×
Ad

ನಿರ್ವಹಣೆಯಿಲ್ಲದೆ ನಶಿಸುತ್ತಿರುವ ಅಶೋಕನ ಶಿಲಾಶಾಸನ

Update: 2026-01-11 14:19 IST

ಮಸ್ಕಿ ಪಟ್ಟಣದ ಹೊರ ವಲಯದಲ್ಲಿರುವ ಅಶೋಕನ ಐತಿಹಾಸಿಕ ಶಿಲಾಶಾಸನ ನಿರ್ವಹಣೆ ಇಲ್ಲದೆ ನಶಿಸಿಹೋಗುವ ಸ್ಥಿತಿಯಲ್ಲಿರುವುದಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮ್ರಾಟ್ ಅಶೋಕನ ಶಿಲಾಶಾಸನದ ವಿಷಯವಾಗಿ ವಾರ್ತಾಭಾರತಿ ಪತ್ರಿಕೆಯೊಂದಿಗೆಮಾತನಾಡಿದ ಸಾಹಿತಿ ಸುರೇಶ್ ಬಳಗಾನೂರು, ಮಸ್ಕಿ ಚಕ್ರವರ್ತಿ ಅಶೋಕ ಮೌರ್ಯ ಸಾಮ್ರಾಜ್ಯದಿಂದ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ.

ಹಾಗಾಗಿ ಈ ಸ್ಥಳ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮಸ್ಕಿ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಮುದಗಲ್ ಕ್ರಾಸ್‌ನ ಬಳಿ ಅಶೋಕ ಸ್ತಂಭ ನಿರ್ಮಿಸಿ ಅಶೋಕ ವೃತ್ತ ಎಂದು ಹೆಸರಿಡಲಾಗಿತ್ತು. ಈ ಸ್ಥಳದಲ್ಲಿ ಸುಮಾರು 30-40 ವರ್ಷಗಳಿಂದ ಅಶೋಕ ಶಿಲಾಶಾಸನದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಫಲಕವನ್ನು ಪ್ರವಾಸೋದ್ಯಮ ಇಲಾಖೆ ಅಳವಡಿಸಿತ್ತು. ಆದರೆ ಕೆಲ ಕಿಡಿಗೇಡಿಗಳು 2022ರ ಜ. 27ರಂದು ರಾತ್ರೋರಾತ್ರಿ ನಾಮಫಲಕ ಕದ್ದೊಯ್ದಿದ್ದಾರೆ.

ಕಳ್ಳರನ್ನು ಪತ್ತೆಹಚ್ಚಿ ನಾಮಫಲಕ ವಶಪಡಿಸಿಕೊಳ್ಳಬೇಕು ಎಂದು ಮಸ್ಕಿಯ ವಿದ್ಯಾರ್ಥಿಗಳು, ರೈತರು ಸೇರಿ ಪ್ರಗತಿಪರ ಸಂಘಟನೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಅಲ್ಲದೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಆದರೆ ಇದುವರೆಗೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆಮಾಡಿಲ್ಲ ಎಂದು ಸುರೇಶ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೆ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷಿಸುತ್ತಿದ್ದು, ಶಾಸನ ಸ್ಥಳ ಹಾಳುಕೊಂಪೆಯಾಗಿದೆ. ಇದು ಪ್ರವಾಸಿಗರು, ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಶಾಸನ ಸ್ಥಳದ ಅಭಿವೃದ್ಧಿಗೆ 3 ಎಕರೆ ಜಾಗದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ವಸ್ತು ಸಂಗ್ರಹಾಲಯದ ಕಟ್ಟಡಗಳ ಪೂರ್ಣಗೊಂಡು ಏಳು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ಉದ್ಯಾನವನ ನಿರ್ಮಾಣ ಕೆಲಸ ವಿಳಂಬವಾದ ಕಾರಣ ಶಾಸನದ ಪರಿಸರ ಬಿಕೋ ಎನ್ನುತ್ತಿದೆ. ಪ್ರವಾಸಿಗರ ಬಹುವರ್ಷದ ಪ್ರಮುಖ ಬೇಡಿಕೆಯ ಹಿನ್ನೆಲೆಯಲ್ಲಿ ಶಾಸನ ಸ್ಥಳ ಅಭಿವೃದ್ಧಿಪಡಿಸಲು ಅದರ ಬಳಿಯ ಜಮೀನಿನಲ್ಲಿ ಉದ್ಯಾನವನ ನಿರ್ಮಾಣ ಇನ್ನಿತರ ಕಟ್ಟಡ ಕಟ್ಟಲು 3 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಶಾಸನ ಸ್ಥಳದ ಬಳಿ ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣ ಬಿಟ್ಟರೆ, ಉಳಿದ ಯಾವ ಕೆಲಸಗಳು ಆಗಿಲ್ಲ. ಅಲ್ಲದೆ ಸುಮಾರು 29 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ 6 ವರ್ಷ ಗತಿಸಿದರೂ ಚಾಲನೆ ಸಿಕ್ಕಿಲ್ಲ. ಅಲ್ಲದೆ ಉದ್ಘಾಟನಾ ಭಾಗ್ಯ ಕಾಣದೆ ಇರುವ ವಸ್ತು ಸಂಗ್ರಹಾಲಯದ ಶೌಚಾಲಯ ಕಟ್ಟಡಗಳು, ಕಿಟಕಿಗಳು ಹಾಗೂ ಗಾಜುಗಳು ಹಾಳಾಗಿ ಹೋಗಿವೆ.

ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿವೆ. ಕೂಡಲು ಆಸನಗಳಿಲ್ಲ. ಹೀಗಾಗಿ ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬಹು ವರ್ಷಗಳ ಬೇಡಿಕೆಯಾಗಿರುವ ಐತಿಹಾಸಿಕ ಪ್ರಸಿದ್ಧಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿಪಡಿಸಲು 10 ಕೋಟಿ ರೂಪಾಯಿ ಅನುದಾನ ಟೆಂಡರ್ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಯಾವ ಕಾಮಗಾರಿಗಳೂ ಆರಂಭವಾಗಿಲ್ಲ. ಈಗಲಾದರೂ ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ಅನಿವಾರ್ಯ.

-ಬಸವಂತ ಹಿರೇಕಡುಬೂರು, ಜೈ ಕರುನಾಡು ರಕ್ಷಣೆ ಸೇನೆಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News