ರಾಯಚೂರು ಮಹಾನಗರ ಪಾಲಿಕೆಯಾದರೂ ಬದಲಾಗದ ಬಡಾವಣೆ, ರಸ್ತೆಗಳ ನಾಮಫಲಕ
ರಾಯಚೂರು: ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ವ್ಯವಸ್ಥೆಯಲ್ಲಿ ಸುಧಾರಣೆ ಮಂದಗತಿಯಲ್ಲಿಯೇ ನಡೆಯುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಚೇರಿಗೆ ಹಾಗೂ ಒಂದಿಷ್ಟು ಕಡೆ ಮಹಾನಗರ ಪಾಲಿಕೆ ಹೆಸರಿನ ನಾಮಫಲಕ ಮಾತ್ರ ಬದಲಾಗಿದ್ದು ಹಲವೆಡೆ ನಗರಸಭೆಯಂತಲೇ ಮುಂದುವರಿದಿದೆ.
ರಾಯಚೂರು ಜಿಲ್ಲಾಕೇಂದ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದು ತೆಲಂಗಾಣದಿಂದ ರಾಯಚೂರು ತಾಲೂಕಿನ ಶಕ್ತಿನಗರಕ್ಕೆ ಬರಬೇಕಾದರೆ ಸ್ವಾಗತ ಕೋರುವ ನಾಮಫಲಕದಲ್ಲಿ ಇನ್ನೂ ನಗರಸಭೆ ಅಂತಿದೆ.
ಬಡಾವಣೆಗಳಿಗಿಲ್ಲ ನಾಮಫಲಕ: ಜಿಲ್ಲಾ ಕೇಂದ್ರವಾಗಿರುವ ರಾಯಚೂರಿನಲ್ಲಿ 35 ವಾರ್ಡ್ ಗಳಿವೆ. ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ, ಸ್ವಚ್ಛತೆ, ನೈರ್ಮಲ್ಯ ಮೂಲಸೌಕರ್ಯ ಸಮರ್ಪಕವಾಲ್ಲ ಎಂಬ ಕೊರಗು ಇದೆ. ಮತ್ತೊಂದೆಡೆ ಈಗಲೂ ಜನರು ವಿಳಾಸ ಹುಡುಕಲು ಪರದಾಡುವ ಪರಿಸ್ಥಿತಿ ಬದಲಾಗಿಲ್ಲ. ಬಹುತೇಕ ಬಡಾವಣೆಗಳಿಗೆ ಸುಸಜ್ಜಿತವಾದ ನಾಮಫಲಕಗಳನ್ನು ಹಾಕಿಸಿಲ್ಲ, ಜನ ಅವರಿವರನ್ನು ಕೇಳಿಕೊಂಡು ವಿಚಾರಿಸಿಕೊಂಡು ವಿಳಾಸವನ್ನು ತಲುಪುವ ಅನಿವಾರ್ಯತೆ ಇದೆ.
ಹೊಸದಾಗಿ ತಲೆ ಎತ್ತುತ್ತಿರುವ ಬಡಾವಣೆಗಳು ಮತ್ತು ಉದ್ಯಾನಗಳ ಅಭಿವೃದ್ಧಿ ಮಾಡಿದ ಕಡೆಗಳಲ್ಲಿ ಬಡಾವಣೆ ಹೆಸರಿನಲ್ಲಿ ಫಲಕಗಳನ್ನು ಹಾಕುತ್ತಿದ್ದಾರೆ. ಆದರೆ ಹಳೆಯ ಬಡಾವಣೆಗಳಲ್ಲಿ ಮಾಹಿತಿ ಫಲಕಗಳಿಲ್ಲ. ಕನಿಷ್ಠಪಕ್ಷ ಪ್ರಮುಖ ಬಡಾವಣೆಗಳಿಗೆ ಪ್ರವೇಶ ದ್ವಾರಗಳನ್ನು ನಿರ್ಮಿಸಿ ದೊಡ್ಡದಾದ ಫಲಕಗಳನ್ನು ಅಳವಡಿಸಿದರೆ ಜನರು ಸಮರ್ಪಕವಾಗಿ ಮಾರ್ಗಗಳನ್ನು ಹುಡುಕುವುದಕ್ಕೆ ಅನುಕೂಲವಾಗುತ್ತದೆ. ಆದರೆ ರಾಯ ಚೂರಿನಲ್ಲಿ ಯಾವುದೇ ವಿಳಾಸಕ್ಕೆ ತಲುಪಬೇಕಿದ್ದರೆ ಜನರನ್ನು ವಿಚಾರಿಸದೇ ತಲುಪುವುದು ಅಸಾಧ್ಯ. ಬಡಾವಣೆಗಳಲ್ಲಿ ಸಮರ್ಪಕವಾಗಿ ಅಡ್ಡರಸ್ತೆ ಮುಖ್ಯರಸ್ತೆ ಫಲಕಗಳನ್ನು ಹಾಕಿಲ್ಲ. ಹೀಗಾಗಿ ರಸ್ತೆಗಳ ಅತಿಕ್ರಮಣವು ವಿಪರೀತವಾಗಿದೆ.
ರಸ್ತೆ ಮಾರ್ಗಗಳಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಸಂಖ್ಯೆಯು ಹೆಚ್ಚಾಗಿದೆ. ಇದಕ್ಕೆ ನಗರಸಭೆಯೆ ಆಸ್ಪದ ಕೊಡುತ್ತಿದ್ದು, ಫಲಕಗಳನ್ನು ಅಳವಡಿಸಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಅತಿಕ್ರಮಣವನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುವುದು ಜನರ ಆಗ್ರಹ.
ಕೋಟೆ, ಕೊತ್ತಲ ನಾಡು: ರಾಯಚೂರು ನಗರದ ಬಡಾವಣೆಗಳ ನಿವೇಶನಗಳ ನಕ್ಷೆಗಳನ್ನು ನಿರ್ವಹಣೆ ಮಾಡುವ ರಾಯಚೂರು ನಗರ ಅಭಿವೃದ್ಧಿ ಪ್ರಾಧಿಕಾರ ಕೂಡ ಈ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು ಪ್ರವೇಶ ದ್ವಾರಕಷ್ಟೇ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಮಾರ್ಗಗಳಿಗೆ ಸರಿಯಾದ ಸಂಖ್ಯೆಗಳನ್ನು ಅಳವಡಿಸುತ್ತಿಲ್ಲ. ಐತಿಹಾಸಿಕ ಕೇಂದ್ರವಾಗಿರುವ ರಾಯಚೂರು ನಗರಕ್ಕೆ ಹೊರ ಜಿಲ್ಲೆಗಳಿಂದಲೂ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಐತಿಹಾಸಿಕ ರಾಯಚೂರು ಕೋಟೆ, ತೀನ್ ಖಂದಿಲ್ ಕಲ್ಲಾನೆ, ಕಾಟೆ ದರ್ವಾಜ, ಮೆಕ್ಕಾ ದರ್ವಾಜ ಐತಿಹಾಸಿಕ ಸ್ಥಳಗಳಿದ್ದರೂ ಬಡಾವಣೆಯ ಒಳಗೆ, ಮಧ್ಯಭಾಗದಲ್ಲಿರುವುದರಿಂದ ಹೊರಗಿನವರಿಗೆ ಗೊತ್ತಾಗುವುದಿಲ್ಲ. ಯಾವುದಾದರೂ ಅಂಗಡಿಗಳು, ಹೋಟೆಲ್‌ಗಳು, ಮಾಲ್‌ಗಳನ್ನು ಹುಡುಕಿಕೊಂಡು ಹೋಗುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಾನು ರಾಯಚೂರು ಜಿಲ್ಲೆಗೆ ಬರುವುದಕ್ಕೆ ಮುಂಚೆ ಇದ್ದ ಸ್ಥಿತಿ ತಕ್ಕ ಮಟ್ಟಿಗೆ ಬದಲಾಗಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಕೋಟೆಯ ಅಭಿವೃದ್ಧಿ, ರಕ್ಷಣೆ ಕಾರ್ಯನಡೆಯುತ್ತಿದೆ. ಬಡಾವಣೆಗಳಿಗೆ ನಾಮಫಲಕ ಅಳವಡಿಸಲು ಕ್ರಮ ವಹಿಸಲಾಗುವುದು.
-ಜುಬೀನ್ ಮೊಹಾಪಾತ್ರ, ಆಯುಕ್ತ, ರಾಯಚೂರು ಮಹಾನಗರ ಪಾಲಿಕೆ
ಯಾವುದೇ ಒಂದು ಜಿಲ್ಲೆಯನ್ನು ಗುರುತಿಸಬೇಕಾದರೆ ಜಿಲ್ಲಾಕೇಂದ್ರ ಅಭಿವೃದ್ಧಿಯಾಗಿರಬೇಕು. ನಗರದಲ್ಲಿಯೇ ಅನೇಕ ಕೋಟೆ,ಐತಿಹಾಸಿಕ ಸ್ಥಳಗಳಿದ್ದರೂ ಬಹುತೇಕರಿಗೆ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಸ್ಥಳೀಯ ಆಡಳಿತ ಕೂಡಲೇ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಬಡಾವಣೆಗಳಿಗೆ ನಾಮಫಲಕ ಹಾಕಿಸಬೇಕು.
-ವೀರೇಶ, ರಾಯಚೂರು ನಿವಾಸಿ