ಸಿದ್ದಾಪುರ | ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ, ಬಳಕೆ : ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ
ಸಾಂದರ್ಭಿಕ ಚಿತ್ರ(PC:Meta AI)
ಸಿದ್ದಾಪುರ : ಗಾಂಜಾ, ಎಂಡಿಎಂಎ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿದ್ದಾಪುರ ಪೊಲೀಸರು ಮುಂದಾಗಿದ್ದಾರೆ.
ಸಿದ್ದಾಪುರ, ನೆಲ್ಯಹುದಿಕೇರಿ, ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲಿನಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ. ಅಲ್ಲದೆ, ಗ್ರಾಮ ಸಭೆಗಳಲ್ಲಿ ಮಾದಕ ವಸ್ತುಗಳ ಬಳಕೆಯ ಬಗ್ಗೆ ಹೆಚ್ಚು ಚರ್ಚೆಗಳು ನಡೆದು ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಹಳಷ್ಟು ಗ್ರಾಮಗಳಲ್ಲಿ ಮಾದಕ ವಸ್ತುಗಳ ಬಳಕೆಯಿಂದಾಗಿ ಹಲವು ಕುಟುಂಬಗಳ ನೆಮ್ಮದಿ ಹಾಳಾಗಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಪೋಷಕರು ದೂರು ಕೊಡಲು ಮುಂದೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾದಕ ವಸ್ತು ಖರೀದಿಸಲು ಹಣ ನೀಡದ ಕಾರಣಕ್ಕೆ ಮಕ್ಕಳು ಪೋಷಕರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ಕೂಡಾ ನಡೆದಿದೆ. ಸಿದ್ದಾಪುರ ಸುತ್ತಮುತ್ತಲಿನ ಯುವಕರನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಮಾದಕ ವಸ್ತುಗಳ ಜಾಲವನ್ನು ಮಟ್ಟಹಾಕಲು ಪೊಲೀಸರು ಮುಂದೆ ಬಂದಿದ್ದು, ಸಾರ್ವಜನಿಕರು ಕೈ ಜೋಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಐವರ ಬಂಧನ :
ಸಿದ್ದಾಪುರ: ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಆರೋಪದಡಿ ಐವರು ಯುವಕರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಇಂಜಲಗೆರೆ ಗ್ರಾಮದ ನಿವಾಸಿ ರನೀಶ್ (35), ಕರಡಿಗೋಡು ಗ್ರಾಮದ ಸುರೇಶ್ ಕುಮಾರ್(29), ಹರೀಶ್ (26), ಅಮ್ಮತ್ತಿ ಮುಕ್ಕಟ್ಟಿಕೊಪ್ಪ ಗ್ರಾಮದ ಜಿ.ಶಿವಕುಮಾರ (22) ಹಾಗೂ ಗುಹ್ಯಗ್ರಾಮದ ಎನ್.ಆರ್.ರಂಜಿತ್ (27)ಬಂಧಿತರು.
ಸಿದ್ದಾಪುರದ ಖಾಸಗಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡು ಜೋರಾಗಿ ಬೊಬ್ಬೆ ಹಾಕುತ್ತಾ ಕಿರುಚಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸಿದ್ದಾಪುರ ಠಾಣೆಗೆ ಮಾಹಿತಿ ನೀಡಿದ್ದರು. ಗಸ್ತಿನಲ್ಲಿದ್ದ ಪೊಲೀಸರು ಯುವಕರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಮುಂದೆ ಹಾಜರುಪಡಿಸಿದಾಗ ಯುವಕರು ಗಾಂಜಾ ಸೇವಿಸಿರುವ ಬಗ್ಗೆ ವೈದ್ಯಾಧಿಕಾರಿ ಖಚಿತಪಡಿಸಿದ ಮೇರೆಗೆ ಐವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪಿಎಸ್ಸೈ ಶಿವಣ್ಣ, ಸಿಬ್ಬಂದಿ ಮಣಿಕಂಠ, ಪ್ರಸನ್ನ, ಹಾಜರಿದ್ದರು.
ಗಾಂಜಾ, ಎಂಡಿಎಂಎ ಸೇರಿದಂತೆ ಮಾದಕ ವಸ್ತುಗಳ ಮಾರಾಟಗಾರರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇದ್ದಲ್ಲಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಮಾಹಿತಿದಾರರ ವಿವರವನ್ನು ಗೋಪ್ಯವಾಗಿಡುತ್ತೇವೆ. ಸಮಾಜಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ.
- ಮಂಜುನಾಥ್, ಪಿಎಸ್ಸೈ ಸಿದ್ದಾಪುರ ಠಾಣೆ