×
Ad

ರಾಬರ್ಟ್ ರೆಡ್ ಫೋರ್ಡ್ ಯುಗಾಂತ್ಯ

Update: 2025-09-18 12:48 IST

ಪರಿಸರ ರಕ್ಷಣೆಯಂತೆಯೇ ರಾಬರ್ಟ್ ಅಮೆರಿಕದ ಮೂಲನಿವಾಸಿಗಳ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವವರನ್ನೂ ಬೆಂಬಲಿಸುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿರುವ ‘ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್’ನ ಟ್ರಸ್ಟಿಯೂ ಆಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬರಾಕ್ ಒಬಾಮಾರನ್ನು ರಾಬರ್ಟ್ ಬೆಂಬಲಿಸಿದ್ದರು. ಯಾಕೆಂದರೆ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಪರಿಸರವನ್ನು ರಕ್ಷಿಸಲು ಒತ್ತು ಕೊಡುವುದಾಗಿ ಭರವಸೆ ನೀಡಿದ್ದರು. ಕ್ರಮೇಣ ರಾಬರ್ಟ್ ಬೇಸರಗೊಂಡು ‘‘ಒಬಾಮಾ ಅವರು ಸ್ವಚ್ಛ ಗಾಳಿ, ನೀರು ಮತ್ತು ಭೂಮಿ ಮುಖ್ಯ ಎಂದಿದ್ದರು. ಆದರವರು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ’’ ಎಂದು ಟೀಕಿಸಿದ್ದರು.

ಹಾಲಿವುಡ್ ನಟ ರಾಬರ್ಟ್ ರೆಡ್ ಫೋರ್ಡ್ ತನ್ನ 89 ನೇ ವಯಸ್ಸಿಗೆ ತೀರಿಕೊಂಡಿದ್ದಾರೆ. ಇವರ ನಟನೆ ಬಗೆಗಿದ್ದ ಆಸಕ್ತಿ ಮತ್ತು ಸಿನೆಮಾ ಬಗೆಗಿದ್ದ ಕಾಳಜಿ ವಿಶೇಷವಾದದ್ದು. ಇವರು 33 ವರ್ಷ ವಯಸ್ಸಾಗುವ ಹೊತ್ತಿಗೇ ಸೂಪರ್ ಸ್ಟಾರ್ ಆಗಿದ್ದವರು. ಆದರೆ ಸ್ಟಾರ್‌ಗಿರಿಗಿಂತ ನಟನಾಗಿ ಉಳಿಯುವುದೇ ಮುಖ್ಯ ಎಂದು ಭಾವಿಸಿ ಆ ನಿಟ್ಟಿನಲ್ಲಿ ಹಲವಾರು ಹೆಜ್ಜೆಗಳನ್ನು ಇಟ್ಟವರು.

ಇವರು ಹುಟ್ಟಿದ್ದು ಕ್ಯಾಲಿಫೋರ್ನಿಯಾದ ಸ್ಯಾಂಟ ಮೋನಿಕಾದಲ್ಲಿ. ಹುಡುಗನಾಗಿದ್ದಾಗಿಂದಲೇ ತುಂಟನಾಗಿದ್ದ ರಾಬರ್ಟ್ ಹುಟ್ಟಾ ಪೋಲಿಯೂ ಆಗಿದ್ದರು; ಅಷ್ಟೇನೂ ಒಳ್ಳೆಯ ವಿದ್ಯಾರ್ಥಿಯಾಗಿರದಿದ್ದ ಇವರು ಗ್ಯಾಂಗು ಕಟ್ಟಿಕೊಂಡು ಬಿಯರು ಇತ್ಯಾದಿಗಳನ್ನು ಕಳ್ಳತನ ಮಾಡುತ್ತಿದ್ದರು. ಒಂದು ಸಲ ಬಂಗಾರ ಕದಿಯುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ತನ್ನ ಇಷ್ಟದ ಗ್ಯಾಂಗಿನೊಡನೆ ಸದಾ ಕುಡಿದು ಮೋಜು ಮಾಡುತ್ತಿದ್ದ ರಾಬರ್ಟ್ ಹೈಸ್ಕೂಲ್‌ನಲ್ಲಿದ್ದಾಗ ಪಾಠ ಕೇಳುವುದು ಬಿಟ್ಟು ಕೊನೆಯ ಬೆಂಚಿನಲ್ಲಿ ಕೂತು ನಮ್ಮ ಚಂದಮಾಮ, ಬಾಲಮಂಗಳದಂತಹ ಅಲ್ಲಿಯ ಕಾಮಿಡಿ ಬರಹಗಳ ಪತ್ರಿಕೆ ಮ್ಯಾಡ್ ಮ್ಯಾಗಝಿನ್ ಓದುತ್ತಿದ್ದರು. ಹೇಗೋ ಹೈಸ್ಕೂಲು ಮುಗಿಸಿ ಕೊಲರಾಡೋ ಯೂನಿವರ್ಸಿಟಿಯಲ್ಲಿ ಕಲೆಯನ್ನು ಅಭ್ಯಸಿಸಿ ಅನಿಮೇಶನ್ ಕಡೆಗೆ ಒಲವು ತೋರಿದರು. 1959ರ ಸುಮಾರಿಗೆ ನಾಟಕ, ಕಿರುತೆರೆಯಲ್ಲಿ ನಟಿಸಲಾರಂಭಿಸಿದರು. ಅವರು ಎಲಿಝಬೆತ್ ಆಸ್ಲೆಯ ಗಂಡನಾಗಿ ನಟಿಸಿದ ‘ಬೇರ್ ಫುಟ್ ಇನ್ ದಿಪಾರ್ಕ್’ ಎಂಬ ನಾಟಕ ಹಾಗೂ ‘ದಿ ವಾಯ್ಸ್ ಆಫ್ ಚಾರ್ಲಿ ಪೋಂಟ್’ ಟಿ.ವಿ. ಸೀರೀಸ್ ಪ್ರೇಕ್ಷಕರಲ್ಲಿ ಎಂಥ ಸಂಚಲನ ಉಂಟುಮಾಡಿದರೆಂದರೆ ’ವಾರ್ ಹಂಟ್’ ಎಂಬ ಸಿನೆಮಾ ಮೂಲಕ ರೆಡ್ ಫೋರ್ಡ್ ಚಿತ್ರನಟನೂ ಆದರು.

ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳು, ಮುದ್ದಾದ ನಗು, ಬೆಳ್ಳಗೆ ಮಿಂಚುತ್ತಿದ್ದ ದಂತಗಳು, ಸುಂದರವಾದ ಮುಖ... ಇವೆೆಲ್ಲದರೊಂದಿಗೆ ಪಕ್ವವಾಗಿದ್ದ ಪ್ರತಿಭೆಯನ್ನೂ ಹೊಂದಿದ್ದ ರಾಬರ್ಟ್ 60ರ ದಶಕದಲ್ಲಿ ಹಾಲಿವುಡ್‌ನ ಅಪಾರ ಬೇಡಿಕೆಯ ನಟನಾಗಿದ್ದರು. ಆದರೆ ಸ್ಟಾರ್ ಆಗಿ ಮಿಂಚುವುದು, ತನ್ನ ಸ್ಫುರದ್ರೂಪವನ್ನೇ ಬಂಡವಾಳವಾಗಿ ಮಾಡಿಕೊಳ್ಳುವುದು, ನಟರನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಿದ್ದ ಸ್ಟುಡಿಯೋಗಳ ತಾಳಕ್ಕೆ ಕುಣಿಯುವುದು ರಾಬರ್ಟ್‌ಗೆ ಬೇಕಿರಲಿಲ್ಲ. ತಾನು ಸಿನೆಮಾ ಜಗತ್ತಿಗೆ ಬಂದಿದ್ದೇ ನಟಿಸಲು ಎಂದು ಗಾಢವಾಗಿ ನಂಬಿದ್ದ ರಾಬರ್ಟ್ ತನ್ನ ಸ್ಟಾರ್‌ಗಿರಿಯ ಇಮೇಜನ್ನು ಕಳೆದುಕೊಳ್ಳುವುದಕ್ಕೆಂದೇ ಕಳ್ಳನಾಗಿ, ಮೋಸಗಾರನಾಗಿ, ಅತ್ಯಾಚಾರಿಯಾಗಿ ಹಲವಾರು ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ರಾಬರ್ಟ್ ನಟನಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ನಿರ್ದೇಶನಕ್ಕೆ ಕೈ ಹಾಕಿದರು. ಆಗ ಎಲ್ಲರೂ ‘‘ಇವನಿಗೆ ಹುಚ್ಚು ಹಿಡಿದಿರಬೇಕು? ನಟನಾಗಿ ಸುಮ್ಮನಿರುವ ಬದಲು ಇವನಿಗ್ಯಾಕೆ ನಿರ್ದೇಶನಾಗುವ ಗೀಳು?’’ ಎಂದು ಲೇವಡಿ ಮಾಡಿದ್ದರು. ಆದರೆ ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ರಾಬರ್ಟ್ ಸ್ವತಃ ತಾನೇ ಬೇಡಿಕೆಯನ್ನು ಹೊಂದಿದ್ದ ನಟನಾಗಿದ್ದರೂ ಬೇರೆ ನಟರನ್ನು ಕರೆದು ‘ಆರ್ಡಿನರಿ ಪೀಪಲ್’ ಎಂಬ ಸಿನೆಮಾವನ್ನು ನಿರ್ದೇಶಿಸಿದರು.

ಶ್ರೀಮಂತ ಕುಟುಂಬವೊಂದರಲ್ಲಿ ಸಂಭವಿಸುವ ಸಾವು ಅದು ಹೇಗೆ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಕತೆಯನ್ನು ಹೊಂದಿದ್ದ ಆ ಸಿನೆಮಾ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತು. ಆ ಪೈಕಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ರಾಬರ್ಟ್‌ಗೆ ಸಿಕ್ಕಿತ್ತು. ಅಂದಹಾಗೆ ರಾಬರ್ಟ್ ಖ್ಯಾತ ನಟನಾಗಿದ್ದರೂ ಜೀವಮಾನ ಸಾಧನೆಗಾಗಿ ಪಡೆದ ಆಸ್ಕರ್ ಪ್ರಶಸ್ತಿಯನ್ನು ಹೊರತುಪಡಿಸಿದರೆ ಆತ ಗೆದ್ದಿರುವ ಏಕೈಕ ಆಸ್ಕರ್ ಪ್ರಶಸ್ತಿ ಇದು ಎಂಬುದೇ ಸೋಜಿಗದ ಸಂಗತಿ!

ರಾಬರ್ಟ್ ರೆಡ್ ಫೋರ್ಡ್ ತನ್ನ ಇಳಿವಯಸ್ಸಿನಲ್ಲೂ ಜೀನ್ಸ್, ಟೀ-ಶರ್ಟ್, ಜಾಕೆಟ್, ಕ್ಯಾಪ್ ಹಾಕಿಕೊಂಡು ತನ್ನ ಎರಡನೇ ಮಡದಿ ಸಿಬಿಲ್ಲಿ ಜೊತೆ ಹೊರಗೆ ಸುತ್ತಲು ಹೋಗುತ್ತಿದ್ದರು. ಮೋಜಿನ ಮನುಷ್ಯನಾಗಿದ್ದ ಈತ ಉತ್ಸಾಹದಿಂದ ಪ್ರವಾಸಿತಾಣಗಳಿಗೆ ಭೇಟಿಕೊಡುತ್ತಿದ್ದರು. ಕಾರುಗಳನ್ನು ವೇಗವಾಗಿ ಡ್ರೈವ್ ಮಾಡುತ್ತಾ ಆನಂದಿಸುತ್ತಿದ್ದರು. ನಿಯಮಿತವಾಗಿ ಕುದುರೆಸವಾರಿ ಮಾಡುತ್ತಿದ್ದರು, ಟೆನಿಸ್ ಆಡುತ್ತಿದ್ದರು. ‘‘ಐ ಸ್ಟಿಲ್ ಹ್ಯಾವ್ ಎನರ್ಜಿ. ಯಾವಾಗ ನನ್ನ ಎನರ್ಜಿ ಕ್ಷೀಣಿಸುತ್ತದೆಯೋ ಆಗ ನನ್ನ ವಯಸ್ಸಿನ ಬಗ್ಗೆ ಥಿಂಕ್ ಮಾಡುತ್ತೇನೆ’’ ಎನ್ನುತ್ತಿದ್ದರು. ಮನುಷ್ಯನಿಗೆ ವಯಸಾಗುತ್ತಿದ್ದಂತೆಯೇ ಬದುಕಿನ ಪಾಠಗಳನ್ನೂ ಕಲಿಯಲು ದಾರಿಯಾಗುತ್ತದೆ ಎಂದು ನಂಬಿದ್ದ ರಾಬರ್ಟ್ ಯಶಸ್ಸು ಎಂಬ ಸಿಗ್ನಲ್ ಲೈಟಿನ ಹತ್ತಿರ ಬರುತ್ತಿದ್ದಂತೆಯೇ ನಮ್ಮ ಚಲನೆಯನ್ನು ನಿಲ್ಲಿಸಬಾರದು. ಅದನ್ನೂ ದಾಟಿ ಮುಂದೆ ಸಾಗಬೇಕು ಎಂಬ ಸಿದ್ಧಾಂತವನ್ನು ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು.

ರಾಬರ್ಟ್ ನಟನಾಗುವ ಮುನ್ನ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್‌ಗೆ ಹೋದರು. ಅಲ್ಲಿ ಆತನೊಂದಿಗೆ ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳು ಹಂಗೇರಿ ಪರ ಪ್ರತಿಭಟಿಸಲು ಮುಂದಾದಾಗ ರಾಜಕೀಯದಲ್ಲಿ ರಾಬರ್ಟ್‌ಗೆ ಅಷ್ಟೇನೂ ಆಸಕ್ತಿ ಅಥವಾ ಅನುಭವವಿಲ್ಲದಿದ್ದರೂ ತಾನೂ ಪ್ರತಿಭಟನೆಯಲ್ಲಿ ಭಾಗವಹಿಸಿ ಪೊಲೀಸರ ಕೈಯಲ್ಲಿ ಒದೆ ತಿಂದು ಗಾಯಗೊಂಡರು. ಆನಂತರ ಪ್ಯಾರಿಸ್ ಬಿಟ್ಟು ಇಟಲಿಗೆ ತೆರಳಿ ಯೂತ್ ಹಾಸ್ಟೆಲ್‌ಗಳಲ್ಲಿ ತಂಗುವ ಬದಲು ಕೊರೆಯುವ ಚಳಿಗಾಲದ ಫುಟ್ ಪಾತಿನಲ್ಲಿ, ಅಷ್ಟೇನೂ ಸ್ವಚ್ಛತೆಯಿಂದಿರದ ಜಾಗಗಳಲ್ಲಿ ನಿದ್ರಿಸುತ್ತಿದ್ದರು.

ನಟನಾದ ನಂತರ 1971ರಲ್ಲಿ ಕೇಂಬ್ರಿಡ್ಜ್‌ನಲ್ಲಿದ್ದ ಬರಹಗಾರ ಜೆರೆಮಿ ಲ್ಯಾರ್ನರ್‌ನ ಮನೆಯಲ್ಲಿ ಆತನ ಜೊತೆಗೂಡಿ ಸಿನೆಮಾ ಸ್ಕ್ರಿಪ್ಟೊಂದರ ರಚನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಒಂದು ಘಟನೆ ಜರುಗಿತು. ಅದೇನೆಂದರೆ, ಈ ಜೆರೆಮಿ ಲ್ಯಾರ್ನರ್ ತನ್ನ ಮನೆಯಲ್ಲಿ ಆರ್.ಎ.ಎನ್.ಡಿ. ಎಂಬ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ಡೇನಿಯಲ್ ಎಲ್ಸ್ ಬರ್ಗ್ ನನ್ನು ಅಡಗಿಸಿಟ್ಟಿದ್ದ. ಈ ಆರ್.ಎ.ಎನ್.ಡಿ. (ರಿಸರ್ಚ್ ಅಂಡ್ ಡೆವಲಪ್ಮೆಂಟ್) ಎಂಬ ಸಂಘಟನೆಯು ಅಮೆರಿಕ ರಕ್ಷಣಾ ವಿಭಾಗದೊಂದಿಗೆ ಕೆಲಸ ಮಾಡುತ್ತಿದ್ದರೂ ಆನಂತರ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.

ಬಚ್ಚಿಟ್ಟುಕೊಂಡಿದ್ದ ಎಲ್ಸ್ ಬರ್ಗ್ ಏನು ಮಾಡಿದ್ದನೆಂದರೆ ವಿಯೆಟ್ನಾಂ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಸರಕಾರ ಕೈಗೊಂಡಿದ್ದ ನಿರ್ಧಾರ ಹಾಗೂ ಅದಕ್ಕೆ ಸಂಬಂಧಪಟ್ಟ ಟಾಪ್ ಸೀಕ್ರೆಟ್‌ಗಳನ್ನು ಹೊಂದಿದ್ದ ಪೆಂಟಗಾನ್ ದಾಖಲೆಗಳನ್ನು 1971ರಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದ. ಈ ಭಯಂಕರ ಪ್ರಕರಣದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದರಿಂದ ಒಂದಿಷ್ಟು ದಿನ ತಲೆಮರೆಸಿಕೊಂಡಿರಲು ಜೆರೆಮಿ ಲ್ಯಾರ್ನರ್‌ನ ಮನೆಯಲ್ಲಿ ಅಡಗಿಕೊಂಡಿದ್ದ. ಈತ ಅಲ್ಲಿ ಅಡಗಿಕೊಂಡಿದ್ದ ವಿಷಯ ಸ್ಕ್ರಿಪ್ಟ್ ರಚನೆಗೆಂದು ಹೋಗಿದ್ದ ರಾಬರ್ಟ್ ರೆಡ್ ಫೋರ್ಡ್‌ಗೆ ತಡವಾಗಿ ಗೊತ್ತಾಯಿತು. ಆ ಬಗ್ಗೆ ರಾಬರ್ಟ್ ಹೇಳುತ್ತಾರೆ: ‘‘ಜೆರೆಮಿ ಓರ್ವ ಪ್ರಾಮಾಣಿಕ ಮನುಷ್ಯ ಎಂದೂ, ಆತ ವಿಯೆಟ್ನಾಂ ಯುದ್ಧವನ್ನು ವಿರೋಧಿಸುತ್ತಿದ್ದ ಎಂದೂ ನನಗೆ ಗೊತ್ತಿತ್ತು. ಆದರೆ ಆತ ಈ ಎಲ್ಸ್ ಬರ್ಗ್ ನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದು ಒಂದು ತರಹ ಜೇಮ್ಸ್ ಬಾಂಡ್ ಸಿನೆಮಾದಂತಿತ್ತು. ನಾವಿಬ್ಬರೂ ಇತ್ತ ಟೇಬಲ್ ಮುಂದೆ ಕೂತು ಕೆಲಸ ಮಾಡುತ್ತಿದ್ದರೆ ಅತ್ತ ಕಡೆಯಿಂದ ಎಲ್ಸ್ ಬರ್ಗ್ ಕೊಸರಾಡುವುದು ಕೇಳಿಸುತ್ತಿತ್ತು. ಆಗ ಜೆರೆಮಿ ‘ಸುಮ್ಮನಿರು ಡೇನಿಯಲ್’ ಎಂದು ಸಮಾಧಾನ ಮಾಡುತ್ತಿದ್ದದ್ದು ಮಜವಾಗಿತ್ತು.’’

ರಾಬರ್ಟ್ ಕಠಿಣ ಸಂದರ್ಭಗಳಲ್ಲಿ ಧೃತಿಗೆಡದೆ ಮನಸ್ಸನ್ನು ತಹಬಂದಿಯಲ್ಲಿಟ್ಟುಕೊಳ್ಳುತ್ತಿದ್ದಂಥ ಮನುಷ್ಯ. ಒಮ್ಮೆ ಏನಾಯಿತೆಂದರೆ ‘ಇನ್ ಸೈಡ್ ಡೈಸಿ ಕ್ಲೋವರ್’ ಎಂಬ ಚಿತ್ರೀಕರಣ ಸಂದರ್ಭದಲ್ಲಿ ರಾಬರ್ಟ್ ತನ್ನ ಸಹನಟಿ ನಟಾಲಿ ವೂಡ್ ಜೊತೆ ದೋಣಿಯಲ್ಲಿ ಕೂತು ನಟಿಸಬೇಕಿತ್ತು. ರಾಬರ್ಟ್ ಮುಲ್ಲಿಗನ್ ನಿರ್ದೇಶನದಲ್ಲಿ ಚಿತ್ರೀಕರಣ ಸಾಂಗವಾಗಿಯೇ ಸಾಗುತ್ತಿತ್ತು. ಆದರೆ ಅಚಾನಕ್ಕಾಗಿ ಗಾಳಿಯ ಬೀಸುವಿಕೆಯ ದಿಕ್ಕು ಬದಲಾಗಿ ದೋಣಿ ಆಯತಪ್ಪಿ ತೂಗಾಡುತ್ತ ಅಪಾಯದ ಮುನ್ಸೂಚನೆಯನ್ನು ತಂದೊಡ್ಡಿತು. ಆಗ ವೂಡ್ ಆತಂಕಗೊಳಗಾದರು. ತಾವಿರುವುದು ಅಪಾಯದ ಸ್ಥಿತಿಯಲ್ಲಿ ಎಂಬುದನ್ನರಿತು ರಾಬರ್ಟ್ ಜೋಕ್ಸ್ ಹೇಳುವ ಮೂಲಕ, ನಗಿಸುವ ಮೂಲಕ ವೂಡ್‌ರನ್ನು ಆತಂಕದಿಂದ ದೂರ ಮಾಡಲು, ಆಕೆಯನ್ನು ಶಾಂತವಾಗಿರಿಸಲು ಯತ್ನಿಸುತ್ತಿದ್ದರು. ಈ ಘಟನೆಯಿಂದಾಗಿ ಇವರಿಬ್ಬರ ಸ್ನೇಹ ಗಟ್ಟಿಗೊಂಡು ಮುಂದೊಮ್ಮೆ ಇವರಿಬ್ಬರ ನಡುವೆ ಲವ್ ಅಫೇರ್ ಕುರಿತ ರೂಮರ್‌ಗಳು, ಗಾಸಿಪ್ ಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಆಕೆಯ ಬಗ್ಗೆ ಸೆಳೆತವಿತ್ತಾದರೂ ಎಂದೂ ಆಕೆಯನ್ನು ಟಚ್ ಮಾಡಿರದಿದ್ದ ರಾಬರ್ಟ್ ‘‘ನಮ್ಮೊಂದಿಗೆ ನಟಿಸುವ ಮಹಿಳೆಯರೊಂದಿಗೆ ಸರಸದಲ್ಲಿ ತೊಡಗುವುದು ತುಂಬಾ ಅಪಾಯಕಾರಿ’’ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.

ರಾಬರ್ಟ್‌ಗೆ ಪರಿಸರ ರಕ್ಷಣೆ ಮತ್ತು ಸರಳ ಜೀವನವೆಂದರೆ ತುಂಬಾ ಇಷ್ಟ. ಆತ ನಟಿಸಿದ ಮೊದಲ ಚಿತ್ರದ ಸಂಭಾವನೆಯಿಂದ ಉತಾಹ ರಾಜ್ಯದಲ್ಲಿ ಎರಡು ಎಕರೆ ಜಮೀನನ್ನು ಕೊಂಡು ತನ್ನ ಕೈಯಾರೆ ಒಂದು ಕುಟೀರವನ್ನು ಕಟ್ಟಿದರು. ಅದು ಜನಸಂಪರ್ಕದಿಂದ ಅದೆಷ್ಟು ದೂರವಿತ್ತೆಂದರೆ ಆ ಕುಟೀರಕ್ಕೆ ಕುಡಿಯುವ ನೀರಿನ ಸಂಪರ್ಕವೂ ಇರಲಿಲ್ಲ. ಆದರೂ ರಾಬರ್ಟ್ ತನ್ನ ಆಗಿನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಲ್ಲಿಗೆ ಹೋಗಿ ತಂಗುತ್ತಿದ್ದರು.

ನಂತರದ ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಲ್ಲಿ, ನಾಗರಿಕತೆಯ ಹೆಸರಲ್ಲಿ ಪರಿಸರವನ್ನು ನಾಶಮಾಡುವ ಪರಿಯನ್ನು ಕಂಡು ರಾಬರ್ಟ್ ಆತಂಕಿತರಾದರು. ಆಗ ತನಗೆ ಸಿಕ್ಕ ಹಣವನ್ನೆಲ್ಲ ಭೂಮಿ ಖರೀದಿಸಲು ವ್ಯಯಿಸಲಾಂಭಿಸಿದರು. ಒಟ್ಟಾರೆಯಾಗಿ ಅವರು 7,000 ಎಕರೆ ಪ್ರದೇಶದ ಒಡೆಯ. ಅವರ ಸುಪರ್ದಿಯಲ್ಲಿರುವ ಭೂಮಿಯಲ್ಲಿ ರಸ್ತೆ, ಕಟ್ಟಡ ಇತ್ಯಾದಿಗಳಿಲ್ಲ, ಬದಲಾಗಿ ಅಭಿವೃದ್ಧಿಯಿಂದ, ಮಾಲಿನ್ಯದಿಂದ ದೂರವಿರುವ, ಗುಡ್ಡಗಾಡುಗಳ, ಹಿಮ ಬೀಳುವ ಅಪ್ಪಟ ಸ್ವಚ್ಛ ಪರಿಸರವಿದೆ. ತನ್ನ ಈ ಆಸ್ತಿಯಲ್ಲಿ ಸಂಚರಿಸಲು ರಾಬರ್ಟ್ ಕುದುರೆಗಳನ್ನು, ಸ್ಕೀಗಳನ್ನು ಮತ್ತು ಸ್ನೋ ಮೊಬೈಲ್‌ಗಳನ್ನು ಬಳಸುತ್ತಿದ್ದರು- ಯಾಕೆಂದರೆ ಅಲ್ಲೆಲ್ಲ ಕಾರ್‌ನಲ್ಲಿ ಸುತ್ತಾಡಲು ರಸ್ತೆಗಳೇ ಇರಲಿಲ್ಲವಲ್ಲ ಅದಕ್ಕೆ!

ಅಂದಹಾಗೆ ಇದೇ ಪ್ರದೇಶದಲ್ಲಿ ‘ಸನ್ ಡ್ಯಾನ್’ ಎಂಬ ಸಂಘಟನೆಯೂ ಇದೆ. ಮೊದಲೇ ಹೇಳಿದಂತೆ ನಟನಟಿಯರ ಮತ್ತು ನಿರ್ದೇಶಕರ ಮೇಲೆ ಸ್ಟುಡಿಯೋಗಳು ಹೊಂದಿದ್ದ ಹಿಡಿತವನ್ನು ವಿರೋಧಿಸುತ್ತಿದ್ದ ರಾಬರ್ಟ್ ಆನಂತರದ ದಿನಗಳಲ್ಲಿ ಸಿನೆಮಾಗಳಲ್ಲಿ ತಂತ್ರಗಾರಿಕೆ, ಗ್ರಾಫಿಕ್ಸ್ ಮತ್ತು ಬಂಡವಾಳಗಳೂ ಹೆಚ್ಚಾಗುತ್ತಾ ಹೋದದ್ದನ್ನೂ ವಿರೋಧಿಸಿದರು.

ಸಿನೆಮಾಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗುವುದು ಕತೆ. ಅದೇ ಈಗ ಗೌಣವಾಗುತ್ತಿದೆ ಎಂದು ವಾದಿಸಲಾರಂಭಿಸಿದರು. ಮಾತ್ರವಲ್ಲ, ಸ್ಟುಡಿಯೋಗಳನ್ನು ಅವಲಂಬಿಸದೆ ಸ್ವತಂತ್ರವಾಗಿ ಸಿನೆಮಾಗಳನ್ನು ಮಾಡುವ ಜನರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ‘ಸನ್ ಡ್ಯಾನ್ ಫಿಲಂ ಫೆಸ್ಟಿವಲ್’ ಅನ್ನು ಪ್ರಾಯೋಜಿಸಲಾರಂಭಿಸಿದರು.

ದುರದೃಷ್ಟವಶಾತ್ ಈ ಚಿತ್ರೋತ್ಸವ ಅದೆಷ್ಟು ಜನಪ್ರಿಯವಾಯಿತೆಂದರೆ ಕಾಲಕ್ರಮೇಣ ಯಾವ ಸ್ಟುಡಿಯೋಗಳ ವಿರುದ್ಧ ರಾಬರ್ಟ್ ಅದನ್ನು ಹುಟ್ಟುಹಾಕಿದರೋ ಅದೇ ಸ್ಟುಡಿಯೋಗಳು ಆ ಚಿತ್ರೋತ್ಸವವನ್ನೇ ಆಪೋಷನ ಮಾಡಿಕೊಂಡವು.

ಪರಿಸರ ರಕ್ಷಣೆಯಂತೆಯೇ ರಾಬರ್ಟ್ ಅಮೆರಿಕದ ಮೂಲನಿವಾಸಿಗಳ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವವರನ್ನೂ ಬೆಂಬಲಿಸುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿರುವ ‘ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್’ನ ಟ್ರಸ್ಟಿಯೂ ಆಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬರಾಕ್ ಒಬಾಮಾರನ್ನು ರಾಬರ್ಟ್ ಬೆಂಬಲಿಸಿದ್ದರು. ಯಾಕೆಂದರೆ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಪರಿಸರವನ್ನು ರಕ್ಷಿಸಲು ಒತ್ತು ಕೊಡುವುದಾಗಿ ಭರವಸೆ ನೀಡಿದ್ದರು. ಕ್ರಮೇಣ ರಾಬರ್ಟ್ ಬೇಸರಗೊಂಡು ‘‘ಒಬಾಮಾ ಅವರು ಸ್ವಚ್ಛ ಗಾಳಿ, ನೀರು ಮತ್ತು ಭೂಮಿ ಮುಖ್ಯ ಎಂದಿದ್ದರು. ಆದರವರು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ’’ ಎಂದು ಟೀಕಿಸಿದ್ದರು.

ನಟನೆ ಬಗ್ಗೆ ರಾಬರ್ಟ್‌ಗೆ ಅದೆಷ್ಟು ಉತ್ಸಾಹ ಇತ್ತೆಂದರೆ ತನ್ನ ಇಳಿವಯಸ್ಸಿನಲ್ಲೂ ಅವರು ‘ಆಲ್ ಈಸ್ ಲಾಸ್ಟ್’ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಇಡೀ ಚಿತ್ರದಲ್ಲಿ ಅವರು ಏಕೈಕ ನಟ ಮತ್ತು ಚಿತ್ರದುದ್ದಕ್ಕೂ ಒಂದೇ ಒಂದು ಡೈಲಾಗ್ ಎಂಬುದೇ ಇಲ್ಲ. ತಾನಿರುವ ಹಡಗು ಹಿಂದೂಮಹಾಸಾಗರದಲ್ಲಿ ಮುಳುಗಿದ ನಂತರ ಎಂಟು ದಿನಗಳ ಕಾಲ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುವ ಮುದಿ ನಾವಿಕನ ಪಾತ್ರ ಅದು. ಆ ಚಿತ್ರದಲ್ಲಿ ಹಲವು ಸ್ಟಂಟ್‌ಗಳಿದ್ದು ಅದಕ್ಕೆ ಸ್ಟಂಟ್ ಮಾಡುವವರನ್ನು ಉಪಯೋಗಿಸಲು ಚಿತ್ರದ ನಿರ್ದೇಶಕ ನಿರ್ಧರಿಸಿದ್ದರೂ ಅದನ್ನು ವಿರೋಧಿಸಿ ರಾಬರ್ಟ್ ಸ್ವತಃ ತಾನೇ ಎಲ್ಲ ಸ್ಟಂಟ್ ಗಳಲ್ಲೂ ಭಾಗವಹಿಸಿದ್ದರು. ‘‘ಚಿತ್ರೀಕರಣದ ಸಮಯದಲ್ಲಿ ಹಲವೊಮ್ಮೆ ರಾಬರ್ಟ್ ನೀರಿನಲ್ಲಿ ಸತತ ಎಂಟು ಗಂಟೆಗಳ ಕಾಲ ಇರಬೇಕಿತ್ತು. ಈ ಕಾರಣಕ್ಕೇ ರಾಬರ್ಟ್ ಅವರಿಗೆ ತಾವು ನೀರಿನಿಂದ ಹೊರಗೆ ಬಂದರೆ ಸಾಕೆನಿಸಬಹುದೆಂದು ನಾನು ಭಾವಿಸಿದ್ದೆ. ಆದರೆ ಚಿತ್ರೀಕರಣ ಮುಗಿದು ಹೋಟೆಲ್‌ಗೆ ಹಿಂದಿರುಗಿದ ನಂತರ ನಾನು ಕಂಡಿದ್ದು ಏನನ್ನು? ರಾಬರ್ಟ್ ಈಜುಕೊಳದಲ್ಲಿ ಈಜುತ್ತಿದ್ದರು!!’’ ಎಂದು ಚಿತ್ರದ ನಿರ್ದೇಶಕ ಅಚ್ಚರಿ ವ್ಯಕ್ತಪಡಿಸಿದ್ದರು.

ರಾಬರ್ಟ್ ತನ್ನ ಬದುಕಿನುದ್ದಕ್ಕೂ ಒಂದಿಲ್ಲೊಂದು ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಚ್ಚರಿಯಾಗಿ ಅರಳುತ್ತ ಜಗತ್ತಿನ ಚಿತ್ರರಸಿಕರ ಆತ್ಮಗಳಲ್ಲಿ ನೆಲೆ ನಿಂತ ಈ ಅಪರೂಪದ, ಅದ್ವಿತೀಯ, ಅನನ್ಯ ಪ್ರತಿಭೆ. ಈ ಸರಳ, ವಿರಳ ಕಲಾವಿದನಿಂದ, ಕ್ರಿಯಾಶೀಲ ನಿರ್ದೇಶಕನಿಂದ ಈ ಪೀಳಿಗೆಯ ಸಿನೆಮಾ ಮಂದಿ ಅರಿಯಬೇಕಾದುದು, ಅಳವಡಿಸಿಕೊಳ್ಳಬೇಕಾದುದು ಬಹಳಷ್ಟಿದೆ

ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಹೃದಯ ಶಿವ

contributor

Similar News