್ಯಂತ ಪಸರಿಸಿದ್ದ ಜೀವವೊಂದು ಕಣ್ಮರೆಯಾದಾಗ ನಮಗೆ ಕಾಲ ಕೆಳಗಿನ ಭೂಮಿಯೇ ಕುಸಿದ ಅನುಭವವಾಗಿತ್ತು. ಕುಟುಂಬ, ಬಂಧು ಬಳಗ ಮಾತ್ರವಲ್ಲ, ಅಬ್ಬನನ್ನು ಬಲ್ಲ ದೊಡ್ಡ ಸಂಖ್ಯೆಯ ಜನಸಾಮಾನ್ಯರು, ಸಂಘಟನೆಯ ಕಾರ್ಯಕರ್ತರು, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದರು. ಕರ್ನಾಟಕದ ನಾಲ್ಕೂ ಕಡೆಗಳಿಂದ ಭಾರೀ ಸಂಖ್ಯೆಯ ಜನರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಉಳ್ಳಾಲದಲ್ಲಿ ಉಪಚುನಾವಣೆಗೆ ಪ್ರಚಾರ ಕಾರ್ಯ ಬಿರುಸಾಗಿ ನಡೆಯುತ್ತಿದ್ದ ಸಂದರ್ಭವದು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಧರಂ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಜಾಫರ್ ಶರೀಫ್ ಮತ್ತು ರೋಷನ್ ಬೇಗ್ ಭೇಟಿ ನೀಡಿದ್ದ ಪ್ರಮುಖರು.

“ನಾವೊಂದು ಅನರ್ಘ್ಯ ರತ್ನವನ್ನು ಕಳೆದುಕೊಂಡೆವು,” ಎಂದು ಮಾರನೇ ದಿನ ಸಂತಾಪ ಸೂಚಿಸಲು ಆಗಮಿಸಿದ್ದ ರಹ್ಮಾನ್ ಖಾನ್ ಸಾಹೇಬರು ನನ್ನನ್ನು ಅಪ್ಪಿಕೊಂಡು ಹೇಳಿದಾಗ ನನ್ನ ಬಾಯಿಯಿಂದ ಮಾತೇ ಹೊರಟಿರಲಿಲ್ಲ.

ತಮ್ಮ ದೀರ್ಘಕಾಲದ ಒಡನಾಡಿ, ಸನ್ಮಾರ್ಗದ ವ್ಯವಸ್ಥಾಪಕ ಎಂ.ಸಾದುಲ್ಲಾ ಅವರ ಜೊತೆ

ಸಂಜೆ ಮಂಗಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ನೆರವೇರಿದ ಜನಾಝಾ ನಮಾಝ್ ನಲ್ಲಿ ಅಭೂತಪೂರ್ವ ಜನಸಂದಣಿ ನೆರೆದಿತ್ತು. ಒಂದು ರೀತಿಯ ತಬ್ಬಲಿತನ ಮತ್ತು ಶೋಕದ ಕಡಲಲ್ಲಿ ಮುಳುಗಿದ್ದ ನಾನು ಆ ಜನಜಂಗುಳಿಯಲ್ಲೂ ಏಕಾಂಗಿಯಾಗಿದ್ದೆ.

“ನಿಮ್ಮ ಅಪ್ಪನ ಮಯ್ಯತ್ ನಮಾಝ್ ಗೆ ಬಂದಷ್ಟು ದೊಡ್ಡ ಸಂಖ್ಯೆಯ ಜನರು ಇಷ್ಟರವರೆಗೆ ಈ ಮಸೀದಿಗೆ ಬಂದೇ ಇಲ್ಲ” ಎಂದು ಕೆಲವು ದಿನಗಳ ನಂತರ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ ಹೇಳಿದಾಗ ಸ್ವತಃ ನಾನೇ ಅವಾಕ್ಕಾಗಿದ್ದೆ.

 

 ಹೀಗೆ ನನ್ನನ್ನು ಬದುಕಿನುದ್ದಕ್ಕೂ ಕೈಹಿಡಿದು ನಡೆಸಿದ್ದ ನಿರ್ಣಾಯಕ ಘಟ್ಟಗಳಲ್ಲಿ ಮಾರ್ಗದರ್ಶನ ಮಾಡಿದ್ದ ಅಬ್ಬನ ಅಗಲಿಕೆಯಿಂದುಂಟಾದ ಖಾಲಿತನ ಇನ್ನೂ ಹೋಗಿಲ್ಲ. ಪ್ರಾಯಶಃ ಉಸಿರು ಇರುವವರೆಗೂ ಹೋಗಲು ಸಾಧ್ಯವಿಲ್ಲ.

ಮಂಗಳೂರಿನಲ್ಲಿ ನವೀಕೃತ ಇಸ್ಲಾಮೀ ಪುಸ್ತಕಾಲಯದ ಉದ್ಘಾಟನೆ ಅವರು ಪಾಲ್ಗೊಂಡ ಕೊನೆಯ ಕಾರ್ಯಕ್ರಮಗಳಲ್ಲೊಂದಾಗಿತ್ತು. 

 ತಾನು ನಂಬಿದ ಆದರ್ಶಕ್ಕಾಗಿ ಕೊನೆಯುಸಿರವರೆಗೂ ಪ್ರಾಮಾಣಿಕವಾಗಿ ಹೋರಾಡಿದ, ನುಡಿದಂತೆ ನಡೆದ ಮತ್ತು ಇತರರನ್ನೂ ಮುನ್ನಡೆಸಿದ ಅಬ್ಬ ತನ್ನ ಮಾತು-ಕೃತಿಗಳ ಮೂಲಕ ಇನ್ನೂ ಜೀವಂತವಿದ್ದಾರೆ ಎಂಬುದೇ ನಮ್ಮ ಪಾಲಿಗೆ ಸಮಾಧಾನ.

(ಲೇಖಕರು ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕ ಮತ್ತು ಶಾಂತಿ ಪ್ರಕಾಶನದ ರೂವಾರಿ ಇಬ್ರಾಹೀಂ ಸಈದ್ ರ ದ್ವಿತೀಯ ಪುತ್ರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ತುಫೈಲ್ ಮುಹಮ್ಮದ್

contributor

Similar News