×
Ad

ಧಾರವಾಡ ಪೇಡಕ್ಕೆ ಸ್ವಾದ ತಂದ ಧನಗಾರ್ ಗೌಳಿಗಳು

Update: 2026-03-11 10:10 IST

ಸರಕಾರದ ಅರಿವಿಗೇ ಭಾರದಿರುವ ಧನಗಾರ್ ಗೌಳಿಗಳು ಸರಕಾರದಿಂದ ಮೂರು ಕಾಸಿನ ಪ್ರಯೋಜನ ಪಡೆದಿಲ್ಲ! ಇವರಿಗೆ ಶಾಲೆಯ ಮುಖವನ್ನೇ ಸರಕಾರ ತೋರಿಸಿಲ್ಲ ಎಂದ ಮೇಲೆ ಇನ್ನು ಸರಕಾರದ ಸವಲತ್ತು, ಅನುದಾನ, ಸಾಲಸೋಲ, ಉದ್ಯೋಗಗಳು ಎಲ್ಲಿಂದ ಬರಬೇಕು?

ಧಾರವಾಡದ ಪೇಡ ಎಲ್ಲರಿಗೂ ಗೊತ್ತು ಆದರೆ ಆ ಪೇಡ ಮಾಡಲು ಬಳಸುವ ಹಾಲು ‘ಧನಗಾರ್ ಗೌಳಿ’ಗಳದು ಎಂಬುದು ಯಾರಿಗೂ ಗೊತ್ತಿಲ್ಲ! ಧನಗಾರ್ ಗೌಳಿಗಳ ಸಮುದಾಯ ಧಾರವಾಡ, ಕಾರವಾರ, ಬೆಳಗಾವಿಯ ಕಾಡಂಚಲ್ಲಿ ಜೀವಿಸುತ್ತಿದ್ದು, ಅವರ ಎಮ್ಮೆಗಳು ಕಾಡಿನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮೇಯ್ದು ಧನಗಾರ್ ಗೌಳಿಗಳಿಗೆ ಹಾಲು ನೀಡುವುದರಿಂದ ಆ ಹಾಲಿಗೆ ಒಂದು ವಿಶೇಷವಾದ ಸ್ವಾದ ಇರುತ್ತದೆ, ಆ ಹಾಲಿನಲ್ಲಿ ತಯಾರಿಸಿದ ಪೇಡಕ್ಕೂ ಈ ಸ್ವಾದ ಬಂದು ಧಾರವಾಡದ ಪೇಡ ವಿಶೇಷ ರುಚಿಯಿಂದ ಕೂಡಿರುತ್ತದೆ ಎಂಬುದು ಧನಗಾರ್ ಗೌಳಿಗಳ ಕುರಿತು ಅಧ್ಯಯನ ಮಾಡಿರುವ ಅನೇಕರ ಅಭಿಪ್ರಾಯ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ನನ್ನ ಅವಧಿ ಮುಗಿಯುತ್ತಿತ್ತು, ಸರಕಾರವನ್ನು ವಿರೋಧ ಮಾಡಿಕೊಂಡು, ಎಲ್ಲಾ ರೀತಿಯ ಅಸಹಕಾರವನ್ನು ಅನುಭವಿಸಿ, ಕಡೆಗೆ ಎಷ್ಟಾದರೂ ನೋವು ಅನುಭವಿಸಿ ವರದಿ ಕೊಟ್ಟೇ ಹೋಗುವ ಧಾವಂತದಲ್ಲಿದ್ದೆ. ಈ ಸಂದರ್ಭದಲ್ಲಿ ಪ್ರೊ. ಕೆ.ಎಂ. ಮೇತ್ರಿ ಅವರು ಧನಗಾರ್ ಗೌಳಿಗಳ ದೊಡ್ಡ ಗುಂಪನ್ನು ಆಯೋಗದ ಕಚೇರಿಗೆ ಕರೆತಂದರು. ದೊಡ್ಡ ದೊಡ್ಡ ವಿವಿಧ ಬಣ್ಣಗಳ ಪೇಟಾಗಳನ್ನು ಕಟ್ಟಿಕೊಂಡು ಕಚ್ಚೆ ಹಾಕಿದ್ದ ಪಂಚೆ ಉಟ್ಟು ಉತ್ತರ ಕನ್ನಡದಿಂದ ಬಂದ ಧನಗಾರ್ ಗೌಳಿಗಳು ನನ್ನ ಮುಂದೆ ಕುಳಿತಿದ್ದರು. ಆಯೋಗದ ಕಟ್ಟಕಡೆಯ ಸಾರ್ವಜನಿಕ ವಿಚಾರಣೆಯಲ್ಲಿ ಧನಗಾರ್ ಗೌಳಿಗಳ ಪ್ರಕರಣವನ್ನು ಕೇಳಿಸಿಕೊಳ್ಳಲು ತಯಾರಾಗಿದ್ದೆವು.

ಧನಗಾರ್ ಗೌಳಿಗಳ ಪ್ರತಿನಿಧಿಯಾಗಿ ಜಾನಪ್ಪ ಬಿನ್ ಭೈರು ಎಂಬವರು ಬಂದಿದ್ದರು. ಇವರಿಗೆ ಕನ್ನಡ, ಇಂಗ್ಲಿಷ್ ಬರುತ್ತಿರಲಿಲ್ಲ, ಇವರೊಂದಿಗೆ ಜೂಲಿಯಾನ ಎಂಬ ಸಿದ್ದಿ ಸಮುದಾಯದ ಹೆಣ್ಣುಮಗಳು ಧನಗಾರ್ ಗೌಳಿಗಳಿಗೆ ಧ್ವನಿಯಾಗಿ ಬಂದು ಧನಗಾರ್ ಗೌಳಿಗಳ ಜೀವನಕ್ರಮ, ಅವರ ಹಿಂದುಳಿದಿರುವಿಕೆ ಕಾರಣಗಳೇ ಮುಂತಾದ ವಿಷಯಗಳನ್ನು ಆಯೋಗದ ಮುಂದೆ ಮಂಡಿಸಿದರು.

ಹಿಂದುಳಿದ ವರ್ಗದ ಪಟ್ಟಿಯ ಪ್ರವರ್ಗ-1 ರಲ್ಲಿ ಕ್ರಮಸಂಖ್ಯೆ ಗೊಲ್ಲ ಜನಾಂಗದ ಪರ್ಯಾಯ ಪದವಾಗಿ ‘ಗೌಳಿ’ ಇದೆ. ಅದೇ ರೀತಿ ಪ್ರವರ್ಗ 2(ಎ)ರಲ್ಲಿನ ಕ್ರಮ ಸಂಖ್ಯೆ 7ರ ಕುರುಬ ಜನಾಂಗದ ಪರ್ಯಾಯ ಪದವಾಗಿ ‘ಧನಗಾರ್’ ಎಂಬ ಹೆಸರಿದೆ. ಆದರೆ ಧನಗಾರ್ ಮತ್ತು ಗೌಳಿ ಎರಡನ್ನೂ ಸೇರಿಸಿದಂತೆ ‘ಧನಗಾರ್ ಗೌಳಿ’ ಎಂಬ ಹೆಸರು ಜಾತಿ ಪಟ್ಟಿಯ ಯಾವ ಪ್ರವರ್ಗದಲ್ಲೂ ಇಲ್ಲ. ಹೀಗಾಗಿ ಈ ಸಮುದಾಯ ತನ್ನ ಅಸ್ಮಿತೆ(identity)ಗಾಗಿ ಪರದಾಡುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಮಾನಾಯಿ, ಹಳಿಯಾಳ, ಕಳಕಿವಾಡ ಮುಂತಾದೆಡೆ ಈ ಸಮುದಾಯ ವಾಸಿಸುತ್ತದೆ. ಆಯೋಗ ಕಾರವಾರದ ಜಿಲ್ಲೆಯ ಹಳಿಯಾಳ ತಾಲೂಕಿನ ಕಳಕಿವಾಡಕ್ಕೆ ಭೇಟಿ ನೀಡಿದಾಗ, ಹುಲ್ಲಿನಿಂದ ಛಾವಣಿ ಹಾಕಿ ಬಿದಿರಿನ ತಡಿಕೆ ಎಣೆದು ಗೋಡೆಯಂತೆ ಬಳಸಲಾದ ಮನೆಗಳಿಗೆ ಬಾಗಿಲೇ ಇರಲಿಲ್ಲ! ಎಂಟರಿಂದ ಹತ್ತು ಅಡಿ ವಿಸ್ತಾರದಲ್ಲಿ ಈ ಮನೆಗಳೆಂಬ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಈ ಗುಡಿಸಲ ಮುಂದೆ ಎಮ್ಮೆಗಳು ಕೂಡಿಕೊಳ್ಳುವ ಒಂದು ಸಣ್ಣ ಜಾಗವಿದೆ. ಇಲ್ಲಿ ಎಮ್ಮೆಗಳನ್ನು ಕಟ್ಟಿಹಾಕುವುದಿಲ್ಲ. ಅವು ದಿನವೆಲ್ಲ ಕಾಡಲ್ಲಿ ಮೇಯ್ದು ಸಂಜೆ ಬಂದು ಧನಗಾರ್ ಗೌಳಿಗಳಿಗೆ ಹಾಲು ಕೊಟ್ಟು ರಾತ್ರಿಯಿಡೀ ಧನಗಾರ್ ಗೌಳಿಗಳ ಗುಡಿಸಲುಗಳ ಮುಂದೆಯೇ ಇದ್ದು, ಮುಂಜಾನೆ ಕಾಡಿಗೆ ಹೋಗುತ್ತವೆ! ಧನಗಾರ್ ಗೌಳಿಗಳು ಈ ಎಮ್ಮೆಗಳ ಹಾಲು ಮಾರಿ ಜೀವನ ಸಾಗಿಸುತ್ತಾರೆ. ಮನುಷ್ಯ ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಇದು ಅತ್ಯುತ್ತಮ ಉದಾಹರಣೆ. ಇವರ ಗುಡಿಸಲುಗಳಲ್ಲಿ ಹಾಲು, ಮೊಸರು, ಬೆಣ್ಣೆ ಇಡಲಿಕ್ಕೆ ‘ಸಿಖಾ’(ನಲ್ಲಿ) ಮಾಡಿ ಬೊಂಬಿಗೆ ಮೇಲಿಂದ ಕೆಳಕ್ಕೆ ನೇತು ಹಾಕಿರುತ್ತಾರೆ. ನಾಯಿ, ಬೆಕ್ಕುಗಳಿಂದ ರಕ್ಷಿಸಲು ಈ ರೀತಿ ಮಾಡಿರುತ್ತಾರೆ. ಇವರ ಗುಡಿಸಲ ಸುತ್ತಲೂ ಬೇಟಿ, ರೋಜಾ, ನಂದಿ, ತೇಗಾ, ಮತ್ತಿ, ಹೊನ್ನೆ, ಕೊಳೆಮತ್ತಿ, ಬಿಳಿಮತ್ತಿ, ಎದ್ದಾಲೆ, ಕಿಂದಲ್ ಮುಂತಾದ ಬೆಲೆಬಾಳುವ ದಟ್ಟವಾದ ಕಾಡಿರುತ್ತದೆ. ಇವೆಲ್ಲಾ ಕಾಡಿನ ಸ್ವತ್ತಾಗಿರುವುದರಿಂದ ಧನಗಾರ್ ಗೌಳಿಗಳು ಈ ಬೆಲೆಬಾಳುವ ಮರಗಳನ್ನು ರಕ್ಷಿಸುತ್ತಾರೆಯೇ ಹೊರತು ಎಂದೂ ಕಡಿಯುವುದಿಲ್ಲ. ಇದು ಇವರು ತಮಗೆ ನೆಲೆ ಕೊಟ್ಟ ಕಾಡಿಗೆ ತೋರುವ ನಿಯತ್ತು.

ಸರಕಾರದ ಅರಿವಿಗೇ ಭಾರದಿರುವ ಧನಗಾರ್ ಗೌಳಿಗಳು ಸರಕಾರದಿಂದ ಮೂರು ಕಾಸಿನ ಪ್ರಯೋಜನ ಪಡೆದಿಲ್ಲ! ಇವರಿಗೆ ಶಾಲೆಯ ಮುಖವನ್ನೇ ಸರಕಾರ ತೋರಿಸಿಲ್ಲ! ಎಂದ ಮೇಲೆ ಇನ್ನು ಸರಕಾರದ ಸವಲತ್ತು, ಅನುದಾನ, ಸಾಲಸೋಲ, ಉದ್ಯೋಗಗಳು ಎಲ್ಲಿಂದ ಬರಬೇಕು?

ಕರ್ನಾಟಕದ ಧಾರವಾಡ, ಬೆಳಗಾವಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧನಗಾರ್ ಗೌಳಿಗಳು ಕಾಣಿಸಿಕೊಳ್ಳುತ್ತಾರೆ. ಇವರ ಪೂರ್ವಜರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ನೂರಾರು ವರ್ಷಗಳ ಹಿಂದೆ ಅಲೆಮಾರಿಗಳಾಗಿ ಬಂದವರು. ಪಶುಪಾಲನೆ ಇವರ ಕುಲಕಸುಬು, ಪಶುಗಳ ಮೇವು ಮತ್ತು ನೀರು ಸಿಗುವ ಕಡೆ ಅಲೆಮಾರಿಗಳಾಗಿ ಹೋಗುತ್ತಾ ಬದುಕು ಸಾಗಿಸಿದವರು. ಮುಂಬೈ ಗೆಜೆಟಿಯರ್ ನಲ್ಲಿ ಇವರ ಸಮುದಾಯದ ದಾಖಲೆಯಿದ್ದು ‘ಇವರು ಕಾನಡಾ ಜಿಲ್ಲೆ ಯಲ್ಲಾಪುರ ಅಡವಿಯಲ್ಲಿ ಇರುತ್ತಾರೆ’ ಎಂದು ದಾಖಲಿಸಿದ್ದಾರೆ.

ಧನಗಾರ ಗೌಳಿಯರು ಪ್ರಧಾನವಾಗಿ ವಿಠೋಬನನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾರೆ. ಛತ್ರಪತಿ ಶಿವಾಜಿಯ ಮೂಲ ಧನಗಾರ ಗೌಳಿಗಳಲ್ಲಿದೆ ಎಂದು ಕೆಲ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಎಮ್ಮೆಗಳೇ ಇವರಿಗೆ ಅನ್ನದಾತ ದೈವಗಳು. ‘‘ಎಮ್ಮೆಗಳ ನಾಡನ್ನು ಮೈಸೂರು ರಾಜ್ಯ, ದನಗಳ ನಾಡನ್ನು ಮಹಾರಾಷ್ಟ್ರ ರಾಜ್ಯ..’’ ಎಂದು ಕರೆಯುವುದರೊಂದಿಗೆ ತಮ್ಮ ಮೂಲಸ್ಥಾನ ಕರ್ನಾಟಕವೇ ಎಂದು ತಮ್ಮ ನೆಲೆಯನ್ನು ಧನಗಾರ್ ಗೌಳಿಗಳು ಸಮರ್ಥಿಸಿಕೊಳ್ಳುತ್ತಾರೆ.

ಧಾರವಾಡ, ಬೆಳಗಾವಿಯಲ್ಲಿ ಸಣ್ಣ ಪ್ರಮಾಣದಲ್ಲಿರುವ ಗೌಳಿಗಳು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮಾಗವಾಡಿ, ಕುಮ್ಮಾಕಾನ ಹಟ್ಟಿ, ಜತಗಾ ಗೌಳಿವಾಡ, ರಹೀಮನ್ ಶೇತ್, ತಟ್ಟಿಗೇರಾ, ಅಡಿಕೆ ಹೊಸೂರು, ಬಸ್ಸೊಳ್ಳಿ ಉತ್ತಾರ, ಭಿಮಾಹಳ್ಳಿ, ಭಾಗವತಿ ಮುಂತಾಗಿ ಐವತ್ತಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಇದ್ದಾರೆ. ಇವರಲ್ಲಿ ಯಡಗೆ, ಲಾಂಬೋರೆ, ಪಿಂಗಳ, ಬರಾಗಡೆ, ಕೊಳಕರ ಮುಂತಾಗಿ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಬೆಡಗುಗಳಿವೆ. ಈ ಎಲ್ಲದರ ಕುರಿತು ನಮ್ಮ ಆಯೋಗ ವಿಸ್ತೃತವಾಗಿ ಅಧ್ಯಯನ ಮಾಡಿ. ಧನಗಾರರು ಗೌಳಿಗಳು ಮೂಲತಃ ಕುರುಬರ ಉಪಪಂಗಡದವರೂ ಅಲ್ಲ, ಗೊಲ್ಲರ ಉಪಪಂಗಡದವರೂ ಅಲ್ಲ, ಇವರಿಗೆ ತಮ್ಮದೇ ಆದ ವಿಶಿಷ್ಟವಾದ ಅಸ್ಮಿತೆ ಇದೆ ಎಂದು ಸುದೀರ್ಘ ವರದಿ ನೀಡಿ ಈ ಸಮುದಾಯವನ್ನು ಅತಿಹಿಂದುಳಿದ (most backward) ಪಟ್ಟಿಗೆ ಸೇರಿಸಬೇಕೆಂದು ನಮ್ಮ ಆಯೋಗ 2010ರಲ್ಲೇ ಸರಕಾರಕ್ಕೆ ಸಲಹೆ ನೀಡಿದೆ. ದುರಂತವೆಂದರೆ ಯಾವುದೇ ಸರಕಾರ ಇದನ್ನು ತೆರೆದು ಕೂಡ ನೋಡಿಲ್ಲ. ಇನ್ನೂ ವಿಪರ್ಯಾಸವೆಂದರೆ ಸಾಮಾಜಿಕ ನ್ಯಾಯ ಮತ್ತು ಅಹಿಂದ ಎಂಬ ಶಬ್ದಗಳನ್ನು ತಮ್ಮ ಕನಸಿನಲ್ಲೂ ಪಠಿಸುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಈ ನಾಡಿಗೆ ಬಂದರೆ ಇಂತಹ ಸಣ್ಣಸಣ್ಣ ಸಮುದಾಯಗಳ ಉದ್ಧಾರವಾಗುತ್ತವೆ ಎಂದು ಸಿದ್ದರಾಮಯ್ಯನವರ ಭಾಷಣಗಳನ್ನು ಕೇಳಿಸಿಕೊಂಡಿದ್ದ ಇಂತಹ ಸಮುದಾಯಗಳು ಬಲವಾಗಿ ನಂಬಿದ್ದವು. ಆದರೆ ‘ಹಿಂದುಳಿದ ಸಮುದಾಯಗಳ ನಾಯಕ’ ಸಿದ್ದರಾಮಯ್ಯನವರು ಹಿಂದಿನ ಯಾವುದೇ ಆಯೋಗದ ವರದಿಗಳನ್ನು ಮುಟ್ಟಿಕೂಡ ನೋಡಲಿಲ್ಲ. ಇಂತಹ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕುರಿತು ಕನಿಷ್ಠ ಕಾಳಜಿ ತೋರಲಿಲ್ಲ! ಬದಲಿಗೆ ಇಂತಹ ಅಲೆಮಾರಿ ಸಮುದಾಯಗಳಿಗೆ ಇದ್ದ ಒಂದು ಪರ್ಸೆಂಟ್ ಮೀಸಲಾತಿಯನ್ನೂ ಕಸಿದುಕೊಂಡು ಇಂತಹ ಕಡುಬಡವ, ನಿರ್ಗತಿಕ, ತಬ್ಬಲಿ ಸಮುದಾಯಗಳಿಗೆ ಚಾರಿತ್ರಿಕ ದ್ರೋಹ ಬಗೆದರು. ಇಂತಹ ಅಸಹಾಯಕ ಸಮುದಾಯಗಳಿಗೆ ಕನಿಷ್ಠ ಅಸ್ಮಿತೆ, ಅಸ್ತಿತ್ವ ನೀಡಲು ದೇವರಾಜ ಅರಸು ರಂತಹ ಪುಣ್ಯಾತ್ಮರು ಮತ್ತೆ ಹುಟ್ಟಿ ಬರಬೇಕಷ್ಟೇ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸಿ.ಎಸ್. ದ್ವಾರಕಾನಾಥ್

contributor

Similar News