×
Ad

ಕಲ್ಲಂಗಡಿ ಕೃಷಿಯಲ್ಲಿ ಬಂಪರ್ ಆದಾಯ ಗಳಿಸಿದ ರೈತ

ಬರಗಾಲದ ನಡುವೆ ಸಿಹಿ ಫಲ: ಮೂರುವರೆ ಎಕರೆಯಲ್ಲಿ 12 ಲಕ್ಷ ಲಾಭ

Update: 2026-01-10 14:35 IST

ಯಾದಗಿರಿ : ಬರಗಾಲದಲ್ಲಿ ನೀರಿನ ಕೊರತೆ ಹಾಗೂ ಸರಿಯಾದ ಬೆಂಬಲ ಬೆಲೆ ಸಿಗದ ಆತಂಕದ ನಡುವೆಯೂ ಕೃಷಿಯಲ್ಲಿ ಸಾಧನೆ ಸಾಧ್ಯ ಎಂಬುದನ್ನು ಯಾದಗಿರಿ ತಾಲೂಕಿನ ಮುಂಡರಗಿ ತಾಂಡಾದ ಯುವ ರೈತ ಮಲ್ಲು ರಾಠೋಡ್ ತೋರಿಸಿ ಕೊಟ್ಟಿದ್ದಾರೆ.

ಮೆಲೋಡಿ ತಳಿಯ ಕಲ್ಲಂಗಡಿ 3 ಎಕರೆ20 ಗುಂಟೆ ಭೂಮಿಯಲ್ಲಿ ಬೆಳೆದು ಸುಮಾರು 12 ಲಕ್ಷ ಆದಾಯ ಗಳಿಸುವ ಮೂಲಕ ಜಿಲ್ಲೆಯ ರೈತರಿಗೆ ಆತ್ಮವಿಶ್ವಾಸ ನೀಡಿದ್ದಾರೆ.

ಶಿಕ್ಷಣವಿಲ್ಲದಿದ್ದರೂ ಕೃಷಿಯಲ್ಲಿನ ಅನುಭವ ಹಾಗೂ ಪರಿಶ್ರಮದಿಂದ ಕಲ್ಲಂಗಡಿ ಬೆಳೆದಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ವೆಚ್ಚ ಖರ್ಚು ಮಾಡಿದ್ದಾರೆ. ಅವರು ಮಾಡಿದ ಖರ್ಚಿಗಿಂತ ಹೆಚ್ಚು ಉತ್ತಮ ಇಳುವರಿ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿದೆ.

ಎರಡು ತಿಂಗಳ ಹಿಂದೆ ಮೆಲೋಡಿ ತಳಿಯ ಕಲ್ಲಂಗಡಿ ಸಸಿಗಳನ್ನು ಪ್ರತಿ ಸಸಿಗೆ 2 ದರದಂತೆ ಒಟ್ಟು 19 ಸಾವಿರ ಸಸಿಗಳನ್ನು 38 ಸಾವಿರ ವೆಚ್ಚದಲ್ಲಿ ಖರೀದಿಸಿ 3 ಎಕರೆ 20 ಗುಂಟೆ ಭೂಮಿಯಲ್ಲಿ ನಾಟಿ ಮಾಡಲಾಗಿತ್ತು. ಕೇವಲ ಎರಡು ತಿಂಗಳಲ್ಲೇ ಬಂಪರ್ ಇಳುವರಿ ದೊರೆತಿದೆ.

ಬೇರೆ ಜಮೀನಿನಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ಬರಗಾಲ ಪ್ರದೇಶವೆಂದು ಗುರುತಿಸಲ್ಪಡುವ ಯಾದಗಿರಿ ಜಿಲ್ಲೆಯಲ್ಲಿ ಈ ರೈತನ ಸಾಧನೆ ಇತರ ರೈತರಿಗೆ ಮಾದರಿಯಾಗಿದೆ.

ವೈಜ್ಞಾನಿಕ ಕೃಷಿ ಪದ್ಧತಿ, ಸರಿಯಾದ ಬೆಳೆ ಆಯ್ಕೆ ಹಾಗೂ ಮಾರುಕಟ್ಟೆ ಮಾಹಿತಿ ರೈತರಿಗೆ ತಲುಪಬೇಕಿದೆ. ಇಂತಹ ಯಶಸ್ವಿ ರೈತರಿಗೆ ಸರ್ಕಾರ ಪ್ರೋತ್ಸಾಹಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಒತ್ತಾಯಿಸಿದ್ದಾರೆ.

ನನಗೆ ಕೃಷಿಯಲ್ಲಿ ಬಹಳ ಆಸಕ್ತಿ ಇದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಕಲ್ಲಂಗಡಿ ಬೆಳೆಯನ್ನು ನಂಬಿಕೊಂಡೇ ಕೃಷಿ ಮಾಡುತ್ತಿದ್ದೇನೆ. ಆರಂಭದ ವರ್ಷಗಳಲ್ಲಿ ಹೆಚ್ಚಿನ ಲಾಭವಾಗಲಿಲ್ಲ, ಕೆಲವೊಮ್ಮೆ ಖರ್ಚು ಕೂಡ ಸರಿಯಾಗಿ ಬಂದಿರಲಿಲ್ಲ. ಈ ವರ್ಷ ಸರಿಯಾದ ಸಮಯಕ್ಕೆ ಬಿತ್ತನೆ, ನೀರಿನ ನಿರ್ವಹಣೆ ಹಾಗೂ ಕಾಳಜಿ ವಹಿಸಿದೆ. ಈ ಬಾರಿ ಕೈತುಂಬ ಲಾಭ ಬಂದಿದೆ.

-ಮಲ್ಲು ರಾಠೋಡ್ ರೈತ

ಕಲ್ಲಂಗಡಿ ಬೆಳೆದ ವಿವರ

<ಮೊದಲ ಕಟಿಂಗ್‌ನಲ್ಲಿ 60 ಟನ್ ಕಲ್ಲಂಗಡಿ ಬಂದಿದೆ

<ಪ್ರತಿ ಕೆ.ಜಿ.ಗೆ 22.50 ದರ ದೊರೆತಿದೆ.

<ಎರಡನೇ ಕಟಿಂಗ್ ನಲ್ಲಿ 35 ಟನ್ ಬಂದಿದ್ದು ಪ್ರತಿ ಕೆ.ಜಿ.ಗೆ 12 ದರ ಸಿಕ್ಕಿದೆ.

<ಮೂರನೇ ಕಟಿಂಗ್ ನಲ್ಲಿ 15 ಟನ್ ಗೂ ಹೆಚ್ಚು ಇಳುವರಿ ನಿರೀಕ್ಷೆಯಿದ್ದು,

<ಪ್ರತಿ ಕೆ.ಜಿ.ಗೆ 10.50 ದರ ಸಿಗಲಿದೆ ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News