ಸೇಡಂ | ವಿಷಪೂರಿತ ಹೊಗೆಯಿಂದ ಜನ ಅಸ್ವಸ್ಥ
ಸೇಡಂ, ಜ.9: ಇಲ್ಲಿನ ಅಲ್ಟ್ರಾಟೆಕ್ (ವಾಸವದತ್ತ) ಸಿಮೆಂಟ್ ಕಾರ್ಖಾನೆಯಿಂದ ನಿತ್ಯವೂ ಹೊರಸೂಸುತ್ತಿರುವ ವಿಷಪೂರಿತ ರಾಸಾಯನಿಕ ಹೊಗೆಯಿಂದ ಸುತ್ತಮುತ್ತಲ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ವಿಷಪೂರಿತ ರಾಸಾಯನಿಕ ಅನಿಲ ಬಿಡುಗಡೆಯಿಂದ ಸೇಡಂ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ಅಸ್ತಮಾ, ಚರ್ಮರೋಗ ಸೇರಿ ವಿವಿಧ ರೀತಿಯ ಮಾರಕ ರೋಗಗಳು ಹರಡುತ್ತಿವೆ. ಅಲ್ಲದೆ ಕೆಲವರ ಹೃದಯಾಘಾತಕ್ಕೂ ಈ ಹೊಗೆ ಕಾರಣವಾಗುತ್ತಿದ್ದು, ಇದರಿಂದ ಆತಂಕದ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಬೆಳಗಿನ ಜಾವದಲ್ಲಿ ಕಾರ್ಖಾನೆಯು ವಿಷಪೂರಿತ ಧೂಳು, ಕಲುಷಿತ ಹೊಗೆ, ಬೂದಿ ಬಿಡುಗಡೆ ಮಾಡುವುದರಿಂದ ಬೆಳೆಗಳು ಹಾಳಾಗುತ್ತಿವೆ. ಇತ್ತ ಮಕ್ಕಳು, ವೃದ್ಧರು, ಮಹಿಳೆಯರು ಮನೆಯಿಂದ ಹೊರಗಡೆ ಹೋಗಬೇಕಾದರೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಎಷ್ಟೇ ಸಲ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಆಡಳಿತ ಮಂಡಳಿ ಅಧಿಕಾರಿಗಳು ಹೆಸರಿಗೆ ಭೇಟಿ ನೀಡಿ ತೆರಳುತ್ತಿದ್ದಾರೆ. ವಿಷಪೂರಿತ ಹೊಗೆಯಿಂದ ನಿವಾಸಿಗಳಿಗೆ ಉಸಿರಾಟದ ತೊಂದರೆ ಆಗುತ್ತಿದ್ದು, ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಷಪೂರಿತ ಹೊಗೆಯಿಂದಾಗಿ ಜನರು ರೋಗಗಳಿಗೆ ಬಲಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಕೂಡಲೇ ಸರ್ಕಾರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಗಮನ ಹರಿಸಿ ನಮಗಾಗುತ್ತಿರುವ ತೊಂದರೆ ಪರಿಹರಿಸಲು ಶ್ರಮಿಸಬೇಕು.
-ಲಕ್ಷ್ಮಣ್ ಭೋವಿ, ಸ್ಥಳೀಯ ನಿವಾಸಿ