×
Ad

ವಿಜಯನಗರಕ್ಕೆ ಕೃಷಿ ತರಬೇತಿ ಕೇಂದ್ರ : ಕೂಡ್ಲಿಗಿಯ ಗುಂಡಿನಹೊಳೆಯಲ್ಲಿ ಭೂಮಿಪೂಜೆ

Update: 2026-07-15 09:24 IST

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ರೈತರಿಗೆ ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ತರಬೇತಿ ನೀಡುವ ಉದ್ದೇಶದಿಂದ 5 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸರಕಾರ ಅನುಮೋದನೆ ನೀಡಿದೆ.

ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆ ಬೀಜೋತ್ಪಾದನಾ ಕೇಂದ್ರದ ಆವರಣದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರದ ಭೂಮಿಪೂಜೆ ಇತ್ತೀಚೆಗೆ ನಡೆಯಿತು. ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಪ್ರಯತ್ನದಿಂದ ಮಂಜೂರಾಗಿರುವ ಈ ಕೇಂದ್ರವು ವಿಜಯನಗರ ಜಿಲ್ಲೆಯ ಆರು ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ.

ವಿಜಯನಗರ ಜಿಲ್ಲೆಯ ರೈತರು ಇದುವರೆಗೆ ಕೃಷಿ ತಂತ್ರಜ್ಞಾನದ ನೂತನ ಮಾಹಿತಿಯನ್ನೊಳಗೊಂಡ ತರಬೇತಿಗಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿರುವ ಕೃಷಿ ತರಬೇತಿ ಕೇಂದ್ರವನ್ನು ಅವಲಂಬಿಸಬೇಕಾಗಿತ್ತು.

ಇದೀಗ ಕೂಡ್ಲಿಗಿಯಲ್ಲೇ ಪ್ರತ್ಯೇಕ ಕೇಂದ್ರ ಸ್ಥಾಪನೆಯಾಗುತ್ತಿರುವುದರಿಂದ ರೈತರ ಅಲೆದಾಟ ತಪ್ಪಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಕೂಡ್ಲಿಗಿಗೆ ಸಾರಿಗೆ ಸಂಪರ್ಕವೂ ಉತ್ತಮವಾಗಿರುವುದರಿಂದ ರೈತರಿಗೆ ಕೇಂದ್ರವನ್ನು ಸುಲಭವಾಗಿ ತಲುಪಲು ಸಾಧ್ಯವಾಗಲಿದೆ.

ವಸತಿ ಸೌಲಭ್ಯವನ್ನೂ ಒಳಗೊಂಡಿರುವ ಈ ತರಬೇತಿ ಕೇಂದ್ರದಲ್ಲಿ ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ನೇರ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುತ್ತದೆ. ಕೃಷಿಯೊಂದಿಗೆ ಹೈನುಗಾರಿಕೆ, ಜೇನುಸಾಕಣೆ, ಕೋಳಿ ಸಾಕಣೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತದೆ.

ತೋಟಗಾರಿಕಾ ಬೆಳೆಗಳಿಂದ ಹೆಚ್ಚಿನ ಲಾಭ ಪಡೆಯುವ ವಿಧಾನ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆಯ ಮೂಲಕ ಬೆಳೆಗಳಿಗೆ ಉತ್ತಮ ಬೆಲೆ ಪಡೆಯುವ ತಂತ್ರಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುತ್ತದೆ.

ವಿಜಯನಗರ ಜಿಲ್ಲೆಯ ರೈತರ ಅಭಿವೃದ್ಧಿಯ ದೃಷ್ಟಿಯಿಂದ ಈ ಕೃಷಿ ತರಬೇತಿ ಕೇಂದ್ರವು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಭಾಗದ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಸುಲಭವಾಗಿ ದೊರೆಯಬೇಕು ಮತ್ತು ಕೃಷಿ ಹೆಚ್ಚು ಲಾಭದಾಯಕವಾಗಬೇಕು ಎಂಬುದು ನಮ್ಮ ಉದ್ದೇಶ. ಕೇಂದ್ರದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

-ಡಾ. ಎನ್.ಟಿ. ಶ್ರೀನಿವಾಸ್, ಕೂಡ್ಲಿಗಿ ಶಾಸಕ

ವಿಜಯನಗರ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 5,56,177 ಹೆಕ್ಟೇರ್‌ಗಳಾಗಿದ್ದು, 3,33,594 ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ಜಿಲ್ಲೆಯಲ್ಲಿ 1,65,002 ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ಈ ಕೇಂದ್ರದಿಂದ ರೈತರು ಆಧುನಿಕ ಕೃಷಿ, ಹೈನುಗಾರಿಕೆ, ಜೇನುಸಾಕಣೆ, ಕೋಳಿ ಸಾಕಣೆ, ಮೀನುಗಾರಿಕೆ ಹಾಗೂ ಮೌಲ್ಯವರ್ಧನೆಯ ತಂತ್ರಗಳನ್ನು ಕಲಿತು ಆದಾಯ ಹೆಚ್ಚಿಸಿಕೊಳ್ಳಬಹುದು. ಇದು ಕೇವಲ ತರಬೇತಿ ಕೇಂದ್ರವಲ್ಲ; ರೈತರ ಆರ್ಥಿಕ ಬದುಕನ್ನು ಬದಲಿಸುವ ಯೋಜನೆಯಾಗಿದೆ.

-ಆರ್.ವಿ. ತೇಜಾವರ್ಧನ್, ಸಹಾಯಕ ಕೃಷಿ ನಿರ್ದೇಶಕ, ಕೂಡ್ಲಿಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಮೊಹಮ್ಮದ್ ಅಮೀರ್ ಹಮ್ಜಾ

contributor

Similar News