×
Ad

ಸಂತೆ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ

ಬಯಲು ಶೌಚದಿಂದ ಕಂಗೆಟ್ಟ ಸ್ಥಳೀಯ ವ್ಯಾಪಾರಿಗಳು!

Update: 2026-07-15 09:20 IST

ಸುರಪುರ: ನಗರದ ರಂಗಂಪೇಟೆಯ ದೊಡ್ಡ ಬಜಾರ್ ಬಳಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಸಂತೆ ವ್ಯಾಪಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಪ್ರತಿ ಶುಕ್ರವಾರ ತರಕಾರಿ ಸಂತೆ ಹಾಗೂ ರವಿವಾರ ಜಾನುವಾರು ಸಂತೆ ನಡೆಯುತ್ತದೆ. ಶುಕ್ರವಾರದ ತರಕಾರಿ ಸಂತೆಗೆ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಅದೇ ರೀತಿ ರವಿವಾರ ನಡೆಯುವ ಜಾನುವಾರು ಸಂತೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಮತ್ತು ರೈತರು ಸೇರುತ್ತಾರೆ. ಆದರೆ, ಎರಡೂ ಸಂತೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಜನರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪ್ರದೇಶದಲ್ಲಿ ಅನೈರ್ಮಲ್ಯ ಉಂಟಾಗಿದ್ದು, ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳ ಮಾಲೀಕರು ಮತ್ತು ವ್ಯಾಪಾರಿಗಳು ದುರ್ವಾಸನೆಯಿಂದ ಯಾತನೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಹಲವು ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ನಗರಸಭೆಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಬೇಡಿಕೆ ಈಡೇರಿಲ್ಲ ಎಂದು ನಗರಸಭೆಯ ನಾಮನಿರ್ದೇಶಿತ ಸದಸ್ಯ ಪ್ರಕಾಶ ಅಲಬನೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದ ತರಕಾರಿ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಾರೆ. ಆದರೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಅವರು ತೀವ್ರ ಮುಜುಗರ ಮತ್ತು ಸಂಕಷ್ಟ ಅನುಭವಿಸುವಂತಾಗಿದೆ. ಶೌಚಾಲಯದಂತಹ ಮೂಲಸೌಲಭ್ಯ ಒದಗಿಸದ ಆಡಳಿತ ವ್ಯವಸ್ಥೆಯ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಣ್ಣ ಅಂಗಡಿಗಳ ಸಮೀಪ ಜನರು ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ ವ್ಯಾಪಾರಿಗಳೊಂದಿಗೆ ಕೆಲವರು ವಾಗ್ವಾದ ನಡೆಸಿರುವ ಘಟನೆಗಳೂ ಸಂಭವಿಸಿವೆ ಎಂದು ಕ್ಷೌರದ ಅಂಗಡಿ ಮಾಲೀಕ ಭೀಮು ಹಡಪದ ತಿಳಿಸಿದ್ದಾರೆ.

ಸಂತೆಗೆ ಆಗಮಿಸುವ ಸಾವಿರಾರು ಜನರು ಹಾಗೂ ಪ್ರತಿದಿನ ಈ ಪ್ರದೇಶದಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಕೂಡಲೇ ಸೂಕ್ತ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಯುನಾನಿ ಆಸ್ಪತ್ರೆ ಬಳಿ 25 ಲಕ್ಷ ರೂ. ಅನುದಾನದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ವೇಗ ನೀಡಿ ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು.

-ಶಾಂತಪ್ಪ ಹೊಸೂರ, ಎಇಇ, ನಗರಸಭೆ, ಸುರಪುರ

ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಆದರೆ ಇದುವರೆಗೆ ಬೇಡಿಕೆ ಈಡೇರಿಲ್ಲ. ಶೀಘ್ರದಲ್ಲೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

-ಪ್ರಕಾಶ ಅಲಬನೂರ, ನಗರಸಭೆ ನಾಮನಿರ್ದೇಶಿತ ಸದಸ್ಯ

ಪ್ರತಿದಿನ ಸಾರ್ವಜನಿಕರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಪರಿಸರ ಅನೈರ್ಮಲ್ಯವೂ ಉಂಟಾಗುತ್ತಿದೆ. ಶೀಘ್ರ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ಭೀಮು ಹಡಪದ, ಕ್ಷೌರದ ಅಂಗಡಿ ಮಾಲಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್.ಆರ್.ಕುಂಬಾರ

contributor

Similar News