ಯುಕೆ ವ್ಯಾಪಾರ ಒಪ್ಪಂದ: ಪ್ರತಿಯೊಬ್ಬ ಭಾರತೀಯನಿಗೂ ಮುಕ್ತವಾದ ಬೃಹತ್ ಅವಕಾಶಗಳು
ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು (ಸಿಇಟಿಎ) ಇಂದಿನಿಂದ ಜಾರಿಗೆ ಬರುತ್ತಿರುವು ದರಿಂದ, ಯುಕೆ (ಬ್ರಿಟನ್) ದೇಶಕ್ಕೆ ರಫ್ತಾಗುವ ಭಾರತದ ಬಹುತೇಕ ಎಲ್ಲಾ ಉತ್ಪನ್ನಗಳಿಗೆ ಸುಂಕ ಮುಕ್ತ ಪ್ರವೇಶ ಸಿಗಲಿದೆ. ಇದು ನಮ್ಮ ಸಣ್ಣ ಉದ್ಯಮಗಳು, ರೈತರು, ಮೀನುಗಾರರು, ನಾವೀನ್ಯಕಾರರು, ಮಹಿಳೆಯರು ಮತ್ತು ಹೆಚ್ಚು ಕಾರ್ಮಿಕರನ್ನು ಆಧರಿಸಿರುವ ಉದ್ಯಮಗಳಿಗೆ ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ.
ಇದು ಭಾರತದ ಅತ್ಯಂತ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು (ಎಫ್ ಟಿ ಎ), ಹಲವಾರು ಉದ್ಯೋಗಗಳು ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮೃದ್ಧಿಯನ್ನು ತರಲಿದೆ. ಇದು ಭಾರತೀಯ ಉತ್ಪಾದಕ ರನ್ನು ಆರೋಗ್ಯಕರ ಸ್ಪರ್ಧೆಗೆ ಒಡ್ಡಲಿದ್ದು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸರಕುಗಳು ಸಿಗುವಂತೆ ಮಾಡುತ್ತದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ 2047' ಮಿಷನ್ ಅನ್ನು ಗಣನೀಯವಾಗಿ ವೇಗಗೊಳಿಸಲಿದೆ.
ಉದ್ಯಮಿಗಳು ಉತ್ಸುಕರಾಗಿದ್ದಾರೆ. ಯುಕೆ ದೇಶಕ್ಕೆ ಸರಕುಗಳನ್ನು ರವಾನಿಸಲು ಅವರು ವಿಸ್ತೃತ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ರತ್ನ ಮತ್ತು ಆಭರಣ ರಫ್ತುದಾರರು ಮುಂದಿನ ಮೂರು ವರ್ಷಗಳಲ್ಲಿ ಅಥವಾ ಅದಕ್ಕಿಂತ ಮುಂಚಿತವಾಗಿ ಯುಕೆ ದೇಶಕ್ಕೆ ರಫ್ತಾಗುವ ಪ್ರಮಾಣವು ಶೇಕಡಾ 230 ರಷ್ಟು ಹೆಚ್ಚಾಗಿ 2.5 ಬಿಲಿಯನ್ ಡಾಲರ್ ಗೆ ತಲುಪುವ ನಿರೀಕ್ಷೆಯಲ್ಲಿದ್ದಾರೆ. ಅದೇ ರೀತಿ, ಎಂಜಿನಿಯರಿಂಗ್ ಸರಕುಗಳ ರಫ್ತುದಾರರು ಮುಂದಿನ 4-5 ವರ್ಷ ಗಳಲ್ಲಿ ಯುಕೆ ದೇಶದೊಂದಿಗಿನ ಮಾರಾಟವು ಸುಮಾರು ದುಪ್ಪಟ್ಟಾಗಿ 7.5 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಹೊಂದಿದ್ದಾರೆ.
ಕಳೆದ ವರ್ಷ ಪ್ರಧಾನಮಂತ್ರಿ ಮೋದಿ ಮತ್ತು ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾದ ಈ ಪರಸ್ಪರ ಲಾಭದಾಯಕ ಒಪ್ಪಂದವು, ಶೇಕಡಾ 99 ರಷ್ಟು ಸುಂಕದ ಶ್ರೇಣಿಗಳನ್ನು ತಕ್ಷಣವೇ ರದ್ದು ಗೊಳಿಸುತ್ತದೆ. ಇದು ಒಟ್ಟಾರೆ ವ್ಯಾಪಾರ ಮೌಲ್ಯದ ಸುಮಾರು ಶೇಕಡಾ 100 ರಷ್ಟನ್ನು ಒಳಗೊಳ್ಳಲಿದ್ದು, ಜಾಗತಿಕ ಏರುಪೇರುಗಳ ನಡುವೆಯೂ ಈಗಾಗಲೇ ಉತ್ತಮವಾಗಿ ಬೆಳೆಯುತ್ತಿರುವ ಭಾರತೀಯ ರಫ್ತು ವಲಯಕ್ಕೆ ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ.
ಯುವ ಮನಸ್ಸುಗಳು, ಜಾಗತಿಕ ಆವಿಷ್ಕಾರಗಳು:-
ಜನಕೇಂದ್ರಿತವಾಗಿರುವ ಈ ಮುಕ್ತ ವ್ಯಾಪಾರ ಒಪ್ಪಂದವು ಜುಲೈ 15 ರಂದು ಜಾರಿಗೆ ಬರುತ್ತಿದೆ, ಈ ದಿನವು ವಿಶ್ವ ಯುವ ಕೌಶಲ್ಯ ದಿನವೂ ಆಗಿದೆ. 2015 ರ ಇದೇ ದಿನದಂದು ಪ್ರಧಾನಮಂತ್ರಿ ಮೋದಿ ಅವರು 'ಸ್ಕಿಲ್ ಇಂಡಿಯಾ ಮಿಷನ್' (ಕೌಶಲ್ಯ ಭಾರತ ಅಭಿಯಾನ) ಗೆ ಚಾಲನೆ ನೀಡಿದ್ದರು, ಇದು ನಮ್ಮ ಯುವಕರು ಭಾರತದಲ್ಲಿ ಮಾತ್ರ ವಲ್ಲದೆ ಜಾಗತಿಕ ಮಟ್ಟದಲ್ಲೂ ಸ್ಪರ್ಧಿಸಲು, ಕೊಡುಗೆ ನೀಡಲು ಮತ್ತು ಮುನ್ನಡೆಸಲು ಸಶಕ್ತಗೊಳಿಸುತ್ತಿದೆ.
ಭಾರತೀಯ ಯುವಜನರ ಅನುಕೂಲಕ್ಕಾಗಿ, ಯುಕೆ ತನ್ನ ಅತ್ಯಂತ ಸಮಗ್ರವಾದ ಸೇವಾ ವಲಯದ ಬದ್ಧತೆಗಳನ್ನು ನೀಡಿದೆ. ಇದು ಭಾರತಕ್ಕೆ ರಫ್ತು ಆಸಕ್ತಿಯಿರುವ ಎಲ್ಲಾ ಪ್ರಮುಖ ಸೇವಾ ವಲಯಗಳು ಮತ್ತು 137 ಉಪ-ವಲಯ ಗಳನ್ನು ಒಳಗೊಂಡಿದೆ. ಸುಧಾರಿತ ಮಾರುಕಟ್ಟೆ ಪ್ರವೇಶ ಮತ್ತು ನಿಯಂತ್ರಕ ನಿಶ್ಚಿತತೆಯು ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ಹಣಕಾಸು ಸೇವೆಗಳು, ವೃತ್ತಿಪರ ಸೇವೆಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಎಂಜಿನಿಯರಿಂಗ್, ದೂರಸಂಪರ್ಕ ಮತ್ತು ಸಲಹಾ ಸೇವೆಗಳಲ್ಲಿ ಭಾರತೀಯ ಸೇವಾ ಪೂರೈಕೆದಾರ ರಿಗೆ ಬೆಂಬಲ ನೀಡಲಿದೆ.
ಉದ್ಯೋಗ ಸೃಷ್ಟಿ: ರತ್ನ ಮತ್ತು ಆಭರಣಗಳು, ಜವಳಿ, ಚರ್ಮ ಮತ್ತು ಪಾದರಕ್ಷೆಗಳು, ಸಾವಯವ ರಾಸಾಯನಿಕ ಗಳು, ಪ್ಲಾಸ್ಟಿಕ್, ವಾಹನ ಬಿಡಿಭಾಗಗಳು, ಕರಕುಶಲ ಉತ್ಪನ್ನಗಳು ಮತ್ತು ಆಹಾರ ಸಂಸ್ಕರಣೆಯಂತಹ ಕಾರ್ಮಿಕ ತೀವ್ರತೆಯ ವಲಯಗಳು ಹೆಚ್ಚಿನ ಮಾರುಕಟ್ಟೆ ಪ್ರವೇಶದೊಂದಿಗೆ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವುದ ರಿಂದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿವೆ.
ಒಟ್ಟಾರೆಯಾಗಿ, ಜಾಗತಿಕ ಮೌಲ್ಯದ ಸರಪಳಿಗಳಿಗೆ ಪ್ರವೇಶವನ್ನು ಉತ್ತೇಜಿಸುವ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ, ಸಿಇಟಿಎ ಒಪ್ಪಂದವು ಭಾರತೀಯ ಯುವಕರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅರ್ಥ ಪೂರ್ಣವಾಗಿ ಭಾಗವಹಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಕೌಶಲ್ಯ ಮತ್ತು ಅವಕಾಶ ಗಳನ್ನು ನೀಡಲಿದೆ.
ಸಿಇಟಿಎ ಒಪ್ಪಂದದ ಒಂದು ಪ್ರಮುಖ ಅಂಶವೆಂದರೆ 'ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್'. ಸಿಇಟಿಎ ಜೊತೆಗೆ ಜಾರಿಗೆ ಬರುತ್ತಿರುವ ಈ ಐತಿಹಾಸಿಕ ವ್ಯವಸ್ಥೆಯು, ತಾತ್ಕಾಲಿಕ ಉದ್ಯೋಗದ ನಿಮಿತ್ತ ಯುಕೆ ದೇಶಕ್ಕೆ ಹೋಗುವ ಭಾರತೀಯ ಕಾರ್ಮಿಕರು ಮತ್ತು ಅವರ ಉದ್ಯೋಗದಾತರಿಗೆ ಅಲ್ಲಿ ಮತ್ತು ಇಲ್ಲಿ ಎರಡೂ ಕಡೆ ದ್ವಿಮುಖ ಸಾಮಾಜಿಕ ಭದ್ರತಾ ದೇಣಿಗೆಗಳನ್ನು ಪಾವತಿಸುವುದರಿಂದ ವಿನಾಯಿತಿ ನೀಡುತ್ತದೆ.
ತಾತ್ಕಾಲಿಕ ವಿದೇಶಿ ನಿಯೋಜನೆಗಳಲ್ಲಿರುವ ನೌಕರರಿಗೆ ನಿರಂತರ ಸಾಮಾಜಿಕ ಭದ್ರತೆಯ ರಕ್ಷಣೆ ಸಿಗುವುದರಿಂದ 75,000 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರು ಮತ್ತು 900 ಕ್ಕೂ ಹೆಚ್ಚು ಕಂಪನಿಗಳು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಸ್ಥಳೀಯವಾಗಿ ಬೆಳೆಯಿರಿ, ಜಾಗತಿಕವಾಗಿ ಮಾರಾಟ ಮಾಡಿ:-
37.5 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ಯುಕೆ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗುವುದರಿಂದ ಭಾರತೀಯ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಇದು ಭಾರತೀಯ ಡೈರಿ ಉತ್ಪನ್ನಗಳು, ಟೀ, ಕಾಫಿ, ಮಸಾಲೆ ಪದಾರ್ಥಗಳು, ಹಣ್ಣುಗಳು, ತರಕಾರಿಗಳು, ಹಣ್ಣಿನ ರಸಗಳು, ಮಾಂಸ ಮತ್ತು ಸಂಸ್ಕರಿಸಿದ ಕೃಷಿ ಉತ್ಪನ್ನಗಳ ರಫ್ತನ್ನು ಉತ್ತೇಜಿಸ ಲಿದೆ. ಯುಕೆಯ ಕೃಷಿ ಆಮದುಗಳ ಸುಮಾರು ಶೇಕಡಾ 95 ರಷ್ಟು ಭಾಗವು ಭಾರತಕ್ಕೆ ಸುಂಕ ಮುಕ್ತವಾಗಲಿದೆ. ಈ ವಿಶಾಲ ಮಾರುಕಟ್ಟೆಗೆ ರಫ್ತು ಮಾಡುವ ಪ್ರಮಾಣವು ಮೂರು ವರ್ಷಗಳಲ್ಲಿ ಶೇಕಡಾ 50 ರಷ್ಟು ಬೆಳೆಯುವ ಸಾಮರ್ಥ್ಯ ಹೊಂದಿದೆ. ಇದು ಕೃಷಿ ಆದಾಯವನ್ನು ಹೆಚ್ಚಿಸಲಿದೆ ಮತ್ತು ಕೃಷಿ ಮೌಲ್ಯದ ಸರಪಳಿಯುದ್ದಕ್ಕೂ ಹಲವಾರು ಉದ್ಯೋಗಗಳನ್ನು ಸೃಷ್ಟಿಸಲಿದೆ.
ಮುಖ್ಯವಾಗಿ, ಈ ಒಪ್ಪಂದವು ಡೈರಿ, ತರಕಾರಿಗಳು, ಸೇಬುಗಳು, ಖಾದ್ಯ ತೈಲಗಳು, ಓಟ್ಸ್, ಸಿರಿಧಾನ್ಯಗಳು, ಅಡುಗೆ ಎಣ್ಣೆಗಳು ಮತ್ತು ಇತರ ಸೂಕ್ಷ್ಮ ಕೃಷಿ ಉತ್ಪನ್ನಗಳನ್ನು 'ಸೂಕ್ಷ್ಮ ಪಟ್ಟಿ'ಯಲ್ಲಿ ಇರಿಸುವ ಮೂಲಕ ಸಂಪೂರ್ಣ ವಾಗಿ ರಕ್ಷಿಸಿದೆ. ಈ ವಸ್ತುಗಳ ಮೇಲೆ ಯುಕೆಗೆ ಯಾವುದೇ ಸುಂಕದ ರಿಯಾಯಿತಿಗಳನ್ನು ನೀಡಿಲ್ಲ. ಆಹಾರ ಭದ್ರತೆ, ದೇಶೀಯ ಬೆಲೆ ಸ್ಥಿರತೆ ಮತ್ತು ದುರ್ಬಲ ಕೃಷಿ ಸಮುದಾಯಗಳಿಗೆ ಆದ್ಯತೆ ನೀಡುವ ಮೋದಿ ಸರ್ಕಾರದ ಕಾರ್ಯ ತಂತ್ರವನ್ನು ಈ ವಿನಾಯಿತಿಗಳು ಪ್ರತಿಬಿಂಬಿಸುತ್ತವೆ.
ಎಸ್ ಎಂ ಇ ಗಳು - ಸ್ಥಳೀಯ ಶ್ರಮ, ಜಾಗತಿಕ ಬಲ:-
ಪ್ರಧಾನಮಂತ್ರಿ ಮೋದಿ ಅವರು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ ಎಂ ಇ) ಯಾವಾಗಲೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. 2024-25ರಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಶೇಕಡಾ 45.8 ರಷ್ಟು ಪಾಲನ್ನು ಹೊಂದಿದ್ದ ಪ್ರಮುಖ ಎಸ್ ಎಂ ಇ ವಲಯಕ್ಕೆ ಸಹಾಯ ಮಾಡಲು ಸಿಇಟಿಎಯಲ್ಲಿ ಪ್ರತ್ಯೇಕ ಅಧ್ಯಾಯವನ್ನು ಮೀಸಲಿಡಲಾಗಿದೆ. ವೇಗದ ಕಸ್ಟಮ್ಸ್ ಪ್ರಕ್ರಿಯೆ, ಡಿಜಿಟಲ್ ವ್ಯವಸ್ಥೆಗಳು ಮತ್ತು ಕಾಗದ ರಹಿತ ವ್ಯಾಪಾರವನ್ನು ಗುರುತಿಸುವ ಹಾಗೂ ಸುಲಭಗೊಳಿಸುವ ಒಪ್ಪಂದಗಳು ಸೇರಿದಂತೆ ಪ್ರಮುಖ ನಿಬಂಧನೆಗಳೊಂದಿಗೆ ಸಿಇಟಿಎ ಉದ್ಯಮಗಳಿಗೆ ಸಹಾಯ ಮಾಡುತ್ತದೆ.
ಆದ್ಯತೆಯ ಮಾರುಕಟ್ಟೆ ಪ್ರವೇಶದ ಜೊತೆಗೆ, ವ್ಯಾಪಾರ, ಶಿಕ್ಷಣ ಮತ್ತು ಹಣಕಾಸು, ಡಿಜಿಟಲ್ ಕೌಶಲ್ಯಗಳು, ವ್ಯಾಪಾರ ಮೂಲಸೌಕರ್ಯ ಮತ್ತು ಇತರ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಅತ್ಯುತ್ತಮ ಪದ್ಧತಿಗಳ ಕುರಿತು ವರ್ಧಿತ ಸಹಕಾರದಿಂದ ಎಸ್ ಎಂ ಇ ಗಳು ಪ್ರಯೋಜನ ಪಡೆಯಲಿವೆ.
ಮೀನುಗಾರರಿಗೆ ದೊಡ್ಡ ಲಾಭ:-
ಸುಮಾರು 2.8 ಕೋಟಿ ಜನರ ಜೀವನೋಪಾಯವನ್ನು ಬೆಂಬಲಿಸುವ ಭಾರತದ ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಲಯಕ್ಕೆ ಗಣನೀಯ ಪ್ರಯೋಜನವನ್ನು ನೀಡಲು ಸಿಇಟಿಎ ಸಿದ್ಧವಾಗಿದೆ.
ಹೆಚ್ಚಿದ ಮಾರುಕಟ್ಟೆ ಪ್ರವೇಶ ಮತ್ತು ಹೆಚ್ಚಿನ ರಫ್ತುಗಳು ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೀನುಗಾರರಿಗೆ ಪ್ರಯೋಜನವನ್ನು ನೀಡಲಿವೆ. ಇದು ಭಾರತದ ಮೀನುಗಾರಿಕೆ ರಫ್ತನ್ನು ಬಲಪಡಿ ಸುವುದಲ್ಲದೆ, ಮೀನುಗಾರರ ಕಲ್ಯಾಣ ಮತ್ತು ಜೀವನೋಪಾಯಕ್ಕೆ ಕೊಡುಗೆ ನೀಡುತ್ತದೆ ಮತ್ತು ಕರಾವಳಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಮಹಿಳೆಯರಿಗೆ ಸಂದ ಜಯ:-
ಸಾಂಪ್ರದಾಯಿಕ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮೀರಿದ ಈ ಐತಿಹಾಸಿಕ ಒಪ್ಪಂದವು, ಸುಸ್ಥಿರ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸುತ್ತದೆ. ಇದು ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಮತ್ತು ಪ್ರಯೋಜನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಮಾರುಕಟ್ಟೆಗಳು ಮತ್ತು ಉದಯೋನ್ಮುಖ ವಲಯಗಳಿಗೆ ಮಹಿಳೆಯರ ಪ್ರವೇಶವನ್ನು ಹೆಚ್ಚಿಸಲು, ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಕ್ಷರತೆಯನ್ನು ಉತ್ತೇಜಿಸಲು, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಗಳನ್ನು ಪ್ರೋತ್ಸಾಹಿಸಲು ಮತ್ತು ಅವರ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿವಿಧ ಚಟುವಟಿಕೆ ಗಳನ್ನು ಕೈಗೊಳ್ಳಲು ಎರಡೂ ದೇಶಗಳು ಬದ್ಧವಾಗಿವೆ.
ಸಿಇಟಿಎ ಕೇವಲ ಒಂದು ವ್ಯಾಪಾರ ಒಪ್ಪಂದಕ್ಕಿಂತ ಮಿಗಿಲಾದುದಾಗಿದೆ. ಇದು ಭಾರತದ ಸಾಮರ್ಥ್ಯಗಳು ಮತ್ತು ಆಕಾಂಕ್ಷೆಗಳ ಮೇಲಿನ ವಿಶ್ವಾಸದ ಸಂಕೇತವಾಗಿದೆ. ಇದು ಜಾಗತಿಕ ವಾಣಿಜ್ಯದಲ್ಲಿ ಕೇವಲ ಭಾಗವಹಿಸುತ್ತಿಲ್ಲ, ಬದಲಿಗೆ ಅದನ್ನು ರೂಪಿಸಲು ಸಹಾಯ ಮಾಡುತ್ತಿರುವ ಹೊಸ ಭಾರತವನ್ನು ಪ್ರತಿಬಿಂಬಿಸುತ್ತದೆ. ನಮ್ಮ ರೈತರು, ಮೀನುಗಾರರು, ಕಾರ್ಮಿಕರು, ಮಹಿಳಾ ಉದ್ಯಮಿಗಳು, ಎಂ ಎಸ್ ಎಂ ಇ ಗಳು, ವೃತ್ತಿಪರರು ಮತ್ತು ಯುವಕರನ್ನು ಸಶಕ್ತಗೊಳಿಸುವ ಮೂಲಕ, ಇದು ದೇಶದ ಪ್ರತಿಯೊಂದು ಮೂಲೆಯಲ್ಲಿರುವ ಪ್ರತಿಯೊಬ್ಬ ಭಾರತೀಯನನ್ನು ತಲುಪುವ ಅವಕಾಶಗಳನ್ನು ಸೃಷ್ಟಿಸಲಿದೆ.
-ಪಿಯೂಷ್ ಗೋಯಲ್
(ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು)