×
Ad

ತೀವ್ರಗೊಂಡ ಅಡಿಕೆ ಕೊಳೆರೋಗ

►ಶೇ.60ರಷ್ಟು ಬೆಳೆ ನಷ್ಟ ►ಕಂಗಾಲಾದ ಬೆಳೆಗಾರರು

Update: 2025-08-21 09:48 IST

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಡಿಕೆಗೆ ಕೊಳೆ ರೋಗ ತೀವ್ರಗೊಂಡಿದ್ದು, ಹೆಚ್ಚಿನ ಕಡೆಗಳಲ್ಲಿ ಶೇ.60ರಷ್ಟು ಅಡಿಕೆ ಬೆಳೆ ನಾಶಗೊಂಡಿದೆ.

ಕೆಲದಿನಗಳಲ್ಲಿ ಸತತವಾಗಿ ಸುರಿದ ಮಳೆಯು ಕೊಳೆ ರೋಗ ನಿಯಂತ್ರಣಕ್ಕೆ ಅಡ್ಡಿಯಾಗಿದೆ. ಬೆಳೆಗಾರರು 2-3 ಬಾರಿ ಔಷಧಿ ಸಿಂಪಡಿಸಿದರೂ ಫಲಕಾರಿಯಾಗಲಿಲ್ಲ. ಅಲ್ಲದೆ ಮದ್ದು ಬಿಡಲು ಕೂಲಿ ಕಾರ್ಮಿಕರ ಕೊರತೆಯು ಅಡಿಕೆ ಬೆಳೆಗಾರರು ಕಂಗೆಡುವಂತೆ ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೂಡಾ ಹಳೆಯ ವಿಧಾನದ ಮೂಲಕ ಮದ್ದು ಬಿಡಲಾಗುತ್ತದೆ. ಹೀಗಾಗಿ 200-500 ತನಕ ಇರುವ ಅಡಿಕೆ ತೋಟಕ್ಕೆ ಮದ್ದು ಬಿಡಲು ಕನಿಷ್ಠ ಮೂವರು ಅಗತ್ಯವಿದೆ. ಆದರೆ ಸಕಾಲದಲ್ಲಿ ಈ ಕೆಲಸ ಬಲ್ಲ ಆಳುಗಳನ್ನು ಹೊಂದಿಸುವುದು ರೈತರನಿಗೆ ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಅಡಿಕೆ ಮರಗಳಿಗೆ ಪಾಚಿ ಹಿಡಿದು ಜಾರುತ್ತಿರುವುದು ಕೂಡಾ ಒಂದು ಸಮಸ್ಯೆಯಾಗಿದೆ.

ಎಳೆ ಅಡಿಕೆಗಳು ಕೊಳೆತು ಉದುರುತ್ತಿದೆ. ಅಡಿಕೆ ಮರದ ಸುತ್ತಲೂ ಉದುರಿದ ಅಡಿಕೆ ರಾಶಿ ಬಿದ್ದಿದ್ದು, ಅಡಿಕೆ ಬೆಳೆಗಾರನಿಗೆ ಕೈಗೆ ಬಂದ ತುತ್ತು ಬಾಯಿಗೆ ತಲುಪುವಂತಾಗಿದೆ.

ಈ ಬಾರಿ ಬಹುತೇಕ ಕಡೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಆಭಾವ ಉಂಟಾಗಿಲ್ಲ. ಮಳೆ ಬೇಗ ಬಂದಿರುವ ಹಿನ್ನೆಲೆಯಲ್ಲಿ ಫಸಲು ಜಾಸ್ತಿ ನಿರೀಕ್ಷಿಸಲಾಗಿತ್ತು. ಆದರೆ ಮುಂದುವರಿದ ಮಳೆಯು ಅಡಿಕೆ ಫಸಲನ್ನು ಕಿತ್ತುಕೊಂಡಿದೆ.

ಮಳೆಯಿಂದಾಗಿ ಅಡಿಕೆಗೆ ಬೇರೆ ಬೇರೆ ರೋಗಗಳು ಕಾಣಿಸಿ ಕೊಂಡಿರುವುದು ಒಂದಡೆಯಾದರೆ ಕೆಲವು ತೋಟಗಳಲ್ಲಿ ಅಡಿಕೆ ಮರಕ್ಕೆ ಹಾಕಿರುವ ಗೊಬ್ಬರವು ಮಳೆಯಿಂದಾಗಿ ಕೊಚ್ಚಿ ಹೋಗಿದೆ.

ಕೊಳೆ ರೋಗದಿಂದ ತಪ್ಪಿಸಿಕೊಂಡು ಎಳೆ ಅಡಿಕೆಯಿಂದ ನಳನಳಿಸಿಸುತ್ತಿ ರುವ ಕೆಲವು ಅಡಿಕೆ ಮರಗಳು ಭಾರ ತಾಳಲಾರದೆ ಮಳೆಯೊಂದಿಗೆ ಆಗಾಗ ಕಂಡು ಬರುವ ಗಾಳಿಯಿಂದಾಗಿ ಮುರಿದು ಬೀಳುತ್ತಿದ್ದು, ಇದು ಅಡಿಕೆ ಬೆಳೆಗಾರರಿಗೆ ಆಘಾತ ನೀಡಿದೆ.

ಅಡಿಕೆಗೆ ರೋಗದ ಸಮಸ್ಯೆ ಒಂದಡೆಯಾದರೆ ಇನ್ನೊಂದಡೆ ಮಳೆಯೊಂದಿಗೆ ಗಾಳಿ ಅಡಿಕೆ ಬೆಳಗಾರರಿಗೆ ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಕೆಲವು ತೋಟಗಳ ಸುತ್ತಲೂ ಅಥವಾ ತೋಟದೊಳಗಿರುವ ಬೇರೆ ಮರಗಳ ಕೊಂಬೆ ಮುರಿದು ಬಿದ್ದ ಪರಿಣಾಮವಾಗಿ ಅಡಿಕೆ ಮರಗಳು ತುಂಡಾಗಿ ನೆಲಕ್ಕೆ ಬೀಳುವಂತಾಗಿದೆ.

ಬಸವನ ಹುಳ ಬಾಧೆ: ಬಸವನಹುಳ ಅಥವಾ ಶಂಖ ಹುಳದ ಬಾಧೆ ಕೂಡಾ ದ.ಕ. ಜಿಲ್ಲೆಯ ಬಹುತೇಕ ತೋಟಗಳಲ್ಲಿ ಕಾಣಿಕೊಂಡಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ಮಳೆ ಒಂದೆರಡು ದಿನಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ವರ್ಷ ಮೇ ತಿಂಗಳಲ್ಲಿ ವಿಪರೀತ ಮಳೆ ಕಾಣಿಸಿಕೊಂಡಿತು. ಈ ಕಾರಣದಿಂದಾಗಿ ಹೆಚ್ಚಿನ ಅಡಿಕೆ ಬೆಳೆಗಾರರಿಗೆ ತೋಟಗಳಿಗೆ ಸರಿಯಾಗಿ ಔಷಧ ಸಿಂಪಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಕೊಳೆರೋಗ ಹಾಗೂ ಸುಳಿ ರೋಗದ ನಿಯಂತ್ರಣ ಸಾಧ್ಯವಾಗಿಲ್ಲ. ಕೆಲವು ಬೆಳಗಾರರು ಔಷಧ ಸಿಂಪಡಿಸಿದರೂ ನಿರಂತರ ಮಳೆ ಕಾರಣ ಅದು ಪರಿಣಾಮ ಬೀರಿಲ್ಲ. ಇದೀಗ ತೋಟಗಾರಿಕೆ ಇಲಾಖೆ ಯಿಂದ ಔಷಧಿ ಸಿಂಪಡಿಸಲು ಎಕರೆಗೆ 600 ರೂ.ಗಳಂತೆ ಗರಿಷ್ಠ 5 ಎಕರೆ ತನಕ 6,000 ರೂ. ಸಹಾಯಧನ ನೀಡಲಾಗುತ್ತದೆ.

ಮಂಜುನಾಥ್, ಉಪ ನಿರ್ದೇಶಕರು ತೋಟಗಾರಿಕಾ ಇಲಾಖೆ,ದ.ಕ. ಜಿಪಂ ಮಂಗಳೂರು

ಕೊಳೆರೋಗದಿಂದಾಗಿ ಅಡಿಕೆ ಫಸಲು ನಾಶಗೊಂಡಿದೆ. ವಿಪರೀತ ಮಳೆಯಿಂದಾಗಿ ಔಷಧಿ ಸಿಂಪಡಿಸಲು ಸಮಸ್ಯೆ ಉಂಟಾಗಿದೆ. ಕೆಲವು ಅಡಿಕೆ ಬೆಳೆಗಾರರು ಮೂರು ಬಾರಿ ಔಷಧಿ ಸಿಂಪಡಿಸಿದರೂ, ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಶಂನಾ ಖಂಡಿಗೆ, ಉಪಾಧ್ಯಕ್ಷರು ಕ್ಯಾಂಪ್ಕೊ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹೀಂ ಅಡ್ಕಸ್ಥಳ

contributor

Similar News