×
Ad

ರಟ್ಟಿಗೇರಿಯಲ್ಲಿ ಇಂದಿರಾ ವಸತಿ ಶಾಲೆಗಾಗಿ ಭೂಮಿ ಗುರುತು : ನಮ್ಮ ಜಾಗವೆಂದು 18 ಕುಟುಂಬಗಳ ವಿರೋಧ

ಖಾಲಿ ಮಾಡಲು ತಾಲೂಕು ಆಡಳಿತದ ಒತ್ತಡ: ಆರೋಪ

Update: 2026-07-15 07:35 IST

ಧಾರವಾಡ : ಜಿಲ್ಲೆಯ ಕುಂದಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ಇಂದಿರಾ ವಸತಿ ಶಾಲೆ ನಿರ್ಮಾಣಕ್ಕಾಗಿ ಗುರುತಿಸಿರುವ ಜಾಗದಲ್ಲಿ ವಾಸಿಸುತ್ತಿರುವ ತಮ್ಮನ್ನು ಜಾಗ ಖಾಲಿ ಮಾಡುವಂತೆ ತಾಲೂಕು ಆಡಳಿತ ಒತ್ತಡ ಹೇರುತ್ತಿದೆ ಎಂದು 18 ಕುಟುಂಬಗಳು ಆರೋಪಿಸಿವೆ.

ಗ್ರಾಮದ ಸರ್ವೇ ನಂ.10ರಲ್ಲಿ ಸುಮಾರು 3 ಎಕರೆ 5 ಗುಂಟೆ ಜಾಗವನ್ನು ಇಂದಿರಾ ವಸತಿ ಶಾಲೆ ನಿರ್ಮಾಣಕ್ಕಾಗಿ ಸರಕಾರ ಗುರುತಿಸಿದ್ದು, ಇದೇ ಜಾಗದ ಒಂದು ಮೂಲೆಯಲ್ಲಿ ಸುಮಾರು 10 ಗುಂಟೆ ಪ್ರದೇಶದಲ್ಲಿ 2001ರಲ್ಲಿ ನವಗ್ರಾಮ ಯೋಜನೆಯಡಿ ಸರಕಾರವೇ ಮನೆಗಳನ್ನು ನಿರ್ಮಿಸಿ ಕೊಟ್ಟಿತ್ತು ಎಂದು ಕುಟುಂಬಗಳ ಸದಸ್ಯರು ತಿಳಿಸಿದ್ದಾರೆ.

ಅಂದಿನ ಶಾಸಕ ಹಾಗೂ ಮಾಜಿ ಸಚಿವ ದಿವಂಗತ ಸಿ.ಎಸ್.ಶಿವಳ್ಳಿ ಅವರ ಪ್ರಯತ್ನದಿಂದ ಬಡ ಕುಟುಂಬಗಳಿಗೆ ಸರಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿತ್ತು. ಮನೆಗಳು ಕೆಲವು ವರ್ಷಗಳ ಬಳಿಕ ಮಳೆಯಿಂದ ಶಿಥಿಲಗೊಂಡ ಕಾರಣ ಕುಟುಂಬಗಳು ಬೇರೆಡೆ ವಾಸಕ್ಕೆ ತೆರಳಿದ್ದರೂ ನಂತರ ಅದೇ ಸ್ಥಳದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕುಟುಂಬದವರ ಪ್ರಕಾರ, 2001ರಿಂದಲೂ ಗ್ರಾಪಂಗೆ ತೆರಿಗೆ ಪಾವತಿಸುತ್ತಿದ್ದು, ವಿದ್ಯುತ್ ಹಾಗೂ ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಪಂಚಾಯತ್‌ಯೇ ಕಲ್ಪಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಈಗ ತಮ್ಮನ್ನು ಅತಿಕ್ರಮಣಕಾರರು ಎಂದು ಕರೆಯುತ್ತಿರುವುದು ಅನ್ಯಾಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರಕಾರದ ಅನುಮತಿ ಇಲ್ಲದೆ ಮನೆ ನಿರ್ಮಾಣವಾಗಿದ್ದರೆ ಅಂದಿನ ಗುತ್ತಿಗೆದಾರರಿಗೆ ಸರಕಾರ ಹೇಗೆ ಬಿಲ್ ಪಾವತಿಸಿತು ಎಂದು ಕುಟುಂಬಗಳು ಪ್ರಶ್ನಿಸಿವೆ. ಅಲ್ಲದೆ, ಶಾಲೆಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಸಾಕಷ್ಟು ಖಾಲಿ ಜಾಗವಿದ್ದು, ಅದನ್ನು ಬಳಸಿಕೊಂಡು ಶಾಲೆ ನಿರ್ಮಿಸಿ, ತಾವು ವಾಸಿಸುತ್ತಿರುವ 10 ಗುಂಟೆ ಜಾಗವನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿಕೊಂಡಿವೆ.

ಶಾಲೆ ನಿರ್ಮಾಣಕ್ಕೆ ನಮಗೆ ಯಾವುದೇ ವಿರೋಧ ಇಲ್ಲ. ನಮ್ಮ ಗ್ರಾಮಕ್ಕೆ ಶಾಲೆ ಬರಬೇಕು ಎಂಬುದು ನಮ್ಮ ಆಶಯ. ಆದರೆ, ಶಾಲೆಯ ಜೊತೆಗೆ ನಮ್ಮ ವಾಸಸ್ಥಳಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನ್ಯಾಯ ಒದಗಿಸಬೇಕೆಂದು 18 ಕುಟುಂಬಗಳು ಆಗ್ರಹಿಸಿವೆ.

‘ನಾನು ಕಳೆದ 23 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಬ್ಬರು ಬುದ್ಧಿಮಾಂದ್ಯ ಮಕ್ಕಳು ಇದ್ದಾರೆ. ಈಗ ಮನೆ ಬಿಟ್ಟು ಹೋಗಿ ಎಂದರೆ ನಾವು ಎಲ್ಲಿ ಹೋಗಬೇಕು? ಸರಕಾರ ಶಾಲೆಯನ್ನೂ ಕಟ್ಟಲಿ, ಆದರೆ ನಮ್ಮಂತಹ ಕುಟುಂಬಗಳಿಗೆ ಅನ್ಯಾಯ ಮಾಡಬಾರದು’ ಎಂದು ಸ್ಥಳೀಯ ನಿವಾಸಿ ಮಹದೇವಿ ಕುರಿ ಮನವಿ ಮಾಡಿದರು.

‘ನಮಗೆ ಸರಕಾರವೇ ಮನೆ ಕೊಟ್ಟಿತ್ತು’ :

ಮನೆ ಮಾಲಕಿ ಸಾಮಂತೇವ್ವ ಸಿದ್ದಪ್ಪ ಇಚ್ಚಂಗಿ ಮಾತನಾಡಿ, ಸಿ.ಎಸ್. ಶಿವಳ್ಳಿ ಅವರು ನಮಗೆ ಜಾಗದೊಂದಿಗೆ ಮನೆ ಕಟ್ಟಿಸಿಕೊಟ್ಟಿದ್ದರು. ಆ ಮನೆ ಶಿಥಿಲಗೊಂಡ ಬಳಿಕ ಕೂಲಿ ಮಾಡಿ ಹಣ ಕೂಡಿಸಿ ಹೊಸ ಆರ್‌ಸಿಸಿ ಮನೆ ಕಟ್ಟಿಕೊಂಡಿದ್ದೇವೆ. ಈಗ ಮನೆಯಲ್ಲಿ ಮೂರು ತಿಂಗಳ ಎಳೆಕೂಸು ಇದೆ. ಮನೆ ಬಿಟ್ಟು ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ಸರಕಾರವೇ ಮನೆ ಕೊಟ್ಟಿದ್ದು, ಈಗ ಜಾಗ ನಮ್ಮದಲ್ಲ ಎಂದು ಹೇಳುತ್ತಿರುವುದರಿಂದ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರರ ಸ್ಪಷ್ಟನೆ :

ಈ ಕುರಿತು ಪ್ರತಿಕ್ರಿಯಿಸಿದ ಕುಂದಗೋಳ ತಹಶೀಲ್ದಾರರು, ಶಾಲೆಗೆ ಮೀಸಲಾದ ಜಾಗದಲ್ಲಿ ಕೆಲವರು ತಾತ್ಕಾಲಿಕ ಶೆಡ್ ಹಾಗೂ ಒಂದು ಆರ್‌ಸಿಸಿ ಮನೆ ನಿರ್ಮಿಸಿಕೊಂಡಿದ್ದರು. 2018ರಲ್ಲೇ ಈ 3 ಎಕರೆ 5 ಗುಂಟೆ ಜಾಗವನ್ನು ಇಂದಿರಾ ಗಾಂಧಿ ವಸತಿ ಶಾಲೆಗಾಗಿ ಮೀಸಲಿರಿಸಲಾಗಿದ್ದು, ಹೆಚ್ಚಿನ ಶೆಡ್‌ಗಳನ್ನು ಸ್ಥಳೀಯರು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದಾರೆ. ಈ ಜಾಗವು ಕಂದಾಯ ಇಲಾಖೆಗೆ ಸೇರಿದ ಸರಕಾರಿ ಜಮೀನಾಗಿದ್ದು, ಇದಕ್ಕೆ ಗ್ರಾಪಂಗೆ ಹಕ್ಕು ನೀಡುವ ಅಧಿಕಾರ ಇಲ್ಲ. ಸಂಬಂಧಪಟ್ಟ ಕುಟುಂಬಗಳ ಬಳಿ ಯಾವುದೇ ಅಧಿಕೃತ ದಾಖಲೆಗಳಿದ್ದರೆ ಪರಿಶೀಲನೆ ನಡೆಸಲಾಗುವುದು. ಗ್ರಾಮದ ಮಕ್ಕಳಿಗೆ ಉತ್ತಮ ಶಾಲೆ ನಿರ್ಮಿಸುವ ಉದ್ದೇಶದಿಂದ ಕೆಲಸ ಆರಂಭಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹಜರತ್‌ ನದಾಫ್‌

contributor

Similar News