×
Ad

ಸಂಶೋಧನಾ ಕ್ಷೇತ್ರದ ದಿಗ್ಗಜ ಡಾ. ಎಂ.ಎಂ. ಕಲಬುರ್ಗಿ

ಇಂದು ಡಾ. ಎಂ.ಎಂ. ಕಲಬುರ್ಗಿ ಜನ್ಮ ದಿನ

Update: 2025-11-28 11:26 IST

‘‘ಅಂಬಲಿ ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ’’ ಎಂಬ ತಂದೆಯವರ ಆದರ್ಶಕ್ಕೆ ಬದ್ಧರಾದವರು ಡಾ.ಎಂ.ಎಂ ಕಲುಬುರ್ಗಿಯವರು. ಹಂಪಿ ವಿ.ವಿ. ಕುಲಪತಿಯಾಗಿದ್ದಾಗ ಹೆಚ್ಚಿನ ಭತ್ತೆಯನ್ನು ವಿಶ್ವವಿದ್ಯಾನಿಲಯಕ್ಕೆ ಮರಳಿಸಿದ್ದು, ಪಂಪ ಪ್ರಶಸ್ತಿಯ ಲಕ್ಷ ರೂಪಾಯಿಗಳನ್ನು ಸರಕಾರಕ್ಕೆ ಮರಳಿಕೊಟ್ಟಿದ್ದು, ನಿವೃತ್ತಿಯ ನಂತರ ಬಂದ ಹೆಚ್ಚಿನ ಹಣವನ್ನು ಹಂಪಿ ವಿ.ವಿ., ತೋಂಟದಾರ್ಯ ಮಠ, ನಾಗನೂರು ರುದ್ರಾಕ್ಷಿಮಠಗಳಿಗೆ ದಾಸೋಹವಾಗಿ ನೀಡಿದ್ದು ಇದಕ್ಕೆ ಉದಾಹರಣೆ ಎನಿಸಿವೆ.

‘‘ಮಹಾತ್ಮರಂ ನೆನೆವುದೇ ಘನ ಮುಕ್ತಿ ಪದಂ’’ ಎಂಬ ಉಕ್ತಿ ಘನವಂತರ ಸ್ಮರಣೆಯ ಮಹತ್ವವನ್ನು ಸಾರಿ ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಸ್ಮರಣೆ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಡಾ.ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಒಬ್ಬರು. ಅವರು ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಬಹುದೊಡ್ಡ ಆಸ್ತಿ. ಕನ್ನಡಿಗರ ಅಮೂಲ್ಯ ಸಾಂಸ್ಕೃತಿಕ ಸಂಪತ್ತು, ಕನ್ನಡ ನಾಡು-ನುಡಿಯ ಅಸ್ಮಿತೆಯ ಅನನ್ಯ ಹೆಗ್ಗುರುತು. ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಯಾಗಿ, ಕನ್ನಡದ ಬಹುದೊಡ್ಡ ಸಂಶೋಧಕರಾಗಿ ಅವರು ಮಾಡಿದ ಸೇವೆ ಅನುಪಮವಾದುದು. ಕನ್ನಡ ಸಾರಸ್ವತ ಲೋಕಕ್ಕೆ ಧೀಮಂತ ಸಾಂಸ್ಕೃತಿಕ ಚಿಂತಕರಾಗಿದ್ದ ಡಾ.ಕಲಬುರ್ಗಿ ಅವರು ಅಗಸ್ಟ್ 30, 2015ರಂದು ಹತ್ಯೆಗೀಡಾದರು. ಹಲವು ಮತ-ಪಂಥ, ಜಾತಿ-ಜನಾಂಗಗಳ ಸಾಮಾಜಿಕ ಸಮಾನತೆಗೆ ಹೆಸರಾಗಿದ್ದ ನಾಡಿನಲ್ಲಿ ನಡೆದ ಈ ಘಟನೆ ಇಡೀ ಮನುಕುಲಕ್ಕೆ ಆಘಾತವನ್ನುಂಟು ಮಾಡಿತು. ಆದರೆ ಸಂಶೋಧನಾ ಕ್ಷೇತ್ರದಲ್ಲಿ ಆಳವಾಗಿ ಬೇರೂರಿರುವ ಅವರ ವಿಚಾರ ಧಾರೆಗಳು ಜೀವಂತವಾಗಿ ಉಳಿದುಕೊಂಡಿವೆ.

ಡಾ.ಎಂ.ಎಂ. ಕಲಬುರ್ಗಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ, ತಾಯಿಯ ತವರೂರು ಗುಬ್ಬೇವಾಡ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ಅವರ ತಂದೆ ಮಡಿವಾಳಪ್ಪ, ತಾಯಿ ಗುರಮ್ಮ. ತಂದೆ ಶ್ರಮ ಜೀವಿ, ದುಡಿಮೆಯನ್ನೇ ನಂಬಿದ್ದರು. ಮಧ್ಯಮ ವರ್ಗದ ಸುಸಂಸ್ಕೃತ ಅವಿಭಕ್ತ ಕುಟುಂಬ. ಇಂಥ ಪರಿಸರದಲ್ಲಿ ಎಂ.ಎಂ. ಕಲಬುರ್ಗಿಯವರ ಬಾಲ್ಯದ ದಿನಗಳು ಕಳೆದವು. ಅವರ ಪ್ರಾಥಮಿಕ ಶಿಕ್ಷಣ ತಂದೆಯವರ ಊರಾದ ಸಿಂದಗಿ ತಾಲೂಕಿನ ಯರಗಲ್ಲಿನಲ್ಲಿ ನಡೆಯಿತು. ಮಾಧ್ಯಮಿಕ ಶಿಕ್ಷಣವನ್ನು ಸಿಂದಗಿಯ ಎಚ್.ಜಿ. ಬಾಡ ಹೈಸ್ಕೂಲ್‌ನಲ್ಲಿ ಪೂರೈಸಿದರು. ಹೈಸ್ಕೂಲ್ ಅಭ್ಯಾಸದ ದಿನಗಳಲ್ಲಿ ಕಲಬುರ್ಗಿಯವರು ತುಂಬಾ ಕ್ರಿಯಾಶೀಲರು. 1956ರಲ್ಲಿ ಮೆಟ್ರಿಕ್ ಪರೀಕ್ಷೆಗೆ ಕುಳಿತು ಉಚ್ಚ ಶ್ರೇಣಿಯಲ್ಲಿ ಪಾಸಾದರು. ಹೈಸ್ಕೂಲಿನ ಮುಖ್ಯೋಪಾಧ್ಯಾಯ ಸಿ.ಎಂ.ಮೇಟಿ ಅವರು ‘‘ಕಲಬುರ್ಗಿಯಂಥಾ ಸ್ಟೂಡೆಂಟ್ ನಾನು ನೋಡಲೇ ಇಲ್ಲ. ಅಕ್ಷರ ನೋಡಿದರ ಶಾಸನಲಿಪಿ, ಬುದ್ಧಿ ನೋಡಿದರ ಭಾಳ ಶಾರ್ಪ್. ಪ್ರಶ್ನೆ ಕೇಳೋದು, ಕೇಳಿದ ಪ್ರಶ್ನೆಗೆ ಉತ್ತರಿಸೋದು ನಡೀತಿತ್ತು. ಒಂಥರಾ ಅವನಿದ್ದ ಕ್ಲಾಸ್ ಅಂದರ ಮಾಸ್ತರರ ಹುಡುಗರ ಸತ್ವ ಪರೀಕ್ಷಾ ನಡೀತಿತ್ತು’’ ಎಂದು ಎಂ.ಎಂ.ಕಲಬುರ್ಗಿಯವರ ಕುರಿತು ಹೇಳಿದ್ದರಂತೆ.

ಕಲಬುರ್ಗಿಯವರು ಉನ್ನತ ವ್ಯಾಸಂಗಕ್ಕಾಗಿ ವಿಜಯಪುರದ ಬಿ.ಎಲ್. ಡಿ.ಇ. ಸಂಸ್ಥೆಯ ವಿಜಯ ಕಾಲೇಜಿಗೆ ಸೇರಿದರು. ವಿಜಯ ಕಾಲೇಜಿನಲ್ಲಿ ಕನ್ನಡ ವಿಷಯವನ್ನು ಪ್ರೊ. ಬಿ.ಟಿ. ಸಾಸನೂರ ಕಲಿಸುತ್ತಿದ್ದರು. ಅವರ ಶಿಸ್ತು, ವಿದ್ವತ್ತು, ಬೋಧನೆಯ ವಿಧಾನವು ಕಲಬುರ್ಗಿ ಅವರನ್ನು ಪ್ರಭಾವಿಸಿತು. ಕಲಬುರ್ಗಿಯವರು ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದರು. 1960ರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಬಿ.ಎ. ಪದವಿ ಸಂಪಾದಿಸಿದರು. ಅವರ ಪ್ರತಿಭೆಗೆ ಪುರಸ್ಕಾರವಾಗಿ ಯು.ಜಿ.ಸಿ. ಶಿಷ್ಯವೇತನ ಲಭಿಸಿತು. ಮನೆಯವರೆಲ್ಲ ಮುಂದಕ್ಕೆ ಓದಲಿ ಎಂದು ಸಂತೋಷದಿಂದ ಹಾರೈಸಿದರು. ನಂತರ ಅವರು ಸ್ನಾತಕೋತ್ತರ ಪದವಿಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಬಂದರು. ಸತತ ಅಭ್ಯಾಸದಿಂದ, ವಿದ್ವತ್ತಿನಿಂದ ಕಲಬುರ್ಗಿಯವರು ಡಾ. ಆರ್.ಸಿ. ಹಿರೇಮಠರ ಅಚ್ಚುಮೆಚ್ಚಿನ ಶಿಷ್ಯರಾದರು. ಎಂ.ಎಂ. ಕಲಬುರ್ಗಿ ಅವರಿಗೆ ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಕಂಬಾರ ಮುಂತಾದವರೆಲ್ಲ ಸಹಪಾಠಿಗಳು. ಕಲಬುರ್ಗಿಯವರು 1962ರಲ್ಲಿ ಕನ್ನಡ ವಿಭಾಗದಿಂದ ಎಂ.ಎ. ಪದವಿಯನ್ನು ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ ಗಳಿಸಿಕೊಂಡರು. ಅಲ್ಲದೆ ಜಯಚಾಮರಾಜ ಒಡೆಯರ ಪಾರಿತೋಷಕವನ್ನು ಪಡೆದು ಕನ್ನಡ ವಿಭಾಗದ ಹೆಮ್ಮೆಯ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದರು.

ಎಂ.ಎ. ಮುಗಿಯುವ ವೇಳೆಗೆ ಕಲಬುರ್ಗಿಯವರು ಕ.ವಿ.ವಿ. ಕ್ಯಾಂಪಸ್‌ನಲ್ಲಿ ವಿದ್ವಾಂಸ ವಿದ್ಯಾರ್ಥಿಯೆನಿಸಿದರು. ಅವರು ಪರೀಕ್ಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳು ಅಧ್ಯಯನ ಪೀಠದ ಸೂಚನಾ ಫಲಕದ ಮೇಲೆ ಪ್ರದರ್ಶನಗೊಂಡವು. ಡಾ.ಆರ್.ಸಿ.ಹಿರೇಮಠ ಅವರಿಗೆ ಕಲಬುರ್ಗಿಯವರನ್ನು ಬೀಳ್ಕೋಡುವ ಮನಸ್ಸಿರಲಿಲ್ಲ. ಹೀಗಾಗಿ 1962ರಲ್ಲಿ ಅದೇ ತಾನೇ ಆರಂಭವಾಗಿದ್ದ ಸಮಗ್ರವಚನ ವಾಙ್ಮಯ ಸಂಶೋಧನಾ ಸಂಸ್ಕರಣ ಪ್ರಕಟಣ ಯೋಜನೆಗೆ ಎಂ.ಎಂ. ಕಲಬುರ್ಗಿ ಅವರನ್ನು ಸಹಾಯಕ ಸಂಶೋಧಕರಾಗಿ ನೇಮಿಸಿಕೊಂಡರು. ಕಲಬುರ್ಗಿ ಅವರ ವೃತ್ತಿ ಜೀವನ ಆರಂಭವಾಯಿತು. ಕೆಲವೇ ದಿನಗಳಲ್ಲಿಯೇ ಅವರು ಪ್ರತಿಷ್ಠಿತ ಕರ್ನಾಟಕ ಕಾಲೇಜಿನ ಕನ್ನಡ ಅಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಅವರು ಸತತಾಭ್ಯಾಸ ಪ್ರವೃತ್ತಿ, ಪ್ರಭಾವಪೂರ್ಣ ಪಾಠ ಬೋಧನೆ, ಶಿಸ್ತಿನ ನಡೆ ನುಡಿಗಳಿಂದ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಪ್ರೀತಿ ಗೌರವಗಳಿಗೆ ಪಾತ್ರರಾದರು. ಕರ್ನಾಟಕ ಕಾಲೇಜಿನಲ್ಲಿ ನಾಲ್ಕು ವರ್ಷ ಯಶಸ್ವಿಯಾಗಿ ಸೇವೆ ಪೂರೈಸಿದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠಕ್ಕೆ 1966ರಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. 1968ರಲ್ಲಿ ಡಾ.ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ವಿಷಯದ ಮೇಲೆ ಅವರು ಡಾಕ್ಟರೇಟ್ ಪದವಿ ಪಡೆದರು. ಅವರು ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಬಸವಪೀಠದ ಪ್ರಾಧ್ಯಾಪಕರಾಗಿ ನಿರಂತರ 32 ವರ್ಷಗಳವರೆಗೆ ಅನುಪಮವಾದ ಶೈಕ್ಷಣಿಕ ಸೇವೆ ಸಲ್ಲಿಸಿದರು. ಡಾ. ಎಂ.ಎಂ. ಕಲಬುರ್ಗಿಯವರು 1998ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಸೇವೆಯಿಂದ ನಿವೃತ್ತಿ ಹೊಂದಿದರು. 1998ರ ಮಾರ್ಚ್ 4ರಂದು ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡರು. ಹಗಲಿರುಳೆನ್ನದೆ ತಾವು ದುಡಿದು, ಇತರರೆಲ್ಲರನ್ನೂ ದುಡಿಸಿ, ಶ್ರಮ ಸಂಸ್ಕೃತಿಯನ್ನು ಅಲ್ಲಿ ಗಟ್ಟಿಗೊಳಿಸಿ ಮೂರು ವರ್ಷಗಳಲ್ಲಿ ಹಂಪಿ ವಿಶ್ವವಿದ್ಯಾನಿಲಯವನ್ನು ಮಾದರಿ ವಿಶ್ವವಿದ್ಯಾಲಯನ್ನಾಗಿ ಮಾಡಿದರು. 2001ರಲ್ಲಿ ಅವರು ನಿವೃತ್ತಿ ಹೊಂದಿದರು.

ಡಾ.ಎಂ.ಎಂ.ಕಲಬುರ್ಗಿ ಅವರ ಲೇಖನ, ಪುಸ್ತಕಗಳು ಸಾಹಿತ್ಯ, ಜಾನಪದ, ಇತಿಹಾಸ ಮತ್ತು ಪುರಾತತ್ವ ಕ್ಷೇತ್ರಗಳಿಗೆ ಸಂಬಂಧಿಸಿವೆ. ಅವರು 120ಕ್ಕೂ ಹೆಚ್ಚು ಅಮೂಲ್ಯವಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರ ಬರವಣಿಗೆಯ ಮೊದಲ ದಾಖಲೆ ‘ಬಸವಣ್ಣನವರ ಜೀವನ ಚರಿತ್ರೆ’ ಎಂಬ ಲೇಖನ, ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯವರ ಮೊದಲ ಲೇಖನವಿದು. ‘ಬಸವಣ್ಣನವರನ್ನು ಕುರಿತ ಶಾಸನಗಳು’ ಎಂಬ ಕಿರುಹೊತ್ತಿಗೆ 1968ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಪ್ರಕಟವಾಯಿತು. ‘ಶಾಸನ ಸಂಪದ’, ‘ಶಾಸನಗಳಲ್ಲಿ ಶಿವಶರಣರು’, ‘ಧಾರವಾಡ ಜಿಲ್ಲೆಯ ಶಾಸನ ಸೂಚಿ’, ‘ವಿಜಯಪುರ ಜಿಲ್ಲೆಯ ಶಾಸನ ಸೂಚಿ’, ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಕನ್ನಡ ಶಾಸನ ಸಾಹಿತ್ಯ’ ಹೀಗೆ 12 ಶಾಸನ ಕೃತಿಗಳನ್ನು ಅವರು ಹೊರತಂದರು. ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಮಾರ್ಗ 1, 2, 3, 4, 5, 6, 7 ಮತ್ತು 8, ಪಂಚಾಚಾರ್ಯರ ನಿಜ ಸ್ವರೂಪ, ವಚನ ಸಾಹಿತ್ಯ ಪ್ರಾಚೀನ ಆಕರಕೋಶ ಮುಂತಾದ 20ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ಅವರು ರಚಿಸಿದ್ದಾರೆ. ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರ, ಶಬ್ದಮಣಿದರ್ಪಣ ಸಂಗ್ರಹ, ಕನ್ನಡ ಹಸ್ತಪ್ರತಿ ಶಾಸ್ತ್ರ ಮುಂತಾದ ಶಾಸ್ತ್ರ ಕೃತಿಗಳು; ‘ಖರೇ ಖರೇ ಕಿತ್ತೂರು ಬಂಡಾಯ’, ‘ಕೆಟ್ಟಿತ್ತು ಕಲ್ಯಾಣ’ ನಾಟಕಗಳು; ‘ನೀರು ನೀರುಡಿಸಿತ್ತು’, ‘ನೀರಾಗ ನಿಂತೀನಿ ನೀರಡಿಸಿ’ ಕವನ ಸಂಕಲನಗಳು, ‘ಖರೇ ಖರೇ ಸಂಗ್ಯಾಬಾಳ್ಯಾ’ (ಸಣ್ಣಾಟ), ಎರಡು ಜಾನಪದ ಕೃತಿಗಳು, ಎರಡು ದಾಖಲೆ ಕೃತಿಗಳು, ಹತ್ತೊಂಭತ್ತು ಸಂಪದಾನೆ ಕೃತಿಗಳು, 7 ಆಧುನಿಕ ಗ್ರಂಥ ಸಂಪಾದನೆ, 38 ಪ್ರಾಚೀನ ಗ್ರಂಥ ಸಂಪಾದನೆ ಕೃತಿಗಳು ಪ್ರಕಟಗೊಂಡಿವೆ. ಹೀಗೆ ಅವರು ಸಾಹಿತ್ಯ ಸಂಶೋಧನಾ ಕ್ಷೇತ್ರಕ್ಕೆ ತಮ್ಮ ಅನುಪಮ ಕೊಡುಗೆಯನ್ನು ನೀಡಿದ್ದಾರೆ. ಶರಣರ ವಚನಗಳನ್ನು ಮೂವತ್ತು ಭಾಷೆಗಳಿಗೆ ಭಾಷಾಂತರಿಸುವ ಹೊಣೆ ಹೊತ್ತು ಅದನ್ನು ಶೃದ್ಧೆಯಿಂದ ಪೂರೈಸಿದರು.

ಡಾ.ಎಂ.ಎಂ ಕಲುಬುರ್ಗಿಯವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ, ಅಖಿಲಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಗೋಕಾಕ ಚಳವಳಿಯ ಕಾರ್ಯದರ್ಶಿಯಾಗಿ, ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಅಧ್ಯಯನ ಅಕಾಡಮಿಯ ಮಾರ್ಗದರ್ಶಕರಾಗಿ, ಮೈಸೂರು ಸುತ್ತೂರುಮಠದ ಜೆ.ಎಸ್.ಎಸ್. ಗ್ರಂಥಮಾಲೆಯ ಸಂಪಾದಕ ಮಾರ್ಗದರ್ಶಕರಾಗಿ, ಧಾರವಾಡದ ದ.ರಾ.ಬೆಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಪ್ರಸರಾಂಗದ ಮಾರ್ಗದರ್ಶಕರಾಗಿ, ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಮಾರ್ಗದರ್ಶಕರಾಗಿ, ಕರ್ನಾಟಕ ಸರಕಾರದ ಸಮಗ್ರ ವಚನಸಾಹಿತ್ಯ ಜನಪ್ರಿಯ ಆವೃತ್ತಿಯ ಪ್ರಕಟನಾ ಯೋಜನೆಯ ಪ್ರಧಾನ ಸಂಪಾದಕರಾಗಿ, ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಾಚೀನ ಗದ್ಯ ಸಾಹಿತ್ಯ ಮಾಲೆಯ ಗೌರವ ಸಂಪಾದಕರಾಗಿ, ಬೆಂಗಳೂರು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಅಪ್ರಕಟಿತ ಪ್ರಾಚೀನ ಸಾಹಿತ್ಯ ದಾಖಲೆ ಮಾಲೆಯ ಪ್ರಧಾನ ಸಂಪಾದಕರಾಗಿ, ಬೆಂಗಳೂರು ಬಸವ ಸಮಿತಿಯ ವಚನ ಬಹುಭಾಷಾ ಅನುವಾದ ಯೋಜನೆಯ ನಿರ್ದೇಶಕರಾಗಿ ಅವರು ಮಾಡಿದ ಸೇವೆ ಅಚ್ಚಳಿಯದಂಥದು. ಅವರು ಯಾವುದೇ ಸಂಸ್ಥೆಯ ಅಧಿಕಾರವನ್ನು ವಹಿಸಿಕೊಂಡರೂ ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು. ಹೀಗಾಗಿ ಎಲ್ಲ ಸಂಸ್ಥೆಗಳು ಕಲುಬುರ್ಗಿಯವರ ಕಾರ್ಯಕ್ಷಮತೆಯ ಹಿರಿಮೆಯನ್ನು ಸಾರುತ್ತ ನಿಂತಿವೆ.

ಡಾ. ಎಂ.ಎಂ. ಕಲುಬುರ್ಗಿಯವರು 1966ರ ಫೆಬ್ರವರಿ 6ರಂದು ಮುದ್ದೇಬಿಹಾಳದ ನಾಗಠಾಣ ಮನೆತನದ ಉಮಾದೇವಿ ಅವರನ್ನು ಮದುವೆಯಾದರು. ಅವರಿಗೆ ನಾಲ್ವರು ಮಕ್ಕಳು. ಶ್ರೀವಿಜಯ, ಪೂರ್ಣಿಮಾ, ಪ್ರತಿಮಾ ಮತ್ತು ರೂಪದರ್ಶಿ. ಎಲ್ಲರೂ ತಾಯಿ ತಂದೆಯವರ ಆದರ್ಶದ ಬೆಳಕಿನಲ್ಲಿ ಜೀವನ ಮುನ್ನಡೆಸಿದ್ದಾರೆ.

ಸಂಶೋಧನೆಯ ಫಲಿತಗಳು ಸಮಾಜಕ್ಕೆ ಪಥ್ಯವಾಗದೆ ಇದ್ದಾಗ ಕಲುಬುರ್ಗಿಯವರ ಮೇಲೆ ಎದೆ ನಡುಗಿಸುವಂತಹ ಪ್ರಯತ್ನಗಳು ಆಗಾಗ ನಡೆಯುತ್ತಿದ್ದವು. ಆಗೆಲ್ಲ ಪತಿಯ ಜೊತೆಗೆ ಇದ್ದವರು, ಧೈರ್ಯ ಕೊಟ್ಟವರು, ಮನೆ ಮಕ್ಕಳ ನೆಮ್ಮದಿ ನೋಡಿಕೊಂಡವರು, ಬಂದದ್ದು ಬರಲಿ ಎದುರಿಸೋಣ ಎಂದವರು ಬಾಳಸಂಗಾತಿ ಉಮಾದೇವಿಯವರು. ಕಲುಬುರ್ಗಿಯವರ ಬೆಳವಣಿಗೆ, ಸಾಧನೆಯಲ್ಲಿ ಅವರ ಪಾತ್ರ ಬಹುದೊಡ್ಡದು. ಡಾ. ಕಲುಬುರ್ಗಿಯವರು ತುಂಬಾ ಸರಳ ಜೀವನ, ಸಾದಾ ಸೀದಾ ಬದುಕು. ವಿಶ್ವವಿದ್ಯಾಲಯದ ಕುಲಪತಿಯಂಥ ಉನ್ನತ ಹುದ್ದೆಯನ್ನು ಅಲಂಕರಿಸಿ ಬಂದಿದ್ದರೂ ಸ್ವಂತ ಒಂದು ಕಾರು ಕೊಂಡಿರಲಿಲ್ಲ. ಬಸ್, ಆಟೊ, ಬಾಡಿಗೆ ಕಾರುಗಳಲ್ಲಿಯೇ ಓಡಾಡಿ ತಮ್ಮ ಅಗತ್ಯದ ಕಾರ್ಯಗಳನ್ನು ಮುಗಿಸುತ್ತಿದ್ದರು. ಅವರದು ಶಿಸ್ತಿನ ಜೀವನ, ತತ್ವಬದ್ಧ ಬದುಕು.

ಡಾ.ಎಂ.ಎಂ.ಕಲುಬುರ್ಗಿಯವರ ವಿದ್ವತ್ತಿಗೆ, ದುಡಿಮೆಗೆ, ಸಂಶೋಧನೆ ಸೇವೆಗೆ ಅನೇಕ ಗೌರವ ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಷ್ಟ್ರೀಯ ಬಸವ ಪ್ರಶಸ್ತಿ, ರನ್ನ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿ-ಪುರಸ್ಕಾರಗಳು ಅವರ ಮುಡಿಗೇರಿವೆ. ಇತಿಹಾಸ ಸಮ್ಮೇಳನದ ಅಧ್ಯಕ್ಷತೆ, ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಮೊದಲನೆಯ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷತೆ, ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷತೆ, ತಂಜಾವೂರಿನಲ್ಲಿ ನಡೆದ ನಾಮ ವಿಜ್ಞಾನ ಸಮ್ಮೇಳನದ ಅಧ್ಯಕ್ಷತೆ ಹೀಗೆ ಗೌರವದ ಸ್ಥಾನಮಾನಗಳು ಸಂದಿವೆ. ಅವರಿಗೆ ಅರುವತ್ತು ವರ್ಷ ತುಂಬಿದಾಗ ಅರ್ಪಿಸಿದ ಮಹಾಮಾರ್ಗ ಅಭಿನಂದನ ಗ್ರಂಥ ಅವರ ವ್ಯಕ್ತಿತ್ವದ ಎತ್ತರಕ್ಕೆ ತಕ್ಕುದಾದ ಅದ್ಭುತವಾದ ಗ್ರಂಥ.

‘‘ಡಾ. ಎಂ.ಎಂ. ಕಲುಬುರ್ಗಿಯವರು ಒಬ್ಬ ಮಾದರಿ ಪ್ರಾಧ್ಯಾಪಕರಾಗಿದ್ದರು. ಅವರ ಪಾಠ ಕೇಳುವುದೆಂದರೆ ಒಂದು ಜ್ಞಾನ ಯಜ್ಞದಲ್ಲಿ ಪಾಲ್ಗೊಂಡಂತೆ, ಅನುಭವ ಮಂಟಪದಲ್ಲಿ ಭಾಗವಹಿಸಿದಂತೆ ಅನ್ನಿಸುತ್ತಿತ್ತು. ಅವರ ಆ ಪಾಠದ ರೀತಿ ಮನದಲ್ಲಿ ಅಚ್ಚೊತ್ತಿದೆ, ಕಣ್ಣಲ್ಲಿ ಕಟ್ಟಿ ನಿಂತಿದೆ. ಅನೇಕರು ಅವರ ಬೋಧನೆಯ ಶೈಲಿ, ಶಿಸ್ತುಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅನುಕರಿಸಿ ಅಳವಡಿಸಿಕೊಂಡು ಯಶಸ್ವಿ ಪ್ರಾಧ್ಯಾಪಕರೆನಿಸಿಕೊಂಡಿದ್ದಾರೆ’’ ಎಂದು ಡಾ.ವೀರಣ್ಣ ರಾಜೂರ ಅವರು ನೆನಪಿಸಿಕೊಳ್ಳುತ್ತಾರೆ.

30 ಆಗಸ್ಟ್ 2015, ಅಂದು ರವಿವಾರ ಮುಂಜಾನೆ 8 ಗಂಟೆ ಸಮಯ. ಡಾ. ಎಂ.ಎಂ ಕಲುಬುರ್ಗಿಯವರು ಗುಂಡೇಟಿಗೆ ಬಲಿಯಾದರು. ಕಲುಬುರ್ಗಿಯವರು ಬರೆದ ಕವನ ಸಾಲುಗಳಿಗೆ ಹೊಸ ಜೀವ ಬಂತು.

ನಾನು ಸಾಯುವುದಿಲ್ಲ

ನನ್ನಲ್ಲಿ ಸತ್ಯ

ಜೀವಂತವಾಗಿರುವವರೆಗೆ.

ಇಂತಹ ಮಹಾನ್ ಚೇತನ ಈಗ ನಮ್ಮ ನಡುವೆ ಇಲ್ಲವೆಂಬುದು ವಿಷಾದದ ಸಂಗತಿ. ಅವರು ಸದಾ ಸ್ಮರಣೀಯರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸುರೇಶ ಗುದಗನವರ, ಧಾರವಾಡ

contributor

Similar News