×
Ad

ಜಾತಿವಾದಿಗಳಿಗೆ ಪಾಠ ಕಲಿಸಿದ ಭೀಮಾ ಕೋರೆಗಾಂವ್ ಯುದ್ಧ

Update: 2026-01-01 13:24 IST

ಜಗತ್ತಿನೆಲ್ಲೆಡೆ ಹೊಸ ವರ್ಷವನ್ನು ಸ್ವಾಗತಿಸಲು ಯುವಜನತೆ ಕುಣಿದು ಕುಪ್ಪಳಿಸುತ್ತಾರೆ. ಆದರೆ ಭಾರತದ ಬಹುಜನರು ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಪ್ರಜ್ಞಾಪೂರ್ವಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಮೋಜು ಮಸ್ತಿಗಿಂತಲೂ ಪ್ರಜ್ಞೆ ದೊಡ್ಡದು ಎಂದು ಸಾರುತ್ತಿದ್ದಾರೆ.

ಕೋರೆಗಾಂವ್ ಯುದ್ಧದ ಇತಿಹಾಸ

ಸಾವಿರಾರು ವರ್ಷಗಳ ಕಾಲ ನಾಗರಿಕ ಬದುಕಿನಿಂದ ದೂರವಾಗಿ ಬದುಕಿದ ಅಸ್ಪಶ್ಯರಿಗೆ ಬ್ರಿಟಿಷ್ ಆಳ್ವಿಕೆಯು ಒಂದು ಹೊಸ ಲೋಕದ ಬಾಗಿಲನ್ನು ತೆರೆಯಿತು. ಹೀಗೆ ಹೊಸ ಜಗತ್ತಿನ ಬಾಗಿಲನ್ನು ತೆರೆಯಲು ಮೊದಲ ದೊರೆತ ಅವಕಾಶ ಎಂದರೆ ಬ್ರಿಟಿಷ್ ಸೈನ್ಯದಲ್ಲಿ ಸೈನಿಕರಾಗಿ ಸೇರ್ಪಡೆ ಆದದ್ದು. ಇಂದಿಗೂ ಭಾರತೀಯ ಸೈನ್ಯದಲ್ಲಿರುವ ಮಹಾರ್ ರೆಜಿಮೆಂಟ್, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ರೆಜಿಮೆಂಟ್, ಘೂರ್ಖಾ ರೆಜಿಮೆಂಟ್, ಪಂಜಾಬ್ ರೆಜಿಮೆಂಟ್, ಎಂಇಜಿ ಮುಂತಾದ ರೆಜಿಮೆಂಟ್‌ಗಳು ಬ್ರಿಟಿಷರೇ ಆರಂಭಿಸಿದ ತುಕಡಿಗಳಾಗಿವೆ. ವರ್ಣಾಶ್ರಮ ವ್ಯವಸ್ಥೆಯು ನಿರಾಕರಿಸಿದ್ದ ಘನತೆ, ಗೌರವಗಳೆಲ್ಲವನ್ನೂ ಈ ಸೈನಿಕ ಲೋಕವು ಅಸ್ಪಶ್ಯರಿಗೆ ನೀಡಿತು. ಆರ್ಥಿಕ ಭದ್ರತೆಯ ಜೊತೆಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶವೂ ಅವರಿಗೆ ದೊರೆಯಿತು. ಇಂತಹ ಪರಿಸರದಲ್ಲಿ ಅಸ್ಪಶ್ಯರು ಅತೀವ ಆತ್ಮವಿಶ್ವಾಸದಿಂದ ತಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ’ ಎಂಬಂತೆ ಬದುಕತೊಡಗಿದರು. ಅವರ ನರನಾಡಿಗಳಲ್ಲಿ ಸ್ವಾಭಿಮಾನವು ತುಂಬಿ ಹರಿಯುತ್ತಿತ್ತು! ಇಂತಹ ಕಾಲಘಟ್ಟದಲ್ಲಿಯೇ ಅವರ ಪರಾಕ್ರಮವನ್ನು ಪ್ರದರ್ಶಿಸುವ ಅವಕಾಶವೊಂದು ಒದಗಿಬಂತು.

ಛತ್ರಪತಿ ಶಿವಾಜಿಯನ್ನು ಕೊಂದು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಪೇಶ್ವೆಗಳು ಇಂದಿನ ಮಹಾರಾಷ್ಟ್ರದ ಪೂನಾ ಪ್ರಾಂತವನ್ನು ಆಳುತ್ತಿದ್ದರು. ಬ್ರಿಟಿಷರ ಕಾಲಕ್ಕೆ ಎರಡನೆಯ ಬಾಜಿರಾಯನು ಆಳ್ವಿಕೆ ನಡೆಸುತ್ತಿದ್ದನು. ಇವನು 1817ರ ಕೊನೆಯ ತಿಂಗಳಲ್ಲಿ ಬ್ರಿಟಿಷರ ವಿರುದ್ಧ ಸಮರ ಸಾರಿದನು. ಪುಣೆಯನ್ನು ವಶಪಡಿಸಿಕೊಳ್ಳುವ ಸಲುವಾಗಿ ತನ್ನ ಸೈನಿಕರೊಂದಿಗೆ ಚಾಕಣ ಎಂಬ ಸ್ಥಳದಲ್ಲಿ ಬಂದು ಬೀಡುಬಿಟ್ಟನು. ಏಕಾಏಕಿ ಆಕ್ರಮಣ ನಡೆಸಲು ಸಜ್ಜಾಗಿ ಬಂದ ಬಾಜಿರಾಯನ ಪಡೆಯನ್ನು ಕಂಡು ಬ್ರಿಟಿಷ್ ಅಧಿಕಾರಿಗಳು ದಂಗಾಗಿಹೋದರು! ಆಗ ಶಿರೂರಿನಲ್ಲಿ ಬೀಡುಬಿಟ್ಟಿದ್ದ ಲೆಫ್ಟಿನೆಂಟ್ ಕರ್ನಲ್ ಪಿಲ್ಸ್‌ಮನ್ ಸೈನ್ಯದಲ್ಲಿ ಬಾಂಬೆ ನೇಟಿವ್ ಇನ್‌ಫೆಂಟ್ರಿಯ ಎರಡನೆಯ ಬೆಟಾಲಿಯನ್‌ನ ಮೊದಲನೆಯ ರೆಜಿಮೆಂಟ್ ಮಾತ್ರ ಇತ್ತು. ಅದರಲ್ಲಿ 500 ಮಹಾರ್ ಸೈನಿಕರು, 270 ಕುದುರೆ ಸವಾರರು ಹಾಗೂ 25 ಜನ ತೋಪು ಹಾರಿಸುವವರು ಮಾತ್ರ ಇದ್ದರು. ಮಹಾರ್ ಜನರ ಪರಾಕ್ರಮದ ಬಗ್ಗೆ ಅರಿವಿದ್ದ ಬ್ರಿಟಿಷರು ಬಾಜಿರಾಯನು ಹಾಕಿದ ಸವಾಲನ್ನು ಎದುರಿಸಲು ಸಿದ್ಧರಾದರು. ಆಗ ಅವರಿಗೆ ಅದು ಅನಿವಾರ್ಯವಾಗಿತ್ತು. ತಮ್ಮ ನಿರ್ಧಾರವನ್ನು ಮಹಾರ್ ರೆಜಿಮೆಂಟಿಗೆ ತಿಳಿಸಿದಾಗ, ಅವರು ಯುದ್ಧಮಾಡಲು ಕಾದು ಕುಳಿತಿದ್ದವರಂತೆ ಒಮ್ಮೆಗೆ ರಣೋತ್ಸಾಹದಿಂದ ಕೇಕೆ ಹಾಕಿ ಕುಣಿದಾಡತೊಡಗಿದರು. ಆ ಕ್ಷಣದಿಂದಲೇ ಅವರು ಯುದ್ಧಕ್ಕೆ ತಯಾರಾಗತೊಡಗಿದರು.

ಮನುವಾದಿ ಪೇಶ್ವೆಗಳು ಮಹಾರ್(ಅಸ್ಪಶ್ಯರು)ರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ಕಾಲ ಅಸ್ಪಶ್ಯರನ್ನು ಆಯುಧಗಳಿಂದ ದೂರವಿರಿಸಲಾಗಿತ್ತು. ಅಸ್ಪಶ್ಯರ ಬಳಿ ಒಂದೇ ಒಂದು ಸಣ್ಣ ಆಯುಧ ದೊರಕಿದರೂ ಅವರನ್ನು ಗಲ್ಲಿಗೆ ಹಾಕಲಾಗುತ್ತಿತ್ತು! ಅಸ್ಪಶ್ಯರು ಊರೊಳಗೆ ಪ್ರವೇಶಿಸಬೇಕಾದರೆ, ಮಧ್ಯಾಹ್ನ ಸೂರ್ಯನು ನಡುನೆತ್ತಿಯ ಮೇಲೆ ಬಂದಾಗ ಪ್ರವೇಶಿಸಬೇಕಿತ್ತು. ಅವರ ನೆರಳು ಅವರ ಕಾಲಿನ ಬುಡದಲ್ಲಿಯೇ ಇರಬೇಕು. ಅವರ ಹೆಜ್ಜೆಯು ಊರಲ್ಲಿ ಮೂಡಬಾರದಾಗಿತ್ತು ಮತ್ತು ಉಗುಳು ನೆಲಕ್ಕೆ ಬೀಳಬಾರದಿತ್ತು. ಆದಕಾರಣ, ಹಿಂದೆ ಒಂದು ಕಸಬರಕೆಯನ್ನು ಸೊಂಟಕ್ಕೆ ಕಟ್ಟಲಾಗುತ್ತಿತ್ತು ಮತ್ತು ಕುಡಿಕೆಯನ್ನು ಕೊರಳಿಗೆ ಕಟ್ಟಲಾಗುತ್ತಿತ್ತು. ಇಂತಹ ಹೀನಾಯ ಬದುಕಿಗೆ ದೂಡಲ್ಪಟ್ಟಿದ್ದ ಮನುವಾದಿ ವ್ಯವಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಹಾರರು ತವಕದಿಂದ ಕಾಯುತ್ತಿದ್ದರು.

ಯುದ್ಧದ ತಯಾರಿಯನ್ನು ಹರುಪಿನಿಂದ ಮಾಡುತ್ತಿದ್ದಾಗಲೇ ಮಹಾರ್ ಸೈನಿಕರು ಸಂದಿಗ್ಧಕ್ಕೆ ಬಿದ್ದರು. ಬ್ರಿಟಿಷರು ಎಷ್ಟೇ ಒಳ್ಳೆಯವರಾದರೂ ಪರಕೀಯರು. ಆದರೆ ಬಾಜಿರಾಯನು ಎಷ್ಟೇ ಕ್ರೂರಿಯಾದರೂ ನಮ್ಮವನು. ಒಮ್ಮೆ ಬಾಜಿರಾಯನೊಂದಿಗೆ ಮಾತನಾಡಿ, ಯುದ್ಧಕ್ಕೆ ಬದಲು ಸಂಧಾನ ಮಾಡಿಕೊಂಡರೆ ಉತ್ತಮ ಎಂಬ ಆಲೋಚನೆಯು ಅವರಿಗೆ ಬಂತು. ಮಹಾರ್ ರೆಜಿಮೆಂಟ್ ನಾಯಕನಾದ ಸಿದನಾಕನು ಬಾಜಿರಾಯನೊಂದಿಗೆ ಮಾತುಕತೆಯಾಡಲು ನಿರ್ಧರಿಸಿದನು. ಈ ರಹಸ್ಯ ಭೇಟಿಯನ್ನು ಬಾಜಿರಾಯನ ಸೇನಾಪತಿ ಬಾಪೂಗೋಖಲೆ ವ್ಯವಸ್ಥೆ ಮಾಡಿದನು. ಈ ರಹಸ್ಯ ಭೇಟಿಯಲ್ಲಿ ಸಿದನಾಕನು ಯುದ್ಧದ ಸೂಕ್ಷ್ಮತೆಯ ಬಗ್ಗೆ ಬಾಜಿರಾಯನಿಗೆ ತಿಳಿಹೇಳಿದನು. ಆದರೆ ಬಾಜಿರಾಯನು ಥೇಟ್ ಮನುವಾದಿಯಂತೆ ಮಾತಾಡಿದನು. ಈ ಅಸ್ಪಶ್ಯ ಮಹಾರನು ತನ್ನೊಂದಿಗೆ ಮಾತಾಡಲು ಬಂದದ್ದೇ ದೊಡ್ಡ ಅಪರಾಧವೆಂದು ಭಾವಿಸಿದನು. ಈ ಮಹಾರನನ್ನು ಒಳಗೆ ಬಿಟ್ಟವರನ್ನು ಗಲ್ಲುಗಂಬಕ್ಕೆ ಏರಿಸಿ ಎಂದು ಆಜ್ಞೆಮಾಡಿದ!

ಆದರೆ ಸಿದನಾಕನು ತಾಳ್ಮೆ ಕಳೆದುಕೊಳ್ಳಲಿಲ್ಲ. ಇತಿಹಾಸವು ತನ್ನ ಜನಾಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದೆಂದು ತಿಳಿದು ತಾನೇ ಸಂಧಾನಕ್ಕೆ ಮುಂದಾದ. ನಾವು ನಿಮ್ಮ ಪರವಾಗಿ ಹೋರಾಡಲು ತಯಾರಿದ್ದೇವೆ. ನಮಗೆ ನೀವೇನೂ ಕೊಡುವುದು ಬೇಕಾಗಿಲ್ಲ. ಆದರೆ ಗೆಲುವಿನ ನಂತರ ನೀವು ನಮಗೆ ಯಾವ ರೀತಿಯ ಮಾನ ಸನ್ಮಾನಗಳನ್ನು ನೀಡುವಿರಿ ಎಂಬುದನ್ನು ತಿಳಿಸಿ ಎಂದು ವಿನಯಪೂರ್ವಕವಾಗಿ ವಿನಂತಿಸಿದನು. ಕೋಪದಿಂದ ಸಿಡಿಮಿಡಿಗೊಳ್ಳುತ್ತಿದ್ದ ಬಾಜಿರಾಯನು ‘‘ಧರ್ಮಗ್ರಂಥಗಳು ಏನು ಹೇಳುತ್ತವೆಯೋ ಅದರಂತೆ ನಿಮ್ಮನ್ನು ನಡೆಸಿಕೊಳ್ಳುತ್ತೇನೆ. ನೀವು ಅಸ್ಪಶ್ಯರು ಎಂಬುದನ್ನು ಮರೆಯಕೂಡದು’’ ಎಂದು ಗುಡುಗಿದನು! ಈತನು ನಮ್ಮ ದೇಶದವನೇ ಆದರೇನಂತೆ, ಅತ್ಯಂತ ಕ್ರೂರಿಯಾಗಿದ್ದಾನೆ. ಇಂತಹ ಅಮಾನವೀಯ ವ್ಯಕ್ತಿಯ ಪರವಾಗಿ ಹೋರಾಡುವುದಕ್ಕಿಂತ, ಬ್ರಿಟಿಷರ ಪರವಾಗಿ ಹೋರಾಡಿ ಹೊಸ ಸಮಾಜ ನಿರ್ಮಿಸುವುದೇ ಲೇಸು ಎಂದು ಸಿದನಾಕನು ತೀರ್ಮಾನಿಸಿದನು. ಅವನು ಹೊರಟು ಹೋದ ಮೇಲೆ ಆತನು ನಿಂತಿದ್ದ ಜಾಗಕ್ಕೆ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಬಾಜಿರಾಯ!

ಯುದ್ಧವನ್ನು ಗೆಲ್ಲುವ ಸಲುವಾಗಿ ಬಾಜಿರಾಯನು ನೂರೊಂದು ಯಾಗಗಳನ್ನು ಮಾಡಿದ್ದ. ಅಲ್ಲದೆ ಜ್ಯೋತಿಷಿಯು ಹೇಳಿದ್ದ ಸಮಯಕ್ಕೆ ಸರಿಯಾಗಿ ಯುದ್ಧ ಭೂಮಿಗೆ ಹೊರಟ! ನಕ್ಷತ್ರ-ಗ್ರಹಗತಿಗಳನ್ನು ನೋಡಿದ ಜ್ಯೋತಿಷಿಯು ಗೆಲುವು ಬಾಜಿರಾಯನದೆಂದೇ ಭವಿಷ್ಯವನ್ನೂ ನುಡಿದಿದ್ದ! ಆದರೆ ನಡೆದದ್ದೇ ಬೇರೆ!

25,000 ಕುದುರೆ ಸವಾರರು, 5,000 ಕಾಲ್ದಳ ಮತ್ತು 2,000 ಅರಬರನ್ನು ಹೊಂದಿದ್ದ ಬಾಜಿರಾಯನ ಸೈನ್ಯವನ್ನು ಮಹಾರ್ ಸೈನಿಕರು ಕೇವಲ 12 ಗಂಟೆಗಳ ಅವಧಿಯಲ್ಲಿ ಇರುವೆಗಳಂತೆ ಹೊಸಕಿಹಾಕಿ ಧೂಳೀಪಟ ಮಾಡಿದರು! ಬಾಜಿರಾಯನ ಮಗ ಸತ್ತುಹೋದ. ಬಾಜಿರಾಯ ಮತ್ತು ಗೋಖಲೆ ಪ್ರಾಣ ಉಳಿಸಿಕೊಳ್ಳಲು ರಣರಂಗದಿಂದ ತಲೆತಪ್ಪಿಸಿಕೊಂಡು ಓಡಿಹೋದರು. ಭೀಮಾನದಿ ತೀರದ ಕೋರೆಗಾಂವ್ ಎಂಬಲ್ಲಿ ಡಿಸೆಂಬರ್ 31, 1817ರ ರಾತ್ರಿ ಆರಂಭವಾದ ಯುದ್ಧವು ಮರುದಿನ ಅಂದರೆ ಜನವರಿ 1, 1818ರ ಬೆಳಗ್ಗೆ ಮುಗಿದೇಹೋಯಿತು! ವೀರ ಮಹಾರ್ ಸೈನಿಕರು ಬಾಜಿರಾಯನ ದುರಾಡಳಿತವನ್ನು ಕೊನೆಗೊಳಿಸಿ, ಪುಣೆಯ ಜನರಿಗೆ ಹೊಸ ವರ್ಷದ ಕೊಡುಗೆಯನ್ನಾಗಿ ನೀಡಿದರು. ಮಹಾರ್ ಸೈನಿಕರ ಪೈಕಿ ಕೇವಲ 21 ಜನರು ಮಾತ್ರ ಅಸುನೀಗಿದರು! ಇಂತಹ ಪವಾಡವು ನಡೆದದ್ದಾದರೂ ಹೇಗೆ? ಇಡೀ ಜಗತ್ತಿನ ಇತಿಹಾಸದಲ್ಲಿ ಇಂತಹ ಪವಾಡಸದೃಸ್ಯ ಯುದ್ಧವು ಮತ್ತೊಂದು ನಡೆದಿಲ್ಲ! ಆದರೆ ಇದು ಹೇಗೆ ಸಾಧ್ಯವಾಯಿತು?

ಬಾಜಿರಾಯನಿಂದ ಅವಮಾನಿತನಾಗಿ ಬಂದ ಸಿದನಾಕನು ನಡೆದದ್ದೆಲ್ಲವನ್ನೂ ತನ್ನ ಒಡನಾಡಿ ಸೈನಿಕರಿಗೆ ತಿಳಿಸಿದ. ಸಾವಿರಾರು ವರ್ಷಗಳ ಅವಮಾನದಿಂದ ಕುದಿಯುತ್ತಿದ್ದ ಮಹಾರ್‌ರಿಗೆ ಗಾಯದ ಮೇಲೆ ಬರೆಹಾಕಿದಂತಾಯಿತು! ತಾವು ಅವನಿಂದ ಯಾವುದೇ ಪದವಿ, ಪುರಸ್ಕಾರ, ಸಂಭಾವನೆಗಳನ್ನು ಕೇಳಿರಲಿಲ್ಲ! ಎಲ್ಲಾ ಅವಮಾನಗಳನ್ನು ಮರೆತು ತಾವಾಗಿಯೇ ಮುಂದೆ ಬಂದರೂ ಇಂತಹ ಅವಮಾನವೆ? ಇಂತಹ ಪರಮ ನೀಚನ ರಾಜ್ಯವನ್ನು ಉಳಿಸಬಾರದೆಂದು ಎಲ್ಲಾ ಮಹಾರರು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡಿದರು! ಸಾವಿರಾರು ವರ್ಷಗಳ ಮೂದಲಿಕೆ ಮತ್ತು ಅವಮಾನಗಳನ್ನು ಇದು ತಮ್ಮ ಕರ್ಮ ಮತ್ತು ಹಿಂದಿನ ಜನ್ಮದ ಪಾಪದ ಫಲವೆಂದು ಭಾವಿಸಿಕೊಂಡು ಮಹಾರರು ಬದುಕುತ್ತಿದ್ದರು. ಆದರೆ ಬ್ರಿಟಿಷ್ ಸೈನ್ಯದಲ್ಲಿನ ಸ್ವತಂತ್ರ-ಸ್ವಾಭಿಮಾನದ ಜೀವನವು ಅವರ ಹಳೆಯ ನಂಬಿಕೆಯನ್ನು ಮತ್ತು ಮನಸ್ಥಿತಿಯನ್ನು ನಾಶಮಾಡಿತು; ನಾವು ಯಾರಿಗೂ ಕಡಿಮೆಯಿಲ್ಲ ಎಂಬ ಹೊಸ ಆತ್ಮವಿಶ್ವಾಸವನ್ನು ತುಂಬಿಸಿತ್ತು! ಅವರಲ್ಲಿ ಮನೆಮಾಡಿದ್ದ ಗುಲಾಮನ ಭಾಷೆಯು ಮಾಯವಾಗಿ ಸ್ವಾಭಿಮಾನದ ಭಾಷೆಯು ಹುಟ್ಟಿಕೊಂಡಿತ್ತು! ಬಾಜಿರಾಯನು ಇದನ್ನು ಅರಿಯದೆ ತಪ್ಪುಮಾಡಿದ! ನಾನು ಇನ್ನು ಮುಂದೆ ನಿಮ್ಮನ್ನು ಮನುಷ್ಯರಂತೆ ಕಾಣುತ್ತೇನೆ ಎಂದು ಒಂದೇ ಒಂದು ವಾಕ್ಯ ಹೇಳಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತು! ಆದರೆ ಮನುವಾದಿ ಬಾಜಿರಾಯನಿಗೆ ದೇಶಕ್ಕಿಂತ ತನ್ನ ಜಾತಿ ಮತ್ತು ಅವಮಾನವೀಯ ಧರ್ಮವೇ ಮುಖ್ಯವಾಗಿತ್ತು!

ಇಂಗ್ಲೆಂಡ್‌ನ ವಿಕ್ಟೋರಿಯಾ ಮಹಾರಾಣಿಗೆ ಯುದ್ದದ ಗೆಲುವು ಖುಷಿಯನ್ನು ನೀಡಿತು. ಕ್ಯಾಪ್ಟನ್ ಸ್ಟಾಂಟನ್‌ನನ್ನು ಕರೆದು ಮಹಾರ್ ಸೈನಿಕರು ಏನು ಕೇಳಿದರೂ ಕೊಡುಗೆಯನ್ನು ನೀಡಿ ಎಂದು ಸಲಹೆ ನೀಡಿದರು. ಆಗ ಸಿದನಾಕನು ಮಂತ್ರಿ ಪದವಿ, ಲಕ್ಷಾಂತರ ಹಣ, ಚಿನ್ನ, ಅರಮನೆ, ಸಂಪತ್ತು, ಭೂಮಿ ಏನು ಕೇಳಿದರೂ ಬ್ರಿಟಿಷರು ಕೊಡಲು ಸಿದ್ಧರಿದ್ದರು. ಆದರೆ ಸಿದನಾಕನು ವಿದ್ಯೆಯಿಲ್ಲದ ಕಾರಣ ಭಾರತದ ಬಹು ಜನರು ಗುಲಾಮರಾಗಿದ್ದಾರೆ. ಈ ಗುಲಾಮಗಿರಿಯ ಬಿಡುಗಡೆಯಾಗಲು ದೇಶದ ಎಲ್ಲಾ ಜನರಿಗೂ ಸಾರ್ವತ್ರಿಕ ಶಿಕ್ಷಣ ನೀಡುವಂತೆ ಬೇಡುತ್ತಾರೆ. ವೈಯಕ್ತಿಕವಾಗಿ ಏನನ್ನು ಕೇಳದೆ ಸಮಾಜಕ್ಕಾಗಿ ಕೋರಿಕೊಂಡ ಇವರ ಆದರ್ಶ ಶ್ರೇಷ್ಠವಾದದು. ಅವರ ಆಸೆಯಂತೆ ದೇಶದ ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ಶಿಕ್ಷಣ ನೀಡುತ್ತೇವೆ ಎಂದು ಬ್ರಿಟಿಷರು ಭರವಸೆ ನೀಡಿದರು. ಈ ಯುದ್ಧದ ಪರಿಣಾಮವೇನೆಂದರೆ ದೇಶದ ಎಲ್ಲಾ ಪ್ರಜೆಗಳಿಗೂ ಸಾರ್ವತ್ರಿಕ ಶಿಕ್ಷಣ ನೀಡುವ ಯೋಜನೆ ಜಾರಿಗೆ ಬರಲು ಕಾರಣವಾಯಿತು. ಈಗ ವಿದ್ಯೆ ಪಡೆದಿರುವ ದೇಶದ ಎಲ್ಲಾ ನಾಗರಿಕರು ಮಹಾರ್ ರೆಜಿಮೆಂಟ್‌ನ್ನು ಗೌರವಿಸಬೇಕು. ಪೂನಾ ಜಿಲ್ಲೆಯ ಕೋರೆಗಾಂವ್‌ನಲ್ಲಿ, ಯುದ್ಧದಲ್ಲಿ ಮಡಿದ 21 ಮಹಾರ್ ಸೈನಿಕರ ನೆನಪಿನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಜನವರಿ ಒಂದನೇ ದಿನದಂದು, ಬಾಬಾಸಾಹೇಬ್ ಅಂಬೇಡ್ಕರರು ಈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ವೀರಯೋಧರಿಗೆ ಗೌರವ ಸಲ್ಲಿಸುತ್ತಿದ್ದರು! ಈ ಸ್ಮಾರಕವು ಅನೇಕ ಪಾಠಗಳನ್ನು ಹೇಳುತ್ತದೆ. ಎಲ್ಲಿಯತನಕ ಅಪಮಾನಿತ ಜನರು ತಮ್ಮ ಹೀನಾಯ ಬದುಕನ್ನು ತಮ್ಮ ಕರ್ಮವೆಂದು ಭಾವಿಸಿರುತ್ತಾರೋ ಅಲ್ಲಿಯತನಕ ಅವರು ಗುಲಾಮರಾಗಿಯೇ ಉಳಿದಿರುತ್ತಾರೆ. ಆದರೆ ಈ ಗುಲಾಮಗಿರಿಯನ್ನು ತಾವು ಬದಲಾಯಿಸಲು ಸಾಧ್ಯವೆಂದು ಮನಗಂಡ ಕ್ಷಣದಲ್ಲಿ ಅವರ ಗುಲಾಮಗಿರಿಯ ಕೊನೆ ಆರಂಭವಾಗುತ್ತದೆ. ತಮ್ಮ ದುಸ್ಥಿತಿಗೆ ತಮ್ಮನ್ನೇ ನಿಂದಿಸಿಕೊಳ್ಳುವುದನ್ನು ನಿಲ್ಲಿಸಿ, ನಮ್ಮ ಬಿಡುಗಡೆ ನಮ್ಮ ಕೈಯಲ್ಲಿದೆ ಎಂದು ಅರಿತ ದಿನವೇ ಹೊಸ ಬದುಕು ಆರಂಭವಾಗುತ್ತದೆ! ಮಾನಸಿಕ ಗುಲಾಮಗಿರಿಯು ಕೊನೆಯಾದ ಕ್ಷಣದಲ್ಲೇ ರಾಜಕೀಯ ಗುಲಾಮುಗಿರಿಯು ಕೊನೆಯಾಗಲು ಆರಂಭವಾಗುತ್ತದೆ. ಗುಲಾಮರು ಆಳುವ ದೊರೆಗಳಂತೆ ಮಾತಾಡುವುದನ್ನು ಕಲಿತಾಗಲೇ ಪರಿವರ್ತನೆ ಶುರುವಾಗುತ್ತದೆ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಮಹದೇವ ಕುಮಾರ್ ಡಿ.

contributor

Similar News