×
Ad

4.12 ಕೋಟಿ ರೂ. ಮೌಲ್ಯದ ಶಾಲಾ ಕಿಟ್ ಟೆಂಡರ್‌ನಲ್ಲಿ ಭಾರೀ ಅಕ್ರಮ ಆರೋಪ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪ್ರೈಮ್ ಲಾ ಅಸೋಸಿಯೇಟ್ಸ್ ನೋಟಿಸ್

Update: 2026-07-15 08:30 IST

ಸಾಂದರ್ಭಿಕ ಚಿತ್ರ | Photo credit : AI

ಬೆಂಗಳೂರು : ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯವು ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಕಿಟ್‌ಗಳನ್ನು ಪೂರೈಸಲು ಹೊರಡಿಸಿರುವ 4.12 ಕೋಟಿ ರೂ.ಮೌಲ್ಯದ ಜಿಇಎಂ (GeM) ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಿಗೆ ಪ್ರೈಮ್ ಲಾ ಅಸೋಸಿಯೇಟ್ಸ್ ನ ಹೈಕೋರ್ಟ್ ವಕೀಲ ಎಸ್.ಎ.ಎಚ್.ರಝ್ವಿ ಲೀಗಲ್ ನೋಟಿಸ್ ನೀಡಿದ್ದಾರೆ.

ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಸಂಚು? :

ಕಳೆದ ಮೂರು ವರ್ಷಗಳಿಂದ ಇಲಾಖೆಯು ಒಂದೇ ರೀತಿಯ ಕಠಿಣ ಷರತ್ತುಗಳನ್ನು ವಿಧಿಸಿ, ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಗುತ್ತಿಗೆಗಳನ್ನು ‘ಮೆಸರ್ಸ್ ಎಲ್. ವಿ.ಟಿ. ಕಂಟೈನರ್ಸ್’ ಎಂಬ ಒಂದೇ ಸಂಸ್ಥೆಗೆ ನೀಡುತ್ತಾ ಬಂದಿದೆ ಎಂದು ಅವರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಸ್ತುತ ಬಿಡ್ ಸಂಖ್ಯೆ (GEM/2026/B/ 7723091) ರಲ್ಲೂ ಸಹ ಬೇರೆ ಯಾವುದೇ ಅರ್ಹ ಬಿಡ್‌ದಾರರು ಭಾಗವಹಿಸದಂತೆ ತಡೆಯಲು ಇಲಾಖೆಯು ಕಾನೂನುಬಾಹಿರ ಮತ್ತು ತಾರತಮ್ಯದ ಷರತ್ತುಗಳನ್ನು ಸೃಷ್ಟಿಸಿದೆ ಎಂದು ಅವರು ದೂರಿದ್ದಾರೆ.

ಪ್ರಮುಖ ನಿಯಮಗಳ ಉಲ್ಲಂಘನೆ ಮತ್ತು ಆಕ್ಷೇಪಗಳು :

ಸಮವಸ್ತ್ರ, ಶೂ ಮತ್ತು ಸ್ಟೇಷನರಿ ಪೂರೈಕೆಯು ಬೇರೆ ಬೇರೆ ಉದ್ಯಮಗಳಿಗೆ ಸೇರಿದ್ದರೂ, ಇಲಾಖೆಯು ಇವೆಲ್ಲವನ್ನೂ ಒಂದೇ ಟೆಂಡರ್‌ನಲ್ಲಿ ಜೋಡಿಸಿದೆ. ಇದರಿಂದ ಸಣ್ಣ ಮತ್ತು ಪರಿಣಿತ ಉದ್ಯಮಿಗಳು ಬಿಡ್‌ನಿಂದ ಹೊರಗುಳಿಯುವಂತಾಗಿದೆ ಎಂದು ರಝ್ವಿ ಆರೋಪಿಸಿದ್ದಾರೆ.

ಕಡ್ಡಾಯ ಸಡಿಲಿಕೆಗಳ ನಿರಾಕರಣೆ :

ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮಾವಳಿಗಳ ಪ್ರಕಾರ ಎಂಎಸ್‌ಇ (MSE) ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನೀಡಬೇಕಾದ ವಹಿವಾಟು ಮತ್ತು ಅನುಭವದ ಸಡಿಲಿಕೆಗಳನ್ನು ಈ ಟೆಂಡರ್‌ನಲ್ಲಿ ಉದ್ದೇಶಪೂರ್ವಕವಾಗಿ ನಿರಾಕರಿಸಲಾಗಿದೆ ಎಂದು ರಝ್ವಿ ಆರೋಪಿಸಿದ್ದಾರೆ.

ಭೌಗೋಳಿಕ ನಿರ್ಬಂಧ :

ಜಿಇಎಂ (GeM) ರಾಷ್ಟ್ರೀಯ ಮಾರುಕಟ್ಟೆಯಾಗಿದ್ದರೂ, ಕೇವಲ ಕರ್ನಾಟಕದ ಒಳಗಿನ ಸರಕಾರಿ ಸಂಸ್ಥೆಗಳಿಗೆ ಮಾತ್ರ ಪೂರೈಕೆ ಮಾಡಿದ ಅನುಭವ ಇರಬೇಕು ಎಂಬ ನಿಯಮವನ್ನು ಹೇರಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಕೆಟಿಪಿಪಿ ಕಾಯ್ದೆ ಉಲ್ಲಂಘನೆ :

ಜೈಲು ಶಿಕ್ಷೆಯ ಎಚ್ಚರಿಕೆ! ಈ ಇಡೀ ಟೆಂಡರ್ ಪ್ರಕ್ರಿಯೆಯು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (KTPP) ಕಾಯ್ದೆ 1999’ ರ ಸೆಕ್ಷನ್ 5, 6 ಮತ್ತು 7 ರ ನೇರ ಉಲ್ಲಂಘನೆಯಾಗಿದೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ.

ನಿಯಮ ಉಲ್ಲಂಘಿಸಿ ನಿರ್ದಿಷ್ಟ ಸಂಸ್ಥೆಗೆ ಲಾಭ ಮಾಡಿಕೊಡಲು ಯತ್ನಿಸುತ್ತಿರುವ ಅಧಿಕಾರಿಗಳು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 23ರ ಅಡಿಯಲ್ಲಿ ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಟೆಂಡರ್ ರದ್ದತಿಗೆ ಆಗ್ರಹ :

ಹಾಲಿ ಜಿಇಎಂ ಬಿಡ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು, ಸಮವಸ್ತ್ರ, ಶೂ ಹಾಗೂ ಸ್ಟೇಷನರಿಗಳನ್ನು ಪ್ರತ್ಯೇಕ ಟೆಂಡರ್‌ಗಳಾಗಿ ವಿಭಜಿಸಬೇಕು ಮತ್ತು ದೇಶದ ಯಾವುದೇ ಭಾಗದ ಅನುಭವವನ್ನು ಪರಿಗಣಿಸಿ ನ್ಯಾಯೋಚಿತವಾಗಿ ಹೊಸ ಟೆಂಡರ್ ಆಹ್ವಾನಿಸಬೇಕು ಎಂದು ನೋಟಿಸ್‌ನಲ್ಲಿ ರಝ್ವಿ ಒತ್ತಾಯಿಸಿದ್ದಾರೆ.

ವಹಿವಾಟು ಮಿತಿಯಲ್ಲಿ ತಾರತಮ್ಯ :

4.12 ಕೋಟಿ ರೂ. ಮೌಲ್ಯದ ಟೆಂಡರ್‌ಗೆ ವರ್ಷಕ್ಕೆ ಕನಿಷ್ಠ 8 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ಇರಬೇಕೆಂದು ಮತ್ತು ಒಇಎಂ (OEM) ವಹಿವಾಟು 100 ಕೋಟಿ ರೂ. ಇರಬೇಕೆಂದು ನಿಯಮ ವಿಧಿಸಲಾಗಿದೆ. ಇದು ಸಾಮಾನ್ಯ ಹಣಕಾಸು ನಿಯಮಗಳಿಗೆ (GFRಖ) ಸಂಪೂರ್ಣ ವಿರುದ್ಧವಾಗಿದೆ ಎಂದು ವಕೀಲ ಎಸ್.ಎ.ಎಚ್.ರಝ್ವಿ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ

contributor

Similar News