‘ಸಿಇಸಿ’ ಆಯ್ಕೆ ಪ್ರಕ್ರಿಯೆಯೇ ಬದಲಾಗಬೇಕಿದೆ
ಸಿಇಸಿ ನೇಮಕ ವಿಧಾನದಲ್ಲೇ ಲೋಪವಿದೆ. ಇದರಲ್ಲಿ ಸರಕಾರವೇ ನಿರ್ಣಾಯಕವಾಗಿದೆ. ನೆಪ ಮಾತ್ರಕ್ಕೆ ವಿರೋಧ ಪಕ್ಷದ ನಾಯಕರು ಇರುತ್ತಾರೆ. ಅವರ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಪ್ರಧಾನಿ, ಸಚಿವರ ನಿಲುವಿಗೆ ಆಕ್ಷೇಪ ಎತ್ತಬಹುದು ಅಷ್ಟೇ. ಅಂತಿಮವಾಗಿ ಉಳಿಯುವುದು ಬಹುಮತದ ನಿರ್ಣಯ. ಇದು ಬದಲಾಗದಿದ್ದರೆ ‘ಹೌದಪ್ಪ’ಗಳೇ ಸಿಇಸಿ ಇಸಿಗಳಾಗುತ್ತಾರೆ. ಈ ಬಗ್ಗೆ ರಾಹುಲ್ ಗಾಂಧಿ ಮತ್ತಿತರ ವಿರೋಧ ಪಕ್ಷಗಳ ನಾಯಕರು ಆಲೋಚಿಸಬೇಕಿದೆ.
‘ಇಲೆಕ್ಷನ್ ಕಮಿಷನ್ ಆಫ್ ಇಂಡಿಯಾ’ (ಇಸಿಐ) ಅನುಮಾನಗಳ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಪಾರದರ್ಶಕವಾಗಿ, ನಿಷ್ಪಕ್ಷವಾಗಿ ಇರಬೇಕಿದ್ದ ಚುನಾವಣಾ ಆಯೋಗವು, ಸಿಬಿಐ- ಈ.ಡಿ. ಇನ್ನಿತರ ಸಂಸ್ಥೆಗಳಂತೆ ಸರಕಾರದ ‘ಕಪಿ ಮುಷ್ಟಿ’ಯಲ್ಲಿ ಸಿಕ್ಕಿಕೊಂಡಂತೆ ಮೇಲ್ನೋಟಕ್ಕೇ ಕಾಣುತ್ತಿದ್ದು, ಸಂಸ್ಥೆಯ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಗೆ ಭಂಗ ಬಂದಿದೆ.
ಚುನಾವಣೆ ಅಕ್ರಮ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆಯೋಗ ಒದ್ದಾಡುತ್ತಿದೆ. ‘‘ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಅಕ್ರಮ ನಡೆದಿವೆ. ಆಯೋಗವೇ ಬೆಂಬಲವಾಗಿ ನಿಂತಿದೆ’’ ಎಂದು ಅವರು ಆಪಾದಿಸಿದ್ದಾರೆ. ರಾಹುಲ್ ಬರೀ ಬಾಯಿ ಮಾತಿಗೆ ಆರೋಪ ಮಾಡಿಲ್ಲ. ಅಗತ್ಯ ದಾಖಲೆ ಒದಗಿಸಿದ್ದಾರೆ. ಈ ವಿಷಯವನ್ನು ಪ್ರತಿಷ್ಠೆ ಮಾಡಿಕೊಂಡು ಆಯೋಗವು ಸಂಘರ್ಷದ ದಾರಿ ಹಿಡಿದಿದೆ.
ಅಕ್ರಮದ ಬಗ್ಗೆ ರಾಹುಲ್ ದನಿ ಎತ್ತಿದಾಗ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ‘ಇದೊಂದು ಸಾಮಾನ್ಯ ಆರೋಪ ಇರಬಹುದು. ರಾಜಕಾರಣಿಗಳು ಬಾಯಿಗೆ ಬಂದಂತೆ ಆರೋಪ ಮಾಡಿ, ಪಲಾಯನ ಮಾಡುವಂತೆ (ಹಿಟ್ ಆಂಡ್ ರನ್ ಕೇಸ್) ಇದೂ ಇರಬಹುದು’ ಎಂದು ಎಲ್ಲರೂ ಭಾವಿಸಿದ್ದರು. ಅದಕ್ಕೆ ಅವರ ನಡೆಯೂ ಕಾರಣವಾಗಿತ್ತು. ರಾಹುಲ್ ಗಾಂಧಿ ಎರಡು ದಶಕದ ಹಿಂದೆ ಚುನಾವಣಾ ‘ಅಖಾಡ’ಕ್ಕೆ ಕಾಲಿಟ್ಟರೂ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲಘುವಾಗಿ ತೆಗೆದುಕೊಂಡಿದ್ದರು. 2004ರಿಂದ 2014ರವರೆಗಿದ್ದ ಮನಮೋಹನ್ ಸಿಂಗ್ ಸರಕಾರದಲ್ಲಿ ‘ನಂಬರ್ ಟು’ ಆಗುವ ಅವಕಾಶವಿದ್ದರೂ ಮನಸ್ಸು ಮಾಡಲಿಲ್ಲ. ಆಗಲೇ ಸರಕಾರದೊಳಗೆ ಸೇರಿದ್ದರೆ ಇಷ್ಟೊತ್ತಿಗೆ ರಾಜಕೀಯ ಪಟ್ಟುಗಳನ್ನು ಅರೆದು ಕುಡಿಯುತ್ತಿದ್ದರು. ಅದಾಗಿದ್ದರೆ ದೇಶದ ಚಿತ್ರಣ ಬದಲಾಗುತಿತ್ತೇನೋ. ‘ಲೇಟ್ ಬೆಟರ್ ದ್ಯಾನ್ ನೆವರ್’ ಎಂಬಂತೆ ಈಗ ‘ಸೀರಿಯಸ್’ ಆಗಿದ್ದಾರೆ.
ಲೋಕಸಭೆ ಚುನಾವಣೆಗೆ ಮುಂಚಿನ ‘ಭಾರತ ಜೋಡೊ ಯಾತ್ರೆ’ ರಾಹುಲ್ ‘ಇಮೇಜ್’ ಬದಲಾಯಿಸಿದೆ. ಅವರಲ್ಲಿ ಪ್ರಬುದ್ಧತೆ ಕಾಣುತ್ತಿದೆ. ಯಾತ್ರೆ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದುಕೊಟ್ಟಿದೆ. 2024ರ ಲೋಕಸಭೆ ಚುನಾವಣೆಯಲ್ಲೂ ಲಾಭ ಆಗಿದೆ. ‘ವೋಟ್ ಚೋರಿ’ ಮತ್ತು ‘ಎಸ್‌ಐಆರ್’ ವಿರುದ್ಧ ಬಿಹಾರದಲ್ಲಿ ನಡೆಸಿದ ಯಾತ್ರೆಗೂ ಜನ ಬೆಂಬಲ ದೊರೆತಿದೆ. ‘ವೋಟ್ ಚೋರಿ’ ಸಂಬಂಧದ ಎರಡು ಪತ್ರಿಕಾಗೋಷ್ಠಿಗಳಲ್ಲಿ ಪ್ರಾಜ್ಞ ಪ್ರಾಧ್ಯಾಪಕರಂತೆ ಮಾತನಾಡಿದ್ದಾರೆ. ‘ಪವರ್ ಪಾಯಿಂಟ್ ಪ್ರೆಸೆಂಟೇಷನ್’ಗಳು ‘ಅಪ್ಪು’, ‘ಪಪ್ಪು’ ಎಂದು ಲೇವಡಿ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದೆ.
ಆಯೋಗದ ವಿರುದ್ಧದ ‘ದಾಳಿ’ಯಲ್ಲಿ ರಾಹುಲ್ ನಿರಂತರತೆ ಕಾಪಾಡಿಕೊಂಡಿದ್ದಾರೆ. ಇನ್ನು ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ‘ಹೈಡ್ರೋಜನ್ ಬಾಂಬ್’ ಇದೆ ಎಂದಿದ್ದಾರೆ. ‘ಅದು ಏನಿರಬಹುದು’ ಎಂಬ ಕುತೂಹಲ ಹುಟ್ಟಿದೆ. ಆರೋಪಗಳಲ್ಲಿ ನಿಜ ಇರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಯೋಗದ ನಿವೃತ್ತ ಮುಖ್ಯ ಕಮಿಷನರ್ ಎಸ್.ವೈ. ಖುರೇಷಿ, ಒ.ಪಿ. ರಾವತ್, ಕೆಲ ರಾಜಕೀಯ ವಿಶ್ಲೇಷಕರು ಆರೋಪ ಕುರಿತು ವಿಚಾರಣೆ ನಡೆಯಬೇಕಿತ್ತು ಎಂದು ಹೇಳಿರುವುದರಿಂದ ಮುಖ್ಯ ಕಮಿಷನರ್ ಜ್ಞಾನೇಶ್ ಕುಮಾರ್ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಆರೋಪ ಬಂದ ತಕ್ಷಣ ವಿಚಾರಣೆ ನಡೆಸಿದ್ದರೆ ಆಯೋಗದ ಘನತೆ ಹೆಚ್ಚುತಿತ್ತು. ಸಿಇಸಿ ಗೌರವವೂ ಇಮ್ಮಡಿಯಾಗುತಿತ್ತು. ಅದು ಬಿಟ್ಟು ಜಿದ್ದಿಗಿಳಿದಿದ್ದಾರೆ.
ಅಕ್ರಮ ಆರೋಪಗಳ ಬಗ್ಗೆ ಆಯೋಗದ ಉಳಿದಿಬ್ಬರು ಕಮಿಷನರ್‌ಗಳ ನಿಲುವೇನೆಂದು ಗೊತ್ತಾಗಿಲ್ಲ. ಜ್ಞಾನೇಶ್ ಕುಮಾರ್ ನಿಲುವಿಗೆ ಸಹಮತವಿದೆಯೇ ಇಲ್ಲವೇ ಬೇರೆ ನಿಲುವು ಹೊಂದಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು. ಈ ಹಿಂದೆ, ಸಿಇಸಿ ನಿಲುವನ್ನು ಕಮಿಷನರ್‌ಗಳು ಆಕ್ಷೇಪಿಸಿರುವ ಉದಾಹರಣೆಗಳು ಕಣ್ಣ ಮುಂದಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ನೀತಿ- ಸಂಹಿತೆ ಉಲ್ಲಂಘಿಸಿದ್ದ ಪ್ರಕರಣದಲ್ಲಿ ಪ್ರಧಾನಿ ಮೋದಿ ಮತ್ತು ಸಚಿವ ಅಮಿತ್ ಶಾ ಅವರಿಗೆ ‘ಕ್ಲೀನ್ ಚಿಟ್’ ಕೊಟ್ಟ ಆಯೋಗದ ನಿಲುವನ್ನು ಆಗಿನ ಚುನಾವಣಾ ಕಮಿಷನರ್ ಅಶೋಕ್ ಲಾವಸ ವಿರೋಧಿಸಿದ್ದರು. ಆಮೇಲೆ ಅದರ ‘ಬಿಸಿ’ ಅನುಭವಿಸಿದರು. ಅವಧಿಗೆ ಮುನ್ನ ಹುದ್ದೆ ತ್ಯಜಿಸಿ, ಎಡಿಬಿ ಬ್ಯಾಂಕ್ ಸೇವೆಗೆ ಹೋಗಿ ಹಿಂದಿರುಗಿದ್ದು ಹಳೆಯ ಸುದ್ದಿ.
ಇದೇ ಸೇಡಿಗಾಗಿ, ‘ಲಾವಸ ಇಂಧನ ಇಲಾಖೆ ವಿಶೇಷ ಕಾರ್ಯದರ್ಶಿಯಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೇ’ ಎಂದು ವಿಚಾರಣೆ ನಡೆಸಲು ಸರಕಾರ ಮುಂದಾಗಿತ್ತು. ಅವರ ಪತ್ನಿ ನೊವೆಲ್ ಲಾವಸ ಅವರೂ ಸಮಸ್ಯೆಗೆ ಸಿಕ್ಕಿದ್ದರು. ‘ಇಂಥ ಸೇಡಿನ ಕ್ರಮಗಳು ಮುಂದೆ ತಮಗೂ ಕಾದಿರಬಹುದು’ ಎನ್ನುವ ಭಯ, ಆತಂಕ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳನ್ನು ಕಾಡಿರಬಹುದು. ಅದಕ್ಕಾಗಿ ಸರಕಾರದ ಮುಂದೆ ತಲೆ ಬಾಗಿರಬಹುದು. ಇಲ್ಲವೆ, ‘ಸ್ವಾಮಿ ನಿಷ್ಠೆ’ ಅವರನ್ನು ಕಟ್ಟಿ ಹಾಕಿರಬಹುದು.
1971ರ ಸಾರ್ವತ್ರಿಕ ಚುನಾವಣೆಯಲ್ಲಿ ನೀತಿ- ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದಾಗಿತ್ತು. 1975ರಲ್ಲಿ ಉತ್ತರ ಪ್ರದೇಶ ಅಲಹಾಬಾದ್ ಹೈಕೋರ್ಟ್ ಪೀಠ ತೀರ್ಪು ನೀಡಿತ್ತು. ಅವರು ರಾಯ್‌ಬರೇಲಿಯಿಂದ ಆಯ್ಕೆಯಾಗಿದ್ದರು. ಇದನ್ನು ಎದುರಾಳಿ ರಾಜ್ ನಾರಾಯಣ್ ಪ್ರಶ್ನಿಸಿದ್ದರು. ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದ್ದು. ಈಗ ನೂರು ಸಲ ಚುನಾವಣಾ ನೀತಿ- ಸಂಹಿತೆ ಉಲ್ಲಂಘನೆಯಾದರೂ ಕ್ರಮ ಆಗುವುದಿಲ್ಲ. ಇದರಿಂದಾಗಿಯೇ ರಾಜಕಾರಣಿಗಳಿಗೆ ಕೋರ್ಟ್, ಆಯೋಗದ ಭಯ ಇಲ್ಲದಿರುವುದು.
ಟಿ.ಎನ್. ಶೇಷನ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು. ಅವರು ಸಿಇಸಿ (1990- 96) ಆಗಿದ್ದಾಗ ಚುನಾವಣಾ ಆಯೋಗದ ಸಾಮರ್ಥ್ಯವೇನೆಂದು ತೋರಿಸಿಕೊಟ್ಟರು. ಸ್ವತಂತ್ರ- ನಿಷ್ಪಕ್ಷ ನಡೆಯಿಂದ ಗಮನ ಸೆಳೆದಿದ್ದರು. ಶೇಷನ್ ಹೆಸರು ಕೇಳಿದರೆ ದೊಡ್ಡ ನಾಯಕರೂ ಬೆಚ್ಚುತ್ತಿದ್ದರು. ‘ಚುನಾವಣಾ ಆಯೋಗವು ಸರಕಾರದ ಅಧೀನ ಸಂಸ್ಥೆಯಲ್ಲ; ಅದರ ಭಾಗ ಅಷ್ಟೇ’ ಎಂದು ನಿರೂಪಿಸಿದರು. ಬೋಗಸ್ ಮತದಾನ ತಡೆಯಲು ಮತದಾರರ ಗುರುತಿನ ಚೀಟಿ ವಿತರಿಸಿದರು. ಇದರಿಂದ ರಾಜಕಾರಣಿಗಳ ಕಣ್ಣು ಕೆಂಪಾಗಿದ್ದವು. ಹಿಂಸೆ- ಹಣದ ಪ್ರಭಾವಕ್ಕೆ ಸಿಕ್ಕಿದ್ದ ಬಿಹಾರ ಚುನಾವಣೆಯನ್ನು 1992ರಲ್ಲಿ ಮುಂದೂಡಿದ್ದರು. ಸಮರ್ಪಕ ಭದ್ರತೆ ಬಳಿಕ ಚುನಾವಣೆ ನಡೆಸಿದ್ದರು. ಅದು ಶೇಷನ್ ತಾಕತ್ತಾಗಿತ್ತು. ಈಗ ಚುನಾವಣಾ ವ್ಯವಸ್ಥೆ ಸರಿಪಡಿಸಲು ಮತ್ತೊಬ್ಬ ಶೇಷನ್ ಹುಟ್ಟಿ ಬರಬೇಕು.
ಚುನಾವಣಾ ವ್ಯವಸ್ಥೆ ಹೇಗಿರಬೇಕು; ಆಯೋಗದ ಮುಖ್ಯ ಕಮಿಷನರ್, ಕಮಿಷನರ್ ನೇಮಕ ಹೇಗಾಗಬೇಕು; ಕಾರ್ಯಾಂಗದ ಹಸ್ತಕ್ಷೇಪ ಹೇಗೆ ತಪ್ಪಿಸಬೇಕು ಇತ್ಯಾದಿ ವಿಷಯ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಚುನಾವಣೆಗಳು ಮುಕ್ತವಾಗಿರಬೇಕು. ಸರಕಾರದ ಮಧ್ಯಪ್ರವೇಶ ಇರಬಾರದೆಂದು ಡಾ. ಬಿ.ಆರ್. ಅಂಬೇಡ್ಕರ್ ಅವರಾದಿಯಾಗಿ ಎಲ್ಲ ಸದಸ್ಯರು ಅಭಿಪ್ರಾಯಪಟ್ಟಿದ್ದರು. ಇದನ್ನು ಸಾಧ್ಯವಾಗಿಸುವುದು ಹೇಗೆ ಎಂಬ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಅಂತಿಮವಾಗಿ ಮುಖ್ಯ ಕಮಿಷನರ್ ನೇಮಕ ಅಧಿಕಾರವನ್ನು ರಾಷ್ಟ್ರಪತಿಗೆ ಬಿಡಲಾಗಿತ್ತು. ಮಂತ್ರಿಮಂಡಲದ ಶಿಫಾರಸಿನ ಮೇಲೆ ಇದು ಆಗಬೇಕಿತ್ತು.
2022ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ಚುನಾವಣಾ ಕಮಿಷನರ್ ಮತ್ತು ಕಮಿಷನರ್‌ಗಳ ನೇಮಕಕ್ಕೆ ಹೊಸ ಮಾರ್ಗಸೂಚಿ ರೂಪಿಸುವವರೆಗೂ ಈ ವಿಷಯದಲ್ಲಿ ಪ್ರಗತಿ ಆಗಿರಲಿಲ್ಲ. ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಆಯ್ಕೆ ಸಮಿತಿ ಸಿಇಸಿ, ಇಸಿಗಳ ನೇಮಕಾತಿ ಶಿಫಾರಸನ್ನು ರಾಷ್ಟ್ರಪತಿಗೆ ಕಳುಹಿಸಲು ಕೋರ್ಟ್ ನಿರ್ದೇಶಿಸಿತ್ತು. ಈ ಸಂಬಂಧ ಸಂಸತ್ತು ಕಾಯ್ದೆ ರೂಪಿಸುವವರೆಗೂ ಇದು ಜಾರಿಯಲ್ಲಿರುತ್ತೆ ಎಂದೂ ಹೇಳಿತ್ತು. 2023ರಲ್ಲಿ ಸಂಸತ್ತು ಕಾಯ್ದೆ ರೂಪಿಸಿತು. ಪ್ರಧಾನಿ, ಕೇಂದ್ರ ಸಚಿವ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿ ರಾಷ್ಟ್ರಪತಿಗೆ ಹೆಸರು ಶಿಫಾರಸು ಮಾಡಬೇಕು. ಈ ಶಿಫಾರಸಿನ ಆಧಾರದಲ್ಲಿ ನೇಮಕಾತಿ ನಡೆಯಲಿದೆ.
ಸಿಇಸಿ ನೇಮಕ ವಿಧಾನದಲ್ಲೇ ಲೋಪವಿದೆ. ಇದರಲ್ಲಿ ಸರಕಾರವೇ ನಿರ್ಣಾಯಕವಾಗಿದೆ. ನೆಪ ಮಾತ್ರಕ್ಕೆ ವಿರೋಧ ಪಕ್ಷದ ನಾಯಕರು ಇರುತ್ತಾರೆ. ಅವರ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಪ್ರಧಾನಿ, ಸಚಿವರ ನಿಲುವಿಗೆ ಆಕ್ಷೇಪ ಎತ್ತಬಹುದು ಅಷ್ಟೇ. ಅಂತಿಮವಾಗಿ ಉಳಿಯುವುದು ಬಹುಮತದ ನಿರ್ಣಯ. ಇದು ಬದಲಾಗದಿದ್ದರೆ ‘ಹೌದಪ್ಪ’ಗಳೇ ಸಿಇಸಿ ಇಸಿಗಳಾಗುತ್ತಾರೆ. ಈ ಬಗ್ಗೆ ರಾಹುಲ್ ಗಾಂಧಿ ಮತ್ತಿತರ ವಿರೋಧ ಪಕ್ಷಗಳ ನಾಯಕರು ಆಲೋಚಿಸಬೇಕಿದೆ. ಸುದೀರ್ಘ ಹೋರಾಟ ರೂಪಿಸಬೇಕಿದೆ. ಆಗ ರಾಹುಲ್ ಜನರ ಮನಸ್ಸಿನಲ್ಲಿ ನಿಜವಾದ ಹೀರೊ ಆಗಬಲ್ಲರು.