ಅರಮನೆ ಅಂಗಳದಲ್ಲಿ ಸ್ವಚ್ಛಂದವಾಗಿ ವಿರಮಿಸುತ್ತಿರುವ ದಸರಾ ಗಜಪಡೆ
ಮೈಸೂರು, ಆ.23: ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿರುವ ದಸರಾ ಜಂಬೂ ಸವಾರಿಯ ಗಜಪಡೆಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ.
ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ದಸರಾ ಗಜಪಡೆಗಳ ಮೊದಲ ತಂಡ ಅರಮನೆ ಆವರಣದಲ್ಲಿ ವಿರಮಿಸುತ್ತ ತಾಲೀಮಿನಲ್ಲಿ ಭಾಗಿಯಾಗುತ್ತಿವೆ. ಅರಮನೆಯ ಸುಂದರ ಆವರಣದ ಮೈದಾನದಲ್ಲಿ ಅಭಿಮನ್ಯು ನೇತೃತ್ವದ ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಬಳ್ಳೆಲಕ್ಷ್ಮೀ ಗಜಪಡೆಗಳು ನೀರಿನಲ್ಲಿ ಮಜ್ಜನ ಮಾಡಿಕೊಂಡು ಜಂಬೂ ಸವಾರಿಗೆ ತಯಾರಾಗುತ್ತಿವೆ.
ಗಜಪಡೆಯ ಮಾವುತರು ಮತ್ತು ಕಾವಾಡಿಗಳು ನಾಡಿಗೆ ಹೊಂದಿಕೊಂಡು ತಮ್ಮ ಆನೆಗಳನ್ನು ಪ್ರೀತಿಯಿಂದ ಮಾತನಾಡಿಸಿ ಅವುಗಳಿಗೆ ಸ್ನಾನ ಮಾಡಿಸಿ ಮಕ್ಕಳಂತೆ ತಯಾರು ಮಾಡುತ್ತಿದ್ದಾರೆ.
ಮಾವುತರ ಮಕ್ಕಳು ಆನೆಯೊಂದಿಗೆ ಆಟವಾಡಿಕೊಂಡು ಅವುಗಳ ಜೊತೆ ಚೇಷ್ಟೆ ಮಾಡಿಕೊಂಡು ಅವುಗಳ ಮೇಲೆ ಕುಳಿತುಕೊಂಡು ಅತ್ತಿಂದಿತ್ತ ಸಂಚರಿಸಿ ಸಂತಸ ಪಡುತ್ತಿರುವ ದೃಶ್ಯಗಳು ಕಾಣುತ್ತಿವೆ.
ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಗಜಪಡೆಗಳನ್ನು ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಬರುತ್ತಿದ್ದಾರೆ. ಆನೆಗಳ ಆಟಗಳನ್ನು ಕಂಡು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು ದೂರದಿಂದಲೇ ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದ ವರೆಗೂ ಗಜಪಡೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಜಂಬೂ ಸವಾರಿಯಲ್ಲಿ ಭಾಗವಹಿಸಬೇಕಿರುವುದರಿಂದ ಅವುಗಳು ಸಂಚರಿಸುವ ಮಾರ್ಗವನ್ನು ಹೊಂದಿಕೊಳ್ಳಲು ಮತ್ತು ಸಾರ್ವಜನಿಕರ ಒಡನಾಟವನ್ನು ಪರಿಚಯಿಸಲು ಜಂಬೂ ಸವಾರಿವರೆಗೂ ತಾಲೀಮು ನಡೆಸಲಾಗುತ್ತದೆ.
ಆನೆಗಳ ತೂಕ ಮತ್ತು ಅವುಗಳ ಸದೃಢತೆಗಾಗಿ ಮಾವುತರು ಪ್ರತೀ ದಿನ ಎರಡು ಹೊತ್ತು ಕಬ್ಬು, ಬೆಲ್ಲ, ಭತ್ತ, ಬೇಯಿಸಿದ ಕಾಳುಗಳು, ಕೊಬ್ಬರಿ, ಸೇರಿದಂತೆ ಪೌಷ್ಠಿಕಯುಕ್ತ ಆಹಾರವನ್ನು ನೀಡುತ್ತಿದ್ದಾರೆ.