×
Ad

ಅಲ್ಪಸಂಖ್ಯಾತರ ಮಕ್ಕಳಿಗೆ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ : 9, 10ನೇ ವಿದ್ಯಾರ್ಥಿಗಳಿಗಿಲ್ಲ ವಿದ್ಯಾರ್ಥಿ ವೇತನ

Update: 2025-06-28 23:28 IST

ಮಂಗಳೂರು : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ಪೂರ್ವದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯುವ ಅವಕಾಶ ಇಲ್ಲದಾಗಿದೆ.

ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವದ ಅಂದರೆ 1ರಿಂದ 8ನೇ ತರಗತಿ ತನಕದ ವಿದ್ಯಾರ್ಥಿ ವೇತನ ಪಡೆಯಲು ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 30ರ ತನಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಹಿಂದಿನ ವರ್ಷವೂ ಈ ವಿದ್ಯಾರ್ಥಿ ವೇತನದ ವ್ಯಾಪ್ತಿಯಿಂದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಹೊರಗಿಡಲಾಗಿತ್ತು. ಈ ವರ್ಷವೂ ಅದು ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಹಿಂದುಳಿದ ವರ್ಗಗಳ ಇಲಾಖೆಯಿಂದ ಹಿಂದುಳಿದ 1ರಿಂದ 8ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಬದಲಿಗೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಆದರೆ ಅಲ್ಪಸಂಖ್ಯಾತರ ಇಲಾಖೆ ಮಾತ್ರ ನಿರ್ಣಾಯಕ ಹಂತದಲ್ಲಿ ವಿದ್ಯಾರ್ಥಿಗಳನ್ನು ಕೈ ಬಿಟ್ಟಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವಲ್ಲಿ 9 ಮತ್ತು 10ನೇ ತರಗತಿ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಲಭಿಸಿದರೆ ಮುಂದಿನ ಹಂತಕ್ಕೆ ತಯಾರಿ ನಡೆಸಲು ಹೆಚ್ಚು ಅನುಕೂಲವಾಗುತ್ತದೆ. ವಿದ್ಯಾರ್ಥಿ ವೇತನವನ್ನೇ ನಂಬಿ ಶಿಕ್ಷಣ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳು ಸರಕಾರದ ಈ ನಡೆಯಿಂದ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಅಪಾಯವೂ ಇದೆ.

9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದಿಂದ ಯಾಕೆ ಹೊರಗಿಡಲಾಗಿದೆ ಎಂಬ ಪ್ರಶ್ನೆಗೆ ಇಲಾಖೆಯಿಂದಲೂ ಸಮರ್ಪಕ ಮಾಹಿತಿ ಇಲ್ಲ. ಸರಕಾರದ ಈ ನಡೆಗೆ ವಿದ್ಯಾರ್ಥಿಗಳಿಂದ ಮತ್ತು ಅವರ ಹೆತ್ತವರಿಂದ ಅಸಮಾಧಾನ ವ್ಯಕ್ತವಾಗಿದೆ.

ಮೆಟ್ರಿಕ್ ಪೂರ್ವದಲ್ಲಿ ವಿದ್ಯಾರ್ಥಿ ವೇತನ ನೀಡುವಲ್ಲಿ ಇಂತಹ ತಾರತಮ್ಯ ತೋರಿದ್ದರೆ ರಾಜ್ಯ ವಿದ್ಯಾರ್ಥಿ ವೇತನ ತತ್ರಾಂಶ (ಎಸ್‌ಎಸ್‌ಪಿ)ದಲ್ಲಿ ಮೆಟ್ರಿಕ್ ನಂತರದ ಹಾಗೂ ಮೆರಿಟ್ -ಕಂ-ಮೀನ್ಸ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ಅವಕಾಶ ಇರುವಾಗ ಮೆಟ್ರಿಕ್ ಪೂರ್ವದಲ್ಲಿ ಇಂತಹ ಭೇದ ಯಾಕೆ? ಈ ತಾರತಮ್ಯ ಸೂಕ್ಷ್ಮ ಮನಸಿನ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಪ್ರಾಥಮಿಕ ಶಿಕ್ಷಣದಲ್ಲಿ 1ರಿಂದ 3ನೇ ತರಗತಿ ತನಕ ಸ್ಕಾಲರ್ ಶಿಪ್ ಇಲ್ಲದಿದ್ದರೂ ದೊಡ್ಡ ಸಮಸ್ಯೆಯಾಗದು. ಆದರೆ ಶಿಕ್ಷಣದ ನಿರ್ಣಾಯಕ ಹಂತದಲ್ಲಿ ವಿದ್ಯಾರ್ಥಿ ವೇತನವನ್ನು ನೀಡದಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳ ಕೆಲವು ಪೋಷಕರು ವ್ಯಕ್ತಪಡಿಸಿದ್ದಾರೆ.

ಎಸ್‌ಎಸ್‌ಪಿಯಲ್ಲಿ ಮೆಟ್ರಿಕ್ ಪೂರ್ವದ ವಿದ್ಯಾರ್ಥಿ ವೇತನ ಪಡೆಯಲು ಈಗಿನ ನಿಯಮ ಪ್ರಕಾರ ಅಲ್ಪಸಂಖ್ಯಾತರ ಸಮುದಾಯದ 9-10 ತರಗತಿಗಳ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ. 1ರಿಂದ 10ನೇ ತರಗತಿ ತನಕ ವಿದ್ಯಾರ್ಥಿ ವೇತನ ಸಿಗಬೇಕು ಎಂಬ ಆಗ್ರಹವನ್ನು ವಿದ್ಯಾರ್ಥಿಗಳ ಕೆಲವು ಹೆತ್ತವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.

-ಜಿನೇಂದ್ರ ಕೋಟ್ಯಾನ್ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದ.ಕ. ಜಿಲ್ಲೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹೀಂ ಅಡ್ಕಸ್ಥಳ

contributor

Similar News