ಕಸ ವಿಲೇವಾರಿ ಘಟಕದಿಂದ ರೋಗಗಳಿಗೆ ತುತ್ತಾಗುತ್ತಿರುವ ಸಿಂಧನಕೇರಾ ಗ್ರಾಮಸ್ಥರು
ಬೀದರ್ : ಹುಮನಾಬಾದ್ ತಾಲೂಕಿನ ಸಿಂಧಕೇರಾ ಗ್ರಾಮದ ಸಮೀಪ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದ್ದು, ಇದರಿಂದಾಗಿ ಸಿಂಧಕೇರಾ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ರೋಗಗಳು ತಗಲಿ ಪರಿತಪಿಸುವಂತಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಈ ಸ್ಥಳದಲ್ಲಿ ಸುಮಾರು 15 ರಿಂದ 20 ವರ್ಷಗಳಿಂದ ಕಸ ವಿಲೇವಾರಿ ಮಾಡಲಾಗುತ್ತಿದೆ. ಹುಮನಾಬಾದ್ ಪಟ್ಟಣದ ಸಂಪೂರ್ಣ ಕಸವನ್ನು ಈ ಸ್ಥಳಕ್ಕೆ ತಂದು ಸುರಿಯಲಾಗುತ್ತಿದೆ. ಇದು ಸಿಂಧನಕೇರಾ ಗ್ರಾಮದ ಹತ್ತಿರವೇ ಇರುವ ಕಾರಣದಿಂದಾಗಿ ಗ್ರಾಮಸ್ಥರು ಆನಾರೋಗ್ಯದಿಂದ ನರಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ಬದುಕುತ್ತಿದ್ದಾರೆ.
ಕಸ ವಿಲೇವಾರಿ ಘಟಕದಲ್ಲಿ ಕಸ ಪುಡಿ ಮಾಡುವ ಯಂತ್ರಗಳಿದ್ದರೂ ಕೂಡ ಅವುಗಳು ಉಪಯೋಗಕ್ಕೆ ಬಾರದಂತಾಗಿವೆ. ಯಾವಾಗಲು ಆ ಯಂತ್ರಗಳು ಬಂದ್ ಇರುತ್ತವೆ. ಅಲ್ಲಿ ಕೃಷಿ ಹೊಂಡ, ಫಿಲ್ಟರ್ ಮಷಿನ್, ಗೊಬ್ಬರ ಶೇಖರಿಸಿಡುವ ಗೋದಾಮು ಹೀಗೆ ಎಲ್ಲ ವ್ಯವಸ್ಥೆ ಇದ್ದರೂ ಕೂಡ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ. ಕಸವನ್ನು ಅಲ್ಲಿಯೇ ಸುಡಲಾಗುತ್ತದೆ. ಹಾಗೆಯೇ ಅಪರಿಚಿತ ವ್ಯಕ್ತಿಗಳು ಮೃತಪಟ್ಟರೆ ಅದೇ ಜಾಗದಲ್ಲಿ ತಂದು ಸುಡಲಾಗುತ್ತದೆ. ಅದೇ ರೀತಿ ಯಾವುದೇ ಪ್ರಾಣಿ, ಪಕ್ಷಿಗಳು ಸತ್ತರೂ ಕೂಡ ಅದೇ ಸ್ಥಳಕ್ಕೆ ತಂದು ಬಿಸಾಡಿ ಹೋಗಲಾಗುತ್ತದೆ. ಇದರಿಂದಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
ಆ ಗ್ರಾಮದಲ್ಲಿ ಕಸದ ದುರ್ವಾಸನೆ ಹೊಡೆಯುತ್ತಿರುತ್ತದೆ. ಸುಮಾರು ವರ್ಷಗಳಿಂದ ಅದನ್ನೇ ರೂಢಿಸಿಕೊಂಡಿರುವ ಗ್ರಾಮಸ್ಥರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕಸ ವಿಲೇವಾರಿ ಘಟಕದಿಂದ ಪರಿಸರದ ಮೇಲೂ ಕೂಡ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಬಹುದು. ಈ ಬಗ್ಗೆ ಗ್ರಾಮಸ್ಥರು ಅದೆಷ್ಟು ಭಾರಿ ಪ್ರತಿಭಟನೆ ಮಾಡಿದರೂ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಈ ಕಸ ವಿಲೇವಾರಿ ಘಟಕ ಪರಿಣಾಮದಿಂದ ಆನೆಕಾಲು, ಡೆಂಗಿ, ಟಿಬಿ ಹಾಗೂ ಇತರ ರೋಗಗಳಿಂದ ಇಲ್ಲಿನ ಜನ ತತ್ತರಿಸಿದ್ದಾರೆ. 10 ವರ್ಷಗಳ ಅವಧಿಯಲ್ಲಿ ಸುಮಾರು 23 ಆನೆಕಾಲು ರೋಗಗಳು ಈ ಊರಲ್ಲಿ ಪತ್ತೆಯಾಗಿವೆ. ಈ ಎಲ್ಲ ಸಮಸ್ಯೆಗಳಿಂದ ಮಕ್ಕಳ ಬೆಳವಣಿಗೆ ಕೂಡ ಕೂಗ್ಗುತ್ತಿದೆ ಎಂದು ಗ್ರಾಮದ ನಿವಾಸಿಗಳು ಹೇಳುತ್ತಿದ್ದಾರೆ.
ಈ ಕಸ ವಿಲೇವಾರಿ ಘಟಕವು ಸಿಂಧನಕೇರಾ ಗ್ರಾಮ ಬಿಟ್ಟು ಜನ ರಹಿತ ಪ್ರದೇಶದಲ್ಲಿ ಸ್ಥಳಾಂತರ ಮಾಡಿದರೆ, ಆ ಗ್ರಾಮಸ್ಥರು ಆರೋಗ್ಯವಂತರಾಗಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ಕಸ ವಿಲೇವಾರಿ ಘಟಕವನ್ನು ಸಿಂಧನಕೇರಾ ಗ್ರಾಮ ಬಿಟ್ಟು ಜನ ರಹಿತ ಪ್ರದೇಶದಲ್ಲಿ ಸ್ಥಳಾಂತರ ಮಾಡಿಎಂದು ಗ್ರಾಮಸ್ಥರು ಪತ್ರ ನೀಡಿದ್ದಾರೆ. ನಾವು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದೇವೆ. ಆದರೆ ಇದರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ನಿರ್ದೇಶನ ಬಂದರೆ ಅದರ ಪ್ರಕಾರ ನಾವು ಕೆಲಸಕ್ಕೆ ಮುಂದುವರಿಯುತ್ತೇವೆ.
-ಮೀನಾಕುಮಾರಿ, ಮುಖ್ಯ ಅಧಿಕಾರಿ, ಟಿಎಂಸಿ ಹುಮನಾಬಾದ್
ಕಸ ವಿಲೇವಾರಿ ಘಟಕದಲ್ಲಿ ಬಿಸಾಡಿರುವ ಸತ್ತ ಪ್ರಾಣಿ, ಪಕ್ಷಿಗಳ ಮಾಂಸವನ್ನು ನಮ್ಮ ಊರಿನ ನಾಯಿಗಳು ಊರಲ್ಲಿ ಎಳೆದು ತರುತ್ತವೆ. ನಮ್ಮ ಊರಿನ ಜನ ರೋಗಗಳಿಂದ ಬೇಸತ್ತು ಹೋಗಿದ್ದಾರೆ. ಈ ಘಟಕವನ್ನು ಸ್ಥಳಾಂತರಿಸಲು ಬೀದರ್ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಉಪಯೋಗವಾಗಲಿಲ್ಲ. ಇದು ಸ್ಥಳಾಂತರ ಮಾಡದಿದ್ದರೆ ನೀರಿನ ಟ್ಯಾಂಕಲ್ಲಿ ವಿಷ ಹಾಕಿ ಕೊಡಿ, ಗ್ರಾಮಸ್ಥರೆಲ್ಲರೂ ಒಂದೇ ಸಮಯಕ್ಕೆ ಸಾಯುತ್ತೇವೆ. ನಂತರ ತಾವು ನೆಮ್ಮದಿಯಾಗಿ ಅಧಿಕಾರ ನಡೆಸಿ.
-ಯುವರಾಜ್ ಐಹೊಳ್ಳಿ, ಸಿಂಧನಕೇರಾ ಗ್ರಾಮಸ್ಥ
ತ್ಯಾಜ್ಯ ವಿಲೇವಾರಿ ಘಟಕವು ಸಿಂಧನಕೇರಾ ಗ್ರಾಮದ ಹತ್ತಿರವೇ ಸ್ಥಾಪಿಸಿ 15-20 ವರ್ಷಗಳಾಗಿವೆ. ಅಲ್ಲಿ ಯಾವುದೇ ರೀತಿಯ ಸ್ವಚ್ಛತೆ ಕಾಪಾಡುತ್ತಿಲ್ಲ. ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಸುಮಾರು ರೋಗಗಳು ಹರಡುತ್ತಿವೆ. ಹುಟ್ಟುವ ಮಕ್ಕಳು ಕೂಡ ಅಂಗವಿಕಲರಾಗಿ ಹುಟ್ಟುತ್ತಿದ್ದಾರೆ. ಇದರ ವಿರುದ್ಧ ಎಷ್ಟೇ ಸಲ ಧ್ವನಿ ಎತ್ತಿದರೂ ಕೂಡ, ಈ ಗ್ರಾಮಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದರ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಪುರಸಭೆ ಎದುರು ಧರಣಿ ಮಾಡಲಾಗುತ್ತದೆ.
-ಭೀಮರೆಡ್ಡಿ, ಸಾಮಾಜಿಕ ಕಾರ್ಯಕರ್ತ, ಸಿಂಧನಕೇರಾ