ನೆರವಿನ ನಿರೀಕ್ಷೆಯಲ್ಲಿ ಪ್ರತಿಭಾವಂತ ಕರಾಟೆ ಪಟು ಮುಹಮ್ಮದ್ ತಾಹಿರ್
ಬೆಂಗಳೂರು: ಆರ್ಥಿಕ ಸಮಸ್ಯೆಯ ನಡುವೆಯು ತನ್ನ ಪ್ರತಿಭೆ, ಸಾಮರ್ಥ್ಯ ಹಾಗೂ ಕುಟುಂಬದ ಸಹಕಾರದೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಪಂದ್ಯಾಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಪ್ರತಿಭಾವಂತ ಉದಯೋನ್ಮುಖ ಕರಾಟೆಪಟು ಮುಹಮ್ಮದ್ ತಾಹೀರ್ ಆಮಿರಿ ಮತ್ತಷ್ಟು ಸಾಧನೆ ಮಾಡಲು ಪ್ರಾಯೋಜಕರ ನೆರವನ್ನು ಎದುರು ನೋಡುತ್ತಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ಬಳಿಯಿರುವ ಸುಲ್ತಾನ್ ಪಾಳ್ಯದಲ್ಲಿರುವ 10ನೇ ತರಗತಿ ಓದುತ್ತಿರುವ ಮುಹಮ್ಮದ್ ತಾಹೀರ್ ಆಮಿರಿ ಬಾಲ್ಯದಿಂದಲೇ ಕರಾಟೆ ಹಾಗೂ ಟಚ್ ಫೈಟಿಂಗ್ ಸ್ಪರ್ಧೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕರಾಟೆಯೊಂದಿಗೆ ಶಿಕ್ಷಣದಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದಾರೆ. ಅಷ್ಟೇ, ಅಲ್ಲದೇ, ಪವಿತ್ರ ಕುರ್‌ಆನ್ ಹಿಫ್ಝ್(ಕಂಠಪಾಠ) ಅಧ್ಯಯನ ವನ್ನು ಮಾಡುತ್ತಿದ್ದಾರೆ.
ತಾಹೀರ್ ಆಮಿರಿ ಅವರ ಪ್ರಯತ್ನಕ್ಕೆ ಕುಟುಂಬದ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ. ಇಲೆಕ್ಟ್ರೀಶಿಯನ್ ಕೆಲಸ ಮಾಡುವ ತಂದೆ ಮುಹಮ್ಮದ್ ಅಕ್ರಮ್ ಪಾಷಾ ಹಾಗೂ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ ರಿಹಾನಾ ಪರ್ವೀನ್ ತಮ್ಮ ಆದಾಯದ ಮೂಲಕವೇ ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ.
ಈಗಾಗಲೇ ಮಲೇಷಿಯಾ, ಇಂಡೋನೇಷ್ಯಾದಲ್ಲಿ ನಡೆದಂತಹ ಅಂತರ್‌ರಾಷ್ಟ್ರೀಯ ಪಂದ್ಯಾಟಗಳಲ್ಲಿ ಸ್ಪರ್ಧಿಸಿ ಚಿನ್ನದ ಪದಕಗಳು, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಾಗೂ ಚೆನ್ನೈಯಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾಟದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ.
ಅಷ್ಟೇ ಅಲ್ಲದೇ, ಬೇರೆ ಬೇರೆ ರಾಜ್ಯಗಳು ಹಾಗೂ ಜಿಲ್ಲಾ ಮಟ್ಟದ ಪಂದ್ಯಾಟಗಳಲ್ಲಿ ಪಾಲ್ಗೊಂಡು ಸುಮಾರು 49 ಪದಕ ಹಾಗೂ ಪಾರಿತೋಷಕಗಳನ್ನು ತಾಹೀರ್ ತಮ್ಮದಾಗಿಸಿಕೊಂಡಿದ್ದಾರೆ. ಇದೇ ತಿಂಗಳು 20ರಂದು ಪಾಂಡಿಚೇರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲೂ ತಾಹೀರ್ ಆಮಿರಿ ಭಾಗವಹಿಸಲಿದ್ದಾರೆ.
ಈ ಹಿಂದೆ ದುಬೈನಲ್ಲಿ ನಡೆದಂತಹ ಅಂತರ್‌ರಾಷ್ಟ್ರೀಯ ಪಂದ್ಯಾಟದಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಭಾಗವಹಿಸಲು ತಾಹೀರ್ ಆಮಿರಿಗೆ ಸಾಧ್ಯವಾಗಿರಲಿಲ್ಲ. ಇದೀಗ, ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ. ಮುಂದಿನ ವರ್ಷ ಜಪಾನ್ ದೇಶದಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೂ ತಾಹೀರ್ ಆಮಿರಿ ಆಯ್ಕೆಯಾಗಿದ್ದಾರೆ.
ದಾನಿಗಳ ನೆರವು ಸಿಕ್ಕಿದರೆ ಮಾತ್ರ ಅವರು ಈ ಪಂದ್ಯಾಟದಲ್ಲಿ ಭಾಗವಹಿಸಲು ಸಾಧ್ಯ. ನಮ್ಮ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪೋಷಕರು ಅಸಹಾಯತೆ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಹಾಗೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಹೆಬ್ಬಯಕೆಯನ್ನು ತಾಹೀರ್ ಆಮಿರಿ ಹೊಂದಿದ್ದಾರೆ.
ಯುವಕರು ಕ್ರಿಕೆಟ್ ನತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಈ ಕಾಲಘಟ್ಟದಲ್ಲಿ ಕರಾಟೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಎಲೆ ಮರಿ ಕಾಯಿಯಂತೆ ಇರುವ ತಾಹೀರ್ ಆಮಿರಿಗೆ ಅಗತ್ಯ ಪ್ರೋತ್ಸಾಹ ಹಾಗೂ ನೆರವು ಸಿಕ್ಕಿದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಬಲ್ಲರು. ನೆರವು ನೀಡಲು ಇಚ್ಛಿಸುವವರು ಮುಹಮ್ಮದ್ ಅಕ್ರಮ್ ಪಾಷಾ ಅವರ ಮೊಬೈಲ್ ಸಂಖ್ಯೆ: 9886983033 ಅನ್ನು ಸಂಪರ್ಕಿಸಬಹುದು.
ಆರ್ಥಿಕ ಪರಿಸ್ಥಿತಿ, ನೆರವು ಹಾಗೂ ಮಾರ್ಗದರ್ಶನದ ಕೊರತೆಯಿಂದ ಮಕ್ಕಳಲ್ಲಿನ ಪ್ರತಿಭೆ ಮರಿಚಿಕೆಯಾಗಿ ಉಳಿದು ಬಿಡುತ್ತದೆ. ನನ್ನ ಮಗನಿಗೆ ನಮ್ಮಿಂದ ಸಾಧ್ಯವಾದ ಸಹಕಾರ ಮಾಡುತ್ತಿದ್ದೇವೆ. ಆದರೆ, ಅಂತರ್‌ರಾಷ್ಟ್ರೀಯ ಮಟ್ಟದಂತಹ ಕ್ರೀಡಾಕೂಟಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವು ಇದೆ. ಸರಕಾರ ಹಾಗೂ ದಾನಿಗಳು ನೆರವು ನೀಡಿದರೆ ಮಾತ್ರ ಆತನ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತದೆ.
-ಮುಹಮ್ಮದ್ ಅಕ್ರಮ್ ಪಾಷ, ತಂದೆ
ಕರಾಟೆಯಲ್ಲಿ ಮಾನಸಿಕ ಏಕಾಗ್ರತೆ ಹಾಗೂ ದೈಹಿಕ ದೃಢತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕಲಿಕೆಯೊಂದಿಗೆ ಕ್ರೀಡೆಯಲ್ಲೂ ನಮ್ಮ ಮಗ ಚುರುಕಾಗಿದ್ದಾನೆ. ದೇಶದ ಗೌರವವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿರುವ ಆತನಿಗೆ ಅಗತ್ಯ ನೆರವು ಸಿಗಬಹುದು ಎಂಬ ನಂಬಿಕೆಯಿದೆ. ನಮ್ಮ ದೇಶದ ಧ್ವಜ ಅಂತರ್ ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಎತ್ತರದಲ್ಲಿ ಹಾರಬೇಕು ಅನ್ನೋದು ನಮ್ಮ ಬಯಕೆ.
-ರಿಹಾನಾ ಪರ್ವೀನ್, ತಾಯಿ
ಮುಹಮ್ಮದ್ ತಾಹೀರ್ ಆಮಿರಿ ಸಾಧನೆ
2022ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಚಿನ್ನದ ಪದಕ
2023ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಚಿನ್ನದ ಪದಕ.
2024ರಲ್ಲಿ ದಿಲ್ಲಿ ಯಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಚಿನ್ನದ ಪದಕ.
2024ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಎರಡು ಚಿನ್ನದ ಪದಕ.
2025ರಲ್ಲಿ ಮಲೇಷಿಯಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ.