×
Ad

ಜಾಗತಿಕ ಯುದ್ಧಕ್ಕೆ ತಳ್ಳುತ್ತಿರುವವರು ಯಾರು?

Update: 2026-01-10 12:32 IST

ಜಗತ್ತು ಜಾಗತಿಕ ಯುದ್ಧದ ಹೊಸ್ತಿಲಲ್ಲಿದೆ. ವೆನೆಝುವೆಲಾದ ಮೇಲೆ ಅಂತರ್‌ರಾಷ್ಟ್ರೀಯ ಒಪ್ಪಂದಗಳು, ವಿಶ್ವ ಸಂಸ್ಥೆಯ ನಿಯಮಗಳು, ಅಂತರ್‌ರಾಷ್ಟ್ರೀಯ ನಿಯಮಗಳು...ಎಲ್ಲವನ್ನೂ ಉಲ್ಲಂಘಿಸುತ್ತಾ ದಿಗ್ಬಂಧನಗಳು, ಸೇನಾತ್ಮಕ ಸುತ್ತುವರಿಯುವಿಕೆಗಳು, ಬೆದರಿಕೆಗಳನ್ನೆಲ್ಲಾ ಮಾಡುತ್ತಾ ಅತಿಕ್ರಮಣ ಮಾಡಿದ್ದಲ್ಲದೇ ಅಧ್ಯಕ್ಷ ಮಡುರೊ ಹಾಗೂ ಅವರ ಬಾಳ ಸಂಗಾತಿಯನ್ನು ಅಪಹರಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ನ್ಯಾಯವಿಚಾರಣೆಯ ಹೆಸರಿನಲ್ಲಿ ಬಂಧನದಲ್ಲಿಟ್ಟಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಮೊನ್ನೆ ರಶ್ಯದ ಧ್ವಜವಿದ್ದ ತೈಲ ಹಡಗುಗಳನ್ನು ಅಂತರ್‌ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಅಮೆರಿಕ ವಶಪಡಿಸಿಕೊಂಡಿದೆ. ಅವುಗಳ ಮೇಲೆ ಬಹಳ ಹಿಂದೆಯೇ ಅಮೆರಿಕ ನಿರ್ಬಂಧ ಹೇರಿತ್ತು. ಆ ತೈಲ ಟ್ಯಾಂಕರುಗಳುಳ್ಳ ಹಡಗುಗಳು ವೆನೆಝುವೆಲಾಗೆ ಸೇರಿದ್ದು, ವೆನೆಝುವೆಲಾ ತನ್ನ ಸುಪರ್ದಿಯಲ್ಲಿಯೇ ತೈಲ ಮಾರಾಟ ಮಾಡಬೇಕು... ತನಗೇ ವೆನೆಝುವೆಲಾದ ತೈಲ ಮಾರಬೇಕು.. ಇತ್ಯಾದಿ ಸಮರ್ಥನೆಗಳನ್ನು ತನ್ನ ಈ ಕೃತ್ಯಗಳಿಗೆ ನೀಡುತ್ತಿದೆ.

ಇದನ್ನು ರಶ್ಯ ಹಾಗೂ ಚೀನಾ ತೀವ್ರವಾಗಿ ವಿರೋಧಿಸಿವೆ. ರಶ್ಯ ತನ್ನ ನೌಕಾಪಡೆಗಳನ್ನು ಅಂತರ್‌ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ನಿಯೋಜಿಸುತ್ತಿದೆ.

ಚೀನಾ ಕೂಡ ಸೇನಾತ್ಮಕ ಕ್ರಮಗಳಿಗೆ ಮುಂದಾಗುವ ಸೂಚನೆಗಳಿವೆ.

ಈ ಎಲ್ಲಾ ಬೆಳವಣಿಗೆಗಳಿಗೆ ಟ್ರಂಪ್ ಮಾತ್ರ ಕಾರಣವೆಂಬ ವಿಶ್ಲೇಷಣೆಗಳೇ ಹೆಚ್ಚಾಗಿ ಬರುತ್ತಿವೆ. ರಶ್ಯ, ಚೀನಾಗಳು ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಅಮೆರಿಕದ ನಡೆಗಳಿಗೆ ಆರ್ಥಿಕವಾಗಿ ಮಾತ್ರವಲ್ಲದೇ ಸೇನಾತ್ಮಕ ತಡೆಗಳನ್ನು ಒಡ್ಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ.

ಅಮೆರಿಕ ಆಳುವ ವರ್ಗವಾದ ಭಾರೀ ಕಾರ್ಪೊರೇಟುಗಳಿಗೆ ಜಾಗತಿಕ ಲೂಟಿಗೆ ಹಲವಾರು ಅಡೆತಡೆಗಳು ಬಲವಾಗುತ್ತಾ ಹೋಗುತ್ತಿವೆ. ಅಮೆರಿಕ ಕೂಟದ ಜಾಗತಿಕ ಹಿಡಿತಗಳೂ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿವೆ. ಡಾಲರಿನ ಹಿಡಿತ ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಕುಸಿಯುತ್ತಾ ಚೀನಾದ ಯುವಾನ್, ರಶ್ಯದ ರೂಬಲ್, ಜಪಾನಿನ ಯೆನ್, ಯೂರೋಪಿನ ಯೂರೋಗಳಂತಹ ಕರೆನ್ಸಿ ವ್ಯವಸ್ಥೆಗಳು ಜಾಗತಿಕ ಮಾರುಕಟ್ಟೆಯನ್ನು ವ್ಯಾಪಿಸತೊಡಗಿವೆ. ಇಂಡಿಯಾದ ರೂಪಾಯಿ ಕೂಡ ಜಾಗತಿಕ ಕರೆನ್ಸಿಯಾಗಿ ಘೋಷಿತವಾಗಿದೆ. ಇನ್ನೊಂದೆಡೆ ಡಾಲರಿನೆದುರು ಇಂಡಿಯಾದ ರೂಪಾಯಿ ಮೌಲ್ಯ ಹಿಂದೆಂದೂ ಇಲ್ಲದಷ್ಟು ಕುಸಿತ ಕಾಣುತ್ತಾ ಹೋಗುತ್ತಿದೆ. ಇದು ಬೇರೊಂದು ವಿಚಾರ.

ಅಮೆರಿಕದಲ್ಲಿ ಬಡತನದ ಮಟ್ಟ, ನಿರುದ್ಯೋಗಮಟ್ಟ, ವಸತಿಹೀನತೆ, ತಲಾದಾಯ ಮಟ್ಟ ಭಾರೀ ಕುಸಿತದಲ್ಲಿ ಸಾಗುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2ನ್ನು ಮೀರದೇ ಬಹಳ ವರ್ಷಗಳಾಗಿವೆ. ಆದರೆ ಅಮೆರಿಕ ಜಿಡಿಪಿ ದರ ಕಳೆದ ವರ್ಷ ಶೇ. 4.3 ಎಂದು ಹೇಳಿಕೊಂಡಿದೆ. ಆದರೆ ಜಿಡಿಪಿ ಬೆಳವಣಿಗೆ ಸರಾಸರಿ ಜನರ ಆದಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅಮೆರಿಕದ ಕೆಲವೇ ಭಾರೀ ಕಾರ್ಪೊರೇಟುಗಳು ಹೆಚ್ಚು ಹೆಚ್ಚು ಏಕಸ್ವಾಮ್ಯವಾಗುತ್ತಾ ಅಮೆರಿಕ ಆಸ್ತಿ ಹಾಗೂ ಆದಾಯಗಳನ್ನು ನಿಯಂತ್ರಿಸತೊಡಗಿವೆ. ಅದರಲ್ಲಿ ಎಲಾನ್ ಮಸ್ಕ್‌ನ ಆರ್ಥಿಕ ಸಾಮ್ರಾಜ್ಯ ಕೂಡ ಒಂದು. ವೆನೆಝುವೆಲಾದ ಮೇಲಿನ ಅತಿಕ್ರಮಣಗಳನ್ನು ಎಲಾನ್ ಮಸ್ಕ್ ಬಹಿರಂಗವಾಗಿಯೇ ಸಮರ್ಥಿಸಿ ತನ್ನ ಸ್ಟಾರ್ ಲಿಂಕ್ಸ್ ಉಪಗ್ರಹ ಆಧಾರಿತ ಅಂತರ್ಜಾಲವನ್ನು ವೆನೆಝುವೆಲಾಕ್ಕೆ ವಿಸ್ತರಿಸುವ ಮಾತನಾಡಿರುವುದನ್ನು ನಾವಿಲ್ಲಿ ಗಮನಿಸಬಹುದು.

ಅಮೆರಿಕದ ಭಾರೀ ಜಾಗತಿಕ ಕಾರ್ಪೊರೇಟುಗಳು ಚುನಾವಣೆಯನ್ನು ನಿರ್ವಹಿಸಿ ಸ್ವತಹ ಕಾರ್ಪೊರೇಟಾಗಿರುವ ಡೊನಾಲ್ಡ್ ಟ್ರಂಪ್‌ರನ್ನು ಮತ್ತೆ ಅಧಿಕಾರಕ್ಕೆ ತಂದಿರುವುದು ಎಂಬುದನ್ನು ನಾವಿಲ್ಲಿ ಗ್ರಹಿಸಬೇಕು.

ಟ್ರಂಪ್ ಅಮೆರಿಕದ ಜನಸಾಮಾನ್ಯರನ್ನು ಯಾಮಾರಿಸುವ ‘‘ಇನ್ನು ಮುಂದೆ ಯುದ್ಧಕ್ಕಿಳಿಯುವುದಿಲ್ಲ....’’, ‘‘ಅಮೆರಿಕ ಅಮೆರಿಕದವರಿಗಾಗಿ....’’, ಅಮೆರಿಕ ಇನ್ನು ಮುಂದೆ ವಿಶ್ವದ ಪೊಲೀಸ್ ಕೆಲಸ ಮಾಡುವುದಿಲ್ಲ....’’ ಹೀಗೆಲ್ಲಾ ಎರಡಲುಗಿನ ಕತ್ತಿಯ ತರಹದ ಭರವಸೆಗಳನ್ನು ತನ್ನ ಚುನಾವಣಾ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದರು.

ಯುದ್ಧ ಹಾಗೂ ಜಾಗತಿಕವಾಗಿ ನೇರ ಹಾಗೂ ಅಪ್ರತ್ಯಕ್ಷ ಸೇನಾತ್ಮಕ ತೊಡಗುವಿಕೆಗಳು ಅಮೆರಿಕದ ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನಿವಾರ್ಯವಾಗಿದೆ ಎಂಬುದು ಸಾಬೀತಾಗುತ್ತಲೇ ಬರುತ್ತಿದೆ.

ಹಾಗಾಗಿ ಅಮೆರಿಕದ ಆಳುವ ವರ್ಗದ ಹಿತಾಸಕ್ತಿ ಮೇಲಾಟಗಳಿಗಾಗಿ ನಡೆಯುತ್ತಿರುವ ಈ ಎಲ್ಲಾ ಘರ್ಷಣೆಗಳು ಜಾಗತಿಕ ಯುದ್ಧದತ್ತ ಅಮೆರಿಕವನ್ನು ಎಳೆದುಕೊಂಡು ಹೋಗುತ್ತಿದೆ. ಅವರುಗಳೇ ರೂಪಿಸಿಕೊಂಡಿದ್ದ ಜಾಗತಿಕ ವ್ಯವಸ್ಥೆಯನ್ನು ಅವರುಗಳೇ ಉಲ್ಲಂಘಿಸಬೇಕಾದಂತಹ ಬಿಕ್ಕಟ್ಟು ಅವರದಾಗಿದೆ.

ಇವೆಲ್ಲಾ ಅಮೆರಿಕದ ಜನಸಾಮಾನ್ಯರನ್ನೂ ಸೇರಿದಂತೆ ಜಾಗತಿಕ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತದೆ. ಜಗತ್ತನ್ನು ಭಾರೀ ಅಪಾಯಗಳಿಗೆ ದೂಡುತ್ತಿದೆ.

ಅಮೆರಿಕ ಆಳುವ ವರ್ಗದ ಈ ಎಲ್ಲಾ ದುರಾಕ್ರಮಣಕಾರಿ ನಡೆಗಳನ್ನು ತಡೆಯುವಲ್ಲಿ ಅಲ್ಲಿನ ಜನಸಾಮಾನ್ಯರ ಕರ್ತವ್ಯ ಹೆಚ್ಚಾಗಿದೆ. ಅಮೆರಿಕದ ಆಳುವ ವರ್ಗದ ಇಂತಹ ಜಾಗತಿಕ ವಿರೋಧಿ ನಡೆಗಳ ವಿರುದ್ಧ ಜಾಗತಿಕ ಜನಸಾಮಾನ್ಯರು ಒಗ್ಗೂಡಿ ನಿಲ್ಲುವ ಕರ್ತವ್ಯವೂ ಇದೆ.

ಇಂಡಿಯಾದ ಜನಸಾಮಾನ್ಯರು ಇಂಡಿಯಾ ಸರಕಾರ ಅಮೆರಿಕದ ಆಳುವ ವರ್ಗದ ನಡೆಗಳನ್ನು ಸ್ಪಷ್ಟವಾಗಿ ಖಂಡಿಸದೆ ಅಮೆರಿಕದ ಪರವಾಗಿ ವರ್ತಿಸುವುದನ್ನು ವಿರೋಧಿಸಬೇಕು. ಹಾಗೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡಿಯಾದ ಸರಕಾರವನ್ನು ತನ್ನ ಅಡಿಯಾಳಂತೆ ಪದೇ ಪದೇ ಬಿಂಬಿಸುತ್ತಿರುವುದನ್ನು ಖಂಡಿಸುವಂತೆ ಜನಸಾಮಾನ್ಯರು ಒಗ್ಗೂಡಿ ಒತ್ತಾಯ ಹೇರಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಂದಕುಮಾರ್ ಕುಂಬ್ರಿ ಉಬ್ಬು

contributor

Similar News