×
Ad

ಹೆಣ್ಣು ಜೀವ-ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

Update: 2025-10-26 10:10 IST

ಕಠಿಣ ಕಾನೂನು, ಆಡಳಿತಾತ್ಮಕವಾಗಿ ನಿಗಾವಹಿಸುವ ವ್ಯವಸ್ಥೆ, ಜಿಲ್ಲಾ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳ ನಿರಂತರ ಕಾಳಜಿ ಮತ್ತು ನಿಗಾವಹಿಸುವ ಕಾರ್ಯತಂತ್ರಗಳ ಹೊರತಾಗಿಯೂ, ಜೀವ ತಳೆಯುವ ಮುನ್ನವೇ ಹೆಣ್ಣು ಕೂಸುಗಳನ್ನು ಹೊಸಕಿ ಹಾಕುವಂತಹ ಪಾಶವೀ ಕೃತ್ಯಗಳು ಎರಡು ಮೂರು ವರ್ಷಗಳಿಂದ, ಒಂದೇ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರೆ, ಅದನ್ನು ಕೇವಲ ‘ಸಮಸ್ಯೆ’ ಎಂದು ನೋಡಲಾಗುವುದಿಲ್ಲ. ಬದಲಾಗಿ ‘ಸಾಮಾಜಿಕ ವ್ಯಾಧಿ ಅಥವಾ ಬೇನೆ’ ಎಂದೇ ಪರಿಗಣಿಸಬೇಕಾಗುತ್ತದೆ.

ಈ ದಿನಗಳ ಸಾರ್ವಜನಿಕ ಸಂಕಥನಗಳಲ್ಲಿ ಹಾಗೂ ಬೌದ್ಧಿಕ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಒಂದು ಪ್ರಶ್ನೆ ಎಂದರೆ, ನಾವು ಇತಿಹಾಸದಿಂದ ಪಾಠ ಕಲಿತೇ ಇಲ್ಲವೇ? ಎಂಬುದು. ಇದಕ್ಕೆ ಕಲಿತಿದ್ದೇವೆ ಆದರೆ ಅದು ಸಾಲದು ಎಂದೋ, ಕಲಿತೇ ಇಲ್ಲ ಎಂದೋ ಅಥವಾ ಇನ್ನೂ ಕಲಿಯಬೇಕಿದೆ ಎಂದೋ ನಮಗೆ ನಾವೇ ಉತ್ತರಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದೇವೆ. ಇದೇ ಪ್ರಶ್ನೆಯನ್ನು ಕಳೆದ ಮೂರು ದಶಕಗಳ, ವಿಶೇಷವಾಗಿ ಒಂದು ದಶಕದ, ಸಾಮಾಜಿಕ ಅನ್ಯಾಯ, ಮಹಿಳಾ-ಜಾತಿ ದೌರ್ಜನ್ಯ, ಸ್ತ್ರೀ ದ್ವೇಷ (misogಥಿಟಿಥಿ)ದಂತಹ ಸಮಸ್ಯೆಗಳ ನಡುವೆ ನಿಂತು ನೋಡಿದಾಗ, ನಾವು ವರ್ತಮಾನದಿಂದಲೇ ಪಾಠ ಕಲಿತಿಲ್ಲವೇನೋ ಎಂಬ ಅನುಮಾನ ಮೂಡುತ್ತದೆ.

ಏಕೆಂದರೆ ಆಧುನಿಕತೆಗೆ ತೆರೆದುಕೊಂಡ, ಪುರೋಗಾಮಿ ಚಿಂತನಾಧಾರೆಗಳಿಂದ ಪ್ರಭಾವಿತವಾದ ಸಮಾಜವು ತನ್ನ ಪ್ರಗತಿ-ಉನ್ನತೀಕರಣದ ಹಾದಿಯಲ್ಲಿ, ಹಿಂದಿನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಲೇ ಇರಬೇಕಾಗುತ್ತದೆ. ಅನ್ಯಾಯಗಳ ವಿರುದ್ಧ ಹೋರಾಡುವುದು, ಪ್ರತಿಭಟಿಸುವುದು ಅಗತ್ಯವೇ ಆದರೂ, ಈ ಸಾಂಕೇತಿಕ ಚಟುವಟಿಕೆಗಳನ್ನೂ ದಾಟಿ ನೋಡಿದಾಗ, ನಾವು ಸಮಸ್ಯೆ ಎಂದು ಪರಿಗಣಿಸುವ ಹಲವಾರು ಅನ್ಯಾಯಗಳು ಮತ್ತು ಅಮಾನವೀಯ ನಡವಳಿಕೆಗಳು, ಮೂಲತಃ ಸಾಮಾಜಿಕ ವ್ಯಾಧಿಯಾಗಿರುವುದನ್ನು (Soಛಿiಚಿಟ mಚಿಟಚಿise) ಗುರುತಿಸಲು ಸಾಧ್ಯ. ಹೀಗೆ ಗುರುತಿಸಿದ್ದೇ ಆದರೆ, ಈ ಒಳಬೇನೆಯನ್ನು ಬುಡಸಮೇತ ತೊಡೆದುಹಾಕುವ ಚಟುವಟಿಕೆಗಳು ಸಮಾಜದಲ್ಲಿ ಕ್ರಿಯಾಶೀಲತೆಯಿಂದ ನಡೆಯುತ್ತಿರಬೇಕು.

ಚಲನಶೀಲ ಸಮಾಜದ ಆದ್ಯತೆಗಳು

ಇದಕ್ಕೆ ಅಗತ್ಯವಾದ ಬೌದ್ಧಿಕ ಪರಿಕರಗಳು ನಮ್ಮ ನಡುವೆಯೇ ವಿಪುಲವಾಗಿರುವಾಗ, ಕ್ರಿಯಾಶೀಲ ಚಟುವಟಿಕೆಗಳು ಚಲನಶೀಲತೆಯನ್ನು ಪಡೆದು, ಸಮಾಜದ ಆಳಕ್ಕೆ ಇಳಿದು ಜೀವಂತಿಕೆಯ ಚೈತನ್ಯವನ್ನು ಸೃಷ್ಟಿಸುತ್ತದೆ. ಆದರೆ ಈ ಪರಿಕರಗಳನ್ನು ಬಳಸುವ ಹಾದಿಯಲ್ಲಿ, ನಮ್ಮ ಕಣ್ಣೆದುರಿನಲ್ಲೇ ನಡೆಯುವ ಪ್ರತಿಯೊಂದು ದೌರ್ಜನ್ಯ-ಅನ್ಯಾಯವೂ ಹೊಸ ರೂಪದಲ್ಲಿ, ಭಿನ್ನ ಆಯಾಮದಲ್ಲಿ ಮುಖಾಮುಖಿಯಾಗುತ್ತಿರುತ್ತವೆ. ಮನ್ವಂತರದ ಹಾದಿಯಲ್ಲಿರುವ ಸಮಾಜದಲ್ಲಿ ಇದು ಇನ್ನೂ ವೈವಿಧ್ಯಮಯ ರೂಪಗಳನ್ನು ಪಡೆಯುವುದೇ ಅಲ್ಲದೆ, ವಿಭಿನ್ನ ಮಗ್ಗುಲುಗಳಲ್ಲಿ ಹೊಸ ಸಮಸ್ಯೆಗಳನ್ನೂ ಸೃಷ್ಟಿ ಮಾಡುತ್ತವೆ. ಪ್ರಾಚೀನ ಪದ್ಧತಿಗಳು, ನಿಯಮಗಳು ರೂಪಾಂತರಗೊಂಡಿರುತ್ತವೆ, ಅವೈಚಾರಿಕ ಮೌಢ್ಯಗಳು ಆಧುನಿಕ ತಂತ್ರಜ್ಞಾನವನ್ನೇ ಬಳಸಿಕೊಂಡು, ಜನಸ್ತೋಮದ ನಡುವೆ ಸಮ್ಮತಿ ಪಡೆದುಕೊಳ್ಳುತ್ತವೆ.

ಇಲ್ಲಿ ಮೇಲ್ವರ್ಗದ, ಹಿತವಲಯದ, ಮೇಲ್ಪದರದ ಗಣ್ಯ ಸಮಾಜಗಳು ಪಿತೃಪ್ರಧಾನತೆ, ಊಳಿಗಮಾನ್ಯತೆ ಮತ್ತು ಪುರುಷಾಧಿಪತ್ಯದ ಮೌಲ್ಯಗಳನ್ನು ಸಂರಕ್ಷಿಸಲು ಅಗತ್ಯವಾದ ಬೌದ್ಧಿಕ-ಭೌತಿಕ ರಕ್ಷಾ ಕವಚಗಳನ್ನು, ಸಾಂಘಿಕ-ಸಾಂಸ್ಥಿಕ ರೂಪದಲ್ಲಿ ನಿರ್ಮಿಸಿಬಿಡುತ್ತವೆ. ಸಾಂಸ್ಥಿಕವಾಗಿ ರಾಜಕೀಯ ಪಕ್ಷಗಳು ಈ ನವ ಸಮಾಜದ ಫಲಾನುಭವಿಗಳಾಗುತ್ತವೆ. ಹಾಗಾಗಿಯೇ ವಿಶಾಲ ಸಮಾಜದಲ್ಲಿ ಕಾಣುವ ಅಸೂಕ್ಷ್ಮತೆಯನ್ನೇ ರಾಜಕೀಯ ವಲಯದಲ್ಲೂ ಯಥಾವತ್ತಾಗಿ ಕಾಣಬಹುದು. ಆದರೆ ಈ ವಲಯಗಳಿಂದಾಚೆಗೆ ಕಾಣುವ ಸುಶಿಕ್ಷಿತ-ಪ್ರಜ್ಞಾವಂತ ಸಮಾಜ, ಏಳು ದಶಕಗಳ ಸ್ವಾತಂತ್ರ್ಯ, ಸಬಲೀಕರಣ ಮತ್ತು ಸಾಂವಿಧಾನಿಕ ಅವಕಾಶಗಳ ಫಲಾನುಭವಿಯೇ ಆಗಿದ್ದರೂ, ಈ ಸಾಮಾಜಿಕ ವ್ಯಾಧಿಗಳಿಗೆ ಸ್ಪಂದಿಸದೆ ಇರುವುದು ವರ್ತಮಾನ ಭಾರತದ ದುರಂತಗಳಲ್ಲೊಂದು. ಈ ಅನ್ಯಮನಸ್ಕತೆಗೆ ತಾರ್ಕಿಕ ಕಾರಣಗಳು ಇರಲು ಸಾಧ್ಯವೇ ಇಲ್ಲ, ಆದರೂ ಇದು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

ಹೆಣ್ಣು ಜೀವವನ್ನು ಅಲಕ್ಷಿಸುವ ಸಮಾಜ

ಈ ನಿರಾಶಾದಾಯಕ ಬೆಳವಣಿಗೆಯನ್ನು ನಿರ್ದಿಷ್ಟವಾಗಿ ಪರಾಮರ್ಶಿಸುವುದೇ ಆದರೆ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳಲ್ಲಿ ಗುರುತಿಸಬಹುದು. ಎರಡು ವರ್ಷಗಳ ಹಿಂದೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ, ನಾಗಮಂಗಲ ಮುಂತಾದೆಡೆ, ಸಿಹಿ ಅರೆಯುವ ಆಲೆಮನೆಗಳು ಹೆಣ್ಣು ಸಂತಾನದ ಪಾಲಿಗೆ ಕಹಿ ಉತ್ಪಾದಿಸುವ ಕಾರ್ಖಾನೆಗಳಾಗಿ ಕಂಡುಬಂದಿದ್ದನ್ನು ನೋಡಿದ್ದೇವೆ. ಇಲ್ಲಿ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಬಂದಿದ್ದ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳನ್ನು ಭೇದಿಸಿದ್ದು, ಸ್ತ್ರೀ ದ್ವೇಷ ಮತ್ತು ಲಿಂಗತ್ವ ಅಸೂಕ್ಷ್ಮತೆಯ ಆಳ ಮತ್ತು ವಿಸ್ತಾರವನ್ನು ಕನ್ನಡಿಗರ ಮುಂದಿರಿಸಲು ನೆರವಾಗಿತ್ತು. ನೂರಾರು ಭ್ರೂಣ ಹತ್ಯೆ ಪ್ರಕರಣಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ್ದವು.

ಈ ಎರಡು ವರ್ಷಗಳಲ್ಲಿ ಸರಕಾರ ಮತ್ತು ಕಾನೂನು ವ್ಯವಸ್ಥೆ ಚುರುಕು ಕಾರ್ಯಾಚರಣೆ ನಡೆಸಿದ್ದಲ್ಲಿ, ಈಗ ಮಳವಳ್ಳಿಯ ಘಟನೆ ಸಂಭವಿಸುತ್ತಿರಲಿಲ್ಲ. ಕಳೆದ ವರ್ಷ ಬಂಧಿಸಲಾದ ಹೆಣ್ಣು ಭ್ರೂಣ ಹಂತಕರೆಲ್ಲರೂ (44 ಜನರು) ಜಾಮೀನಿನ ಮೇಲೆ ಬಿಡುಗಡೆಯಾಗಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾರೆ. ಶಿಕ್ಷೆಯ ಭೀತಿ ಇಲ್ಲದ ಕಾನೂನು ವ್ಯವಸ್ಥೆ ಮತ್ತು ಆಳ್ವಿಕೆ ಅಪರಾಧಗಳ ಹೆಚ್ಚಳಕ್ಕೆ ಅವಕಾಶಗಳನ್ನು ಕಲ್ಪಿಸುತ್ತದೆ. ಮಳವಳ್ಳಿ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದವರ ಶೋಧ ಕಾರ್ಯ ನಡೆದಿದೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಗಮನಿಸಬೇಕಾದ ಸೂಕ್ಷ್ಮ ಎಂದರೆ, ಈ ದಂಧೆ ನಡೆಸುವುದು ಸುಶಿಕ್ಷಿತ ಹಿತವಲಯದ ಸಮಾಜದಲ್ಲಿ, ಇದಕ್ಕೆ ಬಲಿಯಾಗುವುದು ಗ್ರಾಮೀಣ ಪ್ರದೇಶದ ಅರೆ ಶಿಕ್ಷಿತ ಅಥವಾ ಅನಕ್ಷರಸ್ಥ ಮಹಿಳೆಯರು. ಎರಡೂ ಬದಿಗಳಲ್ಲಿ ಪ್ರಭಾವಿಸುವುದು ‘‘ಹೆಣ್ಣು ಮಗು ಬೇಕಿಲ್ಲ’’ ಎಂಬ ಪಿತೃಪ್ರಧಾನ ಧೋರಣೆ.

ಜೀವಗಳು ರಾಜಕೀಯ ಸರಕು ಎನಿಸಿದಾಗ

ತಾಯಿಯಾಗಲು ಬೇಕಾಗುವ ಹೆಣ್ಣು, ಮಗುವಾಗಿ ಗರ್ಭದಿಂದ ಹೊರಬರುವ ಮುನ್ನವೇ ಅಥವಾ ಮೊಳೆಯುವ ಮುನ್ನವೇ ಕೊಲ್ಲಲ್ಪಡುವುದು ಸಾಮಾಜಿಕ ವಿಕೃತಿಯ ಲಕ್ಷಣ ಅಲ್ಲವೇ ? ಈ ವಿಕೃತ ಸಮಾಜದಲ್ಲಿ, ಹಿಂದೂ ಮಹಿಳೆಯರು ಕನಿಷ್ಠ ಮೂರು ಮಕ್ಕಳನ್ನು ಹೆರಬೇಕು ಎಂದು ಆಜ್ಞಾಪಿಸುವ ಹಿಂದುತ್ವದ ಪರಿಚಾರಕರಿಗೆ ಮತ್ತೊಂದು ಮಗ್ಗುಲಲ್ಲಿ ಹಿಂದೂ ಹೆಣ್ಣು ಜೀವಗಳನ್ನು ಭ್ರೂಣಾವಸ್ಥೆಯಲ್ಲೇ ಹೊಸಕಿ ಹಾಕುತ್ತಿರುವ ಭೀಕರ ವಿದ್ಯಮಾನ ಕಾಡುವುದೇ ಇಲ್ಲ! ಸೋಜಿಗ ಎನಿಸಬಹುದು, ಆದರೆ ಇದರ ಹಿಂದೆ ಒಂದು ತರ್ಕವೂ ಇದೆ. ಮಹಿಳೆಯನ್ನು ಮಕ್ಕಳ ಹೆರುವ ಕಾರ್ಖಾನೆಗಳಂತೆ ಪರಿಗಣಿಸುವ ಧೋರಣೆಯ ಹಿಂದೆ ರಾಜಕೀಯ ವಿಸ್ತರಣೆ ಮತ್ತು ಅಸ್ತಿತ್ವ-ಅಸ್ಮಿತೆಯ ರಕ್ಷಣೆ ಮುಖ್ಯ ಧ್ಯೇಯವಾಗಿರುತ್ತದೆ. ಇಲ್ಲಿ ಮಹಿಳೆ ವ್ಯಕ್ತಿಯಾಗಿ ಪುರುಷಸಮಾಜಕ್ಕೆ ಅಧೀನಳಾಗಿಯೇ ಉಳಿಯುತ್ತಾಳೆ ಹಾಗೆಯೇ ಬಳಸಿಕೊಳ್ಳಬಹುದಾದ ಒಂದು ಸ್ಥಾವರವಾಗಿ ಪರಿಗಣಿಸಲ್ಪಡುತ್ತಾಳೆ. ತನ್ನ ದೇಹದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವ ಮಹಿಳೆಯನ್ನು, ಪ್ರಾಚೀನ ಪಿತೃಪ್ರಧಾನ ಮೌಲ್ಯಗಳ ಸಂಕೋಲೆಯಲ್ಲಿ ಕಟ್ಟಿಹಾಕುವ ಒಂದು ಚಿಂತನಾಕ್ರಮವನ್ನು ಇಲ್ಲಿ ಗುರುತಿಸಬಹುದು.

ಆದರೆ ಇದೇ ನಾಯಕರು, ಇತ್ತೀಚಿನ ಘಟನೆಯೂ ಸೇರಿದಂತೆ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿರುವ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಈ ಅಮಾನುಷ ಜಗತ್ತಿನಲ್ಲಿ ಪ್ರಜಾಪ್ರಭುತ್ವೀಯ ಆಳ್ವಿಕೆಯ ಪೊಲೀಸ್, ವೈದ್ಯಕೀಯ, ಆಡಳಿತ ಮತ್ತು ಬೌದ್ಧಿಕ ವಲಯದ ಎಲ್ಲ ಸಂಸ್ಥೆಗಳೂ ನಿಷ್ಕ್ರಿಯವಾಗಿರುತ್ತವೆ. ಆದರೆ ಹೆಣ್ಣು ಭ್ರೂಣವನ್ನು ನಿರ್ಭಿಡೆಯಿಂದ ಹೊಸಕಿ ಹಾಕುವ ಒಂದು ವ್ಯವಸ್ಥೆ ಗುಪ್ತಗಾಮಿನಿಯಂತೆ ಸಕ್ರಿಯವಾಗಿರುತ್ತದೆ. ಇಲ್ಲಿ ಭ್ರೂಣಾವಸ್ಥೆಯಲ್ಲೇ ಹೆಣ್ಣು ವರ್ಜಿಸಬಹುದಾದ ವಸ್ತುವಾಗಿಬಿಡುತ್ತಾಳೆ. ಬಿಜೆಪಿ ನಾಯಕರಿಗೆ ಅಥವಾ ಸಂಘಪರಿವಾರಕ್ಕೆ ಇಲ್ಲಿ ‘ಜಿಹಾದಿ’ ಛಾಯೆ ಕಾಣದಿರುವುದರಿಂದ, ನಿರ್ಲಿಪ್ತತೆ, ಮೌನ ಸಮ್ಮತಿ ಅಥವಾ ಅನ್ಯಮನಸ್ಕತೆ ಆವರಿಸಿಕೊಳ್ಳುತ್ತದೆ. ಇತರ ರಾಜಕೀಯ ಪಕ್ಷಗಳಿಗೆ ಇದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಉಳಿದುಬಿಡುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತ ಪ್ರಮಾಣ ಕಳೆದ ಆರು ವರ್ಷಗಳಿಂದ ಸತತವಾಗಿ ಕುಸಿಯುತ್ತಲೇ ಇದೆ. 2019ರಲ್ಲಿ 917 ಇದ್ದ ಲಿಂಗಾನುಪಾತ ಪ್ರಮಾಣ 2024ರಲ್ಲಿ 869ಕ್ಕೆ ಕುಸಿದಿದೆ. ಈ ಅಸಮತೋಲನವನ್ನು ವೈಜ್ಞಾನಿಕವಾಗಿ, ಸಾಮಾಜಿಕ ವಾಸ್ತವಗಳ ಚೌಕಟ್ಟಿನಲ್ಲಿ ಪರಿಶೋಧನೆ ನಡೆಸಿ ತಡೆಗಟ್ಟುವುದು ಸರಕಾರದ ಮತ್ತು ಸಂಬಂಧಪಟ್ಟ ಇಲಾಖೆಗಳ ಆದ್ಯತೆಯಾಗಬೇಕಿತ್ತು. ಈ ಜಿಲ್ಲೆಯಲ್ಲೇ ಮೂರು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆ ವರದಿಯಾಗಿರುವುದನ್ನು ನೋಡಿದಾಗ, ಸರಕಾರದ ನಿಷ್ಕ್ರಿಯತೆಯ ಪ್ರಮಾಣವನ್ನೂ ಗ್ರಹಿಸಬಹುದು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ನಗರ ಪ್ರದೇಶದಲ್ಲೂ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳೇ ಹೇಳುವುದು ವಿಡಂಬನೆ ಅಲ್ಲವೇ?

ಸಾಮಾಜಿಕ ಪ್ರಜ್ಞೆಯ ಕೊರತೆ

ಈ ಅಮಾನುಷ ಚಟುವಟಿಕೆಗಳಿಗೆ ವಿಶಾಲ ಸಮಾಜದ ಪ್ರತಿಕ್ರಿಯೆ-ಸ್ಪಂದನೆಯನ್ನು ಗಮನಿಸಿದಾಗ ನಿರಾಸೆಯಾಗುತ್ತದೆ. ಭಾರತದ ಸಾಂಪ್ರದಾಯಿಕ ಸಮಾಜವನ್ನು ಈ ಹೊತ್ತಿನಲ್ಲೂ ನಿರ್ಬಂಧಿಸಿ ನಿಯಂತ್ರಿಸಿ ನಿರ್ದೇಶಿಸುವ ಧಾರ್ಮಿಕ, ಆಧ್ಯಾತ್ಮಿಕ ವಲಯಗಳಲ್ಲಿ, ಹೆಣ್ಣು ಸಂಕುಲ ಎದುರಿಸುತ್ತಿರುವ ಈ ಭೀಕರ ಸನ್ನಿವೇಶ ಗಂಭೀರ ಚರ್ಚೆಗೊಳಗಾಗಬೇಕಿತ್ತು. ಹಿಂದೂ, ಕ್ರೈಸ್ತ ಮತ್ತು ಮುಸ್ಲಿಮ್ ಸಮುದಾಯಗಳಲ್ಲಿ ಪ್ರಭಾವಶಾಲಿಯಾಗಿರುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಅಭಿಯಾನಕ್ಕೆ ಚಾಲನೆ ನೀಡಬೇಕಿತ್ತು. ಜೀವ ತಳೆಯುವ ಮೊದಲೇ ಸೃಷ್ಟಿಯನ್ನು ಹೊಸಕಿ ಹಾಕುವ ಈ ರಕ್ಕಸ ಪ್ರವೃತ್ತಿ ಧರ್ಮನಿಷ್ಠರ ಪ್ರಜ್ಞೆಯನ್ನು ಕದಡಲೇ ಬೇಕಲ್ಲವೇ? ಆದರೆ ಬೆರಳೆಣಿಕೆಯ ವೈಯಕ್ತಿಕ ಪ್ರತಿಕ್ರಿಯೆಯನ್ನು ಬಿಟ್ಟರೆ, ವಿಶಾಲ ನೆಲೆಯಲ್ಲಿ ಕನಿಷ್ಠ ಸ್ಪಂದನೆಯನ್ನೂ ಕಾಣಲಾಗುತ್ತಿಲ್ಲ.

ಇನ್ನಿತರ ಮಹಿಳಾ ದೌರ್ಜ್ಯನ್ಯಗಳ ಹಾಗೆಯೇ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದನಿ ಎತ್ತುವುದು, ಸಾರ್ವಜನಿಕವಾಗಿ ಪ್ರತಿಭಟನೆ, ಹೋರಾಟ ನಡೆಸುವುದು, ಸಮತೋಲನಕ್ಕಾಗಿ ಅವಿರತ ಶ್ರಮಿಸುವುದು ಅಕ್ಷರಶಃ ಹೆಣ್ಣು ಮಕ್ಕಳ ಕರ್ತವ್ಯ ಎಂದೇ ಭಾವಿಸಿದಂತಿದೆ. ಏಕೆಂದರೆ ಎಡಪಂಥೀಯ, ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಂತೆ, ಈ ಅಮಾನವೀಯತೆಯ ವಿರುದ್ಧ ಹೋರಾಟ ನಡೆಸುತ್ತಿರುವುದು ಮಹಿಳಾ ಸಂಘಟನೆಗಳು ಮಾತ್ರ. ಮತ್ತೊಂದು ಬದಿಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ಭೀಕರ ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿರುವುದೂ ಮಹಿಳಾ ಸಂಘಟನೆಗಳೇ. ಸಾಂಸ್ಥಿಕ ನೆಲೆಯಲ್ಲಿ ನೋಡಿದಾಗ ಪುರುಷ ಕೇಂದ್ರಿತ ಸಂಸ್ಥೆ-ಸಂಘಟನೆಗಳಿಗೆ ಇದು ಹೆಚ್ಚೆಂದರೆ ಪ್ರತಿಭಟನೆಗೇ ಅಂತ್ಯವಾಗುವ ವಿದ್ಯಮಾನವಾಗಿ ಕಾಣುತ್ತದೆ. ಇನ್ನು ಪ್ರಜಾಪ್ರಭುತ್ವ-ಸಂವಿಧಾನದ ಫಲಾನುಭವಿ ವರ್ಗಗಳಲ್ಲಿ, ಅದರಲ್ಲೂ ಮೇಲ್ಪದರದ ಸಮಾಜಗಳಲ್ಲಿ, ಇದು ಗಂಭೀರ ವಿಷಯವಾಗಿ ಕಾಣುವುದೇ ಇಲ್ಲ.

ಕಠಿಣ ಕಾನೂನು, ಆಡಳಿತಾತ್ಮಕವಾಗಿ ನಿಗಾವಹಿಸುವ ವ್ಯವಸ್ಥೆ, ಜಿಲ್ಲಾ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳ ನಿರಂತರ ಕಾಳಜಿ ಮತ್ತು ನಿಗಾವಹಿಸುವ ಕಾರ್ಯತಂತ್ರಗಳ ಹೊರತಾಗಿಯೂ, ಜೀವ ತಳೆಯುವ ಮುನ್ನವೇ ಹೆಣ್ಣು ಕೂಸುಗಳನ್ನು ಹೊಸಕಿ ಹಾಕುವಂತಹ ಪಾಶವೀ ಕೃತ್ಯಗಳು ಎರಡು ಮೂರು ವರ್ಷಗಳಿಂದ, ಒಂದೇ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರೆ, ಅದನ್ನು ಕೇವಲ ‘ಸಮಸ್ಯೆ’ ಎಂದು ನೋಡಲಾಗುವುದಿಲ್ಲ. ಬದಲಾಗಿ ‘ಸಾಮಾಜಿಕ ವ್ಯಾಧಿ ಅಥವಾ ಬೇನೆ’ ಎಂದೇ ಪರಿಗಣಿಸಬೇಕಾಗುತ್ತದೆ. ಈ ವ್ಯಾಧಿಗೆ ಕಾರಣವನ್ನು ವ್ಯಕ್ತಿಗಳಲ್ಲಿ ಅಥವಾ ನಿರ್ದಿಷ್ಟ ಸಮಾಜಗಳಲ್ಲಿ ಗುರುತಿಸಿದಾಗ, ಅಪರಾಧಿಗಳನ್ನು ಗುರುತಿಸಬಹುದು. ಆದರೆ ಈ ಪಾತಕ ಕೃತ್ಯಗಳ ಹಿಂದಿರುವ ಅಗೋಚರ ಸಾಮಾಜಿಕ ಮೌಲ್ಯಗಳು ಮುನ್ನೆಲೆಗೆ ಬರುವುದೇ ಇಲ್ಲ. ಈ ಮೌಲ್ಯಗಳನ್ನು ಸಂರಕ್ಷಿಸುವ ಅಥವಾ ಮರುಸ್ಥಾಪಿಸುವ ಒಂದು ಸಮಾಜ ನಮ್ಮ ನಡುವೆ ಸಕ್ರಿಯವಾಗಿರುವುದನ್ನು ಇಲ್ಲಿ ಗುರುತಿಸಬೇಕಿದೆ.

ಮೌಲ್ಯ ಸಂವೇದನೆ ಮತ್ತು ಸೂಕ್ಷ್ಮತೆ

ಈ ಸಮಾಜ ಮತ್ತು ಅದರೊಳಗಿನ ಅಗೋಚರ ಸಾಂಸ್ಕೃತಿಕ, ಧಾರ್ಮಿಕ, ಸಾಂಸ್ಥಿಕ ಹಾಗೂ ಸಾಂಘಿಕ ಶಕ್ತಿಗಳನ್ನು ಗುರುತಿಸುವುದು ಕಷ್ಟವೇನಲ್ಲ. ‘ಹೆಣ್ಣು ಮಗು ಬೇಡ’ ಎಂಬ ಕ್ರೂರ ಆಲೋಚನೆ ರೂಪುಗೊಳ್ಳುವುದೇ ಈ ಶಕ್ತಿಗಳ ಆವರಣಗಳಲ್ಲಿ. ಹಾಗೆಯೇ ಈ ಆಲೋಚನೆಯನ್ನು ಇಲ್ಲವಾಗಿಸುವ ಜವಾಬ್ದಾರಿ ಹೊರಬೇಕಾದವರೂ ಇದೇ ಆವರಣದಲ್ಲಿರುತ್ತಾರೆ ಅಲ್ಲವೇ? ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು, ಸ್ವಾಮೀಜಿಗಳು ಮತ್ತು ಅಧ್ಯಾತ್ಮದ ಪರಿಚಾರಕರು ಇವರೆಲ್ಲರೂ ಇದರ ಭಾಗವಾಗಿ ಕಾಣುತ್ತಾರೆ. ಈ ನೇತಾರರು ಪ್ರತಿನಿಧಿಸುವ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಏಕೆ ಕ್ಷೀಣ ಧ್ವನಿಯೂ ಕೇಳಿಬರುವುದಿಲ್ಲ? ಅಥವಾ ಇಂತಹ ಸಮಾಜಘಾತುಕ, ಹೆಣ್ಣುಕುಲ ವಿರೋಧಿ ಮನೋಭಾವವನ್ನು ಹೋಗಲಾಡಿಸುವ ಅಭಿಯಾನ ನಡೆಸುವ ಆಲೋಚನೆ ಏಕೆ ಮೂಡುವುದಿಲ್ಲ?

ಇದೇ ಪ್ರಶ್ನೆಯನ್ನು ನಮ್ಮ ನಡುವೆ ಇರುವ ಹಿತವಲಯದ ಫಲಾನುಭವಿ ವರ್ಗಗಳನ್ನೂ ಕೇಳಬಹುದು. ಸುಸ್ಥಿರ ಬದುಕು, ಸಮರ್ಪಕ ವರಮಾನ, ಸಾಮಾಜಿಕ ಅಂತಸ್ತು, ಆರ್ಥಿಕ ಸೌಕರ್ಯಗಳನ್ನು ಅನುಭೋಗಿಸುತ್ತಿರುವ ಸಮಾಜ ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನುಷ ಕೃತ್ಯಗಳನ್ನು ಕಂಡೂ ಕಾಣದಂತಿರುವುದು ಅಕ್ಷಮ್ಯ ಅಲ್ಲವೇ? ಈ ಸಮಾಜವನ್ನು ಪ್ರತಿನಿಧಿಸುವ ಔದ್ಯಮಿಕ, ಔದ್ಯೋಗಿಕ, ಶೈಕ್ಷಣಿಕ ವಲಯದ ಸುಶಿಕ್ಷಿತರಿಗೆ ಇದು ‘ಸಮಸ್ಯೆ’ಯಾಗಿಯೂ ಕಾಣದಿರುವುದು ಹೇಗೆ? ಇದೇ ಸಮಾಜದ ಹಿತಾಸಕ್ತಿಯನ್ನು ಕಾಪಾಡಲು ಶ್ರಮಿಸುವ ಕಾರ್ಮಿಕ ಸಂಘಟನೆಗಳು ಮತ್ತಿತರ ಸಂಸ್ಥೆಗಳು ತಮ್ಮ ಬಳಿ ಇರುವ ಸಂಪನ್ಮೂಲಗಳ ಸಣ್ಣ ಭಾಗವನ್ನು ವ್ಯಯ ಮಾಡಿದರೂ, ಇಂತಹ ಸಮಾಜಘಾತುಕ-ಅಮಾನುಷ ಪ್ರವೃತ್ತಿಯ ವಿರುದ್ಧ ನಡೆಯುವ ಅಭಿಯಾನ, ಹೋರಾಟಗಳಿಗೆ ಸ್ಪಂದಿಸಬಹುದಲ್ಲವೇ? ಜನಪರ ಹೋರಾಟಗಳಲ್ಲಿ ನಿರತರಾಗಿರುವ ವ್ಯಕ್ತಿ-ಗುಂಪುಗಳನ್ನು ಹೊರತುಪಡಿಸಿದರೆ, ಈ ಪ್ರಶ್ನೆಗೆ ಇಡೀ ಸಮಾಜವೇ ಉತ್ತರಿಸಬೇಕಾಗಿದೆ.

ಸಮಾಜದ ಆದ್ಯತೆ- ಜವಾಬ್ದಾರಿ

ಸಮಾಜದಲ್ಲಿ ಲೈಂಗಿಕ ಶಿಕ್ಷಣ ನೀಡುವ, ಲೈಂಗಿಕ ಅರಿವು ಮೂಡಿಸುವ, ಲಿಂಗ ಸೂಕ್ಷ್ಮತೆಯನ್ನು ಬೆಳೆಸುವ, ಮಹಿಳಾ ಸಂವೇದನೆಯನ್ನು ಮೂಡಿಸುವ ಉದಾತ್ತ ಚಿಂತನೆಗಳು ಕೇವಲ ಮಹಿಳಾ ಸಂಕುಲಕ್ಕೆ ಸೇರಿದ ವಿಚಾರ ಅಲ್ಲ. ಸಮಸ್ತ ಸಮಾಜವೂ ಈ ಕುರಿತು ಯೋಚಿಸಬೇಕಾಗುತ್ತದೆ. ಆಗ ಮಾತ್ರ ಅಂತಹ ಜನಸಂಖ್ಯೆಯನ್ನು ‘ಸಮಾಜ’ ಎಂದು ನಿರ್ವಚಿಸಲು ಸಾಧ್ಯ. ದೇಶದಲ್ಲಿ ನಡೆಯುವ ಪ್ರತಿಯೊಂದು ಅತ್ಯಾಚಾರಕ್ಕೂ, ವರದಕ್ಷಿಣೆ ಸಾವಿಗೂ, ಹತ್ಯೆಗಳಿಗೂ, ಹೆಣ್ಣು ಭ್ರೂಣ ಹತ್ಯೆಗೂ ಇಡೀ ಸಮಾಜ ಉತ್ತರದಾಯಿ ಎಂದು ಭಾವಿಸಿದಾಗ ಮಾತ್ರ ನಾವು ಕಟ್ಟಿಕೊಂಡಿರುವ ‘ಸಮಾಜ’ವನ್ನು ಸಂವೇದನಾಶೀಲ ಅಥವಾ ಸೂಕ್ಷ್ಮಗ್ರಾಹಿ ಎಂದು ನಿರ್ವಚಿಸಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ. ದಿವಾಕರ

contributor

Similar News