ಗಾಂಧಿಯ ಎದೆಯಲ್ಲಿ ಬದಲಾವಣೆ ಬಿತ್ತಿದ ಗುರು!
ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಪ್ರಾರಂಭಿಕ ದಿನಗಳ ಪ್ರಯತ್ನದ ಮಾರ್ಗದಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಮುಖಾಮುಖಿಯಾದವರು ಕೇರಳದ ಸಾಮಾಜಿಕ ಸುಧಾರಕ ನಾರಾಯಣ ಗುರುಗಳು. ವೈಕಂ ಸತ್ಯಾಗ್ರಹವನ್ನು ಬೆಂಬಲಿಸಲು ಕೇರಳಕ್ಕೆ ಹೋಗಿದ್ದ ಗಾಂಧೀಜಿಯವರು ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾಗುತ್ತಾರೆ. ಆ ಸಂದರ್ಭದಲ್ಲಿ ಗುರುಗಳ ಜೊತೆ ನಡೆದ ಚರ್ಚೆಯ ನಂತರ ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಬಗ್ಗೆ ಗಾಂಧೀಜಿಯವರಲ್ಲಿದ್ದ ಸಾಂಪ್ರದಾಯಿಕ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಆ ಬದಲಾವಣೆಯ ಪರಿಣಾಮವನ್ನು ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬದಲಾದ ನಿಲುವುಗಳಲ್ಲಿಯೂ ಕಾಣಬಹುದು. ಈ ಕಾರಣದಿಂದ 1925ರ ಮಾರ್ಚ್ ಹನ್ನೆರಡರಂದು ನಡೆದ ಇವರಿಬ್ಬರ ಭೇಟಿಗೆ ಐತಿಹಾಸಿಕ ಮಹತ್ವ ಇದೆ.
ನಾರಾಯಣ ಗುರುಗಳು ಮತ್ತು ಗಾಂಧೀಜಿಯವರ ಭೇಟಿಗಿಂತ ಮೊದಲು ಸ್ವಾತಂತ್ರ್ಯಹೋರಾಟವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷ ಕೂಡಾ ಅಸ್ಪಶ್ಯತೆಯ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಪಂಡಿತ ಮದನಮೋಹನ್ ಮಾಳವೀಯ ಅವರ ಅಧ್ಯಕ್ಷತೆಯಲ್ಲಿ ಅಸ್ಪಶ್ಯತಾ ವಿರೋಧಿ ಉಪಸಮಿತಿಯನ್ನು ರಚಿಸಿದ್ದು 1929ರಲ್ಲಿ. ಗಾಂಧೀಜಿಯವರು ದಲಿತರಿಗೆ ಹರಿಜನರು ಎಂದು ನಾಮಕರಣ ಮಾಡಿದ್ದು 1930ರಲ್ಲಿ ಮತ್ತು ಅವರು ಹರಿಜನ ಸೇವಕ ಸಂಘ ಸ್ಥಾಪಿಸಿದ್ದು 1932ರಲ್ಲಿ. ಅದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ದಲಿತರಿಗೆ ಪ್ರತ್ಯೇಕ ಮತವ್ಯವಸ್ಥೆಯನ್ನು ವಿರೋಧಿಸಿ ಗಾಂಧೀಜಿಯವರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು.
ವರ್ಣವ್ಯವಸ್ಥೆಯಲ್ಲಿನ ಅಸ್ಪಶ್ಯತೆ ಕೆಟ್ಟದ್ದು , ಉಳಿದಂತೆ ಅದೊಂದು ಸಮಾಜದಲ್ಲಿನ ವೃತ್ತಿಗಳ ವಿಂಗಡಣೆ ಎಂದು ವ್ಯಾಖ್ಯಾನಿಸಿ ಅದನ್ನು ಸಮರ್ಥಿಸುತ್ತಿದ್ದ ಮಹಾತ್ಮಾಗಾಂಧೀಜಿಯವರು ಕೊನೆಯ ದಿನಗಳಲ್ಲಿ ಅಂತರ್‌ಜಾತಿ ವಿವಾಹಗಳನ್ನು ಪ್ರತಿಪಾದಿಸುವಷ್ಟು ಬದಲಾಗಿದ್ದರು. ಈ ಬದಲಾವಣೆಯ ಬೀಜವನ್ನು ಗಾಂಧೀಜಿಯ ಎದೆಯಲ್ಲಿ ಮೊದಲ ಬಾರಿ ಬಿತ್ತಿದವರು ನಾರಾಯಣ ಗುರುಗಳು.
ಪ್ರಾರಂಭದ ದಿನಗಳಲ್ಲಿ ನಾರಾಯಣ ಗುರುಗಳು ವೈಕಂ ಸತ್ಯಾಗ್ರಹದ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ. ನಾರಾಯಣ ಗುರುಗಳ ಸಾಮಾಜಿಕ ಚಳವಳಿಯ ಇತಿಹಾಸವನ್ನು ಬಲ್ಲವರಿಗೆ ಅವರ ನಿರಾಸಕ್ತಿಯ ಕಾರಣ ಗೊತ್ತಿರಬಹುದು. ಅಸ್ಪಶ್ಯತೆಯ ವಿರುದ್ಧದ ಹೋರಾಟದಲ್ಲಿ ದೇವಸ್ಥಾನ ಪ್ರವೇಶದ ಚಳವಳಿ ಬಹಳ ಮುಖ್ಯವಾದ ಕಾರ್ಯಕ್ರಮ. ಬಾಬಾಸಾಹೇಬ್ ಅಂಬೇಡ್ಕರ್ ಅವರೂ 1930ರಲ್ಲಿ ಕಾಳಾರಾಂ ದೇವಸ್ಥಾನ ಪ್ರವೇಶ ಚಳವಳಿಯನ್ನು ನಡೆಸಿದ್ದರು ಎನ್ನುವುದು ಗಮನಾರ್ಹ. ನಾರಾಯಣ ಗುರುಗಳ ಕಾಲದಲ್ಲಿಯೇ ಪಕ್ಕದ ತಮಿಳುನಾಡಿನಲ್ಲಿ ಪೆರಿಯಾರ್ ಅವರು ದೇವರ ಮೂರ್ತಿಗಳನ್ನು ಹೊರಗೆ ಎಸೆದು ರಸ್ತೆಕಟ್ಟಲು ಜಲ್ಲಿಕಲ್ಲು ಮಾಡಬೇಕೆಂದು ಹೇಳುತ್ತಿದ್ದರು. ನಾರಾಯಣ ಗುರುಗಳು ಬ್ರಾಹ್ಮಣರ ದೇವಾಲಯಗಳನ್ನೇ ಬಹಿಷ್ಕರಿಸಿದ್ದರು. ‘‘ನಿಮಗೆ ದೇವಾಲಯಗಳಿಗೆ ಪ್ರವೇಶ ಇಲ್ಲ ಎಂದಾದರೆ ದೇವಾಲಯಗಳನ್ನೇ ನಿಮ್ಮ ಬಳಿ ತರುತ್ತೇನೆ’’ ಎಂದು ಹೇಳಿ ತಮ್ಮ ಜೀವಿತಾವಧಿಯಲ್ಲಿ 68 ದೇವಾಲಯಗಳನ್ನು ಸ್ಥಾಪಿಸಿ ಅಲ್ಲಿ ಪೂಜೆಗೆ ಈಳವ ಅರ್ಚಕರನ್ನೇ ನೇಮಿಸಿದ್ದರು ಮತ್ತು ಆ ಅರ್ಚಕರ ತರಬೇತಿಗೆ ಬ್ರಹ್ಮಸಂಘವನ್ನು ಪ್ರಾರಂಭಿಸಿದ್ದರು. ನಾರಾಯಣ ಗುರುಗಳು ಎಲ್ಲಿಯೂ ದೇವಸ್ಥಾನಗಳ ಪ್ರವೇಶ ಚಳವಳಿಯನ್ನು ನಡೆಸಿ ವರ್ಣಶತ್ರುಗಳ ಜೊತೆಯಲ್ಲಿ ನೇರ ಸಂಘರ್ಷಕ್ಕೆ ಇಳಿದಿರಲಿಲ್ಲ. ಗುರುಗಳದ್ದು ಶಸ್ತ್ರಪ್ರಯೋಗ ಮಾಡದೆಯೇ ಶತ್ರುಗಳನ್ನು ನಿಶ್ಯಸ್ತ್ರಗೊಳಿಸುವ ಕಾರ್ಯತಂತ್ರವಾಗಿತ್ತು.
ಗಾಂಧೀಜಿಯವರ ಗಮನವನ್ನು ಕೇರಳದ ಕಡೆ ಸೆಳೆದ ವೈಕಂ ಸತ್ಯಾಗ್ರಹ ಪ್ರಾರಂಭವಾಗಿದ್ದು ದೇವಸ್ಥಾನದ ಪ್ರವೇಶಕ್ಕಾಗಿ ಅಲ್ಲ, ಅಲ್ಲಿನ ವೈಕಂನ ಶ್ರೀ ಮಹದೇವ ದೇವಸ್ಥಾನದ ಎದುರಿನ ಬೀದಿಯಲ್ಲಿ ನಡೆದುಕೊಂಡು ಹೋಗುವ ಶೂದ್ರ ಮತ್ತು ದಲಿತರ ಅವಕಾಶಕ್ಕಾಗಿ. 1924ರ ಮಾರ್ಚ್ 24ರಂದು ಪ್ರಾರಂಭವಾದ ಈ ಸತ್ಯಾಗ್ರಹ 21 ತಿಂಗಳ ಕಾಲ ಮುಂದುವರಿದು 1925ರ ನವೆಂಬರ್ 23ರಂದು ಕೊನೆಗೊಳ್ಳುತ್ತದೆ.
ವೈಕಂ ಸತ್ಯಾಗ್ರಹ ಶುರುವಾಗುವಷ್ಟು ಹೊತ್ತಿಗೆ ನಾರಾಯಣ ಗುರುಗಳು ಮೊದಲ ಶೂದ್ರರ ದೇವಾಲಯವನ್ನು ಸ್ಥಾಪಿಸಿ 36 ವರ್ಷಗಳು ಕಳೆದಿತ್ತು. ಗುರುಗಳು ಅರವಿಪುರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಮೊದಲ ‘ಈಳವರ ಶಿವಾಲಯ’ವನ್ನು ನಿರ್ಮಾಣ ಮಾಡಿದ್ದು 1888ರಲ್ಲಿ. ಗುರುಗಳು ನಿರ್ಮಿಸಿದ್ದ ಕೊನೆಯ ದೇವಸ್ಥಾನ ಕಳವಂಕೋಡಂನಲ್ಲಿನ ಅರ್ಧನಾರೀಶ್ವರ ದೇವಸ್ಥಾನ. ಅದರಲ್ಲಿ ದೇವರ ಮೂರ್ತಿಯ ಬದಲಿಗೆ ಕನ್ನಡಿಯನ್ನು ಪ್ರತಿಷ್ಠಾಪಿಸಿದ್ದರು. ಈ ದೇವಸ್ಥಾನ ಸ್ಥಾಪಿಸಿದ ನಂತರ ನಾಲ್ಕು ವರ್ಷ ಬದುಕಿದ್ದ ನಾರಾಯಣ ಗುರುಗಳು ಹೊಸ ದೇವಸ್ಥಾನಗಳನ್ನು ನಿರ್ಮಿಸಿರಲಿಲ್ಲ. ‘‘ನಾನು ಸಾಕಷ್ಟು ದೇವಾಲಯಗಳನ್ನು ಸ್ಥಾಪಿಸಿದ್ದೇನೆ. ಇನ್ನುಮುಂದೆ ಶಾಲೆ, ಕಾಲೇಜು, ಉದ್ಯಮ, ಆಸ್ಪತ್ರೆಗಳನ್ನು ನಿರ್ಮಾಣ ಮಾಡೋಣ, ದೇವಸ್ಥಾನ ನಿರ್ಮಾಣವನ್ನು ನಿಲ್ಲಿಸೋಣ’’ ಎಂದು ಕಳವಂಕೋಡಮ್ ನಲ್ಲಿ ಅನುಯಾಯಿಗಳಿಗೆ ಕರೆ ನೀಡಿದ್ದರು.
ಹೀಗಿದ್ದರೂ ನಾರಾಯಣ ಗುರುಗಳ ಶ್ರೀಮಂತ ಶಿಷ್ಯರಲ್ಲೊಬ್ಬರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಟಿ.ಕೆ.ಮಾಧವನ್ ಅವರು ವೈಕಂ ಸತ್ಯಾಗ್ರಹದ ನೇತೃತ್ವ ವಹಿಸುತ್ತಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಮಾಧವನ್ ದೇಶಾಭಿಮಾನಿ ಪತ್ರಿಕೆಯ ಸಂಪಾದಕರಾಗಿದ್ದರು. ಶಿಷ್ಯನ ಒತ್ತಾಯಕ್ಕೆ ಮಣಿದು ಅವರು ವೈಕಂ ಸತ್ಯಾಗ್ರಹವನ್ನು ಬೆಂಬಲಿಸಿದ್ದರೂ ಅದು ಅವರ ಇಷ್ಟದ ಕಾರ್ಯಕ್ರಮ ಆಗಿರಲಿಲ್ಲ. ನಾರಾಯಣ ಗುರುಗಳು ನೇರವಾಗಿ ವೈಕಂ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರೆ ಅದು ಫಲ ನೀಡಲು ಅಷ್ಟೊಂದು ದೀರ್ಘ ಕಾಲ ಬೇಕಾಗಿರಲಿಲ್ಲ.
ವೈಕಂ ಸತ್ಯಾಗ್ರಹ ಶುರುವಾಗಿ ಒಂದು ವರ್ಷ ಕಳೆದರೂ ತಿರುವಾಂಕೂರು ರಾಜ ಮತ್ತು ದೇವಾಲಯದ ಮುಖ್ಯಸ್ಥರಾಗಿದ್ದ ನಂಬೂದಿರಿ ನಾಯಕರು ಸತ್ಯಾಗ್ರಹಿಗಳ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದ್ದರು. ಆಗ ಸತ್ಯಾಗ್ರಹಿಗಳು ಮಹಾತ್ಮಾ ಗಾಂಧೀಜಿಯವರ ಬೆಂಬಲ ಕೋರುತ್ತಾರೆ. ಅಷ್ಟೊತ್ತಿಗೆ ಪಕ್ಕದ ತಮಿಳುನಾಡಿನಿಂದ ಪೆರಿಯಾರ್ ಕೂಡಾ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಸ್ಥಳೀಯ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದು ಕೊನೆಗೂ 1925ರ ಮಾರ್ಚ್ ಹನ್ನೆರಡರಂದು ಮಹಾತ್ಮಾ ಗಾಂಧೀಜಿಯವರು ವೈಕಂ ಸತ್ಯಾಗ್ರಹದ ಶಿಬಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ವೈಕಂ ಸತ್ಯಾಗ್ರಹವನ್ನು ವಿರೋಧಿಸುತ್ತಿದ್ದ ವೈಕಂ ದೇವಾಲಯದ ಮುಖ್ಯಸ್ಥರಾಗಿದ್ದ ನಂಬೂದಿರಿ ನಾಯಕರ ಜೊತೆ ಚರ್ಚೆ ನಡೆಸುತ್ತಾರೆ. ಅವರು ಗಾಂಧೀಜಿಯವರ ಬೇಡಿಕೆಯನ್ನು ತಿರಸ್ಕರಿಸುತ್ತಾರೆ. ಅಷ್ಟು ಮಾತ್ರವಲ್ಲ ಗಾಂಧೀಜಿಯವರು ವೈಶ್ಯರಾಗಿರುವ ಕಾರಣ ಸ್ಥಳೀಯ ನಂಬೂದಿರಿ ನಾಯಕರು ಅವರನ್ನು ತಮ್ಮ ಮನೆಯ ಒಳಗೆ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ.
ಅಂದು ಸಂಜೆ ಗಾಂಧೀಜಿಯವರು ಸಿ.ರಾಜಗೋಪಾಲಾಚಾರಿ, ಇ.ವಿ.ರಾಮಸ್ವಾಮಿ ನಾಯ್ಕರ್ (ಪೆರಿಯಾರ್), ರಾಮದಾಸ್ ಗಾಂಧಿ, ಮಹದೇವ ದೇಸಾಯಿ ಮತ್ತಿತರ ನಾಯಕರ ಜೊತೆ ವರ್ಕಳದಲ್ಲಿರುವ ಶಿವಗಿರಿಗೆ ತೆರಳಿ ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ. ಅಲ್ಲಿ ಇಬ್ಬರ ಮಧ್ಯೆ ದೀರ್ಘ ಕಾಲ ಚರ್ಚೆ ನಡೆದಿತ್ತು. ಇದಕ್ಕೆ ಮೊದಲು ಗಾಂಧೀಜಿಯವರು ‘‘ಸ್ವಾಮೀಜಿಗಳಿಗೆ ಇಂಗ್ಲಿಷ್ ಬರುವುದಿಲ್ಲ ಅಲ್ಲವೇ?’’ ಎಂದು ಕೇಳಿದ್ದರಂತೆ. ಮಲೆಯಾಳಿ ಮಾತೃಭಾಷೆಯ ನಾರಾಯಣ ಗುರುಗಳು ಆಗಲೇ ಸಂಸ್ಕೃತವನ್ನು ಅರೆದುಕುಡಿದು ಅದೇ ಭಾಷೆಯಲ್ಲಿ ಮಹಾಕಾವ್ಯಗಳನ್ನು ರಚಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುಗಳು ‘‘ನಿಮಗೆ ಸಂಸ್ಕೃತ ಬರುತ್ತದೆಯೇ?’’ ಎಂದು ಗಾಂಧೀಜಿಯವರನ್ನು ಮರುಪ್ರಶ್ನಿಸಿದ್ದರಂತೆ. ಅದರ ನಂತರ ಗಾಂಧೀಜಿ ಇಂಗ್ಲಿಷ್‌ನಲ್ಲಿ ಮತ್ತು ನಾರಾಯಣ ಗುರುಗಳು ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿದ್ದರು. ಆ ಕಾಲದ ಹಿರಿಯ ನ್ಯಾಯವಾದಿ ಎನ್ .ಕುಮಾರನ್ ಭಾಷಾಂತರಕಾರರಾಗಿ ಸಹಯೋಗ ನೀಡಿದ್ದರು.
ಆ ಮಾತುಕತೆಯಲ್ಲಿ ನಾರಾಯಣ ಗುರುಗಳು ಗಾಂಧೀಜಿಯವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ‘‘ವೈಕಂ ಸತ್ಯಾಗ್ರಹಕ್ಕೆ ನನ್ನ ಸಹಮತ ಇದೆ, ಅದು ಹೋಗುತ್ತಿರುವ ದಾರಿ ಕೂಡಾ ಸರಿಯಾಗಿದೆ. ಯಾವುದೇ ಕಾರಣಕ್ಕೆ ಸತ್ಯಾಗ್ರಹಿಗಳು ಹಿಂಸೆಯ ಹಾದಿ ಹಿಡಿಯಬಾರದು, ಬಲಾತ್ಕಾರದ ಪ್ರಯೋಗ ಮಾಡಬಾರದು’’ ಎಂದು ಮುಕ್ತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೆ. ಗಾಂಧೀಜಿಯವರ ಇನ್ನೊಂದು ಪ್ರಶ್ನೆಗೆ ‘‘ತಳಸಮುದಾಯಗಳು ಜ್ಞಾನ, ಶಿಕ್ಷಣ ಮತ್ತು ಸಂಪತ್ತನ್ನು ಪಡೆದುಕೊಳ್ಳಬೇಕು. ಅಂತರ್‌ಜಾತಿ ಮದುವೆ, ಸಹಭೋಜನ ಮೊದಲಾದ ಕಾರ್ಯಕ್ರಮಗಳ ಜೊತೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನ ಅವಕಾಶದ ಬಾಗಿಲುಗಳು ತೆರೆದಿರಬೇಕು’’ ಎಂದು ಹೇಳುತ್ತಾರೆ.
‘‘ಮೋಕ್ಷ ಪಡೆಯಲು ಹಿಂದೂ ಧರ್ಮವಷ್ಟೇ ಸಾಕೇ?’’ ಎಂಬ ಗಾಂಧೀಜಿ ಪ್ರಶ್ನೆಗೆ ಉತ್ತರಿಸಿದ್ದ ಗುರುಗಳು ‘‘ಮೋಕ್ಷಪ್ರಾಪ್ತಿಗೆ ಹಿಂದೂ ಧರ್ಮದಲ್ಲಿ ಅವಕಾಶ ಇದೆ, ಇದೇ ರೀತಿ ಎಲ್ಲ ಧರ್ಮಗಳಲ್ಲಿಯೂ ಮೋಕ್ಷಪ್ರಾಪ್ತಿಗೆ ಅವಕಾಶ ಇದೆ. ಮೋಕ್ಷ ಪ್ರಾಪ್ತಿಗೆ ಧರ್ಮ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಆದರೆ ಇತ್ತೀಚೆಗೆ ಜನರು ಲೌಕಿಕ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಹಿಂದೂ ಧರ್ಮದೊಳಗಿನ ಸಂಕೀರ್ಣತೆಯನ್ನು ಗಮನಿಸಿದರೆ ಹಿಂದೂ ಧರ್ಮದಲ್ಲಿ ಮೋಕ್ಷಪ್ರಾಪ್ತಿಗೆ ಗಾಂಧೀಜಿಯವರು ಇನ್ನೊಂದು ಜನ್ಮ ಪಡೆಯಬೇಕಾದೀತು’’ ಎಂದು ಹೇಳುತ್ತಾರೆ. ಗಾಂಧೀಜಿಯವರು ಈ ಅಭಿಪ್ರಾಯವನ್ನು ಒಪ್ಪದೆ ‘‘ನನ್ನ ಜೀವಿತಾವಧಿಯಲ್ಲಿಯೇ ಹಿಂದೂ ಧರ್ಮದ ಸುಧಾರಣೆಯಾಗುತ್ತದೆ’’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಶಿವಗಿರಿಯ ಮಠದಲ್ಲಿ ಈಳವ ಮಕ್ಕಳ ಜೊತೆಯಲ್ಲಿ ಪುಲಯ, ಪರಾಯ ಮೊದಲಾದ ಹರಿಜನ ಸಮುದಾಯಕ್ಕೆ ಸೇರಿರುವ ಮಕ್ಕಳಿಗೂ ಪೂಜೆ ಮತ್ತು ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿರುವುದನ್ನು ನೋಡಿ ಗಾಂಧೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಐತಿಹಾಸಿಕ ಭೇಟಿಯಲ್ಲಿ ನಾರಾಯಣ ಗುರುಗಳು ಗಾಂಧೀಜಿಯವರು ಜಾತಿವ್ಯವಸ್ಥೆ ಬಗ್ಗೆ ಹೊಂದಿದ್ದ ಅಜ್ಞಾನವನ್ನು ಪ್ರಯೋಗದ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಾರೆ. ಚರ್ಚೆಯಲ್ಲಿ ಗಾಂಧೀಜಿಯವರು ವರ್ಣವ್ಯವಸ್ಥೆಯನ್ನು ಸಮರ್ಥಿಸುತ್ತಾ ತಾವು ಕೂತಿದ್ದ ವೇದಿಕೆಯ ಎದುರಿಗಿದ್ದ ಮರದಲ್ಲಿದ್ದ ಎಲೆಗಳನ್ನು ತೋರಿಸಿ ‘‘ನೋಡಿ ಗುರುಗಳೇ, ಎಲೆಗಳು ಭಿನ್ನ ಆಕಾರಗಳನ್ನು ಹೊಂದಿದ್ದರೂ ಅವು ಒಂದೇ ಮರಕ್ಕೆ ಸೇರಿದ್ದಲ್ಲವೇ? ಅದೇ ರೀತಿ ಜಾತಿಗಳು ಬೇರೆಯಾಗಿದ್ದರೂ ಅವುಗಳು ಒಂದೇ ಧರ್ಮಕ್ಕೆ ಸೇರಿದ್ದಲ್ಲವೇ?’’ ಎಂಬ ವಿಚಿತ್ರ ವಾದವನ್ನು ಮುಂದಿಡುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಗುರುಗಳು ತಮ್ಮ ಅನುಯಾಯಿಯನ್ನು ಕರೆದು ಮರದ ನಾಲ್ಕಾರು ಎಲೆಗಳನ್ನು ಕಿತ್ತು ತರುವಂತೆ ಹೇಳುತ್ತಾರೆ. ಆ ಎಲೆಗಳನ್ನು ತಮ್ಮ ಅಂಗೈಗಳಿಂದ ಜಜ್ಜಿ ರಸ ತೆಗೆದು ಗಾಂಧೀಜಿಯವರಿಗೆ ತೋರಿಸಿ ಎಲೆಗಳಿಗೆ ಭಿನ್ನ ಆಕಾರಗಳಿದ್ದರೂ ಅವುಗಳೊಳಗಿನ ರಸ ಒಂದೇ ಆಗಿದೆ. ಅದರಲ್ಲಿ ಭಿನ್ನ-ಭೇದ ಇರುವುದಿಲ್ಲ. ಅದೇ ರೀತಿ ಜಾತಿಗಳು ಎಂದು ಹೇಳುತ್ತಾರೆ. ಅದರ ನಂತರದ ದಿನಗಳಲ್ಲಿ ಜಾತಿ ವ್ಯವಸ್ಥೆ ಬಗೆಗಿನ ಗಾಂಧೀಜಿಯವರ ನಿಲುವು ಸಡಿಲಗೊಳ್ಳತೊಡಗಿದ್ದನ್ನು ಕಾಣಬಹುದು.
ಆಶ್ಚರ್ಯಕರ ಸಂಗತಿ ಎಂದರೆ ಮರುದಿನದ ಪತ್ರಿಕೆಗಳಲ್ಲಿ ನಾರಾಯಣ ಗುರುಗಳು ಮತ್ತು ಗಾಂಧೀಜಿಯವರ ನಡುವಿನ ಚರ್ಚೆಯ ಬಹುತೇಕ ವಿವರಗಳು ಪ್ರಕಟವಾಗಿದ್ದರೂ ವರ್ಣವ್ಯವಸ್ಥೆ, ಅಸ್ಪಶ್ಯತೆ, ಪುರೋಹಿತವರ್ಗದ ಶೋಷಣೆಗೆ ಸಂಬಂಧಿಸಿದ ಚರ್ಚೆಯ ಭಾಗಗಳು ಪ್ರಕಟವಾಗಿರಲಿಲ್ಲ ಎಂದು ನಾರಾಯಣ ಗುರುಗಳ ಆತ್ಮಚರಿತ್ರೆಯನ್ನು ಬರೆದಿರುವ ಎಂ.ಕೆ.ಸಾನು ಬರೆದಿದ್ದಾರೆ.
ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿ ಅವರ ನಡುವಿನ ಚರ್ಚೆಯನ್ನು ಗಮನಿಸಿದರೆ ಇಬ್ಬರಲ್ಲಿಯೂ ಅನೇಕ ವಿಷಯಗಳಲ್ಲಿ ಸೈದ್ಧಾಂತಿಕ ಸಹಮತ ಇದ್ದುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವಿನ ಐತಿಹಾಸಿಕ ಸಂವಾದದ ನೆನಪಿಗಾಗಿ ನಡೆಯುತ್ತಿರುವ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿ ಕಳೆದುಹೋಗಬಾರದು. ಇದೇ ವೇಳೆ ಈ ಆಚರಣೆ ಸ್ವಾರ್ಥ ರಾಜಕಾರಣದ ಇಷ್ಟಾರ್ಥಗಳ ದುರ್ಬಳಕೆಗೆ ಈಡಾಗಲೂಬಾರದು. ಈ ವಿಶೇಷ ಸಂದರ್ಭ ನಾರಾಯಣ ಗುರುಗಳು ಮತ್ತು ಗಾಂಧೀಜಿಯವರ ವಿಚಾರಧಾರೆಗಳನ್ನು ಮನನ ಮಾಡಿಕೊಂಡು ಅವುಗಳ ಅನುಷ್ಠಾನದ ಬಗ್ಗೆ ನಡೆಸಬೇಕಾದ ಆತ್ಮಾವಲೋಕನಕ್ಕೆ ದಾರಿ ತೋರಿಸಿದರೆ ಮಾತ್ರ ಶತಮಾನೋತ್ಸವದ ಆಚರಣೆ ಅರ್ಥಪೂರ್ಣವಾಗಬಹುದು.
ಬಹಳ ಮುಖ್ಯವಾಗಿ ಮಹಾತ್ಮಾ ಗಾಂಧೀಜಿಯವರಂತೆಯೇ ನಾರಾಯಣ ಗುರುಗಳು ಕೂಡಾ ಧಾರ್ಮಿಕ ಸೌಹಾರ್ದದ ಪ್ರತಿಪಾದಕರಾಗಿದ್ದರು. ವೈಕಂ ಸತ್ಯಾಗ್ರಹ ಮತ್ತು ಅದಕ್ಕಿಂತಲೂ ಮೊದಲು ಹಲವು ಬಾರಿ ತಮ್ಮ ಶಿಷ್ಯರಿಂದಲೇ ಮತಾಂತರದ ಬೆದರಿಕೆಯನ್ನು ಅವರು ಎದುರಿಸಿದ್ದರು. ಆ ಸವಾಲನ್ನು ಎದುರಿಸಲಿಕ್ಕಾಗಿಯೇ ಗುರುಗಳು 1924ರಲ್ಲಿ ಅಲ್ವಾಯ್ ನಲ್ಲಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಿದ್ದರು. ‘‘ತರ್ಕ ನಡೆಸುವುದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಈ ಸಮ್ಮೇಳನದ ಉದ್ದೇಶ’’ ಎಂಬ ಆಶಯದ ಆ ಸಮ್ಮೇಳನದ ನಂತರ ಮತಾಂತರದ ವಿವಾದ ತಣ್ಣಗಾಗಿತ್ತು. ಇದರ ಪರಿಣಾಮವನ್ನು ಕೇರಳದ ಇಂದಿನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾಣಬಹುದು. ಶೇಕಡಾ 26ರಷ್ಟು ಮುಸ್ಲಿಮರು, ಶೇಕಡಾ 18ರಷ್ಟು ಕ್ರಿಶ್ಚಿಯನರು ಮತ್ತು ಶೇಕಡ 24ರಷ್ಟಿರುವ ಈಳವ ಜನಸಂಖ್ಯೆಯನ್ನು ಹೊಂದಿರುವ ಕೇರಳ ರಾಜ್ಯವನ್ನು ಇಂದಿಗೂ ಕೋಮುವಾದಿ ಶಕ್ತಿಗಳಿಗೆ ಕೈವಶಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಾಬರಿ ಮಸೀದಿ ಧ್ವಂಸದ ನಂತರ ಇಡೀ ದೇಶದಲ್ಲಿ ಕೋಮುಗಲಭೆ ಭುಗಿಲೆದ್ದಾಗಲೂ ಕೇರಳ ಶಾಂತವಾಗಿತ್ತು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಭೌಗೋಳಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಕೇರಳ ರಾಜ್ಯಕ್ಕೆ ಸಮೀಪದಲ್ಲಿರುವ ಜಿಲ್ಲೆ ದಕ್ಷಿಣ ಕನ್ನಡ. ಆ ಜಿಲ್ಲೆಯಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ ಮತ್ತು ಅಸ್ಪಶ್ಯತೆಗೆ ಸವಾಲು ಹಾಕಿ 1912ರಲ್ಲಿಯೇ ಸಾಕ್ಷಾತ್ ನಾರಾಯಣ ಗುರುಗಳು ಬಂದು ನಿರ್ಮಾಣ ಮಾಡಿದ್ದ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ನಾರಾಯಣ ಗುರುಗಳನ್ನು ತಮ್ಮ ಗುರುಗಳೆಂದು ಸ್ವೀಕರಿಸಿದ ಬಿಲ್ಲವ ಸಮುದಾಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಿರುವ 350ಕ್ಕೂ ಹೆಚ್ಚು ಗುರುಮಂದಿರಗಳಿವೆ. ಭೌತಿಕವಾಗಿ ಎಲ್ಲೆಲ್ಲೂ ಕಾಣುವ ನಾರಾಯಣ ಗುರುಗಳು ಅನುಯಾಯಿಗಳ ಮನಸ್ಸಿನೊಳಗೆ ಸೇರಿಕೊಂಡಿದ್ದಾರೆಯೇ ಎನ್ನುವುದು ಪ್ರಶ್ನೆ. ಮಹಾತ್ಮಾ ಗಾಂಧೀಜಿಯವರೂ ಒಪ್ಪಿಕೊಂಡಿರುವ ನಾರಾಯಣ ಗುರುಗಳ ಚಿಂತನೆ ಜನರನ್ನು ಮುಟ್ಟಿರುವುದು ನಿಜವೆಂದಾದರೆ ಜನಸಂಖ್ಯೆಯ ಅರ್ಧಭಾಗವನ್ನು ಬಿಲ್ಲವರು ಮತ್ತು ಮುಸ್ಲಿಮರು ಹಂಚಿಕೊಂಡಿರುವ ಈ ಜಿಲ್ಲೆಯ ಮಣ್ಣು-ಗಾಳಿಯಲ್ಲಿಯೂ ಕೋಮುದ್ವೇಷದ ನಂಜು ಯಾಕೆ ಸೇರಿಕೊಂಡಿದೆ ಎನ್ನುವ ಪ್ರಶ್ನೆಗೆ ನಾರಾಯಣ ಗುರುಗಳ ಅನುಯಾಯಿಗಳೇ ಉತ್ತರ ನೀಡಬೇಕಾಗುತ್ತದೆ.
ಅಜ್ಞಾನ, ಮೂಢನಂಬಿಕೆ, ಕಂದಾಚಾರ, ದುಂದುವೆಚ್ಚದ ಆಚರಣೆಗಳ ಜೊತೆಯಲ್ಲಿ ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಅಡ್ಡಿಯಾಗಿರುವುದು ಅವರಲ್ಲಿರುವ ದುರಭ್ಯಾಸಗಳು ಎನ್ನುವುದನ್ನು ನಾರಾಯಣ ಗುರುಗಳು ಪ್ರಾರಂಭದ ದಿನಗಳಲ್ಲಿಯೇ ಅರ್ಥಮಾಡಿಕೊಂಡಿದ್ದರು. ಆ ದುರಭ್ಯಾಸಗಳಲ್ಲಿ ಮುಖ್ಯವಾದುದು ಮದ್ಯಪಾನ. ಇದರ ವಿರುದ್ಧ ಸಮರವನ್ನೇ ಸಾರಿದ್ದ ನಾರಾಯಣ ಗುರುಗಳು ‘‘ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ’’ ಎಂದು ಕರೆ ನೀಡಿದ್ದರು. ಕೇರಳದ ಈಳವರು ತಮ್ಮ ಕುಲಕಸುಬಾಗಿ ಸ್ವೀಕರಿಸಿದ್ದ ಶೇಂದಿ ತಯಾರಿಕೆಯನ್ನು ಕೈಬಿಡುವಂತೆ ಮಾಡಿದ್ದರು. ಇದಕ್ಕೆ ಪರ್ಯಾಯವಾಗಿ ಅವರು ತೆಂಗಿನ ನಾರಿನ ಉದ್ಯಮದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು. ಮದ್ಯಪಾನದ ವಿರುದ್ಧ ಖಚಿತ ನಿಲುವನ್ನು ಹೊಂದಿದ್ದ ಮಹಾತ್ಮಾ ಗಾಂಧೀಜಿಯವರು ‘‘ನನ್ನನ್ನು ಒಂದು ದಿನ ಮಟ್ಟಿಗೆ ಸರ್ವಾಧಿಕಾರಿಯನ್ನಾಗಿ ನೇಮಿಸಿದರೆ ಮಾಡುವ ಮೊದಲ ಕೆಲಸ ಮದ್ಯಪಾನ ನಿಷೇಧ’’ ಎಂದು ಸಾರಿದ್ದರು.
ನಾರಾಯಣ ಗುರುಗಳು ಮತ್ತು ಮಹಾತ್ಮಾಗಾಂಧೀಜಿಯವರ ಐತಿಹಾಸಿಕ ಸಂವಾದದ ಶತಮಾನೋತ್ಸವ ಆಚರಣೆಯ ವೇದಿಕೆಯಲ್ಲಿ ಕೋಮುಸೌಹಾರ್ದಕ್ಕೆ ಬದ್ಧತೆಯನ್ನು ಸಾರುವ ಮತ್ತು ಮದ್ಯಮಾರಾಟ ನಿಷೇಧ ಹೇರಲು ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಂಡರೆ ಎರಡೂ ಚೇತನಗಳಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ.