ಮಡೆಸ್ನಾನ ಅಪಖ್ಯಾತಿಯ ಮಲೆಕುಡಿಯರು
ಹಿಂದೆ ಇವರು ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದು ಕಾಡಿನ ಸಂಪತ್ತಿನ ಒಡೆಯರಾಗಿದ್ದರು. ಕಾಡಿನ ಸಂಪತ್ತನ್ನು ಅವಲಂಬಿಸಿದ ಬದುಕೇ ಇವರದಾಗಿತ್ತು. ಆ ಸಂದರ್ಭದಲ್ಲಿ ಕುಮರಿಬೇಸಾಯ ಪದ್ಧತಿ, ಪಶುಸಂಗೋಪನೆ, ಕಾಡುತ್ಪತ್ತಿ ಸಂಗ್ರಹ, ಏಲಕ್ಕಿ ಕೃಷಿ, ಕಾಳುಮೆಣಸು ಮತ್ತು ಗೇರು ಕೃಷಿ ಇವರ ಮೂಲ ಕಸುಬುಗಳಾಗಿದ್ದವು. ಕ್ರಮೇಣ ಅರಣ್ಯ ಇಲಾಖೆಯವರು ಈ ಮೂಲನಿವಾಸಿಗಳನ್ನು ಕಾಡಿನಿಂದ ಎತ್ತಂಗಡಿ ಮಾಡತೊಡಗಿದಾಗ ಇವರ ಬದುಕು ದಿಕ್ಕಾಪಾಲಾಗತೊಡಗಿತು.
ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ‘ಮಡೆಮಡೆಸ್ನಾನ’ ದ ಬಗ್ಗೆ ತೀವ್ರ ವಿವಾದವಾಗಿತ್ತು. ಕುಕ್ಕೆಯ ದೇವಸ್ಥಾನದಲ್ಲಿ ಬ್ರಾಹ್ಮಣರು ಊಟ ಮಾಡಿ ಎದ್ದ ಮೇಲೆ ಅವರು ಉಂಡ ಎಂಜಲೆಲೆಗಳ ಮೇಲೆ ತಳಸಮುದಾಯದವರು ಉರುಳು ಸೇವೆ ಮಾಡಬೇಕಿತ್ತು! ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಈ ಸಂದರ್ಭದಲ್ಲಿ ಎಂಜಲೆಲೆಯ ಮೇಲೆ ಹೊರಲಾಡುವ ತಳಸಮುದಾಯದ ಬಗ್ಗೆಯೂ ಹೆಚ್ಚು ಚರ್ಚೆಯಾಗಿತ್ತು. ಆ ಸಮುದಾಯದ ಹೆಸರೇ ಮಲೆಕುಡಿಯರು, ‘ಇಂತಹ ಸಮುದಾಯವೊಂದಿದೆ’ ಎಂದು ಮಲೆಕುಡಿಯ ಸಮುದಾಯದ ಅಸ್ತಿತ್ವದ ಕುರಿತು ಕರ್ನಾಟಕದ ‘ಸಭ್ಯ’ ಸಮಾಜಗಳಿಗೆ ತಿಳಿವಳಿಕೆ ಮೂಡಿದ್ದೇ ಆಗ..
ಮಲೆಕುಡಿಯ, ಕುಡಿಯ, ಮೆಲಕುಡಿ, ಮಲೈಕಂಡಿ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೆಲೆಸಿದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡ ಕೇರಳದಲ್ಲೂ ಈ ಸಮುದಾಯ ಇದೆ. ‘ಮಲೆ’ ಎಂದರೆ ಬೆಟ್ಟ ಮತ್ತು ‘ಕುಡಿಯ’ ಅಂದರೆ ಬೆಟ್ಟದ ಮೇಲೆ ವಾಸಿಸುವವರು, ಹೀಗೆ ಮಲೆ ಮತ್ತು ಕುಡಿಯ ಸೇರಿ ಮಲೆಕುಡಿಯ ಆಗಿದೆ.
ಇದಕ್ಕೊಂದು ಪೌರಾಣಿಕ ಕತೆಯೂ ಇದೆ. ಒಮ್ಮೆ ಶಿವಪಾರ್ವತಿಯರು ಭೂಲೋಕಕ್ಕೆ ಬಂದರು. ಕಾಡಿನಲ್ಲಿ ಅಲೆದಾಡುವಾಗ ತನ್ನ ಎದೆಯ ಹಾಲು ಹೆಪ್ಪುಗಟ್ಟಿ ಪಾರ್ವತಿಗೆ ಎದೆನೋವು ಆರಂಭವಾಯಿತಂತೆ. ಆಗ ಶಿವ ಮಣ್ಣಲ್ಲಿ ಬೊಂಬೆಯೊಂದನ್ನು ಮಾಡಿ ಅದಕ್ಕೆ ಜೀವ ತುಂಬಿ ಆ ಮಗುವಿಗೆ ಪಾರ್ವತಿ ಎದೆ ಹಾಲು ಕೊಟ್ಟಳಂತೆ, ಆ ಮಗುವನ್ನು ಕೈಲಾಸಕ್ಕೆ ಕರೆದೊಯ್ದರೆ ಏನೆಲ್ಲಾ ಅನುಮಾನಗಳು ಬರುತ್ತವೆಂದು ಶಿವ ಸೃಷ್ಟಿಸಿದ ಗಂಡು ಮತ್ತು ಪಾರ್ವತಿ ಸೃಷ್ಟಿಸಿದ ಹೆಣ್ಣನ್ನು ಒಟ್ಟಿಗೆ ಬಿಟ್ಟು ಬದುಕುವಂತೆ ಹೇಳಿ ಶಿವಪಾರ್ವತಿಯರು ಕೈಲಾಸಕ್ಕೆ ಹೋದರು. ಹೀಗೆ ಪಾರ್ವತಿ ಮೊಲೆಹಾಲು ಕುಡಿದ ಮಗು ‘ಮೊಲೆಕುಡಿಯ’ ಆಗಿ ನಂತರ ಮಲೆಕುಡಿಯ ಆಯಿತಂತೆ.
ಮಲೆಕುಡಿಯರನ್ನು ಕುಡಿಯ, ಮಲೆಕುಡಿಯ ಅನ್ನುವುದರೊಂದಿಗೆ ಬಾರಿಕೆಗೌಡ, ಗೌಡ ಎಂತಲೂ ಕರೆಯುತ್ತಾರೆ. ಮಲೆಕುಡಿಯರು ಬೆಟ್ಟದ ತುದಿಯಲ್ಲಿ ವಾಸಿಸುವವರು. ಕುಂದಾಪುರದ ಕಮಲಶಿಲೆಯಿಂದ ಮಡಿಕೇರಿವರೆಗೂ ನೆಲೆಸಿರುವವರನ್ನು ಕುಡಿಯರು ಎನ್ನುತ್ತಾರೆ. ಧರ್ಮಸ್ಥಳದಲ್ಲಿ ಬರ್ಕೆ ಎಂದೂ, ಕಾರ್ಕಳದಲ್ಲಿ ಗೌಡ, ಗೌಡಾಲು ಎಂದೂ, ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ಅಕ್ಕರೆಕೋಡಿ ಮತ್ತು ಪುತ್ತೂರು ತಾಲೂಕಿನ ಪಣಜೆಯಲ್ಲಿ ಮಲತ್ತಾಯ ಎಂದೂ, ಬಂಟ್ವಾಳದ ಅರಳದಲ್ಲಿ ಇವರನ್ನು ಮುಗೂಲ್ಯ, ಮುಗಳಿಯ ಎಂದೂ ಕರೆಯುತ್ತಾರೆ. ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಮಲೆಕುಡಿಯ, ಮಲೈಕುಡಿ, ಮಲೆಯಖಂಡ, ಮಲೇರು ಎಂಬ ಹೆಸರುಗಳಿಂದ ನಮೂದಿಸಲಾಗಿದೆ. ಕಾಸರಗೋಡಿನಲ್ಲಿ ಮಲೆತ್ತಾಯ ಬಾರಿಕೆ ಎಂದೂ ಕರೆಯುತ್ತಾರೆ.
ಹಿಂದೆ ಇವರು ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದು ಕಾಡಿನ ಸಂಪತ್ತಿನ ಒಡೆಯರಾಗಿದ್ದರು. ಕಾಡಿನ ಸಂಪತ್ತನ್ನು ಅವಲಂಬಿಸಿದ ಬದುಕೇ ಇವರದಾಗಿತ್ತು. ಆ ಸಂದರ್ಭದಲ್ಲಿ ಕುಮರಿಬೇಸಾಯ ಪದ್ಧತಿ, ಪಶುಸಂಗೋಪನೆ, ಕಾಡುತ್ಪತ್ತಿ ಸಂಗ್ರಹ, ಏಲಕ್ಕಿ ಕೃಷಿ, ಕಾಳುಮೆಣಸು ಮತ್ತು ಗೇರು ಕೃಷಿ ಇವರ ಮೂಲ ಕಸುಬುಗಳಾಗಿದ್ದವು. ಕ್ರಮೇಣ ಅರಣ್ಯ ಇಲಾಖೆಯವರು ಈ ಮೂಲನಿವಾಸಿಗಳನ್ನು ಕಾಡಿನಿಂದ ಎತ್ತಂಗಡಿ ಮಾಡತೊಡಗಿದಾಗ ಇವರ ಬದುಕು ದಿಕ್ಕಾಪಾಲಾಗತೊಡಗಿತು. ಹಿಂದೆ ಇವರು ಕೃಷಿ ಮಾಡುತ್ತಿದ್ದ ಕಾಲದಲ್ಲಿ ಎತ್ತು ಕೋಣಗಳನ್ನು ಬಳಸದೆ ತಮ್ಮ ಮಾನವಶಕ್ತಿಯನ್ನೇ ಬಳಸಿ ಭೂಮಿಯನ್ನು ಅಗೆದು, ಇಲ್ಲಿನ ಜೌಗು ನೀರಿನ ಬಸಿತದಿಂದ ಗದ್ದೆ ಕೃಷಿ ಮಾಡುವ ಪರಂಪರೆ ಇವರದಾಗಿತ್ತು.
ಮಲೆಕುಡಿಯರೇ ಹೇಳುವಂತೆ ಇವರ ಜನಸಂಖ್ಯೆ ನಲವತ್ತರಿಂದ ಐವತ್ತು ಸಾವಿರ, 2011 ಜನಗಣತಿ ಪ್ರಕಾರ ಇವರ ಜನಸಂಖ್ಯೆ 35,000. ಮಲೆಕುಡಿಯರನ್ನು ಅತ್ಯಂತ ಹಿಂದುಳಿದ ಬುಡಕಟ್ಟುಗಳಲ್ಲಿ ಒಂದೆಂದು ಗುರುತಿಸಲಾಗಿದೆ.
ಈಗಿನ ವೃತ್ತಿ ಕೃಷಿ ಕೂಲಿ, ಅಡಿಕೆ-ಕಾಫಿ ತೋಟದಲ್ಲಿ ಕೆಲಸ, ಅರಣ್ಯ ಇಲಾಖೆ ಕೂಲಿ, ಕಾಡಿನ ಉತ್ಪನ್ನ ಸಂಗ್ರಹ.
ಇವರ ಭಾಷೆಯನ್ನು ಮಲೆಕುಡಿಯ ಭಾಷೆ ಎನ್ನುತ್ತಾರೆ. ಇದು ಕನ್ನಡ, ತುಳು, ಕೊಡವ ಮಿಶ್ರಭಾಷೆಯಂತೆ ಕಾಣುತ್ತದೆ. ಈಗೀಗ ಇವರು ಕನ್ನಡವನ್ನೇ ಹೆಚ್ಚು ಮಾತನಾಡುತ್ತಾರೆ.
ಸಾಮಾನ್ಯವಾಗಿ ಇವರು ನಡೆದುಕೊಳ್ಳುವುದು ಕಾಡಿನ ದೈವಗಳಿಗೆ, ಅಂದರೆ ಭೂತ, ನಾಗ, ಮಲೆ ಮಹದೇಶ್ವರ, ಮಾರಿ ದೇವರುಗಳಿಗೆ. ಭೂತ ಕೋಲದ ಆಚರಣೆ ಇವರಲ್ಲಿ ಅತಿಮುಖ್ಯ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಸಮುದಾಯಕ್ಕೆ ಈವರೆಗೂ ಸರಕಾರದ ಯಾವುದೇ ಮೀಸಲಾತಿ, ಅನುದಾನ, ವಸತಿ, ನಿವೇಶನ, ಸಾಲಸೋಲ ಒಂದೂ ಸಿಕ್ಕಿದಂತಿಲ್ಲ. ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಐವತ್ತು ಸಮುದಾಯಗಳಿದ್ದು ಕೇವಲ ಶೇ. 3 ಮೀಸಲಾತಿ ಇದೆ. ಇಲ್ಲಿರುವ ಬಲಿಷ್ಠರೊಂದಿಗೆ ಸ್ಪರ್ಧಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 3 ಮೀಸಲಾತಿ ಪಡೆಯಲು ಈ ದುರ್ಬಲ ಸಮುದಾಯಕ್ಕೆ ಸಾಧ್ಯವೇ ಇಲ್ಲ. ಇನ್ನು ರಾಜಕೀಯ ಮೀಸಲಾತಿ ವಿಚಾರಕ್ಕೆ ಬಂದರೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲೂ ಇವರ ಪ್ರಾತಿನಿಧ್ಯವೇ ಇಲ್ಲದಿರುವುದು ಗಮನಾರ್ಹ. ಈ ಸಮುದಾಯದಲ್ಲಿ ಅತ್ಯಂತ ಬಡವರು, ನಿರ್ಗತಿಕರು ಇದ್ದು ಇವರಿಗೆ ತುಂಡು ಭೂಮಿ ಸಿಗುವ ಸಾಧ್ಯತೆಯೇ ಇಲ್ಲ. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅಪೌಷ್ಟಿಕತೆ, ಅನೀಮಿಯಾ ಸಮಸ್ಯೆ ಅತಿಯಾಗಿದೆ. ಪ್ರಮುಖ ಸಮಸ್ಯೆ ಎಂದರೆ ಅರಣ್ಯ ಹಕ್ಕು ಕಾಯ್ದೆ ಈಖಂ 2006ರಂತೆ ಹಿಂದಿನ ಅನೇಕ ಪೀಳಿಗೆಗಳಿಂದ ಕಾಡಿನಲ್ಲೇ ವಾಸಿಸಿದರೂ ಜಮೀನಿನ ಹಕ್ಕು ಪತ್ರ ಸಿಗುವುದು ಕಷ್ಟ. ಈ ಕುರಿತ ಹೋರಾಟ ನಡೆಯುತ್ತಲೇ ಇದೆ. ಶಾಲೆಗಳಿಗೆ ಹಟ್ಟಿಗಳು ದೂರದಲ್ಲಿ ಇರುವುದರಿಂದ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗಿ ಆಶ್ರಮ ಶಾಲೆ ಇದ್ದರೂ ಜಡಿoಠಿouಣಗಳು ಜಾಸ್ತಿ ಇದ್ದಾರೆ.
ಡಾ. ಹಿ.ಚಿ. ಬೋರಲಿಂಗಯ್ಯ ಮತ್ತು ಡಾ. ಎ.ಎಸ್. ಪ್ರಭಾಕರ್‌ರವರು ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕರ್ನಾಟಕ ಬುಡಕಟ್ಟು ಸಚಿತ್ರ ಕೋಶದಲ್ಲಿ ದಾಖಲಿಸಿರುವಂತೆ ಒಟ್ಟಾರೆಯಾಗಿ ಮಲೆಕುಡಿಯ ಸಮುದಾಯದ ವರ್ತಮಾನದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳು ಅವರ ಬದುಕಿನ ಸವಾಲುಗಳಾಗಿವೆ. ತಮ್ಮ ಮೂಲ ನೆಲೆಗಳಲ್ಲಿ ಭೂಒಡೆತನಕ್ಕೆ ನಡೆಸಿಕೊಂಡು ಬಂದ ಹೋರಾಟದ ಫಲವಾಗಿ ಭೂಸುಧಾರಣೆ ಕಾಯ್ದೆ ಇವರಿಗೆ ಒಂದು ವರದಾನವಾಗಿತ್ತು. ಬಂಜಾರು ಮಲೆ, ಅಂಬಟಿಮಲೆ, ಇಳಿಮಲೆ, ಕೋಲೋಡಿ, ಶಿಶಿಲ, ಪಾಲಾಂಗ್‌ಗಳಲ್ಲಿ ಡಿಕ್ಲರೇಷನ್ ಮೂಲಕ ಭೂಒಡೆತನದ ಹಕ್ಕು ದೊರೆತಿದೆ. ಇದರಿಂದಾಗಿ ಇವರು ಇಲ್ಲಿ ಸ್ಥಿರವಾಗಿ ನೆಲೆ ನಿಲ್ಲಲು ಮತ್ತು ಸಾಮಾಜಿಕ ಸ್ಥಾನಮಾನ ಹೊಂದಲು ಸಾಧ್ಯವಾಗಿದೆ. ಈ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ವಾಸವಾಗಿರುವ ಈ ಸಮುದಾಯಕ್ಕೆ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಸ್ಥಿರತೆ ಇಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವ, ಇಲ್ಲವೇ ಸ್ಥಳಾಂತರಗೊಂಡು ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮಲೆಕುಡಿಯರು ಜೀತದಾಳುಗಳಾಗಿ, ಗೇಣಿದಾರರಾಗಿ, ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಅಳಿಯ ಸಂತಾನ, ಮಕ್ಕಳ ಸಂತಾನದ ಮೂಲಕ ಸಾಮಾಜಿಕವಾಗಿ, ಸಾಂಪ್ರದಾಯಿಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ಸಮುದಾಯದಲ್ಲಿ ಕಂಡುಬರುವ ಪ್ರಾದೇಶಿಕ ಕೌಟುಂಬಿಕ ಭಾಷಾ ವೈವಿಧ್ಯಗಳಿಂದಾಗಿ ಮಲೆಕುಡಿಯರ ಸಂಘಟನೆಗೆ ತೊಡಕಾಗಿದೆ. ಕುಮರಿ ಬೇಸಾಯದ ಹೋರಾಟ, ಸ್ಥಳಾಂತರದ ಹೋರಾಟ, ಜೀತಪದ್ಧತಿ, ಗೇಣಿಪದ್ಧತಿಗಳ ಹಿನ್ನೆಲೆಯನ್ನು ಹೊಂದಿದ್ದ ಈ ಸಮುದಾಯ ಈಗ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಲೇ ಬರುತ್ತಿರುವುದು ಗಮನಾರ್ಹ.