ಒಬಿಸಿ-ಅಲ್ಪಸಂಖ್ಯಾತರ ವಸತಿ ಶಾಲಾ ಮಕ್ಕಳಿಗೆ ಅಂಟಿದ ಚರ್ಮರೋಗ
ಬೆಂಗಳೂರು: ‘ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಸತಿ ಶಾಲಾ ಮಕ್ಕಳಲ್ಲಿ ಚರ್ಮ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ವರ್ಷಕ್ಕೆ ಮೂರು ಬಾರಿ ಚರ್ಮರೋಗ ತಜ್ಞರಿಂದ ಮಕ್ಕಳನ್ನು ತಪಾಸಣೆ ನಡೆಸಬೇಕು’ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯ ಸರಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.
ಶುಕ್ರವಾರ ವಿಧಾನ ಮಂಡಲ ಉಭಯ ಸದನಗಳಲ್ಲಿ ‘ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ’ ಸಮಿತಿಯ ಎರಡನೇ ವರದಿಯನ್ನು ಮಂಡಿಸಲಾಯಿತು. ಇದರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮುದಾಯದ ಏಳಿಗೆಗಾಗಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಲಾಗಿದೆ.
ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ಹೆಚ್ಚಾಗಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ, ಚರ್ಮರೋಗ ಕಂಡುಬರುತ್ತಿರುವುದು ಆತಂಕ ಹೆಚ್ಚಿಸಿದೆ. ಹೀಗಾಗಿ, ಆರೋಗ್ಯ ಇಲಾಖೆಯಿಂದ ವರ್ಷಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಚರ್ಮರೋಗ ತಜ್ಞರಿಂದ ತಪಾಸಣೆ, ಚರ್ಮದ ಜೊತೆಗೆ ಔಷಧಿಗಳನ್ನು ಒದಗಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ಪ್ರತಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಸುಮಾರು 150 ರಿಂದ 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ಅಥವಾ 15 ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸುವಂತೆಯೂ ಸಮಿತಿ ಸೂಚಿಸಿದೆ.
ವಸತಿ ಶಾಲೆಗಳಲ್ಲಿರುವ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಕಣ್ಣಿಗೆ ಬಹಳ ಸಮಸ್ಯೆ ಆಗುತ್ತಿದೆ. ಹಾಗಾಗಿ ಕಡ್ಡಾಯವಾಗಿ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸುವಂತಹ ಕಾರ್ಯಕ್ರಮ ಮಾಡಿದರೆ ಉಪಯೋಗವಾಗಲಿದೆ.
ಅದೇ ರೀತಿ, ಎಪ್ರಿಲ್‌ನಿಂದ ಜುಲೈವರೆಗೆ ಈ ನಾಲ್ಕು ತಿಂಗಳಲ್ಲಿ ಆಕಸ್ಮಿಕವಾಗಿ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ‘ಕವಸಾಕಿ’ ಕಾಯಿಲೆಯಿಂದ ಉರಿಯೂತ ಸಮಸ್ಯೆ ಜಾಸ್ತಿಯಾಗಿದೆ. ಹಾಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಐವಿಜಿ ಮಾತ್ರೆಗಳನ್ನು ಸಿಗುವಂತೆ ವ್ಯವಸ್ಥೆ ಮಾಡಲು ಸಮಿತಿಯ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.
ಕ್ರೈಸ್‌ನ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ವಸತಿ ಶಾಲೆಗಳ ಮಕ್ಕಳಿಗೆ ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳನ್ನು ಮೂರು ತಿಂಗಳಿಗೊಮ್ಮೆ ಮಾಡಬೇಕು ಎಂದು ಸಮಿತಿ ಶಿಫಾರಸಿನಲ್ಲಿ ಉಲ್ಲೇಖಿಸಿದೆ.