ತತ್ವಪದಗಳಲ್ಲಿವೆ ಬಹುತ್ವದ ಪರಿಕಲ್ಪನೆ
ತತ್ವಪದಗಳಲ್ಲಿ ಕಾಣುವ ಬಹುತ್ವವನ್ನು ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಯಲ್ಲಿ 17-18ನೇ ಶತಮಾನದ ಕಾಲಘಟ್ಟಕ್ಕೆ ‘ಕತ್ತಲೆ
ಯುಗ’ ಎಂದು ಚರಿತ್ರೆಕಾರರು ಗುರುತಿಸಿದ್ದಾರೆ. ಇತ್ತೀಚಿನ ವಿದ್ವಾಂಸರು ವಿಷಾದ ವ್ಯಕ್ತಪಡಿಸಿ ಆ ಕಾಲಘಟ್ಟವನ್ನು ಹಿಂದಿರುಗಿ ವಿಶ್ಲೇಷಿಸುವ, ವಿಮರ್ಶಿಸುವ ಮತ್ತು ಸಂಶೋಧಿಸುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕಿ.ರಂ.ನಾಗರಾಜ್, ಒ.ಎಲ್. ನಾಗಭೂಷಣಸ್ವಾಮಿ, ನಟರಾಜ ಬೂದಾಳು, ರಹಮತ್ ತರೀಕೆರೆ, ಎಚ್.ಎಸ್.ಶಿವಪ್ರಕಾಶ್, ಮೀನಾಕ್ಷಿ ಬಾಳಿ, ಜಿ.ವಿ.ಆನಂದ ಮೂರ್ತಿ ಪ್ರಮುಖವಾಗಿದ್ದಾರೆ.
ಬಹುತ್ವ ಎಂದರೇನು?: ಬಹುತ್ವವೆಂದರೆ ಕೂಡಿಬಾಳುವುದು. ಸಹಬಾಳ್ವೆಯಿಂದ ಬದುಕುವುದು. ನಮ್ಮ ಸಂವಿಧಾನದ ಪೀಠಿಕೆಯ ಆಶಯವೂ ಇದನ್ನೇ ಒತ್ತಿ ಹೇಳುತ್ತದೆ. ಅದರ ಪ್ರಕಾರ ಎಲ್ಲ್ಲ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಕಲ್ಪಿಸುವ ಜತೆಗೆ ಎಲ್ಲರಲ್ಲೂ ಭ್ರಾತ್ರತ್ವ ಭಾವನೆ ಮೂಡಿಸುವುದೇ ಬಹುತ್ವ. ಇಂಥ ಪರಿಕಲ್ಪನೆಯುಳ್ಳಂಥ ‘ಬಹುತ್ವ’ ಎನ್ನುವ ಪದ 17-18ನೇ ಶತಮಾನದ ತತ್ವಪದಕಾರರು ಆಗಲೇ ಬಳಸಿದ್ದಾರೆ. ಸಂವಿಧಾನದ ಆಶಯಗಳು ತತ್ವಪದಗಳಲ್ಲಿ ಇದ್ದಾವೆಯೇಎಂದು ಸಹ ಕೇಳಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿತತ್ವಪದಕಾರರ ಕುರಿತು ಮೊದಲಿಗೆ ಚರ್ಚಿಸಿ ದವರು ಡಿ.ಆರ್.ನಾಗರಾಜ್ ಮತ್ತು ಕಿ.ರಂ.ನಾಗರಾಜ್. ಅನಂತರ ಎಚ್.ಎಸ್.ಶಿವಪ್ರಕಾಶ್ ಅವರ ಬಹುತ್ವ’ದ ಆಶಯ ಹೊತ್ತ ‘ಎಲ್ಲಾ ಜಾತಿಯ ಮರಗಳ ಕಾಡು: ತತ್ವಪದಕಾರರು’ ಲೇಖನ ಬರೆದು ಚರ್ಚಿಸಿದರು. ಈ ಲೇಖನವನ್ನು ಶಿವಪ್ರಕಾಶ್ ಮುಖ್ಯವಾಗಿ ಆರು ಭಾಗಗಳಾಗಿ ವಿಂಗಡಿಸಿದ್ದಾರೆ. 1.ಮಠದೇಗುಲಗಳಾಚೆಗಿನ ಧರ್ಮ, 2.ತತ್ವಪದಗಳು: ಒಂದು ಸಂಸ್ಕೃತಿ, 3.ತತ್ವಪದಗಳ ಭಿತ್ತಿ, 4.ವಾಗ್ರೂಪದ ಕಾರಣಿಕಗಳು, 5.ಸಾಂಸ್ಕೃತಿಕ ನಾನಾತ್ವಗಳಲ್ಲಿ ತತ್ವಪದಗಳು, 6.ಸಾಹಿತ್ಯ ಚರಿತ್ರೆ ಮೀಮಾಂಸೆ ಮತ್ತು ತತ್ವಪದಗಳು. ಮುಖ್ಯವಾಗಿ ತತ್ವಪದಗಳು ಸಂವಿಧಾನದಲ್ಲಿ ಬಳಸಲಾದ ಪರಿಭಾಷೆಗಳ ಮೂಲಕ ಬಹುತ್ವ ಅಭಿವ್ಯಕ್ತಿಸುವುದಿಲ್ಲವಾದರೂ ಕೂಡು ಸಂಸ್ಕತಿ ಅಥವಾ ಸಂಕರ ಸಂಸ್ಕೃತಿ ಎನ್ನುತ್ತವೆ.
ಯಾವುದೇ ಕಾಲದ ಸಾಹಿತ್ಯವಾದರೂ ಹಿಂದಿನ ಪರಂಪರೆ ಪರಾಮರ್ಶಿಸಿ ವರ್ತಮಾನಕ್ಕೆ ತಕ್ಕಂತೆ ಬದಲಾಗಿದೆ. ಉದಾಹರಣೆಗೆ ವೇದವ್ಯಾಸರು ಬರೆದ ‘ಮಹಾಭಾರತ’ವನ್ನು ಪಂಪ ಮತ್ತು ರನ್ನರಂಥವರು ತಮ್ಮ ಕಾಲಕ್ಕೆ ಬೇಕಾದಂತೆ ಮುರಿದು ಕಟ್ಟಿದರು. ಇಂತಹ ಪರಂಪರೆಯನ್ನೇ ಮಹರ್ಷಿ ವಾಲ್ಮೀಕಿ ಬರೆದ ‘ರಾಮಾಯಣ’ವನ್ನು ನಾಗಚಂದ್ರ, ಲಕ್ಷ್ಮೀಶ, ಕುವೆಂಪು ತರಹದವರು ಮುಂದುವರಿಸಿದರು. ಅದೇ ರೀತಿ ತತ್ವಪದಕಾರರೂ ಹಿಂದಿನ ಪರಂಪರೆ ನಿರಾಕರಿಸದೆ, ನಿವಾರಿಸಿಕೊಂಡಿದ್ದಾರೆ.
ಹಾಗಾಗಿಯೇ ಎಚ್.ಎಸ್.ಶಿವಪ್ರಕಾಶ್ ಅವರು ‘‘ಹನ್ನೆರಡನೇ ಶತಮಾನದ ಶರಣರು ಶೈವಧರ್ಮದ ಕೆಲವು ಪರಿಕರ ಉಳಿಸಿಕೊಂಡು ಇನ್ನೂ ಕೆಲವನ್ನು ನವೀಕರಿಸಿಕೊಂಡು ಉಳಿದೆಲ್ಲ ಸಂಸ್ಕೃತಿಗಳ ನಂಬಿಕೆ ಆಚರಣೆ ನಿವಾರಿಸಿ ಯಾಗ, ದಾನ, ಬಲಿ, ದೇವಾಲಯ, ಗ್ರಾಮದೇವತೆ ಮುಂತಾದ ಸಂಸ್ಕೃತಿಗಳ ಬಹುದೇವೋಪಾಸನೆ ಪ್ರವೃತ್ತಿಗಳ ಮೇಲೆ ವಚನಕಾರರು ಉರಿವ ನಾಲಿಗೆ ಹರಿಬಿಟ್ಟಿದ್ದಾರೆ. ಅನಂತರದ ದಾಸ ಪಂಥದವರು ಹರಿಭಕ್ತರಾದರೂ ದೇವಾಲಯ, ದಾನ, ಧರ್ಮ, ಯಜ್ಞ-ಯಾಗ ಒಪ್ಪಿಕೊಂಡರು. ಇವರ ನಿರಾಕರಣೆ ಇದ್ದದ್ದು ‘ಬಣಗು ದೈವಗಳ’ ಬಗ್ಗೆ ದಾಸ ಪಂಥ ಬಹುಮಟ್ಟಿಗೆ ಕೆಳಸಂಸ್ಕೃತಿ ನಿರಾಕರಿಸಿತು. ಶರಣ ಚಳವಳಿ ಮತ್ತು ದಾಸಪಂಥಗಳೆರಡು ಮೂಲಭೂತವಾಗಿ ಏಕದೇವೋಪಾಸನೆಯ ಮಾದರಿಗಳು. ಆದರೆ ತತ್ವಪದಕಾರರು ಮೇಲು, ಕೆಳ ಸಂಸ್ಕೃತಿಗಳ ಸಂಕೇತಗಳ ವಿಚಾರದಲ್ಲಿ ಸ್ವೀಕಾರ ಭಾವ ತಾಳಿದರು. ಬಾಹ್ಯ ಆಚರಣೆಗಳ ವೈವಿಧ್ಯದಲ್ಲಿ ಅಂತರಂಗದ ಅನುಭವದ ಏಕತೆ ಹುಡುಕಿದರು.
ಶಿಶುನಾಳ ಶರೀಫರು ಯಲ್ಲಮ್ಮನ ಜಾತ್ರೆ, ಪಂಚಮಿ ಹಬ್ಬದ ಬಗ್ಗೆ ಮನದುಂಬಿ ಹಾಡಿದ ಹಾಗೆ ಬಸವಾದಿ ಶರಣರು ಹಾಡುವುದನ್ನು ಊಹಿಸುವುದೂ ಕಷ್ಟ ಎನ್ನುವ ಮಾತು ತತ್ವಪದಗಳಲ್ಲಿ ‘ಬಹುತ್ವ’ ವಿಷಯದ ಪ್ರಾರಂಭದ ಹಾದಿಯಾಗುತ್ತದೆ.
ಸಾಕುಬೇಕು ಏಕಮಾಡಿದ ತತ್ವಪದಕಾರರು: ತತ್ವಪದಕಾರರು ಏನನ್ನೂ ನಿರಾಕರಿಸದೆ ಎಲ್ಲವನ್ನೂ ಒಳಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ಮುನ್ನಡೆದು ಹೊಸ ಅರ್ಥ ಸಾಧ್ಯತೆಗಳಿಗೆ ಮುನ್ನುಡಿ ಬರೆದರು. ಸಾಕು ಮತ್ತು ಬೇಕೆಂಬ ಸ್ಥಿತಿಗಳನ್ನು ಒಂದುಗೂಡಿಸಿಕೊಂಡು ಸಮಾಜಕ್ಕೆ ಬೇಕಾದ ವಿಚಾರಗಳನ್ನು ನೀಡಿದರು. ಹಾಗಾಗಿಯೇ ಮಡಿವಾಳಪ್ಪನ ಶಿಷ್ಯನಾದ ಚೆನ್ನೂರು ಜಲಾಲ್ ಸಾಬ ತನ್ನ ತತ್ವಪದದಲ್ಲಿ,
‘‘ಹಮ್ ಬೀ ಕಹತೆ ತುಮ್ ಬೀ ಕಹತೆ
ಮಾಡಬ್ಯಾಡರಿ ಮ್ಯಾಲಿನ ಶೀಲ
ಗುರು ಮಡಿವಾಳಪ್ಪ ಹೋಕರ್ ಬೋಲೆ
ತೊಳಿಯಬೇಕರಿ ಒಳಗಿನ ಮೈಲಾ’’ ಎಂದು ಬರೆಯುತ್ತಾನೆ.
ಮನಸ್ಸಿನ ಮೈಲಿಗೆ ತೊಳೆದುಕೊಳ್ಳುವುದೆಂದರೆ, ಎಲ್ಲ ಸಮುದಾಯ, ಸಂಸ್ಕೃತಿ ಒಳಗೊಳ್ಳುವುದೇ ಆಗಿದೆ. ಇದು ಭಾಷೆಯ ದೃಷ್ಟಿಯಿಂದಲೂ ಸತ್ಯವಾದ ಮಾತು.
ವಿದ್ವಾಂಸರು ಇಪ್ಪತ್ತೆರಡು ಭಾರತೀಯ ಪಂಥಗಳನ್ನು ಗುರುತಿಸಿದ್ದಾರೆ. ಓ.ಎಲ್.ಎನ್ ಅವರು ‘ನವೋದಯ ಪೂರ್ವದ ಸಾಹಿತ್ಯ’ ಲೇಖನದಲ್ಲಿ ಇದನ್ನು ಗುರುತಿಸುತ್ತಾರೆ. ಆಯಾ ಪ್ರದೇಶದ ಸಾಧಕರು ತಮ್ಮ ನೆಲದಲ್ಲಿದ್ದ ಪಂಥಗಳ ಜೊತೆಗೆ ವಿಚಿತ್ರವಾದಂಥ ಒಡನಾಟ ಹೊಂದಿದ್ದಾರೆ. ಉದಾಹರಣೆಗೆ ಮಹಾರಾಷ್ಟ್ರದ ವಾರಕರಿ ಪಂಥ. ಬಂಗಾಳದ ಚೈತನ್ಯ ಪಂಥ ಇತ್ಯಾದಿ. ತತ್ವಪದಕಾರರು ನಾಥ, ಶಾಕ್ತ, ಅಮನಸ್ಕ, ಶರಣ, ಸೂಫಿ ಮುಂತಾದ ಪಂಥಗಳ ಮೂಲಕ ಬಹುತ್ವದ ಪರಿಕಲ್ಪನೆ ಬಿತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ನಾಥಪಂಥದ ಆಚರಣೆ ಕುರಿತ ರಹಮತ್ ತರೀಕೆರೆ ಅವರ ‘ಕರ್ನಾಟಕದ ನಾಥಪಂಥ’ ಕೃತಿಯಲ್ಲಿ ‘‘ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ ‘ಕುರುಬದಾರ’ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಈಗಲೂ ಕಾಶಿಯಲ್ಲಿ ಕಪಾಲ ಮೋಚನ ಮೈದೊಳೆದು ಕಪ್ಪನೆಯ ಕಾಶಿದಾರ ತರುವ ಸಂಪ್ರದಾಯವಿದೆ. ಇದು ನಾಥರ ಶೈಲಿಯ ಅವಶೇಷ ರೂಪ’’ . ಎಂದು ಬರೆದುಕೊಳ್ಳುತ್ತಾರೆ. ಈ ಪರಂಪರೆಯಿಂದಲೇ ಬಂದಂಥ ಅಲ್ಲಮಪ್ರಭು, ಸಿದ್ಧರಾಮ, ರೇವಣಸಿದ್ಧರಂಥವರಿಗೆ ನಾಥಪರಂಪರೆಯ ಪ್ರಭಾವವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ತರೀಕೆರೆ ಮಾತಿಗೆ ಸಾಮೀಪ್ಯವಿರುವ ದ್ಯಾಗಾಯಿ ಗುಂಡಪ್ಪನವರ ತತ್ವಪದ ಹೀಗಿದೆ.
‘‘ಇಲ್ಲೇ ಇಟ್ಟಿದ ಕಳೆದು ಹೋಯಿತು ಧಾರಾ
ಎಲ್ಲಿ ಹೋಯಿತು ಧಾರಾ
ಸೋಲಾಪುರದ ಮೂಲದ ಧಾರಾ
ಅಲ್ಲಮ ಪ್ರಭುವಿನ ಬಲ್ಲಿದ್ದ ಧಾರಾ’’
ದ್ಯಾಗಾಯಿ ಗುಂಡಪ್ಪನ ಊರು ಕಲಬುರಗಿ ಜಿಲ್ಲೆಯ ಈಗಿನ ದೇಗಾಂವ್ ಆಗಿರುವುದರಿಂದ ಮತ್ತು ಈ ತತ್ವಪದದಲ್ಲಿರುವ ನುಡಿಗಟ್ಟು ತರೀಕೆರೆ ಮಾತಿಗೆ ಸಾಮೀಪ್ಯವಿರುವುದರಿಂದ ಹಾಗೂ ಅಲ್ಲಮಪ್ರಭು, ಸಿದ್ಧರಾಮನಂಥ ಶರಣರು ದೇಗಾಂವ್ ಊರಿಗೆ ಹಾಯ್ದು ಕಲ್ಯಾಣಕ್ಕೆ ಹೋಗಿರಬೇಕು. ಜೊತೆಗೆ ಅಲ್ಲಮನ ಗುರು ‘ಅನಿಮಿಶಿಯಾ’ (ಕಣ್ಣ ರೆಪ್ಪೆಯಿಲ್ಲದ್ದ-ಮೀನು) ಆಗಿರುವುದರಿಂದ. ಗುಂಡಪ್ಪನಿಗೆ ಇವೆಲ್ಲವೂ ಗೊತ್ತಿರುವಂತೆ ತೋರುತ್ತದೆ. ಯುಗಾದಿ ಹಬ್ಬದ ಹದಿನೈದು ದಿನ ಮುಂಚೆಯೇ ಜನರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಬರುವಾಗ ಕಪ್ಪು ದಾರ, ವಿಭೂತಿ, ರುದ್ರಾಕ್ಷಿ ಮುಂತಾದವುಗಳನ್ನು ತರುತ್ತಾರೆ. ಬೋರಮ್ಮನನ್ನು ಕಳುಹಿಸುವ ಕಾರ್ಯಕ್ರಮದಲ್ಲಿ ಈ ಎಲ್ಲ ವಸ್ತುಗಳನ್ನಿಟ್ಟು ಪೂಜಿಸಿ ನಂತರ ಕೈಯಲ್ಲಿ, ಕೊರಳಲ್ಲಿ ಕಟ್ಟಿಕೊಳ್ಳುವ ಪದ್ಧತಿಯಿದೆ. ಇದು ನಾಥಪಂಥದ ದೀಕ್ಷೆಯಾಗಿ ತೋರುತ್ತದೆ. ಹೀಗೆ ನಾಥಪಂಥದ ಸಂಕೇತಗಳು ಹೊಳಲಗುಂದಿ ಸಾಯಿಬಣ್ಣ ತಾತ, ಕಡಕೋಳ ಮಡಿವಾಳಪ್ಪ, ರಾಚಪ್ಪಯ್ಯ, ಮೂಡಬೂಳ ರಂಗಲಿಂಗೇಶ್ವ, ಸಿದ್ಧಪ್ರಭು ಮುಂತಾದವರ ತತ್ವಪದಗಳಲ್ಲಿ ಸಿಗುತ್ತವೆ.
ನಾಥಪಂಥದಷ್ಟೇ, ಶಾಕ್ತಪಂಥವನ್ನೂ ತತ್ವಪದಕಾರರು ತತ್ವಪದಗಳ ಮೂಲಕ ಒಳಗೊಳ್ಳುತ್ತಾರೆ. ಈ ಧಾರೆಯ ಜೊತೆಗೆ ತತ್ವಪದಕಾರರು ವಿಶಿಷ್ಟವಾದ ಸಂಬಂಧವನ್ನು ಹೊಂದಿದ್ದಾರೆ. ಚಿದಾನಂದಾವಧೂತರಂಥವರು ‘ಶ್ರೀದೇವಿ ಮಹಾತ್ಮೆ’ ಎನ್ನುವಂಥ ಕೃತಿ ಬರೆದಿದ್ದಾರೆ. ಜೊತೆಗೆ ‘ಬಂಗಳಾಂಬ’ ಎನ್ನುವ ಹೆಣ್ಣು ದೈವವನ್ನು ತತ್ವಪದಗಳಲ್ಲಿ ಯಥೇಚ್ಛವಾಗಿ ತರುತ್ತಾರೆ. ಶಿಶುನಾಳ ಶರೀಫನು ‘ಯಲ್ಲಮ್ಮ’ನನ್ನು, ನವಲಗುಂದ ನಾಗಲಿಂಗ ಸ್ವಾಮಿಗಳು ‘ಸಮಗಾರ ಭೀಮವ್ವ’ನನ್ನು, ಕಡಕೋಳದ ಮಡಿವಾಳಪ್ಪನು ‘ಶಕ್ತಿಯ ರೇಖೆ’ಯ ಮೂಲಕ ಪಾರ್ವತಿಯನ್ನು, ಕೂಡಲೂರು ಬಸವಲಿಂಗ ಶರಣರು ‘ಮಾತಂಗಿ’ಯನ್ನು ತಮ್ಮ ತತ್ವಪದಗಳಲ್ಲಿ ಪ್ರೇಮ, ಭಕ್ತಿ, ದೈವಗಳಾಗಿ ಕಾಣುತ್ತಾರೆ. ಚಿದಾನಂದಾವಧೂತರು ಶಾಕ್ತರಾಗಿರುವುದರಿಂದ ಗುರುಮುಟ್ಟಿ ಗುರುವಿನಂತಾಗಲು ಚಡಪಡಿಸುತ್ತಾರೆ. ಇಂಥ ಚಡಪಡಿಕೆಯ ತೀವ್ರತೆ ಇರುವ ತತ್ವಪದವೊಂದು ಹೀಗಿದೆ.
‘‘ಓಡಿ ಬಂದು ಅಪ್ಪಬೇಕು ಅಂಬನ
ಕುದುರೆ ಮಾಡಿ ಹಡಗಲನೇರಬೇಕು ಅಂಬನ
ಓಡಬೇಕು ಒಡನೆ ಮುಟ್ಟಿ ಅಂಬನ’
ಸಾಕ್ಷಿ ಚಿದಾನಂದ ಬಂಗಳಾಂಬನ’’
ಹೀಗೆ ಪ್ರೇಮಕ್ಕೆ ಸಂಬಂಧಿಸಿದ ಲೌಕಿಕ ಪರಿಭಾಷೆಗಳನ್ನು ಬಳಸಿಕೊಂಡು ಅಲೌಕಿಕವಾದ ಸಂಗತಿಗಳನ್ನು ಹೇಳುತ್ತಾರೆ. ಇಂಥ ತತ್ವಪದಗಳು ಚಿದಾನಂದಾವಧೂತರ ರಚನೆಯಲ್ಲಿ ಸಾಕಷ್ಟು ಸಿಗುತ್ತವೆ. ಉದಾಹರಣೆಗೆ ‘ದೂತ ಸಂವಾ ದೇವಿಯೊಡನಾದುದು, ನಾದದಿ ಬೆರೆತಿರು ಮುಕ್ತಾ ವಿರಕ್ತಾ, ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ, ನಾದನಾದ ಸುನಾದವ ತಿಳಿದವ, ಇತ್ಯಾದಿ. ಇವರ ಇನ್ನೊಂದು ತತ್ವಪದದಲ್ಲಿ ಅದ್ವೈತದ ತತ್ವ ಹೀಗೆ ಹೇಳುತ್ತಾರೆ.
‘‘ನೀನು ನಾನಾಗಿಹೆ ದೇವರೆ
ನೀನು ನಾನೇ ಎಂದು ಪೂಜಿಸುವೆ ದೇವರೇ’’
ಶಿಶುನಾಳ ಶರೀಫನು ತನ್ನದೊಂದು ತತ್ವಪದದಲ್ಲಿ ಯಲ್ಲಮ್ಮನ ಕುರಿತು ಹೀಗೆ ಬರೆಯುತ್ತಾನೆ.
‘‘ಎಕ್ಕಲಿಗೆ ಜೋಗು ಒಕ್ಕಲಿರಿಸಿ ಪೋಗುವೆ
ಚಿಕ್ಕ ತೊಡರು ಎಲ್ಲ ಕಳೆದು
ಸಾಧರ ಪಾದಕೆ ಬಾಗುವೆ
ಕಡಬು ಗುಗ್ಗರಿ ಮನೆಯಲಿ ಮಾಡಿ
ಹಡಗಲಿ ತುಂಬಿಟ್ಟು ನನು
ಬೇವಿನ ತಪ್ಪಲಿ ಉಡುಗಿ ಉಟ್ಟು
ಗಂಡು ದೀಪವ ಎತ್ತುವೆ’’
ಹನ್ನರೆಡನೇ ಶತಮಾನದ ಶರಣರು ವ್ಯಂಗ್ಯ-ವಿಡಂಬನೆ ಮಾಡಿ ತಿರಸ್ಕರಿಸಿದ ಜಾನಪದ ದೈವಗಳನ್ನು ತತ್ವಪದಕಾರರು ಸ್ವೀಕರಿಸುತ್ತ ಬರುವುದರಲ್ಲಿಯೇ ಬಹುತ್ವ ಉಳಿಸಿಕೊಳ್ಳುವ ತಾತ್ವಿಕತೆ ಇದೆ. ಶರೀಫನ ತತ್ವಪದಗಳಲ್ಲಿ ಶಾಕ್ತ ಪರಂಪರೆಯ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ‘‘ಹೌದೇ ನಮ್ಮವ್ವ ನೀನು ಹೌದೆ, ದೇವಿ ನಿನ್ನ ಸೇವಕನೆಂದು, ನಾ ಕಂಡೇನೀಗ ಶಾಕಾಂಬರಿ’’ ಮುಂತಾದ ತತ್ವಪದಗಳಲ್ಲಿ ಶರೀಫ ಇದನ್ನು ಸಶಕ್ತವಾಗಿ ಹಿಡಿದಿದ್ದಾನೆ.
ತತ್ವಪದಗಳು ನಾಥ, ಶಾಕ್ತದಷ್ಟೇ ಸೂಫಿ ಪರಂಪರೆಯನ್ನು ಆಗು ಮಾಡಿಕೊಳ್ಳುತ್ತವೆ. ಮಡಿವಾಳಪ್ಪನು ತನ್ನ ಶಿಷ್ಯನಾದ ಚನ್ನೂರು ಜಲಾಲ್ ಸಾಬನ ಕುರಿತು.
‘‘ಫಕೀರನಾಗಬೇಕೆಂದರೆ ಈ ಮನ
ವಿಕಾರವನೆಲ್ಲ ತೊಳಿದಿರಬೇಕೋ
ನಕಾರ ಮಕಾರ ಶಿಕಾರ ವಕಾರ
ಯಕಾರ ಓಂಕಾರ ತಿಳಿದಿರಬೇಕೋ’’
ಹೀಗೆ ಮುಂದುವರಿಯುವ ತತ್ವಪದವು ‘ನಾಮ ಸೀಮೆ ಬಿಟ್ಟೇನೆಂಬ ದೃಢ ಪ್ರೇಮದ ಲುಂಗಿ ತೊಟ್ಟಿರಬೇಕೋ’ ಎನ್ನುವ ಲಯದಲ್ಲಿಯೇ ಎಲ್ಲ ಎಲ್ಲೆಗಳನ್ನು ಮೀರಿ ಬಹುತ್ವ ಒಳಗೊಳ್ಳುವ ಸ್ಥಿತಿಯಾಗಿ ಕಂಡುಬರುತ್ತದೆ. ಈತನಂತೆ ಜಂಬಗಿ ಶರಣರ ಒಂದು ತತ್ವಪದ ಹೀಗಿದೆ.
‘‘ಜಲ್ಲೆ ಬರುತಾವಂತ ಜಲ್ದಿಲೇ ನಾ ಬಂದೆ
ಜಲ್ಯ್‌ಕ ಜಲ್ದಿ ಬರಲಿಲ್ಲ॥ ಬಂದೇನವಾಜ್
ನಿಂತಲ್ಲೇ ಕೈಯ್ಯ ಮುಗಿದೇನೋ॥
ಜಂಬಗಿ ಶರಣ ಕಲಬುರಗಿ ಶರಣಬಸಪ್ಪನವರು ಮತ್ತು ಅವರ ಸ್ನೇಹಿತನಾದ ಖಾಜಾ ಬಂದೇನವಾಜರನ್ನು ತನ್ನ ತತ್ವಪದಗಳಲ್ಲಿ ಸಾಕಷ್ಟು ಗುಣಗಾನ ಮಾಡಿದ್ದಾನೆ. ಲಿಂಗಾಯತನಾಗಿದ್ದ ಶರಣಬಸವ, ಸೂಫಿಯಾಗಿದ್ದ ಬಂದೇನವಾಜ್, ದಲಿತನಾಗಿದ್ದ ಜಂಬಗಿ ಶರಣ ಈ ಮೂರು ಜನರ ಕೂಡುವಿಕೆಯಲ್ಲಿಯೇ ಬಹುತ್ವದ ಭಾರತ ಎದ್ದು ಕಾಣುತ್ತದೆ. ಬಸವಕಲ್ಯಾಣದ ಫೈಮುದಾ ಫಾತಿಮಾ ತನ್ನ ತತ್ವಪದದಲ್ಲಿ,
‘‘ನಮಾಜು ಮಾಡೋ ನಿಮ್ಮ ಒಳಗ
ನಾದ ಬರುತಾವ ಅದರಿಂದೊಳಗ
ನಾದದೊಳಗ ಕಾಣೋ ನೀ ಅಲ್ಲಾಗ
ಕಂಡು ನೀ ಆಗು ಎಲ್ಲಾ’’
ಎನ್ನುವ ತತ್ವಪದಕ್ಕೂ ಮತ್ತು ಇರಾಕ್ ದೇಶದ ರಾಬಿಯಾ ಅಲ್ ಬಸ್ರಾಳ ಪದ್ಯಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವಳದೊಂದು ಪದ್ಯ,
‘‘ನನ್ನಾತ್ಮದಲ್ಲೊಂದು ಮಂದಿರವಿದೆ. ಪವಿತ್ರ ಸಮಾಧಿಯಿದೆ.
ಮಸೀದಿಯೊಂದಿದೆ ಮತ್ತು ಚರ್ಚೊಂದು ಎಲ್ಲ
ತೊರೆದಿದೆ. ಎಲ್ಲಾ ಮುರಿದಿದೆ. ಎಲ್ಲಾ ಇಲ್ಲವಾಗಿದೆ ಅಲ್ಲಿ’’
ಎನ್ನುವ ಇಲ್ಲಿಯ ಪದ್ಯ ಮತ್ತು ಫೈಮುದಾ ಫಾತಿಮಾ ತತ್ವಪದಕ್ಕೂ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ಏಕೆಂದರೆ ಫಾತಿಮಾಳ ಮಾತಿನಲ್ಲಿ ‘ಎಲ್ಲಾ ಆಗುವುದು’ ಮತ್ತು ರಬಿಯಾ ಅಲ್ ಬಸ್ರಾಳ ಮಾತಿನಲ್ಲಿ ‘ಎಲ್ಲಾ ಇಲ್ಲವಾಗುವುದು’ ಇವೆರಡೂ ಬಹುತ್ವವನ್ನೇ ಹೇಳುತ್ತವೆ.
ಕೊನೆಮಾತು: ಕೊನೆಯದಾಗಿ ಬಹುತ್ವವೆಂದರೆ, ತೀರಾ ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಅತೀ ಸಣ್ಣ ರೈತರಿಗೆ ಜಮೀನು ಸ್ವಲ್ಪವೇ ಇರುತ್ತದೆ. ಎಲ್ಲಾ ಬೆಳೆಗಳನ್ನು ತಮಗಿರುವಷ್ಟು ಜಮೀನಿನಲ್ಲಿಯೇ ಬೆಳೆಯುತ್ತಾರೆ. ಉದಾಹರಣೆಗೆ ವರ್ಷದ ಬೆಳೆಯಾದ ತೊಗರಿಯ ನಡುಸಾಲುಗಳಲ್ಲಿ ಆರು ತಿಂಗಳ ಬೆಳೆಗಳಾದ ಸಜ್ಜೆ, ಸೂರ‌್ಯಪಾನ, ಶೇಂಗಾ ಇತ್ಯಾದಿ ಬೆಳೆಗಳನ್ನು ಹಾಕುತ್ತಾರೆ. ಉಳಿದಂತೆ ತಲೆ ಸಾಲಿಗೆ ಅಗಸಿ, ಕಾರೆಳ್ಳು, ಎಳ್ಳು ಇತ್ಯಾದಿ ಬಾಯಿ ಚಟದ ಬೆಳೆಗಳನ್ನು ಒಳಗೊಂಡು ಉತ್ತಿ ಬಿತ್ತಿದ ಎತ್ತುಗಳಿಗೆಂದು ಬಾಟಿ ಹಾಕುತ್ತಾರೆ. ಏಕಕಾಲಕ್ಕೆ ಬಹು ಬೆಳೆಗಳಿಂದ ಮಣ್ಣು ಹದಕ್ಕೆ ಬರುತ್ತದೆನ್ನುವ ವೈಜ್ಞಾನಿಕ ಸ್ಕಾಲರ್ಶಿಪ್ ನಮಗಿಲ್ಲವಾದರೂ ಈ ತರಹದ ಬಹು ಬೆಳೆಯ ಸಂಸ್ಕೃತಿ ಬದುಕಿಗೆ ಮುಖ್ಯವಾಗಿದೆಯೆಂದು ಹೇಳಬೇಕಾಗುತ್ತದೆ. ಏಕ ಬೆಳೆಯ ಗೋಜಿಗೆ ಅತೀ ಸಣ್ಣ ರೈತರು ಹೋಗುವುದಿಲ್ಲ. ಇದು ಸಾಹಿತ್ಯಕ್ಕೂ ಅನ್ವಯಿಸಬಹುದು. ಇಂಥ ಅರಿವಿರುವ ತತ್ವಪದಕಾರರು ಶರಣರಿಗಿಂತ ವಿಭಿನ್ನವಾಗಿ ಚಿಂತಿಸುತ್ತಾರೆ. ಎಲ್ಲ ಅನ್ಯ ದೈವಗಳನ್ನೂ ಕಾವ್ಯದಲ್ಲಿ ರೂಪಕ ಪ್ರತಿಮೆಗಳಾಗಿ ತರುತ್ತಾರೆ. ಈಗಾಗಲೇ ಹೇಳಿದಂತೆ ನಾಥ, ಶಾಕ್ತ, ಸೂಫಿ, ಶರಣ ಮುಂತಾದ ಪಾಂಥಗಳನ್ನು ಮತ್ತು ಜಾನಪದ ಮೌಖಿಕ ಪರಂಪರೆಗಳಲ್ಲಿರುವ ಆಚರಣೆಗಳನ್ನು ಒಳಗೊಳ್ಳುವುದರಿಂದ ತತ್ವಪದಗಳಿಗೆ ಅತಿ ಹೆಚ್ಚು ಒತ್ತು ಕೊಡಬೇಕಾದದ್ದು ಅನಿವಾರ್ಯವಾಗುತ್ತದೆ.