×
Ad

ಬೀದರ್‌ನ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪೂಜಾ ಸದಾಂಗಿ

Update: 2025-06-17 14:19 IST

ಬೀದರ್: ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಎಂಬ ಹೆಗ್ಗಳಿಕೆಗೆ ಪೂಜಾ ಸದಾಂಗಿ ಅವರು ಪಾತ್ರರಾಗಿದ್ದಾರೆ.

ಹರಿಯಾಣದ ಎಫ್‌ಎಸ್‌ಟಿಸಿ ಫ್ಲೈಯಿಂಗ್ ಸ್ಕೂಲ್‌ನಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದಿರುವ ಇವರು, 200 ಗಂಟೆಗಳ ಕಾಲ ವಿಮಾನ ಹಾರಿಸುವ ಮೂಲಕ ಕಮರ್ಷಿಯಲ್ ಪೈಲಟ್‌ನ ಸಂಪೂರ್ಣ ತರಬೇತಿ ಪಡೆದಿದ್ದಾರೆ. ಇವರು ಇನ್ನು ಮುಂದೆ ಯಾವುದಾದರು ಏರ್ ಲೈನ್ಸ್ ಸಂಸ್ಥೆಗೆ ಪೈಲಟ್ ಆಗಿ ಸೇರಲು ಬಯಸಿದ್ದಾರೆ. ಅದಕ್ಕಾಗಿ ಅವರು ತಯಾರಿ ನಡೆಸಿದ್ದಾರೆ.

ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಬೀದರ್‌ನ ಗುರುನಾನಕ್ ಶಾಲೆಯಲ್ಲಿ ಮುಗಿಸಿದ ಇವರು, ಧಾರವಾಡದಲ್ಲಿ ಪಿಯುಸಿ ಸೈನ್ಸ್ ಪಾಸಾಗಿದ್ದಾರೆ. ಅದಾದ ನಂತರ ಇಂಜಿನಿಯರಿಂಗ್, ಮೆಡಿಕಲ್ ಓದುವುದಕ್ಕೆ ಆಸಕ್ತಿ ಇರದ ಇವರು ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ.

ಲಾಕ್‌ಡೌನ್ ಬದಲಾಯಿಸಿತು ಯೋಚನೆ: ಬಿಬಿಎ ಪದವಿ ಮುಗಿಸಿದ ನಂತರ ಎಂಬಿಎ ಮಾಡುವ ಯೋಜನೆ ಪೂಜಾ ಅವರದ್ದಾಗಿತ್ತು. ಆದರೆ ಆ ಸಮಯದಲ್ಲಿ ಕೋವಿಡ್ ರೋಗವು ಎಲ್ಲೆಡೆ ಹರಡಿ, ಲಾಕ್ಡೌನ್ ಹೆರಲಾಗಿತ್ತು. ಇದರಿಂದಾಗಿ ಎಂಬಿಎ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಇವರು ತುಂಬಾ ರಿಸರ್ಚ್ ಮಾಡುತ್ತಾರೆ. ಅದಾಗಲೇ ಇವರಿಗೆ ಹೊಳೆದದ್ದು ಪೈಲಟ್ ಬಗ್ಗೆ. ನಂತರ ಫೈಲಟ್‌ನ ಪ್ರೊಫೆಷನ್, ಜಾಯಿನ್ ಆಗುವುದು ಹೇಗೆ, ಅರ್ಜಿ ಹೇಗೆ ಭರ್ತಿ ಮಾಡಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡು ಇದಕ್ಕೆ ಬೇಕಾಗುವ ಎಲ್ಲ ಪ್ರಯತ್ನ ಮಾಡುವ ಮೂಲಕ ಇವರು ಪೈಲಟ್ ತರಬೇತಿಗೆ ಸೇರುತ್ತಾರೆ. ನನಗೆ ಯಾವುದೇ ವಲಯದಲ್ಲಿ ಆಸಕ್ತಿ ಇರಲಿಲ್ಲ. ಪೈಲಟ್ ಬಗ್ಗೆ ತಿಳಿದುಕೊಳ್ಳುತ್ತಾ ಹೋದ ಹಾಗೆ ಅದರ ಮೇಲೆ ಆಸಕ್ತಿ ಹೆಚ್ಚಾಯಿತು ಎಂದು ಪೂಜಾ ಸದಾಂಗಿ ಹೇಳುತ್ತಾರೆ.

ಫ್ಲೈಯಿಂಗ್ ಅನ್ನು ಪ್ರೀತಿಸುವ ಪೂಜಾ ಅವರು ಇವಾಗ ಏರ್‌ಲೈನ್ ಪೈಲಟ್ ಆಗಬೇಕು ಎನ್ನುವ ಕನಸು ಹೊತ್ತಿದ್ದಾರೆ. ಕಮರ್ಷಿಯಲ್ ಪೈಲಟ್ ನ ಕನಸು ನನಸು ಮಾಡಿದ ಹಾಗೆಯೇ ಏರ್‌ಲೈನ್ ಪೈಲಟ್‌ನ ಕನಸು ಕೂಡ ನನಸು ಮಾಡುವ ಛಲ ಅವರಲ್ಲಿ ಕಾಣುತ್ತದೆ. ಸದ್ಯಕ್ಕೆ ಅವರು ಏರ್ ಲೈನ್ಸ್ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ. ಏರ್‌ಲೈನ್ಸ್ ಪೈಲಟ್ ನ ಹುದ್ದೆಗಳ ಭರ್ತಿಗಾಗಿ ಅರ್ಜಿ ಬಿಟ್ಟಿದ್ದರೆ, ಅರ್ಜಿ ಭರ್ತಿ ಮಾಡಿ ಏರ್‌ಲೈನ್ ನಲ್ಲಿ ನೇಮಕವಾಗುವ ಭರವಸೆ ಅವರು ಮೂಡಿಸಿದ್ದಾರೆ.

ಪೂಜಾ ಅವರ ಕುಟುಂಬದ ಹಿನ್ನೆಲೆ: ಪೂಜಾ ಸದಾಂಗಿ ಅವರ ತಂದೆ ಹೆಸರು ಸರೋಜಕುಮಾರ್. ತಾಯಿ ಶಾಂತಶ್ರಿ. ಸರೋಜಕುಮಾರ್ ಅವರು ಮೂಲತಃ ಒಡಿಶಾ ರಾಜ್ಯದವರು. ತಾಯಿ ರಾಯಚೂರು ಜಿಲ್ಲೆಯವರು. ಸರೋಜಕುಮಾರ್ ಅವರು ಚಾರ್ಟೆರ್ಡ್ ಅಕೌಂಟೆಂಟ್ ಆಗಿ ಹೆಸರುವಾಸಿಯಾಗಿದ್ದವರು. ಶಾಂತಶ್ರಿ ಅವರು ಬಿ.ಕಾಂ ಪದವೀಧರೆಯಾಗಿದ್ದಾರೆ. ಒಬ್ಬ ಮಗನಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೊಸೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಆಗಿದ್ದೇನೆ ಎಂದು ಗೊತ್ತೇ ಇರಲಿಲ್ಲ. ತರಬೇತಿ ಮುಗಿಸಿ ಇಲ್ಲಿಗೆ ಬಂದಾಗ ಬೇರೆಯವರು ಈ ವಿಷಯ ನನಗೆ ಹೇಳಿದರು. ಇದರಿಂದ ನನಗೆ ತುಂಬಾ ಖುಷಿ ಇದೆ. ನನ್ನ ಕುಟುಂಬದವರು ನನ್ನ ಆಯ್ಕೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕೆ ಈ ಸಾಧನೆ ಸಾಧ್ಯವಾಗಿದೆ.

-ಪೂಜಾ ಸದಾಂಗಿ, ಪೈಲಟ್

ಮಗಳು ಪೈಲಟ್ ಆಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಅವಳ ಇಚ್ಛೆಯಂತೆ ಅವಳು ಪೈಲಟ್ ಆಗಿದ್ದಾಳೆ. ಇನ್ನು ಮುಂದೆ 1,500 ಗಂಟೆಗಳ ಕಾಲ ವಿಮಾನ ಹಾರಿಸುವ ಮೂಲಕ ಅವಳು ಅಂತರ್‌ರಾಷ್ಟ್ರೀಯ ಪೈಲಟ್ ಆಗುವ ಕನಸು ಹೊತ್ತಿದ್ದಾಳೆ. ಅವಳ ಸ್ವಾತಂತ್ರ್ಯಕ್ಕೆ ನಾವು ಅಡ್ಡಿಪಡಿಸದೆ ಅವಳನ್ನು ಬೆಂಬಲಿಸುತ್ತೇವೆ.

-ಶಾಂತಶ್ರೀ, ಪೂಜಾ ತಾಯಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor

Similar News