ಘೋಷಣೆಗಳ ರಾಜಕೀಯವೇ? ಸಾಮಾಜಿಕ ನ್ಯಾಯದ ರಾಜಕಾರಣವೇ?
ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್ ರಕ್ಷಣೆ ಯಾವಾಗ?
ಸಾಮಾಜಿಕ ನ್ಯಾಯ ಎಂಬ ಪದವು ಭಾರತೀಯ ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಅತ್ಯಂತ ಹೆಚ್ಚು ಉಚ್ಚರಿಸಲ್ಪಡುವ ಪದಗಳಲ್ಲಿ ಒಂದಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿಯೊಂದು ರಾಜಕೀಯ ಪಕ್ಷವೂ ಈ ಪದವನ್ನು ತನ್ನ ರಾಜಕೀಯ ಅಜೆಂಡಾದ ಕೇಂದ್ರಬಿಂದುವಾಗಿಸುತ್ತದೆ. ಬಡವರು, ದಲಿತರು, ಆದಿವಾಸಿಗಳು, ಹಿಂದುಳಿದವರು ಹಾಗೂ ಅಂಚಿನ ಸಮುದಾಯಗಳ ಅಭಿವೃದ್ಧಿ ಮತ್ತು ಹಕ್ಕುಗಳ ಕುರಿತು ಭರವಸೆಗಳ ಮಹಾಪೂರವೇ ಹರಿಯುತ್ತದೆ. ಆದರೆ ಚುನಾವಣೆಗಳು ಮುಗಿದ ನಂತರ ಉಳಿಯುವ ಪ್ರಶ್ನೆ ಒಂದೇ ಸಾಮಾಜಿಕ ನ್ಯಾಯ ಎಂಬುದು ಕೇವಲ ಚುನಾವಣಾ ಘೋಷಣೆಯೇ ಅಥವಾ ಸಂವಿಧಾನ ನೀಡಿರುವ ನೈತಿಕ ಮತ್ತು ಕಾನೂನುಬದ್ಧ ಬದ್ಧತೆಯೇ?
ಭಾರತದ ಸಂವಿಧಾನವು ಕೇವಲ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದನ್ನಷ್ಟೇ ಉದ್ದೇಶಿಸಿಲ್ಲ; ಶತಮಾನಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸುವ ಜವಾಬ್ದಾರಿಯನ್ನೂ ಸರಕಾರಗಳ ಮೇಲೆ ಹಾಕಿದೆ. ಮೀಸಲಾತಿ ವ್ಯವಸ್ಥೆಯ ಉದ್ದೇಶವೂ ಇದೇ. ಆದ್ದರಿಂದ ಮೀಸಲಾತಿಯ ಪ್ರಶ್ನೆಯನ್ನು ಕೇವಲ ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡದೆ, ಅದು ಸಾಮಾಜಿಕ ನ್ಯಾಯದ ಮೂಲಭೂತ ಸಾಧನ ಎಂಬ ಅರಿವಿನಿಂದ ಸಮೀಪಿಸುವುದು ಅಗತ್ಯವಾಗಿದೆ.
ಕರ್ನಾಟಕದಲ್ಲಿ 2023ರ ಮಾರ್ಚ್ 23ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿತು. ಇದು ತಕ್ಷಣದ ರಾಜಕೀಯ ನಿರ್ಧಾರವಾಗಿರಲಿಲ್ಲ. ದಶಕಗಳ ಕಾಲ ನಡೆದ ಹೋರಾಟಗಳು, ವಿವಿಧ ಸಾಮಾಜಿಕ ಸಂಘಟನೆಗಳ ಒತ್ತಾಯ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ಅಧ್ಯಯನ, ಜನಸಂಖ್ಯೆಯ ವಾಸ್ತವಿಕತೆ ಮತ್ತು ನ್ಯಾಯದ ಬೇಡಿಕೆಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಹೊರಬಂದಿತ್ತು.
ಆದರೆ ಈ ನಿರ್ಧಾರ ಕೈಗೊಂಡು ಮೂರು ವರ್ಷಗಳಾದರೂ, ಒಂದು ಮೂಲಭೂತ ಪ್ರಶ್ನೆ ಇನ್ನೂ ಉತ್ತರಕ್ಕಾಗಿ ಕಾಯುತ್ತಿದೆ. ಈ ಮೀಸಲಾತಿ ಹೆಚ್ಚಳಕ್ಕೆ ಶಾಶ್ವತ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ? ವಿಶೇಷವಾಗಿ ಸಂವಿಧಾನದ 9ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ಕಲ್ಪಿಸುವ ಕುರಿತು ಕೇಂದ್ರ ಸರಕಾರದ ಸ್ಪಷ್ಟ ನಿಲುವು ಮತ್ತು ಕ್ರಮ ಏಕೆ ಇನ್ನೂ ಸಾರ್ವಜನಿಕವಾಗಿ ಗೋಚರಿಸುತ್ತಿಲ್ಲ?
ಸಾಮಾಜಿಕ ನ್ಯಾಯದ ಭಾಷಣಗಳು ಮತ್ತು ಆಡಳಿತದ ಮೌನ
ಇಂದು ಕರ್ನಾಟಕದಿಂದ ಕೇಂದ್ರ ಸರಕಾರದಲ್ಲಿ ಪ್ರಭಾವಿ ಸ್ಥಾನದಲ್ಲಿರುವ ಅನೇಕ ನಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ರಾಜ್ಯದ ವಿವಿಧ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ನೀಡಿರುವ ಹೇಳಿಕೆಗಳು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಪ್ರಸ್ತುತ ಎಸ್‌ಟಿ ಪಟ್ಟಿಯಲ್ಲಿರುವವರಿಗೆ ಮೊದಲು ನ್ಯಾಯ ಕೊಡಿಸಿ. ಶೇ. 3ರಿಂದ 7ಕ್ಕೆ ಏರಿಕೆ ಮಾಡಿದ ಮೀಸಲಾತಿಯನ್ನು ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸುವ ಕೆಲಸ ಮಾಡಿ. ನಂತರ ಬುಡಕಟ್ಟು ಅಧ್ಯಯನ ಸಂಶೋಧನಾ ಸಂಸ್ಥೆಯವರು ನೀಡಿದ ಬುಡಕಟ್ಟು ಲಕ್ಷಣಗಳಿರುವ ಯಾವುದೇ ಅರ್ಹ ಜಾತಿಗಳನ್ನು ಸೇರಿಸಿ. ಆದರೆ ಸೇರಿಸುವ ಮುನ್ನ ಅದರ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಅಷ್ಟೇ ಪರ್ಸೆಂಟ್ ಮೀಸಲಾತಿಯನ್ನು ಕಲ್ಪಿಸಿ ಸೇರ್ಪಡೆ ಮಾಡಿ. ಅದು ಬಿಟ್ಟು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ.
ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮುದಾಯದ ನ್ಯಾಯಸಮ್ಮತ ಬೇಡಿಕೆಯನ್ನು ಪ್ರಸ್ತಾಪಿಸುವುದು ತಪ್ಪಲ್ಲ. ಪ್ರತಿಯೊಂದು ಸಮುದಾಯಕ್ಕೂ ತನ್ನ ಹಕ್ಕುಗಳಿಗಾಗಿ ಮನವಿ ಮಾಡುವ ಹಕ್ಕಿದೆ. ಆದರೆ ಈಗಾಗಲೇ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಸಮುದಾಯಗಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇನ್ನೂ ಬಗೆಹರಿಯದೇ ಇರುವಾಗ ಹೊಸ ಭರವಸೆಗಳು ಮತ್ತು ಹೊಸ ರಾಜಕೀಯ ಘೋಷಣೆಗಳು ಹೆಚ್ಚು ಕೇಳಿಬರುವುದು ಸಹಜವಾಗಿಯೇ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮೊದಲು ಈಗಿರುವ ಹಕ್ಕುಗಳನ್ನು ಭದ್ರಪಡಿಸುವುದು ಆಡಳಿತದ ಮೊದಲ ಜವಾಬ್ದಾರಿಯಲ್ಲವೇ? ಈಗಾಗಲೇ ಹೆಚ್ಚಿಸಲಾದ ಮೀಸಲಾತಿಗೆ ಕಾನೂನುಬದ್ಧ ಹಾಗೂ ಸಂವಿಧಾನಾತ್ಮಕ ರಕ್ಷಣೆ ಒದಗಿಸದೆ ಹೊಸ ಭರವಸೆಗಳನ್ನು ನೀಡುವುದು ಸಾಮಾಜಿಕ ನ್ಯಾಯದ ರಾಜಕಾರಣವೇ ಅಥವಾ ರಾಜಕೀಯದ ಸಾಮಾಜಿಕ ನ್ಯಾಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಮೂಡುತ್ತದೆ.
9ನೇ ಶೆಡ್ಯೂಲ್: ರಾಜಕೀಯದ ವಿಷಯವಲ್ಲ, ಸಂವಿಧಾನಾತ್ಮಕ ಭದ್ರತೆಯ ಪ್ರಶ್ನೆ
ಮೀಸಲಾತಿ ವಿಷಯದಲ್ಲಿ ನ್ಯಾಯಾಂಗ ಪರಿಶೀಲನೆ, ಕಾನೂನು ಸವಾಲುಗಳು ಮತ್ತು ಸಂವಿಧಾನಾತ್ಮಕ ವ್ಯಾಖ್ಯಾನಗಳು ಹೊಸದೇನಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಸಂಬಂಧಿತ ಹಲವು ಕಾನೂನುಗಳು ನ್ಯಾಯಾಲಯಗಳ ಪರಿಶೀಲನೆಗೆ ಒಳಗಾಗಿವೆ. ಇದೇ ಕಾರಣಕ್ಕೆ ಕರ್ನಾಟಕದ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೂ ಸಂವಿಧಾನದ 9ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ನೀಡಬೇಕೆಂಬ ಬೇಡಿಕೆ ಹಲವು ಸಾಮಾಜಿಕ ಸಂಘಟನೆಗಳು, ಕಾನೂನು ತಜ್ಞರು ಮತ್ತು ಸಾರ್ವಜನಿಕ ವಲಯದಿಂದ ನಿರಂತರವಾಗಿ ಕೇಳಿಬರುತ್ತಿದೆ.
ಈ ಬೇಡಿಕೆಯನ್ನು ಯಾವುದೇ ಒಂದು ಪಕ್ಷದ ವಿರುದ್ಧದ ರಾಜಕೀಯ ಟೀಕೆಯಾಗಿ ನೋಡಬಾರದು. ಇದು ಸಾಮಾಜಿಕ ನ್ಯಾಯದ ಶಾಶ್ವತತೆಯ ಕುರಿತ ಆತಂಕವಾಗಿದೆ. ರಾಜ್ಯ ಸರಕಾರ ಅಗತ್ಯ ದಾಖಲೆಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ ಎಂದು ಹಲವು ಬಾರಿ ಹೇಳಲಾಗಿದೆ. ಹಾಗಿದ್ದರೆ ಆ ಕಡತಗಳು ಇಂದು ಯಾವ ಹಂತದಲ್ಲಿವೆ? ಕೇಂದ್ರ ಸರಕಾರವು ಯಾವ ಕ್ರಮ ಕೈಗೊಂಡಿದೆ? ವಿಳಂಬಕ್ಕೆ ಕಾರಣವೇನು? ಆಡಳಿತಾತ್ಮಕ ಅಡೆತಡೆಗಳಿವೆಯೇ? ಅಥವಾ ರಾಜಕೀಯ ಆದ್ಯತೆಯ ಕೊರತೆಯೇ ಕಾರಣ?
ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಸರಕಾರದ ಹೊಣೆಗಾರಿಕೆ. ಮೌನವು ಉತ್ತರವಾಗಲಾರದು.
ಇಡಬ್ಲ್ಯುಎಸ್ ಮೀಸಲಾತಿಯ ವೇಗ ಮತ್ತು ಎಸ್‌ಸಿ/ಎಸ್‌ಟಿ ಪ್ರಶ್ನೆಯ ನಿಧಾನ
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಶೇಕಡಾ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಅತ್ಯಂತ ವೇಗವಾಗಿ ಸಂಸತ್ತಿನಲ್ಲಿ ಅಂಗೀಕಾರಗೊಂಡು ಕಾನೂನಾಗಿ ಜಾರಿಗೆ ಬಂದಿತ್ತು. ಇದನ್ನು ಅನೇಕರು ರಾಜಕೀಯ ಇಚ್ಛಾಶಕ್ತಿಯ ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ. ಸರಕಾರಕ್ಕೆ ಸಂಕಲ್ಪವಿದ್ದರೆ ಸಂವಿಧಾನ ತಿದ್ದುಪಡಿ ಸೇರಿದಂತೆ ಸಂಕೀರ್ಣ ಕಾನೂನು ಪ್ರಕ್ರಿಯೆಗಳನ್ನೂ ಅತ್ಯಂತ ವೇಗವಾಗಿ ಪೂರ್ಣಗೊಳಿಸಬಹುದು ಎಂಬುದನ್ನು ಆ ಪ್ರಕ್ರಿಯೆ ತೋರಿಸಿಕೊಟ್ಟಿತು.
ಅದೇ ಸಂದರ್ಭದಲ್ಲಿ ಒಂದು ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ರಾಜಕೀಯ ಇಚ್ಛಾಶಕ್ತಿ ಇದ್ದಾಗ ಕೆಲವೇ ದಿನಗಳಲ್ಲಿ ಮಹತ್ವದ ಸಂವಿಧಾನ ತಿದ್ದುಪಡಿಗಳು ಸಾಧ್ಯವಾಗುತ್ತಿದ್ದರೆ, ಕರ್ನಾಟಕದಲ್ಲಿ ಈಗಾಗಲೇ ಜಾರಿಯಾಗಿರುವ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ಸಂವಿಧಾನಾತ್ಮಕ ರಕ್ಷಣೆಯ ವಿಚಾರದಲ್ಲಿ ಅದೇ ವೇಗ ಏಕೆ ಕಾಣಿಸುತ್ತಿಲ್ಲ?
ಈ ಪ್ರಶ್ನೆಗೆ ಉತ್ತರಿಸುವುದು ಆಡಳಿತ ನಡೆಸುತ್ತಿರುವ ಸರಕಾರದ ಜವಾಬ್ದಾರಿ.
ಹೊಸ ಸೇರ್ಪಡೆಗಳ ಚರ್ಚೆ ಮತ್ತು ನ್ಯಾಯದ ಸಮತೋಲನ
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ನಡೆಯುತ್ತಿರುವ ಚರ್ಚೆ ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ಇದು ಕೇಂದ್ರ ಸರಕಾರ, ಭಾರತ ಸರಕಾರದ ಸಂಬಂಧಿತ ಸಚಿವಾಲಯಗಳು, ಜನಾಂಗೀಯ ಅಧ್ಯಯನ ಸಂಸ್ಥೆಗಳು ಮತ್ತು ಸಂವಿಧಾನಾತ್ಮಕ ಪ್ರಕ್ರಿಯೆಗಳ ಮೂಲಕವೇ ನಿರ್ಧಾರಗೊಳ್ಳಬೇಕಾದ ವಿಷಯ.
ಆದರೆ ಇಲ್ಲಿ ಅತ್ಯಂತ ಮುಖ್ಯವಾದ ಪ್ರಶ್ನೆಯೆಂದರೆ, ಒಂದು ವೇಳೆ ಹೊಸ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿದರೆ ಈಗಾಗಲೇ ಆ ಪಟ್ಟಿಯಲ್ಲಿರುವ ಸಮುದಾಯಗಳ ಪಾಲಿನ ಮೀಸಲಾತಿ ಮತ್ತು ಅವಕಾಶಗಳು ಕುಗ್ಗದಂತೆ ಯಾವ ರೀತಿಯ ಭದ್ರತೆ ಒದಗಿಸಲಾಗುತ್ತದೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುವುದು ಅನಗತ್ಯ ಗೊಂದಲ, ಅನುಮಾನ ಮತ್ತು ಸಮುದಾಯಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯವನ್ನು ಹೊಂದಿದೆ.
ಸಾಮಾಜಿಕ ನ್ಯಾಯ ಎಂದರೆ ಒಂದು ಸಮುದಾಯಕ್ಕೆ ನ್ಯಾಯ ಕೊಡಿಸುವ ಹೆಸರಿನಲ್ಲಿ ಮತ್ತೊಂದು ಸಮುದಾಯದ ಆತಂಕವನ್ನು ನಿರ್ಲಕ್ಷಿಸುವುದಲ್ಲ. ಎಲ್ಲ ಸಮುದಾಯಗಳ ನ್ಯಾಯಸಮ್ಮತ ಹಕ್ಕುಗಳನ್ನು ಸಮತೋಲನದಿಂದ ರಕ್ಷಿಸುವುದೇ ನಿಜವಾದ ಸಾಮಾಜಿಕ ನ್ಯಾಯ.
2023ರಲ್ಲಿ ಮೀಸಲಾತಿ ಹೆಚ್ಚಳದ ನಿರ್ಧಾರ ಕೈಗೊಂಡ ಸರಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾಗಿದ್ದ ಜಗದೀಶ್ ಶೆಟ್ಟರ್, ವಿ. ಸೋಮಣ್ಣ ಸೇರಿದಂತೆ ಹಲವರು ಇಂದು ಸಂಸದರಾಗಿದ್ದಾರೆ. ಅವರಲ್ಲಿ ಕೆಲವರು ಕೇಂದ್ರ ಸರಕಾರದಲ್ಲಿಯೂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹಾಗಾದರೆ ಈ ವಿಷಯವನ್ನು ಅವರು ಸಂಸತ್ತಿನಲ್ಲಿ ಎಷ್ಟು ಬಾರಿ ಪ್ರಸ್ತಾಪಿಸಿದ್ದಾರೆ? ಕೇಂದ್ರ ಸರಕಾರದ ಮುಂದೆ ಎಷ್ಟು ಬಾರಿ ಅಧಿಕೃತವಾಗಿ ಮನವಿ ಮಾಡಿದ್ದಾರೆ? ಈ ಕುರಿತು ಸಾರ್ವಜನಿಕರಿಗೆ ಯಾವ ಮಾಹಿತಿ ನೀಡಿದ್ದಾರೆ? ಜನಪ್ರತಿನಿಧಿಗಳ ಮೌನವು ಅವರ ಭಾಷಣಗಳಿಗಿಂತಲೂ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮತಗಳು ಪ್ರತಿಯೊಂದು ಚುನಾವಣೆಯಲ್ಲೂ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದವು. ಆದರೆ ಚುನಾವಣೆ ಮುಗಿದ ನಂತರ ಅವರ ಸಂವಿಧಾನಾತ್ಮಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗಳು ವರ್ಷಗಳ ಕಾಲ ಬಾಕಿ ಉಳಿದರೆ, ಜನರಲ್ಲಿ ಅಸಮಾಧಾನ ಮತ್ತು ಅನುಮಾನ ಮೂಡುವುದು ಸಹಜ. ಸಾಮಾಜಿಕ ನ್ಯಾಯವನ್ನು ಕೇವಲ ಚುನಾವಣಾ ವೇದಿಕೆಯ ಘೋಷಣೆಯನ್ನಾಗಿ ಮಾಡಿದರೆ ಅದು ರಾಜಕೀಯಕ್ಕೆ ತಾತ್ಕಾಲಿಕ ಲಾಭ ನೀಡಬಹುದು; ಆದರೆ ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ.
ಈ ವಿಚಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ರಾಜಕೀಯ ಸಂಘರ್ಷವಾಗಿ ನೋಡುವುದಕ್ಕಿಂತ ಸಂವಿಧಾನಾತ್ಮಕ ಹೊಣೆಗಾರಿಕೆಯಾಗಿ ಪರಿಗಣಿಸುವ ಸಮಯ ಬಂದಿದೆ. ಮೊದಲಿಗೆ ಈಗಾಗಲೇ ಹೆಚ್ಚಿಸಲಾದ ಎಸ್‌ಸಿ/ಎಸ್‌ಟಿ ಮೀಸಲಾತಿಗೆ ಅಗತ್ಯವಾದ ಸಂವಿಧಾನಾತ್ಮಕ ಭದ್ರತೆ ಒದಗಿಸಬೇಕು. ನಂತರ ವೈಜ್ಞಾನಿಕ ಅಧ್ಯಯನ, ಜನಸಂಖ್ಯಾ ದತ್ತಾಂಶ, ಬುಡಕಟ್ಟು ಸಮುದಾಯಗಳ ವಾಸ್ತವ ಸ್ಥಿತಿ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಆಧಾರದ ಮೇಲೆ ಹೊಸ ಸಮುದಾಯಗಳ ಸೇರ್ಪಡೆ ಕುರಿತು ಪಾರದರ್ಶಕ ಹಾಗೂ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು.
ಇದು ಯಾವುದೇ ಒಂದು ಸಮುದಾಯದ ವಿರುದ್ಧದ ನಿಲುವಲ್ಲ. ಇದು ನ್ಯಾಯದ ಸಮತೋಲನವನ್ನು ಕಾಪಾಡುವ, ಸಂವಿಧಾನದ ಆಶಯವನ್ನು ಗೌರವಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಭದ್ರಪಡಿಸುವ ಬೇಡಿಕೆಯಾಗಿದೆ.
ಕೇಂದ್ರದ ಹಿರಿಯ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಇಂದು ಒಂದೂವರೆ ಕೋಟಿಗೂ ಅಧಿಕ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳ ಪರವಾಗಿ ಕೆಲವು ಪ್ರಶ್ನೆಗಳು ಕೇಳಲ್ಪಡುತ್ತಿವೆ. ಕರ್ನಾಟಕ ಸರಕಾರ ಹೆಚ್ಚಿಸಿರುವ ಮೀಸಲಾತಿಗೆ ಸಂವಿಧಾನಾತ್ಮಕ ರಕ್ಷಣೆ ಕಲ್ಪಿಸುವ ಪ್ರಕ್ರಿಯೆಗೆ ನೀವು ಮುಂದಾಳತ್ವ ವಹಿಸಲಿಲ್ಲ? ಸಂಸತ್ತಿನಲ್ಲಿ ಈ ವಿಚಾರವನ್ನು ಆದ್ಯತೆಯೊಂದಿಗೆ ಏಕೆ ಪ್ರಸ್ತಾಪಿಸಲಿಲ್ಲ? ಕೇಂದ್ರ ಸರಕಾರದಿಂದ ಸ್ಪಷ್ಟ ಸಮಯಮಿತಿಯ ಕಾರ್ಯಯೋಜನೆ ಪ್ರಕಟವಾಗುವಂತೆ ಏಕೆ ಪ್ರಯತ್ನಿಸಲಿಲ್ಲ? ಅಥವಾ ಈ ಪ್ರಶ್ನೆಯೂ ಮುಂದಿನ ಚುನಾವಣೆಯವರೆಗೆ ಮತ್ತೊಂದು ರಾಜಕೀಯ ಘೋಷಣೆಯಾಗಿ ಉಳಿಯಲಿದೆಯೇ?
ಸಾಮಾಜಿಕ ನ್ಯಾಯ ಎಂಬುದು ಘೋಷಣೆಯಲ್ಲ; ಅದು ಆಡಳಿತದ ನೈತಿಕ ಪರೀಕ್ಷೆ. ಅದು ಸಂವಿಧಾನದ ಮೇಲಿನ ಬದ್ಧತೆಯ ಪರೀಕ್ಷೆ. ಅದು ಜನಪ್ರತಿನಿಧಿಗಳ ಉತ್ತರದಾಯಿತ್ವದ ಪರೀಕ್ಷೆ. ಮುಖ್ಯವಾಗಿ, ಅದು ಲಕ್ಷಾಂತರ ಅಂಚಿನ ಸಮುದಾಯಗಳ ಬದುಕು, ಭವಿಷ್ಯ ಮತ್ತು ಗೌರವಕ್ಕೆ ಸಂಬಂಧಿಸಿದ ಪ್ರಶ್ನೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕಿಂತ ಸಂವಿಧಾನದ ಆಶಯದಂತೆ ನ್ಯಾಯವನ್ನು ಜಾರಿಗೆ ತರುವುದು ಯಾವುದೇ ಸರಕಾರದ ನಿಜವಾದ ಸಾಧನೆಯಾಗಬೇಕು. ಇಂದು ದೇಶದ ಪ್ರಜಾಪ್ರಭುತ್ವ ಕೇಳುತ್ತಿರುವ ಪ್ರಶ್ನೆ ಒಂದೇ ಘೋಷಣೆಗಳು ಸಾಕು... ನ್ಯಾಯ ಯಾವಾಗ?