×
Ad

ಬಳ್ಳಾರಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಮಿಕರಿಂದ ಒತ್ತಾಯ

ಭೂಮಿ ಪೂಜೆಗಷ್ಟೇ ಸೀಮಿತ | 7 ವರ್ಷದಲ್ಲಿ ಕಾಂಪೌಂಡು ಕಟ್ಟಿದ್ದೇ ಸಾಧನೆ | ಇಎಸ್‌ಐ ಆಸ್ಪತ್ರೆ ಇಲ್ಲದೆ ರೋಗಿಗಳು ಪರದಾಟ

Update: 2026-01-11 14:25 IST

ಬಳ್ಳಾರಿ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಅಖಂಡ ವಿಜಯನಗರ, ಬಳ್ಳಾರಿ ಜಿಲ್ಲೆಯ ಗಣಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇಎಸ್‌ಐ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸರಕಾರ 7 ವರ್ಷದ ಹಿಂದೆಯೇ ಮಂಜೂರು ಮಾಡಿದೆ. ಆದರೆ ಇಎಸ್‌ಐ ಆಸ್ಪತ್ರೆಗೆ ಈವರೆಗೂ ಕಾಂಪೌಂಡ್ ಮಾತ್ರ ನಿರ್ಮಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯೇ ನಡೆದಿಲ್ಲ.

ಬಳ್ಳಾರಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಮಿಕರು ಮತ್ತು ಸಾರ್ವಜನಿಕರ ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ 2017ರಲ್ಲಿ ಕೇಂದ್ರ ಸರಕಾರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಮಣಿದು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮಂಜೂರು ಮಾಡಿದ್ದು, 4 ವರ್ಷದ ಬಳಿಕ ಜಿಲ್ಲಾಡಳಿತ ನಗರದ ಹೊರವಲಯದ ಬೆಳಗಲ್ ರಸ್ತೆಯಲ್ಲಿ 5.75 ಎಕರೆ ಭೂಮಿ ಸಹ ನೀಡಿದೆ. ಇಲ್ಲಿಯವರೆಗೂ 4 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್ ಕಟ್ಟಿದ್ದು ಬಿಟ್ಟರೆ ಇಎಸ್‌ಐ ಆಸ್ಪತ್ರೆ ಮಂಜೂರಾಗಿ 7 ವರ್ಷವಾದರೂ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಅಖಂಡ ವಿಜಯನಗರ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಕುಟುಂಬ ಸದಸ್ಯರು ಸೇರಿ ಒಟ್ಟು 5.80 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸುಮಾರು 2 ಕೋಟಿ ರೂ. ಅಧಿಕ ಹಣ ಇಎಸ್‌ಐ ರೂಪದಲ್ಲಿ ಕಡಿತಗೊಳ್ಳುತ್ತದೆ.

ಆಸ್ಪತ್ರೆ ನಿರ್ಮಾಣಕ್ಕೆ ಪ್ರತಿನಿಧಿಗಳ ನಿರ್ಲಕ್ಷ್ಯ:

ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಿನ ಸಂಸದ ವೈ.ದೇವೇಂದ್ರಪ್ಪ ಅವರು ಆಸತ್ರೆ ನಿರ್ಮಾಣದ ಬಗ್ಗೆ ಆಸಕ್ತಿ ತೋರಲಿಲ್ಲ. ಹಾಲಿ ಸಂಸದ ಈ.ತುಕಾರಾಮ್ ಸಂಸದರಾಗಿ ಆಯ್ಕೆಯಾದ ಬಳಿಕ ಸ್ಥಳಕ್ಕೆ ಭೇಟಿನೇ ನೀಡಿಲ್ಲ. ಅಧಿಕಾರಿಗಳ ಜೊತೆಯೂ ಚರ್ಚಿಸಿಲ್ಲ. ಇನ್ನೂ ಬಳ್ಳಾರಿ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಸೇರಿ ರಾಜ್ಯ ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್ ಅವರು ಬಳ್ಳಾರಿ

ಯವರೇ ಆದರೂ ಬಳ್ಳಾರಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಆಸಕ್ತಿ ವಹಿಸದಿರುವುದು ದುರಂತವೇ ಸರಿ ಎಂದು ಜನತೆ ವ್ಯಥೆಪಡುವಂತಾಗಿದೆ.

ಒಟ್ಟಾರೆಯಾಗಿ ಬಳ್ಳಾರಿಯಲ್ಲಿ ಆದಷ್ಟು ಬೇಗ ಇಎಸ್‌ಐ ಆಸ್ಪತ್ರೆ ನಿರ್ಮಿಸಿ ಕಾರ್ಮಿಕರು ಮತ್ತು ಕುಟುಂಬದ ಸದಸ್ಯರ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಎಸ್‌ಐ ಆಸ್ಪತ್ರೆ ನಿರ್ಮಾಣ ಕುರಿತು ಸಚಿವ ಸಂತೋಷ್ ಲಾಡ್ ಸೇರಿ ಎಲ್ಲ ಶಾಸಕರು ಮತ್ತು ಸಂಸದರ ಜತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುವುದು.

-ನಾರಾ ಭರತ್ ರೆಡ್ಡಿ, ಶಾಸಕರು

2017ರಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗೆ ಒಂದೇ ಸಲ ಇಎಸ್‌ಐ ಆಸ್ಪತ್ರೆ ಮಂಜೂರಾಗಿದೆ. ಈಗಾಗಲೇ ಶಿವಮೊಗ್ಗ ಆಸ್ಪತ್ರೆ ಕಟ್ಟಡ ಕಾಮಗಾರಿ ಕೊನೇ ಹಂತಕ್ಕೆ ಬಂದಿದ್ದು, ನಮ್ಮಲ್ಲಿ ಬರೀ ಕಾಂಪೌಂಡ್ ನಿರ್ಮಾಣವಾಗಿದೆ.

-ತಿಪ್ಪೇಸ್ವಾಮಿ, ಕಾರ್ಮಿಕ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News